ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ಕರ್ಪೂರದ ಆರತಿ ಇಂದು

ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
Last Updated 13 ಫೆಬ್ರುವರಿ 2017, 7:39 IST
ಅಕ್ಷರ ಗಾತ್ರ

ಹಿರಿಯೂರು: ನಗರದ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.13ರಂದು ರಾತ್ರಿ 9ಕ್ಕೆ ಕರ್ಪೂರದ ಆರತಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ದಕ್ಷಿಣ ಭಾರತದಲ್ಲೇ ವಿಶಿಷ್ಟ: ‘ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಮುಗಿದ ಎರಡು ದಿನಗಳ ನಂತರ ನಡೆಯುವ ಕರ್ಪೂರದಾರತಿ ಕಾರ್ಯಕ್ರಮ ಮಹಿಳೆಯರಿಗೆ ವಿಶೇಷವಾಗಿದೆ. ಇದು ದಕ್ಷಿಣ ಭಾರತದಲ್ಲೇ ವಿಶಿಷ್ಟವಾಗಿದೆ’ ಎಂದು ಅವರು ತಿಳಿಸಿದರು.

‘ದೇಗುಲದ ಒಳ ಆವರಣದಲ್ಲಿ ಗರ್ಭಗುಡಿಯ ಮುಂಭಾಗ 48 ಅಡಿಯ ಕಲ್ಲು ಕಂಬವಿದ್ದು, ಅದರ ಮೇಲೆ ಎಂಟು ಅಡಿ ಎತ್ತರದ ಬಸವಮಂಟಪ ಇದೆ. ಮಂಟಪದ ಒಳಗೆ ಕೆತ್ತಿದ ಚಿಕ್ಕ ನಂದಿ ವಿಗ್ರಹವಿದೆ. ಇದಕ್ಕೆ ಆರು ಅಡಿ ಉದ್ದವಿರುವ ಎಂಟು ಕಬ್ಬಿಣದ ಸೌಟುಗಳನ್ನು (ಉದ್ದನೆಯ ಹಿಡಿ ಇರುವ ದೀಪ) ಜೋಡಿಸಲಾಗಿದೆ. ಕರ್ಪೂರದ ಆರತಿಯ ದಿನ ಒಟ್ಟಾರೆ 56 ಅಡಿ ಎತ್ತರದ ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಏರಿ ಬತ್ತಿ, ಎಣ್ಣೆ ಹಾಕಿ ಕರ್ಪೂರ ಬಳಸಿ ದೀಪ ಹಚ್ಚಲಾಗುತ್ತದೆ ಎಂದು ಹೇಳಿದರು.

ಆಂಧ್ರಪ್ರದೇಶದಿಂದ ತರಿಸಿದ ದೀಪಸ್ತಂಭ: ಈ ಸ್ತಂಭದ ಕಲ್ಲನ್ನು ಆಂಧ್ರಪ್ರದೇಶದಿಂದ ತರುವಾಗ ತಾಲ್ಲೂಕಿನ ಅಂಬಲಗೆರೆ ಗ್ರಾಮದ ಬಳಿ ಬಿದ್ದು ಎರಡು ಹೋಳಾಯಿತಂತೆ. ಅದರಲ್ಲಿ ಉದ್ದವಿದ್ದ ಹೋಳನ್ನು ಹಿರಿಯೂರಿಗೆ ತಂದು ಮತ್ತೊಂದು ಭಾಗವನ್ನು ಅದೇ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದೆ ಸ್ಥಾಪಿಸಲಾಗಿದೆ ಎಂಬ ನಂಬಿಕೆ ಇದೆ ಎಂದು ನಾಗೇಂದ್ರನಾಯ್ಕ ತಿಳಿಸಿದರು.

ಹರಾಜು: ಕರ್ಪೂರದ ಆರತಿಯ ಮೊದಲ ಸೇವೆಯನ್ನು ಯಾರು ಮಾಡಬೇಕು ಎನ್ನುವುದನ್ನು ಹರಾಜು ಮೂಲಕ ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಮೊದಲ ಪೂಜೆಗೆ ₹ 10 ಸಾವಿರ ರೂಪಾಯಿಗೂ ಹೆಚ್ಚಿನ ದರ ನಿಗದಿಯಾಗಿದ್ದು ಇದೆ. ಹರಾಜಿನಲ್ಲಿ ಭಾಗವಹಿಸಲು ಚಿತ್ರದುರ್ಗ, ಚಳ್ಳಕೆರೆ, ದಾವಣಗೆರೆ ಮೊದಲಾದ ನಗರಗಳಿಂದ ಭಕ್ತರು ಬರುತ್ತಾರೆ ಎಂದು ನಾಗೇಂದ್ರನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT