ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಮಾವುತನ ಮಾತು ಏಕೆ ಕೇಳುತ್ತದೆ?

ಮಕ್ಕಳ ಕಥೆ
Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

-ಎಡೆಯೂರು ಪಲ್ಲವಿ

**

ಸಿದ್ಧನಿಗೆ ಶರತ್ ಎಂಬ ತುಂಟ ಮಗನಿದ್ದಾನೆ. ಅವನು ತುಸು ಸೋಮಾರಿ ಮತ್ತು ಚತುರ ಹುಡುಗ. ಅಂದು ತನ್ನ ಶಾಲೆಯನ್ನು ಮುಗಿಸಿ ಬಂದವನು ಅಮ್ಮನಿಗೆ ಏನೊಂದು ಸಹಾಯ ಮಾಡದೆ ‘ಸುಸ್ತಾಗಿದೆ’ ಎಂದು ಮಲಗಿಬಿಟ್ಟ. ಕೃಷಿಯ ಕೆಲಸ ಮುಗಿಸಿ ಬಂದ ರೈತನಿಗೆ ಕೋಪ ಬಂತು. ಮಗನನ್ನು ಗದರಿಸಿ ಎಬ್ಬಿಸಿದ.

‘ಸೋಮಾರಿಯಂತೆ ಮಲಗಿರುವೆಯಲ್ಲ, ಎದ್ದು ಓದಿಕೊಳ್ಳಬಾರದೇನೋ. ಮಲಗುವ ಬದಲು ಓದಿಕೋ, ಕೆಲಸ ಮಾಡು’ ಎಂದರು. ‘ಅಪ್ಪ ನಾನೇನು ದಡ್ಡ ಹುಡುಗನೇ ಓದಲು. ಬೇಕಿದ್ದರೆ ಈ ಮಾರ್ಕ್ಸ್ ಕಾರ್ಡ್ ನೋಡು, ಶೇಕಡ ತೊಂಬತ್ತರ ಮೇಲಿನ ಮಾರ್ಕ್ಸ್ ತೆಗೆದಿದ್ದೇನೆ’ ಎಂದು ತನ್ನ ಕೈಚೀಲದಿಂದ ಮಾರ್ಕ್ಸ್ ಕಾರ್ಡ್ ತೆಗೆದು ತೋರಿಸಿದ. 
 
ಸಿದ್ಧನಿಗೆ ಖುಷಿಯಾಯಿತು. ‘ನಿನ್ನಲ್ಲಿ ಫ್ರತಿಭೆ ಇದೆ. ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು’ ಎಂದ. ‘ಹೋಗ್ ಅಪ್ಪ, ಇದಕ್ಕಿಂತ ಹೆಚ್ಚು ನನ್ನ ಕೈಲಾಗುವುದಿಲ್ಲ’ ಎಂದು ಮತ್ತೆ ಆಕಳಿಸಿದ. 
 
ಸ್ವಲ್ಪ ದಿನಗಳಲ್ಲೇ ಶಾಲೆಗೆ ರಜೆ ಬಂತು. ರಜೆಯ ಅಪ್ಪ–ಮಗ ಇಬ್ಬರೂ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಅಲ್ಲಿರುವ ಪ್ರಾಣಿಗಳನ್ನು ಕುತೂಹಲದಿಂದ ನೋಡಿದರು. ಸಿದ್ಧನು ‘ಮಗು ನೋಡು, ಆ ಆನೆಯನ್ನು ಎಷ್ಟು ದೈತ್ಯಾಕಾರವಾಗಿದೆ. ಆ ಮಾವುತ ಎಷ್ಟು ಸಣಕಲಾಗಿದ್ದರೂ ಅವನ ಮಾತನ್ನು ಚಾಚೂ ತಪ್ಪದೆ ಹೇಳಿದಂತೆ ಕೇಳುತ್ತದೆ’ ಎಂದ. ಮಗ ಹೌದೆಂದು ತಲೆ ಆಡಿಸಿದ. 
 
‘ಕಳೆದ ತಿಂಗಳು ನಮ್ಮ ಹೊಲಕ್ಕೆ ಎರಡು ಕಾಡಾನೆ ನುಗ್ಗಿ ಏನೇನು ನಷ್ಟವಾಯಿತು ಯೋಚಿಸಿರುವೆಯಾ’ ಎಂದು ಅಪ್ಪ ಪ್ರಶ್ನಿಸಿದ. ‘ನೆನಪಿದೆ ಅಪ್ಪಾ. ಆನೆಗಳ ಹೆಜ್ಜೆಯ ಭಾರಕ್ಕೆ ನೆಲದಲ್ಲಿ ಹಳ್ಳವಾಗಿತ್ತು. ದೊಡ್ಡದೊಂದು ಮರವನ್ನು ಉರುಳಿಸಿದ್ದವಲ್ಲ; ಪಕ್ಕದ್ದಲ್ಲಿದ್ದ ಪೈಪ್ ಸೆಟ್ ಸಹ ತುಳಿತಕ್ಕೆ ಸಿಕ್ಕಿ ನುಚ್ಚು ನೂರಾಗಿತ್ತು’ ಎಂದು ಶರತ್ ಭಯದಿಂದ ಹೇಳಿದ. 
 
‘ಹಾಗಾದರೆ ಇಲ್ಲಿರುವ ಆನೆ ಏಕೆ ತುಂಟತನ ಮಾಡದೆ ತನ್ನ ಮಾಲಿಕನ ಮಾತನ್ನು ಕೇಳುತ್ತಿದೆ?’
 
‘ಅವರು ಊಟ ಕೊಡುತ್ತಾರಲ್ಲ ಅದಕ್ಕೆ’
 
ಮಗನ ಉತ್ತರ ಕೇಳಿ ಸಿದ್ಧನಿಗೆ ನಗು ಬಂತು. ‘ಹಾಗಲ್ಲ ಮಗು, ಇದು ಸಾಕಿದ ಆನೆ. ಅದರ ಕಾಲಿಗೆ ಕಟ್ಟಿರುವ ಕಬ್ಬಿಣದ ಸರಪಳಿಯನ್ನು ಕಿತ್ತೆಸೆದು ಬರುವ ಸಾಮರ್ಥ್ಯ ಅದರಲ್ಲಿದೆ. ಆದರೆ ಚಿಕ್ಕಂದಿನಿಂದಲೇ ಅವುಗಳನ್ನು ಕಾಡಿನಿಂದ ತಂದು ಸಾಕಿರುತ್ತಾರೆ. ಆಗ ಅದಿನ್ನೂ ಎಳಸಾದ್ದರಿಂದ ಸರಪಳಿಯನ್ನು ಕಿತ್ತು ಬರಲು ಪ್ರಯತ್ನಿಸಿದರೆ ಕಾಲಿಗೆ ನೋವಾಗುತ್ತದೆ. ಹಾಗಾಗಿ ಬೆಳೆಯುತ್ತಾ ಬೆಳೆಯುತ್ತಾ ತನ್ನ ಸಾಮರ್ಥ್ಯವನ್ನು ಮರೆತು ಸರಪಳಿಗೆ ಹೊಂದಿಕೊಳ್ಳುತ್ತದೆ. ಮಾವುತನನ್ನೇ ತನ್ನ ಯಜಮಾನ ಎಂದುಕೊಂಡು ಹೇಳಿದ ಹಾಗೆ ಕೇಳುತ್ತದೆ. ಪ್ರೌಢಾವಸ್ಥಗೆ ಬಂದಾಗ ಸರಪಳಿಯನ್ನು ಸುಲಭವಾಗಿ ಕಿತ್ತುಕೊಂಡು ಸುಲಭವಾಗಿ ಪಾರಾಗಬಹುದೆಂಬ ತನ್ನ ಶಕ್ತಿಯನ್ನೇ ಮರೆತು ಇಲ್ಲಿದ್ದು ಬಿಡುತ್ತದೆ’ ಎಂದರು. 
 
ಅಪ್ಪ ಮಾತು ಮುಂದುವರಿಸಿದರು. ‘ಆ ಆನೆಯಂತೆಯೇ ನಾವು ಮನುಷ್ಯರು ಸಹ. ನಾವು ಚಿಕ್ಕಂದಿನಿಂದ ಯಾವುದನ್ನು ರೂಪಿಸಿಕೊಳ್ಳುತ್ತೇವೆಯೋ ದೊಡ್ಡವರಾದ ಮೇಲೂ ಅದೇ ಗುಣಗಳು ಬರುತ್ತವೆ. ಸೋಮಾರಿಗಳಾಗಿ ಬೆಳೆದರೆ ಆನೆಯಂತೆ ಈ ರೀತಿ ಬಂಧಿಯಾಗಿ ಒಬ್ಬರು ಹೇಳಿದಂತೆ ಕೇಳಿಕೊಂಡು ಇರಬೇಕಾಗುತ್ತದೆ’ ಎಂದರು. 
 
ಶರತ್‌ಗೆ ಅಪ್ಪನ ಮಾತು ಅರ್ಥವಾಯಿತು. ‘ಹೌದಪ್ಪ, ಚಿಕ್ಕಂದಿನಿಂದ ಯಾವ ರೀತಿಯ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳುತ್ತೇವೆಯೋ ಅದೇ ತರಹ ದೊಡ್ಡವರಾದಾಗ ಬದುಕುತ್ತೇವೆ’ ಎಂದ.
 
‘ಹೌದು. ನೀನು ಸೋಮಾರಿಯಾಗಿ ಬೆಳೆದರೆ ನಿನ್ನಲ್ಲಿರುವ ಪ್ರತಿಭೆ ನಿನಗೇ ತಿಳಿಯದೆ ಕಾಲ ಸರಿಯುತ್ತದೆ. ಆದ್ದರಿಂದ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಬೆಳೆದರೆ, ತಕ್ಕ ಅಭ್ಯಾಸ ಮಾಡಿದರೆ ಕಾರ್ಯ ಸಾಧನೆ ಮಾಡುವೆ’ ಎಂದರು. 
 
‘ಸರಿ, ಇನ್ನು ಮೇಲೆ ಸೋಮಾರಿಯಾಗಿ ಮಲಗದೆ ಎದ್ದು ಕೆಲಸ ಮಾಡುತ್ತೇನೆ. ಒಳ್ಳೆ ವ್ಯಕ್ತಿಯಾಗುತ್ತೇನೆ’ ಎಂದು ಶರತ್ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT