ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ನಮ್ ಜಾತಿ, ಪ್ರೇಮವೇ ನಮ್ ದೇಶ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾಲ್ಕು ದಶಕದ ಸಾಂಗತ್ಯ
ನಾಲ್ಕು ದಶಕಗಳ ಹಿಂದೆ ನಾವಿಬ್ಬರೂ ಪ್ರೀತಿಸಿ ಮದುವೆಯಾದಾಗ ಈಗಿನಂತೆ ಪ್ರೇಮಿಗಳ ದಿನಾಚರಣೆ ಇರಲಿಲ್ಲ. ಆದರೆ, ನಮ್ಮಲ್ಲಿ ಪ್ರೇಮದಿಂದ ಬದುಕುವ ಛಲವಿತ್ತು. ಅದುವೇ ಇದುವರೆಗೆ ನಮ್ಮನ್ನೂ ನಮ್ಮ ಕುಟುಂಬವನ್ನೂ ಕಾಪಾಡಿದೆ.

ನಾನಾಗ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದೆ. ನನ್ನ ಪತ್ನಿ ಡಾ.ಆರ್.ಕೆ. ಸರೋಜಾ ನನ್ನ ಸಹಪಾಠಿಯಾಗಿದ್ದವರು.  ಓದಿಗಿಂತ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದ ನನ್ನನ್ನು ಸರೋಜಾ ಇಷ್ಟಪಟ್ಟು, ಪ್ರಪೋಸ್ ಮಾಡಿದರು.  ಕೆಲ ದಿನಗಳ ನಂತರ ಅವರ ಪ್ರಪೋಸ್ ಅನ್ನು ಒಪ್ಪಿದೆ. ಅವರ ಪ್ರೀತಿಯ ಕಾರಣದಿಂದಲೇ ಮೆಡಿಕಲ್ ಓದು ಮುಗಿಸಿದೆ.

ಮದುವೆಯ ಸಂದರ್ಭದಲ್ಲಿ ಅವರ ಮನೆಯಿಂದ ತುಸು ವಿರೋಧ ಬಂತು. ಆದರೆ, ಲೇಖಕ ಪೂರ್ಣಚಂದ್ರ ತೇಜಸ್ವಿ, ಡಾ.ನಂಜುಂಡಸ್ವಾಮಿ ಅವರ ಒಡನಾಟ ನನಗಿದ್ದುದರಿಂದ ಎಲ್ಲವನ್ನೂ ಸಮರ್ಥವಾಗಿ ಎದುರಿಸಿದೆ. ಜಾತಿ ವಿನಾಶಕ್ಕೆ ಅಂತರ್ಜಾತಿಯ ವಿವಾಹ ಒಳ್ಳೆಯದು ಎಂಬುದು ನಮ್ಮ ನಂಬಿಕೆ.

ಮದುವೆಯಾದ ನಂತರ ಇಬ್ಬರ ಕುಟುಂಬಗಳ ಮಧ್ಯೆ ಇದ್ದ ಮುನಿಸು ಹಿಮದಂತೆ ಕರಗಿ, ವಾತ್ಸಲ್ಯ, ಬಾಂಧವ್ಯದ ಸಂಬಂಧ ಮೂಡಿತು. ಅದು ಇವತ್ತಿನವರೆಗೂ ಮುಂದುವರಿದಿದೆ. ಸರೋಜಾ ಭಾರತದ ಮೊದಲ ನ್ಯೂಕ್ಲಿಯರ್ ಮೆಡಿಸಿನ್‌ ಮಾಡಿದ ಮಹಿಳೆ ಎಂಬ  ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮಗ ರೇಡಿಯೊಲಾಜಿಸ್ಟ್‌, ಮಗಳು ವೈದ್ಯೆಯಾಗಿದ್ದಾಳೆ. ನಾನು ಮತ್ತು ಸರೋಜಾ ಇಬ್ಬರೂ ಸಾಮಾಜಿಕ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದೇವೆ. ನಮ್ಮಿಬ್ಬರ ನಾಲ್ಕು ದಶಕಗಳ ಪ್ರೀತಿಯ ಜೀವನ ಎಂಬುದೇ ನಮ್ಮ ಹೆಮ್ಮೆ.
–ಡಾ.ಎನ್‌. ಲಕ್ಷ್ಮೀಪತಿ ಬಾಬು, ಡಾ.ಆರ್.ಕೆ.ಸರೋಜಾ

*


‘ಪ್ರೀತಿಗೆ ಚೌಕಟ್ಟಿಲ್ಲ’
ಪ್ರೀತಿ ಅನ್ನೋದಕ್ಕೆ ಒಂದು ಚೌಕಟ್ಟಿಲ್ಲ, ಶಬ್ದದ ಮೂಲಕ ಅದನ್ನು ವಿವರಿಸುವುದೂ ಕಷ್ಟ. ಪ್ರತಿನಿತ್ಯ, ಪ್ರತಿಕ್ಷಣ, ಜೀವನ ಪರ್ಯಂತ ಆಚರಿಸುವ ಬಂಧವದು. ನಾನು ಸುಚೇಂದ್ರ ಪ್ರಸಾದ್‌ ಮೊದಲು ಭೇಟಿ ಆಗಿದ್ದು ಧಾರಾವಾಹಿ ನಟನೆ ಸಂದರ್ಭದಲ್ಲಿ. ನಮ್ಮಿಬ್ಬರದು ವೈದ್ಯರ ಪಾತ್ರ. ನಾವಿಬ್ಬರು ಭೇಟಿ ಆಗಲಿ ಎನ್ನೋ ಕಾರಣಕ್ಕೆ ಆ ಧಾರಾವಾಹಿ ಮಾಡಿದ್ದರು ಎನಿಸುತ್ತದೆ. ಹೀಗೆ ಪರಿಚಯವಾದ ನಾವು ಎಂದಿಗೂ ಪ್ರೀತಿ ನಿವೇದನೆ ಮಾಡಿಕೊಂಡೇ ಇಲ್ಲ.

ನಟನೆಯ ನಿಮಿತ್ತ ನಾವು ಸಾಕಷ್ಟು ಕಡೆ ಪ್ರಯಾಣ ಬೆಳೆಸಿದ್ದೇವೆ. ಸುಚೇಂದ್ರ ಅವರು ತುಂಬಾ ಓದಿಕೊಂಡವರು. ಎಲ್ಲಾ ವಿಷಯದಲ್ಲಿಯೂ ಅವರದ್ದು ಪ್ರೌಢ ನಡವಳಿಕೆ. ಅಲ್ಲದೆ ನನ್ನ ಬಗೆಗೆ ತುಂಬಾ ಕಾಳಜಿ ತೋರುತ್ತಿದ್ದರು. ಸಂದರ್ಭವೇ ನಮ್ಮಿಬ್ಬರನ್ನು ಬೆಸೆದಿದೆ ಎಂಬುದು ನನ್ನ ನಂಬಿಕೆ. ಗಾಢಸ್ನೇಹಕ್ಕಿಂತ ಹೆಚ್ಚಾಗಿ ಮದುವೆಯ ಪ್ರಸ್ತಾಪ ನಾವೆಂದೂ ಮಾಡಿರಲಿಲ್ಲ. ಆದರೆ ಅಪ್ಪ-ಅಮ್ಮನೇ ನಮ್ಮ ಮನಸ್ಸಿನ ಭಾವನೆಗಳಿಗೆ ಶಬ್ದ ರೂಪ ನೀಡಿದರು.

ನಾನು ಏನೇ ಕೇಳಿದರೂ ಸುಚೇಂದ್ರ ಇಲ್ಲ ಎಂದಿಲ್ಲ. ಹೀಗಾಗಿ ನಾವಿಬ್ಬರು ಬಹಳಷ್ಟು ಸ್ಥಳಗಳನ್ನು ಸುತ್ತಿದ್ದೇವೆ. ಒಬ್ಬರನ್ನೊಬ್ಬರು ಪ್ರೀತಿಸುವಷ್ಟೇ ಗೌರವಿಸುತ್ತೇವೆ ಕೂಡ.

ಇಂದಿನವರಿಗೆ ಸಂಗಾತಿ ಬೇಗ ಬೋರ್‌ ಆಗ್ತಾರೆ. ಸಂಬಂಧದ ಪ್ರಾಮುಖ್ಯತೆಗಿಂತ ನಿರೀಕ್ಷೆಗಳೇ ಹೆಚ್ಚಾಗುತ್ತಿದೆ. ಇಬ್ಬರೂ ಸ್ವತಂತ್ರರಾಗಿರುವುದರಿಂದ ಹೊಂದಾಣಿಕೆಯ ಭಾವನೆ ಕಡಿಮೆ ಆಗುತ್ತಿದೆ. ಪ್ರೀತಿಯ ಜೊತೆಗೆ ಎಂದಿಗೂ ಬುದ್ಧಿ ಉಪಯೋಗಿಸಬಾರದು. ಇದೇ ಪ್ರೀತಿ ಬದುಕಿನ ಗುಟ್ಟು.
–ಪವಿತ್ರಾ ಲೋಕೇಶ್‌, ಸುಚೇಂದ್ರ ಪ್ರಸಾದ್‌
ಸಿನಿಮಾ ಕಲಾವಿದರು

*


ಪ್ರೇಮಿಗಳ ದಿನದಂದೇ ನಿವೇದನೆ
ನಮ್ಮಿಬ್ಬರ ಭೇಟಿಯಾಗಿದ್ದು, ‘ಪಾಪ ಪಾಂಡು’ ಧಾರಾವಾಹಿಯ ಮೂಲಕ. ನಮಿತಾ ಆ ಧಾರಾವಾಹಿಯ ಒಂದು ಕಂತಿನಲ್ಲಿ ‘ಮಸ್ಕಾ ಬೆಡಗಿ’ ಪಾತ್ರ ನಿರ್ವಹಿಸಲು ಬಂದಿದ್ದಳು. ಅಲ್ಲಿಂದ ನಮ್ಮಿಬ್ಬರ ನಡುವೆ ಗೆಳೆತನ ಬೆಳೆಯಿತು. ಸ್ವಲ್ಪ ಹತ್ತಿರವಾಗುತ್ತಿದ್ದಂತೆ ನಾನೇ ಪ್ರೇಮಿಗಳ ದಿನದಂದೇ ಕೈಗಡಿಯಾರವನ್ನು ಕೊಡುಗೆಯಾಗಿ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದೆ.

ಅವಳು ತಕ್ಷಣ ಒಪ್ಪಿಕೊಳ್ಳಲಿಲ್ಲ. ಕಾಲಾವಕಾಶ ಕೇಳಿ, ನಂತರ ಒಪ್ಪಿಕೊಂಡಳು. ಹೀಗೆ ನಮ್ಮ ಪ್ರೇಮ ಪಯಣ ಪ್ರಾರಂಭವಾಯಿತು. ಮನೆಯವರಿಂದಲೂ ತೀರಾ ವಿರೋಧ ವ್ಯಕ್ತವಾಗಿಲ್ಲ.

ಆಕೆ ಬಬ್ಲಿ ಹುಡುಗಿ. ಎಷ್ಟೇ ಹುಷಾರಿಲ್ಲ ಎಂದರೂ,   ಚುರುಕಾಗಿರುತ್ತಾಳೆ. ಒಂದು ಸೆಕೆಂಡ್‌ ಕೂಡ ಸುಮ್ಮನೆ ಕೂರದೆ ಮಾತನಾಡುತ್ತಲೇ ಇರುತ್ತಾಳೆ. ನಾನು ಅಷ್ಟೇ ಮೌನಿ.  ಹಾಗಾಗಿ ಮಾತೆಲ್ಲ ಅವಳಿಗೆ ನೀಡಿ, ಕೇಳಿಸಿಕೊಳ್ಳುವ ಕೆಲಸವನ್ನಷ್ಟೇ ನಾನು ಮಾಡುತ್ತೇನೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದರಿಂದ ಜೀವನ ಸುಖಕರವಾಗಿ ಸಾಗುತ್ತಿದೆ.
–ವಿಕ್ರಂ ಸೂರಿ, ನಮಿತಾ
ಕಿರುತೆರೆ ಕಲಾವಿದರು 

*


ರಂಗದ ಮೇಲೆ ಅರಳಿದ ಪ್ರೀತಿ
ನಾನು ಮತ್ತು ರಾಜ್‌ಗುರು ಹೊಸಕೋಟೆ ಓದಿದ್ದು ಬೇರೆ ಕಾಲೇಜಿನಲ್ಲಾದರೂ ರಂಗಭೂಮಿಯ ಮೇಲಿನ ಪ್ರೀತಿಯಿಂದಾಗಿ ಆಗಾಗ ಭೇಟಿಯಾಗುವ ಸಂದರ್ಭಗಳು ಬರುತ್ತಿದ್ದವು.

ಕಾಲೇಜು ರಂಗೋತ್ಸವ, ರಂಗಸ್ಪರ್ಧೆ ಹೀಗೆ ಅನೇಕ ಕಡೆ ಭೇಟಿಯಾಗಿದ್ದೇವೆ. ಮುಂದೆ ನಾನು ‘ರಂಗಪಯಣ’ ತಂಡ ಆರಂಭಿಸಿದೆ. ರಾಜು ‘ಸಾತ್ವಿಕ’ ತಂಡ ಕಟ್ಟಿಕೊಂಡರು.

ಒಮ್ಮೆ ಅವರ ತಂಡದ ‘ಬದುಕು ಜಟಕಾ ಬಂಡಿ’ ನಾಟಕದಲ್ಲಿ ನಾನು ಅಭಿನಯಿಸಬೇಕಾದ ಸಂದರ್ಭ ಬಂತು. ಅಂದು ಮೇ 13, 2012. ಫ್ರೀಡಂಪಾರ್ಕ್‌ನ ವೇದಿಕೆಯಲ್ಲಿ ಆ ನಾಟಕ ಪ್ರದರ್ಶನವಾಗುತ್ತಿತ್ತು. ನಾನು ಮತ್ತು ರಾಜು ಇಬ್ಬರೇ ಸ್ಟೇಜ್‌ ಮೇಲಿರುವ ದೃಶ್ಯವದು. ತಮ್ಮ ಡೈಲಾಗಿನ ಸರದಿ ಬಂದಾಗ ರಾಜು ಸ್ಕ್ರಿಪ್ಟ್‌ನಲ್ಲಿರುವ ಸಂಭಾಷಣೆ ಬಿಟ್ಟು ಬೇರೆಯದೇ ಸಂಭಾಷಣೆ ಹೇಳಿಬಿಟ್ಟರು. ಅಲ್ಲಿಯೇ ಪ್ರಪೋಸ್ ಮಾಡಿಬಿಟ್ಟರು.

ಅವರು ಹೇಳುವಾಗಲೇ ನನಗೆ ಗೊತ್ತಾಯಿತು ಏನೋ ಎಡವಟ್ಟಾಗಿದೆ ಅಂತ. ಅವರು ಸಂಭಾಷಣೆ ಮುಗಿಸುವುದೇ ತಡ, ನಾಟಕ ಮುಗಿಯುವುದನ್ನೂ ಕಾಯದೇ ನಾನು ಸೀದಾ ಮನೆಗೆ ಬಂದುಬಿಟ್ಟೆ.

ಸ್ನೇಹಿತರಿಗೆ, ಮನೆಯಲ್ಲಿ ನಮ್ಮಣ್ಣನಿಗೂ ವಿಷಯ ತಿಳಿಯಿತು. ಐದಾರು ತಿಂಗಳ ಕಾಲ ನಾನು ಅವರ ಪ್ರೀತಿಗೆ ಸಮ್ಮತಿಯನ್ನೇ ನೀಡಿರಲಿಲ್ಲ. ಆದರೆ, ನನ್ನಣ್ಣ ಪ್ರವೀಣ್‌ ಸೂಡ ‘ನಾನು ಹುಡುಕಿದರೂ ರಾಜ್‌ಗುರುವಂಥ ಹುಡುಗ ಸಿಗೋದಿಲ್ಲ. ಪ್ರೀತಿ ಒಪ್ಪಿಕೋ’ ಎಂದು ನನ್ನ ಮನ ಒಲಿಸಿದ.

ನಮ್ಮಿಬ್ಬರ ಜಾತಿ ಬೇರೆಬೇರೆಯಾದ್ದರಿಂದ ನಾನು ನಮ್ಮ ಸಂಬಂಧಿಕರ ಚುಚ್ಚುನುಡಿಗಳನ್ನು ಎದುರಿಸಬೇಕಾಯಿತು. ಆಗೆಲ್ಲಾ ರಾಜು ನನಗೆ ಧೈರ್ಯ ತುಂಬಿ ಸಮಾಧಾನ ಮಾಡುತ್ತಿದ್ದರು. ರಾಜು ಅವರ ತಂದೆ ಗುರುರಾಜ್ ಹೊಸಕೋಟೆ ತುಂಬಾ ದೊಡ್ಡ ಹಾಡುಗಾರರು. ನನ್ನನ್ನು ರಾಜು ಅವರ ಮನೆಗೆ ಕರೆದುಕೊಂಡು ಹೋದಾಗ ‘ನಿಮ್ಮನ್ನು ಸಮಾಜ ನೋಡುತ್ತಿರುತ್ತದೆ. ಮತ್ತೊಬ್ಬರು ನಿಮ್ಮತ್ತ ಬೆರಳು ತೋರಿಸುವಂತೆ  ಮಾಡಬೇಡಿ. ನಾಲ್ಕು ಜನರಿಗೆ ಮಾದರಿಯಾಗುವಂತೆ ನಿಮಿಷ್ಟದಂತೆ ಚೆನ್ನಾಗಿ  ಬಾಳಿ’  ಎಂದು ಹರಸಿದರು.

ಇಬ್ಬರ ಮನೆಯವರೂ ಒಪ್ಪಿದ ಮೇಲೆ, ರವೀಂದ್ರ ಕಲಾಕ್ಷೇತ್ರದಲ್ಲಿ ಸರಳವಾಗಿ ‘ಮಂತ್ರಮಾಂಗಲ್ಯ’ ಮಾದರಿಯಲ್ಲಿ ಮದುವೆಯಾದೆವು. ಅಂದು ನಮ್ಮ ಪ್ರೀತಿಯನ್ನು ವಿರೋಧಿಸಿದ ಸಂಬಂಧಿಕರೇ ಇಂದು ನಮ್ಮ ಜೋಡಿ ಮುತ್ತಿನಂಥ ಜೋಡಿ ಎಂದು ಕೊಂಡಾಡುತ್ತಿದ್ದಾರೆ. ಮದುವೆಯ ನಂತರ ಪ್ರೀತಿ, ಮಮತೆ ಬೆಟ್ಟದಂತೆ ಬೆಳೆಯುತ್ತಾ ಹೋಯಿತು. ಇದಕ್ಕಿಂತ ಇನ್ನೇನು  ಬೇಕು ನಮಗೆ?
-ನಯನಾ ಸೂಡ, ರಾಜ್‌ಗುರು ರಂಗಭೂಮಿ ಕಲಾವಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT