ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಡಳಿತದಿಂದ ಉದ್ಯಮಿಗಳಿಗೆ ಲಾಭ

ನೋಟು ರದ್ದತಿ ವಿರುದ್ಧ ಸಿಪಿಎಂ ಜಾಗೃತಿ ಪ್ರಚಾರಾಂದೋಲನದಲ್ಲಿ ಆರೋಪ
Last Updated 13 ಫೆಬ್ರುವರಿ 2017, 8:34 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿಯವರ ಭರವಸೆಗಳು ಕೇವಲ ಘೋಷಣೆಗಳಾಗಿ ಉಳಿದಿವೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಅವರು ಕೈಗೊಂಡ ಕ್ರಮಗಳು ಉದ್ಯಮಿಗಳಿಗೆ ಲಾಭ ತಂದುಕೊಟ್ಟಿವೆಯೇ ಹೊರತು ಜನಸಾಮಾನ್ಯರಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜಿ.ಕೆ. ನಾಯರ್‌ ಆರೋಪಿಸಿದರು.

₹500 ಮತ್ತು ₹1000 ಮುಖಬೆಲೆಯ ನೋಟು ರದ್ದತಿ ವಿರುದ್ಧ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಭಾನುವಾರ ಸಿಪಿಎಂ ವತಿಯಿಂದ ನಡೆದ ಜಾಗೃತಿ ಪ್ರಚಾರಾಂದೋಲನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ವಿದೇಶದಿಂದ ಕಪ್ಪು ಹಣ ತರುವ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ, ಬಡವರಿಗೆ ನೆರವಾಗುವ ಯೋಜನೆ ಜಾರಿಗೊಳಿಸುವ ಬಗ್ಗೆ ಅವರು ನೀಡಿದ ಆಶ್ವಾಸನೆಗಳು ಯಥಾಸ್ಥಿತಿ ಉಳಿದಿವೆ. ಯಾವುದೇ ಪ್ರಗತಿ ಕಂಡು ಬಂದಿಲ್ಲ’ ಎಂದು ದೂರಿದರು.

‘ಕಪ್ಪು ಹಣ ಬಯಲುಗೊಳಿಸುವ ಮತ್ತು ಭ್ರಷ್ಟಾಚಾರ ತೊಡೆದು ಹಾಕುವ ನೆಪದಲ್ಲಿ ಮೋದಿ ಕೈಗೊಂಡ ನೋಟು ರದ್ದತಿ ಕ್ರಮವು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತೇ ಹೊರತು ಕಪ್ಪು ಹಣ ಬೆಳಕಿಗೆ ಬರಲಿಲ್ಲ. ನೋಟು ರದ್ದತಿ ಹೊಡೆತಕ್ಕೆ ಜನರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಆರ್ಥಿಕ ಸಮತೋಲನ ಉಂಟಾಗಿದೆ’ ಎಂದು ಅವರು ತಿಳಿಸಿದರು.

‘ಸಾಲ ಮರು ಪಾವತಿ ಮಾಡದ ಬೃಹತ್‌ ಉದ್ಯಮಿಗಳಿಂದ ಬ್ಯಾಂಕುಗಳು ದಿವಾಳಿ ಅಂಚಿಗೆ ತಲುಪಿದ್ದವು. ಅವುಗಳನ್ನು ಸಹಜಸ್ಥಿತಿಗೆ ತರಲು ಜನಸಾಮಾನ್ಯರು ಮನೆಯಲ್ಲಿ ಕೂಡಿಟ್ಟಿದ್ದ ಹಣವನ್ನು ಬ್ಯಾಂಕ್‌ಗೆ ಜಮೆಯಾಗುವಂತೆ ಮಾಡಲಾಯಿತು. ಜಮೆ ಮಾಡಿದ ಹಣ ಹಿಂಪಡೆದುಕೊಳ್ಳಲು ಜನರು ಹರಸಾಹಸಪಟ್ಟರು’ ಎಂದು ಅವರು ಆರೋಪಿಸಿದರು.

ಬ್ಯಾಂಕ್‌ ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸುವ ವ್ಯವಸ್ಥಿತ ಪ್ರಯತ್ನ ನಡೆದಿದೆ. ಜನರಲ್ಲಿ ಭ್ರಮೆ ಮೂಡಿಸಲಾಗುತ್ತಿದ್ದು, ವಾಸ್ತವಾಂಶ ಮರೆಮಾಚಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ, ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, ‘ವಿದೇಶದಿಂದ ಕಪ್ಪು ಹಣ ತಂದು ಬ್ಯಾಂಕ್‌ನ ಖಾತೆದಾರರಿಗೆ ತಲಾ ₹15 ಲಕ್ಷ ಹಾಕುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರು ಈವರೆಗೆ ಖಾತೆಗೆ 15 ಪೈಸೆಯು ಜಮೆ ಮಾಡಿಸಿಲ್ಲ. ಜನಧನ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಹಣ ಸಿಗುವುದು ಎಂಬ ಆಶಾಭಾವನೆಯಲ್ಲಿದ್ದ ಜನರಲ್ಲೂ ನಿರಾಸೆ ಮೂಡಿದೆ’ ಎಂದರು.

‘ಉದ್ಯಮಿ ಅದಾನಿ ತೊಗರಿ ಬೆಳೆಯನ್ನು ಆಫ್ರಿಕಾದ ಮೊಜಾಂಬಿಕ್‌ನಿಂದ ಆಮದು ಮಾಡಿಕೊಂಡು ಭಾರತದಲ್ಲಿ ದುಬಾರಿ ದರಕ್ಕೆ ಮಾರುತ್ತಿರುವ ಕಾರಣದಿಂದಲೇ ಇಲ್ಲಿನ ತೊಗರಿ ಬೆಳೆಗೆ ಬೆಲೆ ಕುಸಿದಿದೆ’ ಎಂದು ಅವರು ಆರೋಪಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಖರ್ಚು ಜಾಸ್ತಿಯಾಗುತ್ತಿದೆ ಹೊರತು ಆದಾಯದಲ್ಲಿ ಮಾತ್ರ ಯಾವುದೇ ವೃದ್ಧಿ ಕಂಡು ಬರುತ್ತಿಲ್ಲ. ಉದ್ಯೋಗಾವಕಾಶ ಸೃಷ್ಟಿಯಾಗುತ್ತಿಲ್ಲ, ಜನಸಾಮಾನ್ಯರ ಹಿತರಕ್ಷಣೆ ಕಡೆಗಣಿಸಲಾಗಿದೆ’ ಎಂದು ಅವರು ಟೀಕಿಸಿದರು.  ಮುಖಂಡರಾದ ಬಾಬುರಾವ ದುತ್ತರಗಾಂವ, ಶರಣಬಸಪ್ಪ ಮಮಶೆಟ್ಟಿ, ಗಂಗಮ್ಮ ಬಿರಾದಾರ, ಶಾಂತಪ್ಪ ಪಾಟೀಲ ಸಣ್ಣೂರು ಇದ್ದರು.

* ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸದೇ ಅಥವಾ ಪ್ರಶ್ನೆಗಳನ್ನು ಕೇಳದೇ ಕಾನೂನು ರೂಪಿಸಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ದೇಶಕ್ಕೆ ಇದರಿಂದ ಹಿತವಿಲ್ಲ
ವಿ.ಜಿ.ಕೆ. ನಾಯರ್, ಸದಸ್ಯ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT