ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಕಲೆಗಳಿಗೆ ಹೊಸ ಆಯಾಮ

ಮೂಡಲಪಾಯ ಬಯಲಾಟ ತರಬೇತಿ ಕಾರ್ಯಾಗಾರದಲ್ಲಿ ಸಾಹಿತಿ ನಾ.ಡಿಸೋಜ
Last Updated 12 ಫೆಬ್ರುವರಿ 2017, 9:26 IST
ಅಕ್ಷರ ಗಾತ್ರ

ಸಾಗರ: ‘ಹೊಸ ತಲೆಮಾರಿನವರಿಗೆ ತಲುಪಿಸಲು ಜನಪದ ಕಲೆಗಳಿಗೆ ಹೊಸ ಆಯಾಮ ನೀಡಬೇಕು’  ಎಂದು ಸಾಹಿತಿ ನಾ.ಡಿಸೋಜ ಹೇಳಿದರು.

ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಹಾಗೂ ಜಾನಪದ ಕಣಜ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗುರುಭವನದಲ್ಲಿ ನಡೆದ ಮೂಡಲಪಾಯ ಬಯಲಾಟ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಡಲಪಾಯ ಹಾಗೂ ಪಡುವಲಪಾಯ ಈ ಎರಡೂ ಕಲೆಗಳು ಪ್ರಾದೇಶಿಕ ವಿಶೇಷತೆ ಮತ್ತು ಭಿನ್ನತೆಗಳನ್ನು ಒಳಗೊಂಡಿರುವ ವಿಶಿಷ್ಟ ಪ್ರಕಾರದ ಕಲೆಗಳಾಗಿವೆ. ಇವುಗಳಲ್ಲಿ ಕೆಲವೊಂದು ಸುಧಾರಣೆ ಮಾಡದೇ ಇದ್ದರೆ ಆಧುನಿಕ ಕಾಲದ ಪ್ರೇಕ್ಷಕರು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಕಲೆಗಳಲ್ಲಿ ಬದಲಾವಣೆ ತರುವತ್ತ  ಗಮನ ಹರಿಸಬೇಕು’ ಎಂದರು.

‘ಮಲೆನಾಡಿನ ಮೇಲೆ ಉತ್ತರ ಕರ್ನಾಟಕ ಭಾಗದ ಪ್ರಭಾವ ಇದೆ ಎನ್ನುವುದಕ್ಕೆ ಮೂಡಲಪಾಯ ಹಾಗೂ ಪಡುವಲಪಾಯ ಕಲೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇರುವುದೇ ಸಾಕ್ಷಿ. ಈ ಅಂಶಗಳ ಬಗ್ಗೆ ಮತ್ತಷ್ಟು ಹೆಚ್ಚಿನ ಅಧ್ಯಯನ ನಡೆಯಬೇಕು’ ಎಂದರು.

ಜನಪದ ವಿದ್ವಾಂಸ ಎನ್‌.ಹುಚ್ಚಪ್ಪ ಮಾಸ್ತರ್‌ ಮಾತನಾಡಿ, ‘ಅವಸಾನದ ಅಂಚಿನಲ್ಲಿರುವ ಜನಪದ ಕಲೆಗಳಿಗೆ ಹೊಸ ಸಂಸ್ಕಾರ ನೀಡಬೇಕು. ಈ ದಿಕ್ಕಿನಲ್ಲಿ ಇಂತಹ ಕಾರ್ಯಾಗಾರಗಳು ಉಪಯುಕ್ತ’  ಎಂದು ಅಭಿಪ್ರಾಯಪಟ್ಟರು.

ಜಾನಪದ ಕಣಜ ಸಂಸ್ಥೆಯ ಶಿವಾನಂದ ಕುಗ್ವೆ ಮಾತನಾಡಿದರು. ಸಂಸ್ಥೆಯ ದೇವೇಂದ್ರ ಬೆಳೆಯೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಸೊರಬ ತಾಲ್ಲೂಕಿನ ಕುಮ್ಮೂರು ಗ್ರಾಮದ ಮಾರುತಿ ಬಯಲಾಟ ಮಂಡಳಿಯ ಮೂಡಲಪಾಯ ಕಲಾವಿದ ಕುಮ್ಮೂರು ರಂಗಪ್ಪ   ಹಾಜರಿದ್ದರು. ಜಯರಾಂ ಕೆ.ಎಚ್‌. ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT