ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಕಲಿಕೆ: ಸುಧಾರಣೆ ಸಾಧ್ಯ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ವಿದ್ಯಾರ್ಥಿಗಳ ಭಾಷಾ ಪ್ರಯೋಗ ದಿನೇ ದಿನೇ ದಯನೀಯವಾಗುತ್ತಿದೆ’ ಎಂದು ಆರತಿ ಪಟ್ರಮೆ ಅವರು ಅಳಲು ತೋಡಿಕೊಂಡಿದ್ದಾರೆ (ಸಂಗತ, ಫೆ. 1). ಕೆಲವು ಪರಿಹಾರಗಳನ್ನೂ ಸೂಚಿಸಿದ್ದಾರೆ. ಆದರೆ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಭಾಷೆಯನ್ನು ಕಲಿಸುತ್ತಾರೆಯೇ ಎಂಬುದೇ ಮೂಲ ಪ್ರಶ್ನೆ. ಭಾಷಾ ಪಠ್ಯದಲ್ಲಿಯೂ ಸಾಹಿತ್ಯ, ಜನಪದ, ಪರಂಪರೆ, ಇತಿಹಾಸ, ದೇಶಭಕ್ತಿಯಂಥ ವಸ್ತುಗಳನ್ನು ತುಂಬಿ, ಭಾಷಾ ಕೌಶಲ ಕಲಿಸುವುದನ್ನು ನಿರ್ಲಕ್ಷಿಸಲಾಗುತ್ತಿದೆ.

ಮಾತನಾಡುವ ಭಾಷೆಯು ಮುಂದಿನ ಓದು, ಬರಹ ಮತ್ತು ಪರಿಣಾಮಕಾರಿ ಸಂವಹನಕ್ಕೆ  ಬುನಾದಿ. ಶಾಲೆಗಳಲ್ಲಿ ಮಾತನಾಡುವುದನ್ನೇ ಗೌಣವಾಗಿ ಕಾಣಲಾಗುತ್ತದೆ. ಮಕ್ಕಳಿಗೆ  ಯಾವುದಾದರೂ ಒಂದು ವಿಧಾನದ ಮೂಲಕ ಓದುವುದನ್ನು ಕಲಿಸುವುದರಿಂದಲೇ ಭಾಷಾ ಶಿಕ್ಷಣದ ಆರಂಭ. ಐದು ವರ್ಷಗಳ ಕಾಲ ಕರತಲಾಮಲಕ ಎಂಬಂತೆ ಮಗು ಅನಾಯಾಸ ರೂಢಿಸಿಕೊಂಡಿರುವ (ಮಾತಾಡುವ) ಭಾಷಾ ಕೌಶಲವನ್ನು ಕಡೆಗಣಿಸಲಾಗುತ್ತದೆ. ನಮ್ಮ ಯಾವುದೇ ತರಗತಿಯಲ್ಲಿ ವಿವಿಧ ಮನೆಮಾತುಗಳನ್ನು ಆಡುವ ಮಕ್ಕಳು ಇರುತ್ತಾರೆ.

ಶಾಲೆಗೆ ಬಂದಕೂಡಲೇ ಅವುಗಳನ್ನು ಪೂರ್ಣವಾಗಿ ನಿಷೇಧಿಸಲಾಗುತ್ತದೆ. ಈ ಮೂಲಕ ಮಗು ಅಲ್ಲಿಯವರೆಗೆ ಬೆಳೆಸಿಕೊಂಡು ಹೆಮ್ಮೆಯಿಂದ ಮೆರೆದಿದ್ದ ಅಸ್ಮಿತೆಯನ್ನೇ ಪೂರ್ತಿ ಅಲ್ಲಗಳೆದುಬಿಡುತ್ತಾರೆ. ಸ್ಲೇಟನ್ನು ಪೂರ್ತಿಯಾಗಿ ನೀರು ಹಾಕಿ ಚೆನ್ನಾಗಿ ಬಟ್ಟೆಯಿಂದ ಉಜ್ಜಿ ಖಾಲಿ ಮಾಡುವ ಹಾಗೆ. ಅದರ ಮೇಲೆ ಇವರೇನೋ ಹೊಸ ಅಚ್ಚರಿಯನ್ನು ಕಲಿಸುತ್ತಾರೇನೋ ಎನ್ನುವ ಮನೋಭಾವ ಶಿಕ್ಷಕರಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿದೆ.
‘ಮನೆಮಾತು’ಗಳು ಸತ್ವಯುತವಾದ ಸಂವಹನಕ್ಕೆ ನಾಂದಿ ಹಾಡಿರುತ್ತವೆ.

ಮನೆಮಾತುಗಳಲ್ಲಿಯೇ ಮಗುವಿನ ಭಾವನೆಗಳು ಶ್ರೀಮಂತವಾಗುತ್ತವೆ; ವ್ಯಕ್ತಿತ್ವ ಅರಳುತ್ತದೆ. ಭಾಷಾ ವಿಜ್ಞಾನ ಮತ್ತು ಮನೋವಿಜ್ಞಾನದ ಪ್ರಕಾರ ‘ಪ್ರತಿಯೊಂದು ಮಗು ತನ್ನ ಐದು ವರ್ಷದ ಒಳಗೆ  ಕುಟುಂಬದವರು ಮಾತನಾಡುವ ಭಾಷೆಯಲ್ಲಿ ಹೆಚ್ಚು ಕಡಿಮೆ ಶೇ 90ರಷ್ಟನ್ನು ಮೈಗೂಡಿಸಿಕೊಂಡಿರುತ್ತದೆ’. ಶಾಲೆಯಲ್ಲಿ ಈ ಸಹಜ ಸಾಮರ್ಥ್ಯವನ್ನು ಬಳಸಿಕೊಳ್ಳದೆ ಇರುವುದಷ್ಟೇ ಅಲ್ಲ, ಅದೊಂದು ನಿಷ್ಪ್ರಯೋಜಕ ಕೌಶಲ ಎಂಬ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಲಾಗುತ್ತದೆ. ಇದೊಂದು ದುರಂತ.

ಭಾಷಾ ಬೋಧನಾ ವಿಜ್ಞಾನದ ಪ್ರಕಾರ, ಮಗು ಯಾವುದೇ ಮನೆಮಾತಿನ ಹಿನ್ನೆಲೆಯಿಂದ ಬಂದಿರಲಿ, ಅದನ್ನು ಆಧರಿಸಿಯೇ ಹೊಸ ಭಾಷೆಯನ್ನು ಕಲಿಸುವುದು ಪರಿಣಾಮಕಾರಿ. ಹಾಗೆ ನೋಡಿದರೆ ಉರ್ದು, ತೆಲುಗು, ಬಂಜಾರ, ತುಳು, ತಮಿಳಷ್ಟೇ  ಅಲ್ಲ, ಕನ್ನಡವನ್ನು ಮನೆಮಾತಾಗಿ ಉಳ್ಳ ಮಕ್ಕಳಿಗೂ ‘ಶಾಲಾ ಕನ್ನಡ’ (ಶಿಷ್ಟ ಕನ್ನಡ) ಒಂದು ಹೊಸ ಭಾಷೆಯಂತೆಯೇ ತೋರುತ್ತದೆ. ಕಲಿಸುವವರು ಈ ಭಾವನೆಯನ್ನು ಗಟ್ಟಿಯಾಗಿಸುತ್ತಾರೆ.

ಶಾಲಾ ಕನ್ನಡವನ್ನು ಕಲಿಸುವಾಗಲೂ ಮೊದಲ ಹಂತಗಳಲ್ಲಿ ಮಕ್ಕಳು ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಲು ವಿಪುಲ ಅವಕಾಶವಿರಬೇಕು. ತಮಗೆ ಅನ್ನಿಸಿದ್ದನ್ನು ಸ್ಪಷ್ಟವಾಗಿ, ನಿರರ್ಗಳವಾಗಿ ಮಾತನಾಡುವುದನ್ನು ಮಕ್ಕಳು ಕಲಿಯಬೇಕು. ಇದರಲ್ಲಿ ಸರಿ, ತಪ್ಪುಗಳ ವಿಮರ್ಶೆ ಇಲ್ಲ. ಮಾತಿನ, ಅಭಿವ್ಯಕ್ತಿಯ, ಸಂವಹನದ ಕೌಶಲವನ್ನು ಕಲಿಯುವುದೇ ಮುಖ್ಯ ಉದ್ದೇಶ. ಇದು ಭಾಷೆಯನ್ನು ಕಲಿಸುವುದಷ್ಟೇ ಅಲ್ಲ ಮಗುವಿಗೆ ಧೈರ್ಯವನ್ನು, ಸ್ವವಿಶ್ವಾಸವನ್ನು, ವಿಚಾರವಂತಿಕೆಯನ್ನು ನೀಡುತ್ತದೆ. ಮುಂದಿನ ಎಲ್ಲಾ ಕಲಿಕೆಗಳಿಗೆ ಭದ್ರ ಬುನಾದಿಯಾಗುತ್ತದೆ.

ಸಮಾಧಾನದ ಸಂಗತಿಯೆಂದರೆ, ಇತರ ಭಾರತೀಯ ಭಾಷೆಗಳ ಹಾಗೆ ಕನ್ನಡಕ್ಕೂ ಇರುವ ಲಿಪಿ ವ್ಯವಸ್ಥೆ ಅತ್ಯಂತ ತಾರ್ಕಿಕವಾದ ವರ್ಣ ವ್ಯವಸ್ಥೆಯನ್ನು ಅನುಸರಿಸುತ್ತದೆ. ಮಾತಿನ ಉಚ್ಚಾರಣೆಯನ್ನು ಅನುಸರಿಸಿಯೇ ಬರವಣಿಗೆ ಇದೆ. ಇಲ್ಲಿ ಇಂಗ್ಲಿಷ್ ಅಥವಾ ಉರ್ದುವಿನ ಹಾಗೆ ‘ಸ್ಪೆಲಿಂಗ್’ ಇಲ್ಲ. ವರ್ಣಮಾಲೆಯ ವ್ಯವಸ್ಥೆಯೂ ಸ್ವರ, ವರ್ಗೀಯ ವ್ಯಂಜನ, ಅವರ್ಗೀಯ ವ್ಯಂಜನ ಎನ್ನುವ ರೀತಿಯಲ್ಲಿ ತುಂಬಾ ವೈಜ್ಞಾನಿಕವಾಗಿ ವರ್ಗೀಕೃತವಾಗಿದೆ. ಕನ್ನಡ ಓದು, ಬರಹವನ್ನು ಕಲಿಸುವುದು ಉಳಿದ ಭಾಷೆಗಳಿಗೆ ಹೋಲಿಸಿದರೆ ತುಂಬಾ ಸುಲಭ.

ಇನ್ನು ವ್ಯಾಕರಣದ ವಿಚಾರ. ಅದನ್ನು ಕಬ್ಬಿಣದ ಕಡಲೆಯೇನೋ ಎಂಬಂತೆ ಕಲಿಸುವವರೇ ಭಾವಿಸುತ್ತಾರೆ. ಇಲ್ಲಿಯೂ ಮಾತನಾಡುವ ಭಾಷೆಯ ಸಾಮರ್ಥ್ಯವನ್ನು ಸಂಪೂರ್ಣ ಕಡೆಗಣಿಸಿದ್ದೇ ಇದಕ್ಕೆ ಕಾರಣ. ವ್ಯಾಕರಣ ಎಂದಕೂಡಲೆ ಅದ್ಯಾವುದೋ ಅನ್ಯಗ್ರಹ ಜೀವಿಗಳ ಭಾಷೆಯ ನಿಯಮಗಳನ್ನು ಕಲಿಯಬೇಕೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತೇವೆ. ಮಾತನಾಡುವ ಭಾಷೆಯಲ್ಲಿಯೂ ‘ವ್ಯಾಕರಣ’ ಇರುತ್ತದೆ.

ಮಾತನಾಡುವಾಗ ಮಕ್ಕಳು ಅದನ್ನು ಗಮನಿಸಿರುವುದಿಲ್ಲ. ಅವರೇ ಆಡುವ ಮಾತಿನಲ್ಲಿ ನಿರ್ದಿಷ್ಟ ರಚನೆ, ತರ್ಕ ಇದೆ ಎಂಬುದನ್ನು ಅವರ ಗಮನಕ್ಕೆ ತಂದರೆ, ಅಲ್ಲಿಂದ ಶಿಷ್ಟ ಕನ್ನಡದ ವ್ಯಾಕರಣ ವ್ಯವಸ್ಥೆಯನ್ನು ಕಲಿಯಲು ಅವರಿಗೆ ಉತ್ತೇಜನವಿರುತ್ತದೆ. ಅಷ್ಟಕ್ಕೂ ಈಗ ಸಂಸ್ಕೃತದ ವ್ಯಾಕರಣವನ್ನು ಕನ್ನಡದ ಮೇಲೆ ಹೇರಿ, ನಿಯಮಗಳಿಗಿಂತ ಅಪವಾದಗಳೇ ಹೆಚ್ಚಾಗಿರುವ ಸನ್ನಿವೇಶ ಬದಲಾಗಿದೆ. ಈಗ ಆದಷ್ಟೂ ‘ವಿವರಣಾತ್ಮಕ’ ವ್ಯಾಕರಣವನ್ನು ಅನುಸರಿಸಲಾಗುತ್ತದೆ. ಆದರೂ ವ್ಯಾಕರಣ ಎಂಬುದು ನಾವು ಈಗಾಗಲೇ ಕಲಿತು, ಮಾತನಾಡಿ, ಓದಿ, ಬರೆದು ಮಾಡಿರುವ, ಮುಂದೆ ಸಾಹಿತ್ಯದ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಭಾಷೆಯದೇ ವ್ಯವಸ್ಥಿತ ವಿವರಣೆ ಎಂಬಂತೆ ಕಲಿಸಿದರೆ ಮಕ್ಕಳು ಅದರಲ್ಲೂ ಸಾರ್ಥಕ್ಯ ಕಂಡಾರು.

ಮಕ್ಕಳಿಗೆ ಶುದ್ಧವಾದ ಓದು-ಬರಹ ಬರುವುದಿಲ್ಲ ಎಂದು ಹಲುಬುವ ಶಿಕ್ಷಕರು, ಅದಕ್ಕೆ ಹಿಂದಿನ ತರಗತಿಗಳ ಶಿಕ್ಷಕರ ಅಜ್ಞಾನ, ಬೇಜವಾಬ್ದಾರಿ  ಕಾರಣ ಎಂದು ಹೇಳಿ ಕೈತೊಳೆದುಕೊಳ್ಳಲು ನೋಡುತ್ತಾರೆ. ಯಾವುದೇ ಹಂತದಲ್ಲಿ ಶಿಕ್ಷಕ ತನ್ನ ವಿದ್ಯಾರ್ಥಿಗಳಲ್ಲಿ ಇಂಥ ದೋಷಗಳನ್ನು ಕಂಡಲ್ಲಿ, ತನಗೆ ಇಷ್ಟವಿದ್ದರೆ ಅವುಗಳನ್ನು  ತಿದ್ದುವುದು ಕಷ್ಟವಾಗುವುದಿಲ್ಲ. ಕನ್ನಡ ಲಿಪಿ ವ್ಯವಸ್ಥೆಯ ತರ್ಕವನ್ನು ವಿದ್ಯಾರ್ಥಿಗಳಿಗೆ ಯಾವುದೇ ಹಂತದಲ್ಲಿ ಮನನ ಮಾಡಿಸಿ ಅವರ ಉಚ್ಚಾರಣೆ, ಅದನ್ನು ಅನುಸರಿಸಿದ ಓದು, ಬರಹವನ್ನು ಸುಧಾರಿಸಬಹುದು.

ವ್ಯವಸ್ಥೆಗಳೆಲ್ಲವೂ ಸುಧಾರಿಸುವವರೆಗೆ ಕಾದರೆ ಒಂದೊಂದೇ ಪೀಳಿಗೆ ಕನ್ನಡವನ್ನು ಚೆನ್ನಾಗಿ ಕಲಿಯದೇ ಬಳಲುತ್ತದಷ್ಟೆ. ಮಕ್ಕಳಿಗೆ ‘ಶುದ್ಧ’ ಕನ್ನಡ ಮಾತನಾಡಲು, ಓದಲು, ಬರೆಯಲು ಬಾರದೇ ಇದ್ದರೆ ಅದರ ದೋಷವನ್ನು ಇಂಗ್ಲಿಷ್ ಮಾಧ್ಯಮ ಶಾಲೆ, ಸಂಗೀತ, ನೃತ್ಯ, ಕ್ರಿಕೆಟ್, ಟಿ.ವಿ., ಸಿನಿಮಾಗಳ  ಮೇಲೆ  ಹೊರಿಸಿ ಕಾಲ ಕಳೆಯದೆ, ಅವರೊಂದಿಗೆ ಆದಷ್ಟು ಹೆಚ್ಚು ಹೊತ್ತು ಮನೆ ಮಾತಿನ ಜೊತೆ ಶಿಷ್ಟ ಕನ್ನಡದಲ್ಲಿಯೂ ಮಾತನಾಡುವ, ಅವರಿಗೆ ಹಿಡಿಸುವುದನ್ನು ಓದುವ, ಬರೆಯುವ ಅಭ್ಯಾಸಕ್ಕೆ ತೊಡಗಿಸಿ. ಎಲ್ಲ ಪೋಷಕರಿಗೆ ಇದು ಸಾಧ್ಯವಾಗದೇ ಇರಬಹುದು. ಅಂತಲ್ಲಿ ಎಲ್ಲ ಹಂತದ ಎಲ್ಲ ಬಗೆಯ ಶಿಕ್ಷಕರು, ವಿದ್ಯಾರ್ಥಿಗಳ ತಂದೆ– ತಾಯಂದಿರ ಪಾತ್ರವನ್ನು ವಹಿಸಬಹುದು. ಒಟ್ಟಿನಲ್ಲಿ ಮಕ್ಕಳ ಬಗ್ಗೆ ಪ್ರೀತಿ, ಅವರ ಭವಿಷ್ಯದ ಬಗ್ಗೆ ಕಾಳಜಿ ಇರಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT