ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶ್ಚಿಮಾತ್ಯ ಮಾದರಿಯೇ ಅಸ್ಥಿರತೆಗೆ ಕಾರಣ

ಸ್ವದೇಶಿ ಜಾಗರಣ ಮಂಚ್‌ ಆಯೋಜಿಸಿದ್ದ ‘ಸ್ವದೇಶಿ ಮೇಳ’ದಲ್ಲಿ ಪ್ರೊ. ಬಿ.ಎಂ.ಕುಮಾರಸ್ವಾಮಿ
Last Updated 13 ಫೆಬ್ರುವರಿ 2017, 13:03 IST
ಅಕ್ಷರ ಗಾತ್ರ

ತುಮಕೂರು: ‘ಭಾರತ ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿ ಅನುಸರಿಸಿದ್ದೇ ಅಸ್ಥಿರ ಅಭಿವೃದ್ಧಿಗೆ ಕಾರಣವಾಗಿದೆ’ ಎಂದು ಸ್ವದೇಶಿ ಜಾಗರಣ ಮಂಚ್‌ ರಾಷ್ಟ್ರೀಯ ಸಹ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಭಾನುವಾರ  ಸ್ವದೇಶಿ ಜಾಗರಣ ಮಂಚ್‌ ಆಯೋಜಿಸಿದ್ದ ‘ಸ್ವದೇಶಿ ಮೇಳ’ದಲ್ಲಿ ‘ಸ್ವದೇಶಿ ಆಂದೋಲನದಲ್ಲಿ ನಮ್ಮ ಪಾತ್ರ’ ಎಂಬ ವಿಷಯ ಕುರಿತು ಮಾತನಾಡಿದರು.

ನಮ್ಮ ದೇಶದ ಜಿಡಿಪಿ ಬೆಳೆಯುತ್ತಿದೆ. ಆದರೆ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಜಲ,ನೆಲ, ನೈಸರ್ಗಿಕ ಸಂಪನ್ಮೂಲ, ನೆಮ್ಮದಿ ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದೆಲ್ಲವೂ ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿಯ ಕೊಡುಗೆ ಎಂದು ಹೇಳಿದರು.

‘1700 ವರ್ಷಗಳಿಂದಲೂ ಭಾರತ ಪರಿಸರ ಸಂರಕ್ಷಣೆ ಮಾಡಿಕೊಂಡು ಸುಸ್ಥಿರ ಅಭಿವೃದ್ಧಿಯಲ್ಲಿಯೇ ಇತ್ತು. ಜಗತ್ತಿನಲ್ಲಿಯೇ ಹೆಚ್ಚು ನೈಸರ್ಗಿಕ, ಆರ್ಥಿಕ ಸಮೃದ್ಧ ರಾಷ್ಟ್ರವಾಗಿತ್ತು. ಬ್ರಿಟಿಷರು ಬಂದ ಬಳಿಕ ಪಾಶ್ಚಿಮಾತ್ಯ ಮಾದರಿ ಜಾರಿಗೊಂಡು ಎಲ್ಲವೂ ಹಾಳಾಯಿತು. ಕೇವಲ 150 ವರ್ಷದ ಪಾಶ್ಚಿಮಾತ್ಯ ಮಾದರಿ 1700 ವರ್ಷಗಳಷ್ಟು ಹಳೆಯದಾದ ಸುಸ್ಥಿರ ಅಭಿವೃದ್ಧಿಯನ್ನೇ ಹಾಳು ಮಾಡಿತು’ ಎಂದು ವಿಶ್ಲೇಷಿಸಿದರು.

‘1700ವರ್ಷಗಳಷ್ಟು ವರ್ಷ ಭಾರತ ಸುಸ್ಥಿರ ಅಭಿವೃದ್ಧಿ ಕಾಪಾಡಿಕೊಂಡು ಬರಲು ಧರ್ಮ ಆಧಾರಿತ ಅಭಿವೃದ್ಧಿ ಅಂಶಗಳು ಮುಖ್ಯ ಕಾರಣವಾಗಿದೆ. ಆದರೆ ವಿದೇಶಗಳು ಚಾರ್ವಾಕನ ಸಿದ್ಧಾಂತ ಅನುಸರಿಸುತ್ತಿವೆ. ಈ ಬದುಕು ಇಲ್ಲಿಗೆ ಕೊನೆ. ಮುಂದಿನ ಪೀಳಿಗೆಯ ಬಗ್ಗೆ ಚಿಂತೆ ಬೇಡ ಎಂಬುದನ್ನು ಅನುಸರಿಸುತ್ತಿವೆ’ ಎಂದು ಹೇಳಿದರು. ‘ನಮ್ಮದು ಕೃಷಿ ಮತ್ತು ಋಷಿ ಸಂಸ್ಕೃತಿಯ ದೇಶ. ಆದರೆ,  ಈಗ ಕೃಷಿ ಬಿಕ್ಕಟ್ಟಿಗೆ ಸಿಲುಕಿದೆ’ ಎಂದರು.

ಚಿಂತಕರ ಚಾವಡಿಯಲ್ಲಿ ಚಿಮ್ಮಿದ ನಗೆ ಬುಗ್ಗೆ

ತುಮಕೂರು:  ಗಂಡ ಹೆಂಡತಿಗೆ  ಹೇಳಿದ, ‘ನೀವು ಹೆಣ್ಣು ಮಕ್ಕಳು ಯಾವಾಗಲೂ ವಟ ವಟ ಎನ್ನುತ್ತೀರಿ. ನಾವು ಗಂಡಸರು ಕಡಿಮೆ ಮಾತಾಡುತ್ತೇವೆ. ದಿನಕ್ಕೆ ಗರಿಷ್ಠ 13 ಸಾವಿರ ಪದ ಆಡುತ್ತೇವೆ. ನೀವು ಮಹಿಳೆಯರು 25ರಿಂದ 30 ಸಾವಿರ ಪದ ಮಾತನಾಡುತ್ತೀರಿ ಅಂದ. ಹೆಂಡ್ತಿ ಹೇಳಿದ್ಲು, ನಾವ್ಯಾಕ್ ಮಾತಾಡ್ತೀವಿ ಗೊತ್ತಾ. ಒಮ್ಮೆ ಹೇಳಿದ್ರೆ ನಿಮ್ಗೆ ಅರ್ಥವಾಗಲ್ವಲ್ಲ!

ದೇವಸ್ಥಾನಕ್ಕೆ ಹೋದಾಗ ನಿಮ್ಮ ಚಪ್ಪಲಿ ಕಳೆಯಬಾರದು ಎಂದರೆ  ಚಪ್ಪಲಿ ಹಾಕಿಕೊಂಡು ಹೋಗಬೇಡಿ. ದೇವಸ್ಥಾನದಿಂದ ಬರುವಾಗ ಚಪ್ಪಲಿ ಹಾಕಿಕೊಂಡು ಬನ್ನಿ! ದೇವಸ್ಥಾನಕ್ಕೆ ಹೋದಾಗ ಗಂಡ ಹೆಂಡ್ತಿಗೆ ಕೇಳಿದ ದೇವರ ಹತ್ತಿರ ಏನು ಬೇಡಿಕೊಂಡೆ. ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡ ಆಗ್ಬೇಕು ಅಂಥಾ ಕೇಳ್ಕೊಂಡೆ ರೀ ಅಂದ್ಳು. ನೀವೇಳು ಕೇಳಿಕೊಂಡ್ರಿ ಅಂದಾಗ, ಇದೇ ನನ್ನ 7ನೇ ಜನ್ಮವಾಗಲಿ ಅಂತಾ ಬೇಡಿಕೊಂಡೆ!

ಒಂದಲ್ಲ ಎರಡಲ್ಲ ಹೀಗೆ ಹತ್ತಾರು ಹಾಸ್ಯ ಚಟಾಕಿಗಳ ಜೊತೆಗೆ ಭಾರತೀಯ ಕುಟುಂಬ ವ್ಯವಸ್ಥೆ, ನಮ್ಮ ಸಂಸ್ಕೃತಿ,  ಮಕ್ಕಳ ಪಾಲನೆ ಪೋಷಣೆ, ನಾಗರಿಕರ ಜವಾಬ್ದಾರಿ ಅನೇಕ ವಿಷಯಗಳ ಹೂರಣವನ್ನು ಕವಿ ಎಚ್.ಡುಂಡಿರಾಜ್, ನಗೆ ಬರಹಗಾರ ಎಂ.ಎಸ್.ನರಸಿಂಹಮೂರ್ತಿ,  ವಾಗ್ಮಿ ವೈ.ವಿ.ಗುಂಡೂರಾವ್‌, ವಿಭು ಆಕಡೆಮಿ ಸಂಸ್ಥಾಪಕಿ ಡಾ.ವಿ.ಬಿ.ಭಾರತಿ ಉಣ ಬಡಿಸಿದರು.

ಸ್ವದೇಶಿ ಜಾಗರಣ ಮಂಚ್  ಸ್ವದೇಶಿ ಮೇಳದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಚಿಂತಕರ ಚಾವಡಿ ‘ ಭಾರತೀಯ ಕುಟುಂಬ’ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಫೆ. 14ರಂದು ದಿನ ಆಚರಿಸಲೇಬೇಕು. ಯಾಕೆಂದರೆ ಅಂದು ಭಗತ್‌ಸಿಂಗ್ ಅವರಂತಹ ದೇಶಪ್ರೇಮಿ ಗಲ್ಲಿಗೇರಿಸಿದ ದಿನ. ಮಕ್ಕಳಿಗೆ ಈ ವಿಚಾರ ತಪ್ಪದೇ ತಿಳಿಸಿಕೊಡಬೇಕು ಎಂದರು.

ಆರು ವರ್ಷದೊಳಗೆ ಮಕ್ಕಳಿಗೆ ಏನು ತಿಳಿಸಿಕೊಡುತ್ತೇವೊ ಕಲಿಸಿಕೊಡುತ್ತೆವೆಯೊ ಅದೇ ಅವರ ಭವಿಷ್ಯದ ಸತ್ವಯುತ ವ್ಯಕ್ತಿತ್ವಕ್ಕೆ ತಳಹದಿಯಾಗುತ್ತದೆ. ತಾಯಂದಿರ ಪಾತ್ರ ಬಹುಮುಖ್ಯವಾಗಿದೆ.  ಮಕ್ಕಳಿಗೆ ನೀತಿ ಕತೆಗಳನ್ನು ಹೇಳಬೇಕು. ತಂದೆ ತಾಯಿ ಮಕ್ಕಳನ್ನು ಸಾಕಬಾರದು. ಮಕ್ಕಳನ್ನು ಬೆಳೆಸಬೇಕು. ತಾಯಿ ಕರುಳಾದರೆ  ತಂದೆ ಮೆದುಳು ಎಂದರು.

* ನಗರ ಕೇಂದ್ರಿತ ಅಭಿವೃದ್ಧಿ ಬಿಡಬೇಕು. ವಿಕೇಂದ್ರೀಕೃತ ಅಭಿವೃದ್ಧಿ ಚಟುವಟಿಕೆನಡೆಯಬೇಕು. ಕೃಷಿ ಮೇಲೆ ಸವಾರಿ ಮಾಡುವ ಅಭಿವೃದ್ಧಿ ಬೇಡವೇ ಬೇಡ.
ಪ್ರೊ.ಬಿ.ಎಂ.ಕುಮಾರಸ್ವಾಮಿ, ರಾಷ್ಟ್ರೀಯ ಸಹ ಸಂಯೋಜಕರು, ಸ್ವದೇಶಿ ಜಾಗರಣ ಮಂಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT