ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಶೀಬಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದಲೂ ಬಂದ ಭಕ್ತರು
Last Updated 14 ಫೆಬ್ರುವರಿ 2017, 5:26 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಗಡಿ ಗ್ರಾಮವಾದ ಚಿಕ್ಕಶೀಬಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ನೆಲೆ ನಿಂತಿರುವ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವವು ಸೋಮವಾರ ಅದ್ಧೂರಿಯಾಗಿ ನೆರವೇರಿತು.

ಮಾಘ ಮಾಸ ಪುಬ್ಬ ನಕ್ಷತ್ರದಲ್ಲಿ ಜರುಗಿದ ದೇವತಾ ಕಾರ್ಯದಲ್ಲಿ ಗರುಡ ಪಕ್ಷಿಯು (ಹದ್ದು) ಮೂರು ಬಾರಿ ರಥ ಪ್ರದಕ್ಷಿಣೆ ಹಾಕುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ನರಸಿಂಹಸ್ವಾಮಿ ನಾಮ ಸ್ಮರಣೆ ಮಾಡುತ್ತಾ ಭಕ್ತರು ತೇರು ಎಳೆದರು.

ತಮಿಳುನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಬಾಳೆಹಣ್ಣು, ದವನವನ್ನು ತೇರಿಗೆ ತೂರಿ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುಂಚೆ ಬೆಳಿಗ್ಗೆ ಪೂರ್ಣಾಹುತಿ, ರಥಪೂಜೆ ನಡೆದು, ನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ತೇರಿನಲ್ಲಿ ಕೂರಿಸಲಾಯಿತು.

ಶೀಬಿ ಸುತ್ತಮುತ್ತಲಿನ ಗ್ರಾಮಗಳಾದ ಕಂಚಿಗಾನಹಳ್ಳಿ, ಸೋಮಸಾಗರ, ಹುಂಜನಹಳ್ಳಿ, ಕೊಳಾಲಕುಂಟೆ, ಯಲದಡ್ಲು, ಕೆಂಪನದೊಡ್ಡೇರಿ ಸೇರಿದಂತೆ ಹಲವು ಗ್ರಾಮಗಳಿಂದ ಬಂದ ಭಕ್ತರು ನರಸಿಂಹಸ್ವಾಮಿ ದರ್ಶನ ಪಡೆದರು. ಮಂಗಳವಾರ ರಾತ್ರಿ ಶಯನೋತ್ಸವ, ತೆಪ್ಪೋತ್ಸವ ಕಾರ್ಯಕ್ರಮ ಜರುಗಲಿದೆ. ಒಂದು ವಾರದ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮನರಂಜನೆ ಭಕ್ತರನ್ನು ಸೆಳೆಯುತ್ತಿದೆ.

ಒಕ್ಕಲು ಸೇವೆ: ‘ದೇವರಿಗೆ ಒಕ್ಕಲು ಸೇವೆ ಮಾಡುವವರು ಅಡುಗೆ ತಯಾರಿಸುತ್ತಾರೆ. ಬ್ರಹ್ಮರಥೋತ್ಸವದಲ್ಲಿ ಪಂಕ್ತಿಭೇದಕ್ಕೆ ಅವಕಾಶ ಇಲ್ಲದಂತೆ ಎಲ್ಲ ಸಮುದಾಯಗಳಿಗೂ ಅನ್ನ ದಾಸೋಹ ವ್ಯವಸ್ಥೆ ಏರ್ಪಡಿಸಿದ್ದೆವು. ಒಕ್ಕಲು ಸೇವೆ ಮಾಡುವ ಮಾಂಸಾಹಾರಿಗಳು ಬ್ರಹ್ಮರಥೋತ್ಸವದ ಮರುದಿನ ಅಡುಗೆ ತಯಾರಿಸಿ ಸೇವಿಸುತ್ತಾರೆ’ ಎಂದು ಕರಣೀಕ ನಲ್ಲಪ್ಪ ತಿಳಿಸಿದರು.

ಕಣ್ಸೆಳೆಯುವ ಚಿತ್ರಗಳು: ‘ದೇವಾಲಯದ ಚಾವಣಿಯಲ್ಲಿ ರಾಮಾವತಾರ, ಕೃಷ್ಣಾವತಾರ ಹಾಗೂ ನರಸಿಂಹ ಅವತಾರದ ಚಿತ್ರಗಳು 222 ವರ್ಷವಾದರೂ ಅಂದಗೆಟ್ಟಿಲ್ಲ. 25 ಮಂದಿ ಚಿತ್ರ ಕಲಾವಿದರು ಶ್ರಮದಿಂದ ತಯಾರಾದ ಪ್ರೆಸ್ಕೋ ಚಿತ್ರಗಳು ಇತ್ತೀಚೆಗೆ ನಿಧಾನವಾಗಿ ಮಬ್ಬುಗಟ್ಟುತ್ತಿವೆ. ಆನೆ, ಕುದುರೆ, ಕೋಟೆ ಕೊತ್ತಲು, ಯುದ್ಧದ ಚಿತ್ರಗಳು ಗಮನ ಸೆಳೆಯುತ್ತವೆ. ಮುಂದಿನ 50–100 ವರ್ಷದವರೆಗ ಈ ಚಿತ್ರಗಳು ಇರಬಹುದು ಎಂದು ಚಿತ್ರಕಾರರೇ ಅಂದಾಜಿಸಿದ್ದಾರೆ’ ಎಂದು ಕರಣೀಕ ನಲ್ಲಪ್ಪ ವಿವರಿಸಿದರು.

ದೇವಾಲಯದ ಹಿನ್ನೆಲೆ

1795ರಲ್ಲಿ ಟಿಪ್ಪು ಸುಲ್ತಾನ್‌ ಆಳ್ವಿಕೆಯಲ್ಲಿ ದೇವಾಲಯದ ನಿರ್ಮಾಣ ಕಾಮಗಾರಿ ಆರಂಭವಾಯಿತು. 1811ರ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ ಪೂರ್ಣಗೊಂಡಿತು. ಅಂದಿನ ಚಿತ್ರದುರ್ಗದ ಫೌಜ್‌ದಾರ್‌ ಆಗಿದ್ದ ನಲ್ಲಪ್ಪ ನೇತೃತ್ವದಲ್ಲಿ ದೇಗುಲ ನಿರ್ಮಿಸಲಾಯಿತು. ಅಂದಿನಿಂದಲೂ ಫೌಜ್‌ದಾರ್‌ ನಲ್ಲಪ್ಪ ಕುಟುಂಬವೇ ದೇವಾಲಯ ನಿರ್ವಹಣೆ ನೋಡಿಕೊಳ್ಳುತ್ತಿದೆ.

‘2007ರಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ತೆಗೆದುಕೊಂಡಿತ್ತು. ಆದರೆ, ಅದನ್ನು ಮರಳಿ ಪಡೆದೆವು’ ಎಂದು ದೇವಾಲಯ ಆಡಳಿತ ಮಂಡಳಿಯ ಕರಣೀಕ ನಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫೌಜ್‌ದಾರ್‌ ನಲ್ಲಪ್ಪ ಅವರು ತಮ್ಮ ತಾಯಿಯ ಸಹಗಮನದ ಜ್ಞಾಪಕಾರ್ಥವಾಗಿ ದೇವಾಲಯ ನಿರ್ಮಿಸಿದರು. ಅಲ್ಲದೇ ನರಸಿಂಹ ಸ್ವಾಮಿಯ ಸಾಲಿಗ್ರಾಮ ಪ್ರತಿಷ್ಠಾಪಿಸಲು ದೇವರ ಆದೇಶವಾಗಿತ್ತು’ ಎಂದು ದೇಗುಲದ ಹಿನ್ನೆಲೆ ವಿವರಿಸಿದರು.

ಅಂಕಿ ಅಂಶ

222 ವರ್ಷ - ಹಿಂದೆ  ಶೀಬಿ ನರಸಿಂಹಸ್ವಾಮಿ ದೇಗುಲ ನಿರ್ಮಾಣ

25           - ಪ್ರೆಸ್ಕೋ ಚಿತ್ರ ನಿರ್ಮಿಸಿದ ಕಲಾವಿದರು

100ವರ್ಷ  -  ಹಿಂದೆ ನರಸಿಂಹಾವತಾರ ಸೇರಿ ಇತರ ಚಿತ್ರಗಳ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT