ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಚ್‌.ರಸ್ತೆಯಲ್ಲಿ ಪಾದಚಾರಿಗಿಲ್ಲ ಆದ್ಯತೆ

ರಸ್ತೆಗೆ ವಿಭಜಕ್ಕೆ ಕಬ್ಬಿಣದ ಗ್ರಿಲ್‌ಗೋಡೆ ಅಳವಡಿಕೆ, ಪಾದಚಾರಿಗೆ ಒದಗಿ ಬಂತು ಸ್ಕೈವಾಕ್‌ ಸೌಲಭ್ಯ
Last Updated 13 ಫೆಬ್ರುವರಿ 2017, 12:59 IST
ಅಕ್ಷರ ಗಾತ್ರ

ತುಮಕೂರು: ರಸ್ತೆಯಲ್ಲಿ ಅತಿ ವೇಗವಾಗಿ ಸಾಗುವ ವಾಹನ ಸವಾರರು ದಿಢೀರನೇ ಬ್ರೇಕ್‌ ಮೇಲೆ ಕಾಲಿಟ್ಟು ಅಪಘಾತಕ್ಕೆ ಒಳಗಾದ ಸನ್ನಿವೇಶ ಎನ್‌ಎಚ್‌–206 ರ ಬಿ.ಎಚ್‌.ರಸ್ತೆಯಲ್ಲಿ ಸಾಮಾನ್ಯವಾಗಿತ್ತು. ಜನರ ಜತೆಗೆ ಬಿಡಾಡಿ ದನಗಳು, ಹಂದಿಗಳು ಏಕಾಏಕಿ ಅಡ್ಡ ಬಂದು ವಾಹನ ಸವಾರರನ್ನು ಅಪಘಾತದ ಆತಂಕಕ್ಕೆ ದೂಡುತ್ತಿದ್ದವು. ಆದರೆ, ಈಗ ರಸ್ತೆಗೆ ಕಬ್ಬಿಣದ ಗ್ರಿಲ್‌ಗೋಡೆ  ಹಾಕಿರುವುದರಿಂದ ಕೊಂಚಮಟ್ಟಿಗೆ ಆತಂಕ ದೂರಾಗಿದೆ.

ರಸ್ತೆ ಅಭಿವೃದ್ಧಿಯ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರಕ್ಷತೆ ಮರೆತಿದ್ದು, ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಬಟವಾಡಿ– ತುಮಕೂರು ವಿಶ್ವವಿದ್ಯಾನಿಲಯದವರೆಗೆ ಸರ್ವೀಸ್‌ ರಸ್ತೆಯನ್ನು ಖಾಲಿ ಬಿಟ್ಟ ಸ್ಥಳದಂತೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.

ರಸ್ತೆ ಒತ್ತುವರಿ ತೆರವು ಮಾಡಿ ಸರ್ವೀಸ್‌ ರಸ್ತೆ ನಿರ್ಮಿಸುವಂತೆ ನ್ಯಾಯಾಲಯ ಈ ಹಿಂದೆಯೇ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರೂ ಅದರ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಪಾದಚಾರಿ ಮಾರ್ಗಕ್ಕೂ ಜಾಗ ಇಲ್ಲದಂತೆ
ಸರ್ವೀಸ್‌ ರಸ್ತೆ ನಿರ್ಮಿಸಲಾಗುತ್ತಿದೆ.

ಇನ್ನು ಕೆಲವು ಕಡೆಗಳಲ್ಲಿ ಸರ್ವೀಸ್‌ ರಸ್ತೆಗೆ ಎಷ್ಟು ಜಾಗ ಇದೆಯೋ, ಅಷ್ಟರಲ್ಲೇ ಡಾಂಬರು ಹಾಕಿ ಕೈ ತೊಳೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬಿ.ಎಚ್‌.ರಸ್ತೆಯಲ್ಲಿ ಸುರಕ್ಷತಾ ವಾಹನ ಸಂಚಾರಕ್ಕೆ ಅನುವಾಗುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌ ಅವರು ಸೂಚಿಸಿರುವ ಕಡೆಗಳಲ್ಲಿ ಎರಡು ಕಡೆ ಫೈಬರ್‌ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಇದರಿಂದ ವಾಹನಗಳು ಆಯಕಟ್ಟಿನ ಸ್ಥಳಗಳಲ್ಲಿ ನಿಧಾನವಾಗಿ ಚಲಿಸುತ್ತಿವೆ. ಆದರೆ, ರಸ್ತೆ ಉಬ್ಬಿಗೆ ಪ್ರತಿಫಲಿಸುವ ಬಣ್ಣ ಅಥವಾ ರೇಡಿಯಂ ಹಾಕದಿರುವ ಕಾರಣ ರಾತ್ರಿ ವೇಳೆ ವಾಹನ ಸಂಚಾರ ಪ್ರಾಣಕ್ಕೆ ಸಂಚಕಾರ ತರುವಂತಿದೆ. 

‘ಅಪಘಾತದ ರಹದಾರಿಯಾಗಿದ್ದ ಬಿ.ಎಚ್‌.ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯಕಲ್ಪ ನೀಡುತ್ತಿರುವುದು ಸಂತಸದ ವಿಚಾರ. ಆದರೆ, ಶಿವಕುಮಾರ ಸ್ವಾಮೀಜಿ ವೃತ್ತ, ಬಡವಾಡಿ ವೃತ್ತ ಹಾಗೂ ನಗರ ಪ್ರವೇಶ ದ್ವಾರ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಸರಿಪಡಿಸಿದರೆ ನಾಗರಿಕರು ಆತಂಕವಿಲ್ಲದೇ ರಸ್ತೆಯಲ್ಲಿ ಸಂಚರಿಸಬಹುದು’ ಎಂದು ಎಸ್‌ಐಟಿ ಬಡಾವಣೆ ನಿವಾಸಿ ಅನಂತು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಕೈವಾಕ್‌ ಶೀಘ್ರ ಸಂಚಾರ ಮುಕ್ತ: ನಗರದ ತುಮಕೂರು ವಿ.ವಿ ಹಾಗೂ ನಗರ ಕೇಂದ್ರ ಗ್ರಂಥಾಲಯದ ಮುಂದೆ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಶೀಘ್ರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮೇಲ್ಸೇತುವೆಗೆ ಲಿಫ್ಟ್‌ ಅಳವಡಿಸುವ ಕಾರ್ಯ ಬಾಕಿ ಇದೆ.

ಮೇಲ್ಸೇತುವೆ ಕೆಳಭಾಗದಲ್ಲಿ ಸಿಮೆಂಟ್‌ ಫ್ಲಾಟ್‌ಫಾರಂ ಹಾಕಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ, ಅಲ್ಲಲ್ಲಿ ರಸ್ತೆಯನ್ನು ಒತ್ತುವರಿ ತೆರವು ಮಾಡಬೇಕಿರುವ ಕಾರಣ ಅಭಿವೃದ್ಧಿ ಕಾರ್ಯ ನಿಧಾನವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ ತಂಗುದಾಣ ವ್ಯವಸ್ಥೆ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಸ್ತೆಯ ಉದ್ದಕ್ಕೂ ಅಗತ್ಯವಿರುವ ಕಡೆಗಳಲ್ಲಿ ಐದು ಹೊಸ ಬಸ್‌ ತಂಗುದಾಣ ನಿರ್ಮಿಸಲಾಗಿದೆ. 

ಪಾದಚಾರಿ ಮಾರ್ಗಕ್ಕೆ ಜಾಗವೇ ಇಲ್ಲ:  ಬಿ.ಎಚ್‌.ರಸ್ತೆಯುದ್ದಕ್ಕೂ ಎಲ್ಲಿಯೂ ಪಾದಚಾರಿ ಮಾರ್ಗ ನಿರ್ಮಿಸಿಲ್ಲ. ರಸ್ತೆ ಬದಿ ಉಳಿದ ಜಾಗದಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸುತ್ತಿದ್ದು, ಪಾದಚಾರಿ ಮಾರ್ಗ ನಿರ್ಮಿಸಬೇಕು. ಎಲ್ಲಿಯೂ ಪಾದಚಾರಿ ಮಾರ್ಗ ನಿರ್ಮಿಸದಿರುವುದು ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಪಾಲಿಕೆಗೆ ವ್ಯಾಪ್ತಿಗೆ ಬಿ.ಎಚ್‌.ರಸ್ತೆ

ಬಿ.ಎಚ್‌.ರಸ್ತೆ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಹೊರವರ್ತುಲ ರಸ್ತೆಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ತುಮಕೂರು ಸ್ಮಾರ್ಟ್‌ ಸಿಟಿಯಾಗಿ ಆಯ್ಕೆಯಾದ ನಂತರ ರಸ್ತೆ, ಬಡಾವಣೆಗಳ ಅಭಿವೃದ್ಧಿಗೆ ಪಾಲಿಕೆ ಮುಂದಾಗಿದ್ದು, ಬಿ.ಎಚ್‌.ರಸ್ತೆಯನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.

ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿದ್ದು, ಕೇಂದ್ರ ಹೆದ್ದಾರಿ, ಭೂಸಾರಿಗೆ ಸಚಿವಾಲಯವು ಸಮ್ಮತಿ ನೀಡಿದೆ. ಹೆದ್ದಾರಿ ಪ್ರಾಧಿಕಾರವು ರಸ್ತೆ ಅಭಿವೃದ್ಧಿಪಡಿಸಿ ಪಾಲಿಕೆಗೆ ಬಿಟ್ಟುಕೊಡಲಿದೆ. ಅಂತೆಯೇ ಹೊರವರ್ತುಲ ರಸ್ತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪಾಲಿಕೆ ಅಭಿವೃದ್ಧಿಪಡಿಸಿ, ಎನ್‌ಎಚ್‌ಎಐಗೆ ಬಿಟ್ಟುಕೊಡಲಿವೆ.

‘ಕ್ಯಾತ್ಸಂದ್ರದಿಂದ ಮರಳೂರು ವೃತ್ತದವರೆಗಿನ 8.5 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಿ ಹಸ್ತಾಂತರಿಸಿದ ಬಳಿಕ ನಾವು ಬಿ.ಎಚ್‌.ರಸ್ತೆಯನ್ನು ಪಾಲಿಕೆ ವ್ಯಾಪ್ತಿಗೆ ಬಿಟ್ಟುಕೊಡಲಿದ್ದೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT