ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ಛೆರೋಗದ ಸುತ್ತಮುತ್ತ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಎಪಿಲೆಪ್ಸಿ ಅಥವಾ ಮೂರ್ಛೆ ರೋಗ  (ಫಿಟ್ಸ್‌) ಎನ್ನುವುದು ಒಂದು ಸಾಮಾನ್ಯ ಕಾಯಿಲೆ.  ನಮ್ಮಲ್ಲಿ ಬೇರೂರಿರುವ  ಸಾಮಾಜಿಕ ಕಳಂಕದ ಕಾರಣದಿಂದ,  ಜನರು ಈ ಸಮಸ್ಯೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಇದರ ಬಗ್ಗೆ ಅಪರಾಧಪ್ರಜ್ಞೆ ಹೊಂದಿರುವುದರ ಜೊತೆಗೆ ವಿಷಯವನ್ನು ಗೌಪ್ಯವಾಗಿಡುತ್ತಾರೆ. ಎಪಿಲೆಪ್ಸಿಯಿಂದ ಬಳಲುತ್ತಿರುವ ಅನೇಕರು ಖಿನ್ನತೆಗೆ ಒಳಗಾಗಿರುತ್ತಾರೆ.

ಮೂರ್ಛೆರೋಗ ಎಂದರೇನು?
ಮೂರ್ಛೆ ರೋಗ ಎನ್ನುವುದು  ನರಸಂಬಂಧಿ ಸಮಸ್ಯೆ. ಮಿದುಳಿನಲ್ಲಾಗುವ ವೈಪರೀತ್ಯದಿಂದ ಮೂರ್ಛೆ ರೋಗ (ಎಲೆಕ್ಟ್ರಿಕಲ್ ಆಕ್ಟಿವಿಟಿ ವೈಪರೀತ್ಯ) ಬರುತ್ತದೆ.

ವೈಪರೀತ್ಯ ಹೆಚ್ಚಾದಾಗ ಮಿದುಳಿನಿಂದ  ಹೆಚ್ಚಿನ ಪ್ರಮಾಣದ ಪ್ರಚೋದನೆಗಳು ದೇಹದ ಇನ್ನಿತರ ಭಾಗಗಳಿಗೆ ರವಾನೆಯಾಗುತ್ತವೆ. ಇದರಿಂದ ದೇಹದಲ್ಲಿ ಭಿನ್ನ ರೀತಿಯ ಹಠಾತ್ ಚಲನೆ ಉಂಟಾಗುತ್ತದೆ. ಇದನ್ನೇ  ಮೂರ್ಛೆ ರೋಗ ಎನ್ನಲಾಗುತ್ತದೆ.

ಈ ಸ್ಥಿತಿಯನ್ನು ಸಾಮಾನ್ಯವಾಗಿ ಶಾರ್ಟ್ ಸರ್ಕಿಟ್‌ಗೆ ಹೋಲಿಸಬಹುದು. ಈ ಸಮಸ್ಯೆಗೊಳಗಾದ ವ್ಯಕ್ತಿ ತಾತ್ಕಾಲಿಕವಾಗಿ ಪ್ರಜ್ಞಾಹೀನನಾಗುತ್ತಾನೆ. ಈ ರೀತಿಯ ಅವಧಿ 30 ಸೆಕೆಂಡುಗಳಿಂದ 1 ನಿಮಿಷದವರೆಗೆ ಇರುತ್ತದೆ. ಆದರೆ, ಈ ಅವಧಿಯ ಬಾಧೆ ತೀವ್ರಸ್ವರೂಪದ್ದಾಗಿರುತ್ತದೆ.

ಆಗ ವ್ಯಕ್ತಿಯ ಬಾಯಿಯಿಂದ ನೊರೆ ಬರುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿ ಪೂರ್ಣ ಅಥವಾ ಅರ್ಧ ಪ್ರಜ್ಞೆ ಕಳೆದುಕೊಳ್ಳಬಹುದು. ಅರೆ ಪ್ರಜ್ಞೆಗೆ ಜಾರುವ ವ್ಯಕ್ತಿಯ ಕೈ ಅಥವಾ ಕಾಲುಗಳ ಚಲನೆ ನಿಲ್ಲಬಹುದು. ಇಲ್ಲವೇ ಕುತ್ತಿಗೆಯ ಭಾಗದಲ್ಲಿ ತೊಂದರೆಯಾಗಬಹುದು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಪಾರ್ಷಿಯಲ್ ಎಪಿಲೆಪ್ಸಿ’ ಎನ್ನಲಾಗುತ್ತದೆ.

ನರಸಂಬಂಧಿ ಸಮಸ್ಯೆಗಳಲ್ಲಿ ಮೂರ್ಛೆ ರೋಗ ಎರಡನೆಯದು. ಮೊದಲನೆಯ ಸಮಸ್ಯೆ ತಲೆನೋವಿಗೆ ಸಂಬಂಧಿಸಿದ್ದು. ನಮ್ಮ ದೇಶದಲ್ಲಿ ಸುಮಾರು 1 ಕೋಟಿ ಮೂರ್ಛೆ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ 4 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ಕಾರಣಗಳು
*ಅಪಘಾತದಿಂದ ತಲೆಗೆ ಪೆಟ್ಟಾದಾಗ ಮಿದುಳಿನಲ್ಲಿ ಸೋಂಕು, ಮಿದುಳಿನ ಗೆಡ್ಡೆ, ಅನುವಂಶೀಯತೆ
*ಹೆರಿಗೆಯಲ್ಲಿ ತೊಂದರೆ (ದೀರ್ಘಕಾಲದ ಹೆರಿಗೆ ನೋವು ಅಥವಾ ಒಟ್ಟು ಪ್ರಕ್ರಿಯೆ, ಮಗುವಿಗೆ ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಹೆರಿಗೆ ಸಮಯದಲ್ಲಿ ಮಗುವಿನ ತಲೆಗೆ ಪೆಟ್ಟಾಗುವುದು, ಮಿದುಳಿಗೆ ಹಾನಿ ಉಂಟಾಗಬಹುದು) 
*ತೀವ್ರವಾದ ಜ್ವರ (ಸಾಮಾನ್ಯವಾಗಿ  ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ)
*ಕಲುಷಿತ ಆಹಾರ ಅಥವಾ ನೀರು ಸೇವಿಸಿದಾಗ ಲಾಡಿ ಹುಳು ಮಿದುಳಿನ ನರವ್ಯೂಹಕ್ಕೆ ಸೇರಿದಾಗ ಈ ಸಮಸ್ಯೆ ಉಂಟಾಗುತ್ತದೆ.
*ಕ್ಷಯ, ಪಾರ್ಶ್ವವಾಯು ಉಂಟಾದಾಗ ಮೂರ್ಛೆ ರೋಗ ಕಾಣಿಸಿಕೊಳ್ಳಬಹುದು
ಪ್ರಥಮ ಚಿಕಿತ್ಸೆ
ಮೂರ್ಛೆರೋಗ ಉಂಟಾದ ವ್ಯಕ್ತಿಗೆ ಈ ರೀತಿ ಸಹಾಯ ಮಾಡಬಹುದು.
*ವ್ಯಕ್ತಿಯನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಿ. ಇದರಿಂದ ಬಾಯಿಯಿಂದ ಜೊಲ್ಲು ಸೋರುವುದು ನಿಲ್ಲುತ್ತದೆ ಮತ್ತು ಉಸಿರಾಟಕ್ಕೆ ಸಹಾಯವಾಗುತ್ತದೆ  
*ವ್ಯಕ್ತಿಯ ಸುತ್ತಲೂ  ಸ್ವಲ್ಪ ಸ್ಥಳಾವಕಾಶ ಮಾಡಿ ಮತ್ತು ಅಕ್ಕಪಕ್ಕ ಯಾವುದಾದರೂ ಹಾನಿ ಉಂಟು ಮಾಡುವ ವಸ್ತುಗಳಿದ್ದರೆ ತೆಗೆಯಿರಿ.
*ವ್ಯಕ್ತಿಗೆ ಫಿಟ್ಸ್ ಬರುವುದು ಗಮನಕ್ಕೆ ಬಂದರೆ, ಅವರನ್ನು ಸುರಕ್ಷಿತವಾದ ಸ್ಥಳದಲ್ಲಿ ಮಲಗಲು ಅವಕಾಶ ಮಾಡಿಕೊಡಿ. ಇದರಿಂದ ವ್ಯಕ್ತಿಯು ಕೆಳಗೆ ಬಿದ್ದು ಗಾಯಗೊಳ್ಳುವುದನ್ನು ತಪ್ಪಿಸಬಹುದು.
*ಹಲ್ಲುಗಳ ಮಧ್ಯೆ ಯಾವುದೇ ಗಟ್ಟಿಯಾದ ವಸ್ತುವನ್ನು ಇಡಬೇಡಿ.
*ಕಾಲುಗಳನ್ನು ಹಿಡಿದುಕೊಳ್ಳಬೇಡಿ.
*ಬಿಗಿದ ಹಲ್ಲುಮುಡಿಯನ್ನು ಬಿಡಿಸಲು ಪ್ರಯತ್ನಿಸಬೇಡಿ, ಇದರಿಂದ ಹಲ್ಲುಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.
*ಕುತ್ತಿಗೆಗೆ ಬಿಗಿದಂತೆ ಬಟ್ಟೆ ತೊಟ್ಟಿದ್ದರೆ ಅಥವಾ ಟೈ ಹಾಕಿಕೊಂಡಿದ್ದರೆ ಅದನ್ನು ಸಡಿಲಗೊಳಿಸಿ
*ನಡುಕ ನಿಂತ ತಕ್ಷಣ ವ್ಯಕ್ತಿಯ ಉಸಿರಾಟ ಮತ್ತು ರಕ್ತಸಂಚಾರ ಪರೀಕ್ಷಿಸಿ
*ಸಾಧ್ಯವಾದಷ್ಟೂ ಬೇಗ ವೈದ್ಯರ ಬಳಿ ಕರೆದೊಯ್ಯಿರಿ
ಸತ್ಯ–ಮಿಥ್ಯೆಗಳು
*ಮೂರ್ಛೆರೋಗ ಸಾಂಕ್ರಾಮಿಕ ರೋಗವಲ್ಲ
*ದೇವರ ಶಾಪ, ಭೂತ ಪ್ರೇತದಿಂದಾಗಿ ಬರುವುದಿಲ್ಲ
*ಮೂರ್ಛೆರೋಗವಿರುವವರು ಇತರ ಸಾಮಾನ್ಯರಂತೆಯೇ ಬುದ್ಧಿಮತ್ತೆ ಹೊಂದಿರುತ್ತಾರೆ.
*ಮೂರ್ಛೆ ಬಂದಾಗ ವ್ಯಕ್ತಿಯ ಕೈಗೆ ಕಬ್ಬಿಣದ ಬೀಗದ ಕೈ, ವಸ್ತು ನೀಡುವುದರಿಂದ ಸರಿಹೋಗುತ್ತಾರೆ ಎನ್ನುವುದು ತಪ್ಪು ಕಲ್ಪನೆ
*ಮೂರ್ಛೆರೋಗವಿರುವ ಮಹಿಳೆ ಸೂಕ್ತ ಚಿಕಿತ್ಸೆ ಪಡೆದು, ಗರ್ಭ ಧರಿಸಿ, ಆರೋಗ್ಯವಂತ ಮಗುವಿಗೆ ಜನ್ಮನೀಡಲು ಸಾಧ್ಯ
*ಮೂರ್ಛೆರೋಗವಿರುವವರು ಎಲ್ಲರಂತೆಯೇ ಉದ್ಯೋಗ ಮಾಡಬಹುದು. ಆದರೆ, ಯಂತ್ರಗಳ   ಕೆಲಸ,  ಚಾಲಕ ವೃತ್ತಿ  ಅಥವಾ ತೀವ್ರ ಒತ್ತಡದ ಕೆಲಸಗಳನ್ನು ಮಾಡಬೇಕಾದ  ಸಂದರ್ಭದಲ್ಲಿ ತಜ್ಞರ ಸಲಹೆ ಪಡೆಯಬೇಕು
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ತಜ್ಞರ ಪ್ರಕಾರ ಮೂರ್ಛೆರೋಗಕ್ಕೂ ಮಾನಸಿಕ ಸಮಸ್ಯೆಗೂ ಸಂಬಂಧವುಂಟು. ವ್ಯಕ್ತಿ ದಿನೇದಿನೇ ಖಿನ್ನತೆಗೆ ಜಾರಬಹುದು. ಅದುರುವಿಕೆಯ ಪರಿಣಾಮವಾಗಿ ಅಥವಾ ಅದುರುವಿಕೆಯ ನಂತರ  ಆತಂಕಕ್ಕೊಳಗಾಗಬಹುದು.
ನಡವಳಿಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ತಾತ್ಕಾಲಿಕ ಭ್ರಮನಿರಸನ, ಭ್ರಾಂತಿ ಕಾಣಿಸಿಕೊಳ್ಳಬಹುದು. ಕೆಲವು ಸನ್ನಿವೇಶಗಳಲ್ಲಿ ಸ್ಕಿಜೋಫ್ರೇನಿಯಾದಂಥ ತೀವ್ರ ಕಾಯಿಲೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಲ್ಲಿ ಸಾಮಾಜಿಕ ಹಿಂಜರಿಕೆ ಮೂಡಬಹುದು.
ನಿಮ್ಹಾನ್ಸ್‌ನ ನರರೋಗ ತಜ್ಞ ಡಾ.ಪಿ.ಸತೀಶ್‌ಚಂದ್ರ  ಅವರ ಪ್ರಕಾರ, ಶೇಕಡ 70ರಷ್ಟು ಸನ್ನಿವೇಶಗಳಲ್ಲಿ ರೋಗಕ್ಕೆ ಚಿಕಿತ್ಸೆ ಸಾಧ್ಯವಿದೆ. ಇದಕ್ಕೆ  ಸಾಮಾನ್ಯ ವೈದ್ಯರು, ಮನೋವೈದ್ಯರು ಅಥವಾ ಮನೋಶ್ಶಾಸ್ತ್ರಜ್ಞರಿಂದ ಸಹಾಯ ಪಡೆಯಬಹುದು. ಇದೊಂದು ದೀರ್ಘಕಾಲದ ಚಿಕಿತ್ಸೆಯಾಗಿರುತ್ತದೆ. ಆದರೆ ನಿಯಮಿತವಾಗಿ ಪಾಲಿಸಿದಾಗ ರೋಗ ಗುಣವಾಗುತ್ತದೆ. 
ರೇಣುಕಾಂಬಿಕೆ
ವೈಟ್ ಸ್ವಾನ್ ಫೌಂಡೇಶನ್ಸ್ (ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕುರಿತು ಅರಿವು ಮೂಡಿಸುವಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸಂಸ್ಥೆ )
http://kannada.whiteswanfoundation.org/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT