ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಸಿನಲ್ಲಿ ತಾಲ್ಲೂಕು ಸುತ್ತಿದ ಅಧಿಕಾರಿಗಳು

Last Updated 13 ಫೆಬ್ರುವರಿ 2017, 8:52 IST
ಅಕ್ಷರ ಗಾತ್ರ

ಕುಷ್ಟಗಿ: ಹಿಂಗಾರು ಬೆಳೆ ಹಾನಿ ಮತ್ತು ಜಿಲ್ಲೆಯ ಬರ ಪರಿಸ್ಥಿತಿ ವೀಕ್ಷಣೆಗೆ ಭಾನುವಾರ ಯಲ್ಲಿಗೆಗೆ ಬಂದಿದ್ದ ಕೇಂದ್ರ ಬರ ಅಧ್ಯಯನ ತಂಡ ವಿವಿಧ ಕಡೆ ಭೇಟಿ ನೀಡಿತು.

ಕೇಂದ್ರ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯದ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ, ಕೇಂದ್ರ ಪಶುಸಂಗೋಪನೆ ಇಲಾಖೆ ಮೇವು ಬೇಸಾಯ ವಿಭಾಗದ ಅಧಿಕಾರಿ ವಿಜಯ ಥಾಕರೆ ಮತ್ತು ಬೆಂಗಳೂರಿನ ಭಾರತೀಯ ಆಹಾರ ನಿಗಮದ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಎಲ್. ಚತ್ರು ನಾಯಕ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ  ಮೊದಲು ಚಳಗೇರಿ ಕಲಾಲಬಂಡಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಹೂಳು ತೆಗೆಯುವ ಕೆಲಸವನ್ನು ಗಮನಿಸಿದರು. ಕಲಕೇರಿ ಗೋಶಾಲೆಗೆ ಭೇಟಿ ನೀಡಿದರು.

ಜಾನುವಾರುಗಳ ಸಂಖ್ಯೆ, ಮೇವು ಪೂರೈಕೆ, ಕುಡಿಯುವ ನೀರು, ನೆರಳು ಮತ್ತಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಕೇಂದ್ರ ತಂಡಕ್ಕೆ ಮಾಹಿತಿ ವಿವರಿಸಿದರು. ಗೋಶಾಲೆಯಲ್ಲಿದ್ದ ರೈತರಿಂದ ಜಾನುವಾರುಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು. ಗೋಶಾಲೆಯಲ್ಲಿ ಎಲ್ಲ ರೀತಿಯ ಅನುಕೂಲ ಒದಗಿಸಲಾಗಿದೆ, ಇನ್ನಷ್ಟು ನೆರಳಿನ ವ್ಯವಸ್ಥೆ ಆಗಬೇಕು ಎಂದು ಹೆಸರೂರು ಗ್ರಾಮದ ರೈತ ಈರಪ್ಪ ಕಾಟಾಪುರ ಹೇಳಿದರು. 

ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮದಾಸ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ತಹಶೀಲ್ದಾರ್‌ ಎಂ.ಗಂಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಮೋಹನ್ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. ಎಪಿಎಂಸಿ ಅಧ್ಯಕ್ಷ ಬಾಲಪ್ಪ ಚಾಕ್ರಿ ಮತ್ತು ಪ್ರಾಂತ ರೈತ ಸಂಘದ ಪ್ರತಿನಿಧಿಗಳು ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿದರು.

ಕಾಟಾಚಾರದ ಅಧ್ಯಯನ: ಭೀಕರ ಬರ ಪರಿಸ್ಥಿತಿ ಇದ್ದರೂ ಕೇಂದ್ರ ತಂಡದ ಅಧಿಕಾರಿಗಳು ಕಾಟಾಚಾರದ ಅಧ್ಯಯನ ನಡೆಸಿದ್ದಾರೆ ಎಂದು ರೈತ ಮುಖಂಡ ಆರ್‌.ಕೆ.ದೇಸಾಯಿ, ಅಡವಿಭಾವಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ದೋಟಿಹಾಳ ಅಸಮಾಧಾನ ವ್ಯಕ್ತಪಡಿಸಿದರು.

ರೈತರ ದೂರು:  ಜಿಲ್ಲೆಯ ಅಧಿಕಾರಿಗಳಿಗೆ ಮುಜುಗರ

ಕುಷ್ಟಗಿ: ಕಲಕೇರಿ ಗೋಶಾಲೆಯಲ್ಲಿ ಕೇಂದ್ರ ತಂಡವನ್ನು ಭೇಟಿ ಮಾಡಿದ ಪ್ರಾಂತ ರೈತ ಸಂಘದ ಮುಖಂಡ ಆರ್‌.ಕೆ.ದೇಸಾಯಿ ಮತ್ತು ರೈತರು, ತಾಲ್ಲೂಕಿನ ಬರ ಪರಿಸ್ಥಿತಿ, ಮೇವು, ನೀರು, ಉದ್ಯೋಗ, ಗುಳೆ ಸಮಸ್ಯೆ ಗಳನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿದರು.

ಆಗ ಕೇಂದ್ರದ ಅಧಿಕಾರಿಗಳು ಸಮಾಧಾನ  ರೀತಿಯಲ್ಲಿ ದೂರು ಆಲಿಸುತ್ತಿದ್ದರೂ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ಇತರೆ ಅಧಿಕಾರಿಗಳು ರೈತರೊಂದಿಗೆ  ವಾಗ್ವಾದಕ್ಕಿಳಿದಿದ್ದರು. ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಶಿವಪ್ಪ ಸುಬೇದಾರ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ರೈತರನ್ನು ತಡೆಯಲು ಪ್ರಯತ್ನಿಸಿದ್ದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ‘ರೈತರು ತಮ್ಮ ಅನಸಿಕೆ, ಬೇಡಿಕೆಗಳನ್ನು ವಿವರಿಸುತ್ತಿದ್ದಾರೆ ಹೇಳಲಿಕ್ಕೆ ಅವಕಾಶ ಕೊಡಬೇಕು’ ಎಂದು ಅಧಿಕಾರಿಗಳನ್ನು ಸುಮ್ಮನಿರಿಸಿದರು.

‘ಕೇಂದ್ರ ತಂಡ ಬರುವ ಕಾರಣಕ್ಕೆ ನರೇಗಾ ಕೆಲಸ ಆರಂಭಿಸಲಾಗಿದೆ, ಜನರು ಗುಳೆ ಹೋಗುವುದು ತಪ್ಪಿಲ್ಲ, ಸಮರ್ಪಕ ರೀತಿಯಲ್ಲಿ ಕೂಲಿ ಪಾವತಿಯಾಗುತ್ತಿಲ್ಲ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ರೈತ ಮುಖಂಡ ಆರ್‌.ಕೆ.ದೇಸಾಯಿ ದೂರಿದ್ದು ಅಧಿಕಾರಿಗಳಿಗೆ ಮುಜುಗರ ತಂದಿತು.

68 ಸಾವಿರ ಜಾನುವಾರುಗಳಿದ್ದರೂ ಕೇವಲ ನೂರು ದನಕರುಗಳಿರುವ ಒಂದು ಗೋಶಾಲೆ ತೆರೆಯಲಾಗಿದೆ. ಮೇವಿಲ್ಲದೆ ದನಗಳು ಕಸಾಯಿಖಾನೆಗೆ ಹೋಗುತ್ತಿವೆ, ನರೇಗಾ ಯೋಜನೆಯಲ್ಲಿ ಹಣ ಲೂಟಿ ಹೊಡೆಯಲಾಗುತ್ತಿದೆ. ಯಾವುದೇ ಅಧಿಕಾರಿಗಳು ರೈತರ ನೆರವಿಗೆ ಬಂದಿಲ್ಲ ಆರೋಪಿಸಿದರು. ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಡಾ. ಕೆ. ಪೊನ್ನುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT