ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸಿಂಹದ ಅದೇ ಗರ್ಜನೆ

ಎಸ್‌ಐ 3 (ಸಿಂಗಂ 3 – ತಮಿಳು)
Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ವಿಷ್ಣುವರ್ಧನ್ ಎರಡು ದಶಕ ‘ಸಿಂಹ’ದ ಪ್ರಭಾವಳಿಯನ್ನು ಬೆನ್ನಿಗಿಟ್ಟುಕೊಂಡು ಅಭಿನಯಿಸಿದ್ದರು. ಈಗ ದೇಶದಲ್ಲಿ ‘ಸಿಂಗಂ’ ಇನ್ನೊಂದು ಬ್ರಾಂಡ್! ಅದು ತಮಿಳಿನ ಸ್ಟಾರ್‌ ನಟ ಸೂರ್ಯ ಅವರನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಚಿತ್ರಲೋಕದಲ್ಲಿ ಒಂದು ಸಿನಿಮಾದ ಆಯುಸ್ಸು ಈಗಿನ ಜಮಾನದಲ್ಲಿ ಕಡಿಮೆ ಎನ್ನುವ ಅಭಿಪ್ರಾಯವಿದೆ. ಅದನ್ನು ಸುಳ್ಳಾಗಿಸಲೋ ಎಂಬಂತೆ ಯಶಸ್ವಿ ಚಿತ್ರಗಳ ಸರಣಿಗಳು ಬರತೊಡಗಿರುವುದು ಸೋಜಿಗ. ‘ಎಸ್‌ಐ3’ ಅರ್ಥಾತ್ ‘ಸಿಂಗಂ 3’ ಆ ಪಟ್ಟಿಗೆ ಇನ್ನೊಂದು ಸೇರ್ಪಡೆ.

ಇದು ಮೈಮರೆಸುವ ಸಿನಿಮಾ. ಅಬ್ಬರದ ಧಾಟಿ. ಎಣಿಸಬಹುದಾದಷ್ಟು ಒದೆಗಳನ್ನಷ್ಟೇ ತಿನ್ನುವ ನಾಯಕ, ಹೊಡೆಯುವುದರಲ್ಲಿ ಮುಂದು. ಕಾನೂನನ್ನು ತಾನೊಬ್ಬನೇ ಕೈಗೆತ್ತಿಕೊಂಡಂತೆಯೂ ಮೈಮೇಲೆ ಸದಾ ಆವೇಶ ಆವಾಹಿಸಿಕೊಂಡಂತೆಯೂ ವರ್ತಿಸುವ ‘ನರಸಿಂಗ’ನೇ ನಾಯಕ. ಪೊಲೀಸ್ ಇಲಾಖೆ ಕೆಲಸದ ಬದ್ಧತೆಗಾಗಿ ಸಾಂಸಾರಿಕ ಬದುಕನ್ನೂ ಬದಿಗೊತ್ತಿ, ಸಮಸ್ಯೆಗಳಿಗೆ ಎದೆಗೊಡುವವ. ‘ನಾಯಕ ಪ್ರಣೀತ’ ಜಾಯಮಾನದ ಚಿತ್ರಗಳಿಗೆ ಅಪವಾದವಲ್ಲದ ಈ ಸಿನಿಮಾ ರಂಜನೆಯೊಂದನ್ನೇ ಉದ್ದೇಶವಾಗಿಸಿಕೊಂಡಿದೆ.

ಮಂಗಳೂರಿನಿಂದ ಆಸ್ಟ್ರೇಲಿಯಾಗೆ ವ್ಯಾಪಿಸಿದ ಉದ್ಯಮಿಯ ‘ರದ್ದಿ ಪದಾರ್ಥಗಳ ದಂಧೆ’ ಬಯಲಿಗೆಳೆಯುವುದು ಪೊಲೀಸ್ ಅಧಿಕಾರಿಯಾದ ನಾಯಕನ ಗುರಿ. ಆಧುನಿಕ ತಂತ್ರಜ್ಞಾನದ ಅಡ್ಡದಾರಿಗಳನ್ನೆಲ್ಲ ಬಳಸಿಕೊಂಡು ಖಳರ ಮೊಗಸಾಲೆಯಲ್ಲಿ ಎದೆಯುಬ್ಬಿಸಿ ನಿಲ್ಲುವ ‘ಸ್ಟಾರ್‌ಗಿರಿ’ಯ ಪೋಷಣೆ ಮೇಲುನೋಟಕ್ಕೆ ಮಜಾ ಕೊಡುವಂತಿದೆ. ಅದಕ್ಕೆ ಪೂರಕವಾದ ವೇಗ, ಸಂಕಲನ ಕೌಶಲ (ವಿ.ಟಿ. ವಿಜಯನ್, ಟಿ.ಎಸ್. ಜಯ್), ಪರಾಕು ಹೇಳುವಂಥ ಹಿನ್ನೆಲೆ ವಾದ್ಯ ಸಂಗೀತ (ಹ್ಯಾರಿಸ್ ಜೈರಾಜ್) ಹಾಗೂ ಹೆಚ್ಚು ಶ್ರಮ ಕಾಣಿಸಿರುವ ಸಿನಿಮಾಟೋಗ್ರಫಿ (ಪ್ರಿಯನ್) ಉಂಟು.

ನಿರ್ದೇಶಕ ಹರಿ ಮೆಲೋಡ್ರಾಮಾ, ಸಾಹಸ ದೃಶ್ಯಗಳು, ಅನಿರೀಕ್ಷಿತ ತಿರುವುಗಳನ್ನು ಸಿನಿಮಾಗೆ ದಕ್ಕಿಸಿಕೊಡುವ ಚಿತ್ರಕಥೆಯನ್ನು ಹೆಣೆದಿದ್ದಾರೆ. ಈ ಕಥೆಗೆ ವೇಗೋತ್ಕರ್ಷವಾಗಿ ಒದಗಿಬಂದಿರುವವರು ಸಾಹಸ ನಿರ್ದೇಶಕ ಕನಲ್ ಕಣ್ಣನ್. ಹನಿ ಬೆವರೂ ಇಳಿಸದಂತೆ ನಾಯಕ ಸೂರ್ಯ ಹೊಡೆದಾಡುವ ದೃಶ್ಯ ಸಂಯೋಜನೆಯನ್ನು ತಮಾಷೆಯಾಗಿಯೂ ಸ್ವೀಕರಿಸಬಹುದು.

ಕಣ್ಣುಗಳಲ್ಲೇ ಅಭಿನಯಿಸುವ ಸೂರ್ಯ ಅವರನ್ನು ಮೆಚ್ಚದಿರಲು ಕಾರಣಗಳಿಲ್ಲ. ಗಂಭೀರ ವದನೆ ಅನುಷ್ಕಾ ಶೆಟ್ಟಿ ಅವರ ಪಾತ್ರಕ್ಕೆ ಪೋಷಣೆ ಸಾಲದು. ಅರಗಿನ ಬೊಂಬೆಯಂತಿರುವ ಶ್ರುತಿ ಹಾಸನ್ ಗ್ಲ್ಯಾಮರ್ ಕಾಣುವುದು ಒಂದು ಹಾಡಿನಲ್ಲಿ ಮಾತ್ರ. ಮುಂಬೈ ಮೂಲದ ಠಾಕೂರ್ ಅನೂಪ್ ಸಿಂಗ್ ಖಳನಾಗಿ ಕಂಗೊಳಿಸಿದ್ದಾರೆ. ಒಳಿತು–ಕೆಡಕುಗಳ ಕಥೆಗಳನ್ನು ಸವಕಲು ಎಂದವರಾರು ಎಂಬ ಪ್ರಶ್ನೆಯನ್ನು ಢಾಳಾಗಿ ಕಾಣುವಂತೆ ಮಾಡುವ ಈ ಚಿತ್ರ ಜನಪ್ರಿಯ ಸಿನಿಮಾಗಳ ಸೂತ್ರಪ್ರೀತಿಯ ಬಿಂಬವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT