ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಗೆ ಸಿಂಹಸ್ವಪ್ನದ ತೀರ್ಪು ಕೊನೆಗೂ ನ್ಯಾಯಕ್ಕೆ ಸಂದ ಜಯ

ಸಂಪಾದಕೀಯ
Last Updated 14 ಫೆಬ್ರುವರಿ 2017, 20:16 IST
ಅಕ್ಷರ ಗಾತ್ರ
ಭ್ರಷ್ಟಾಚಾರಿಗಳಿಗೆ  ಮಾತ್ರವಲ್ಲ, ಈ ಅಕೃತ್ಯಗಳಲ್ಲಿ ಅವರಿಗೆ ಸಹಾಯ ಮಾಡುವವರಿಗೂ ನಡುಕ ಹುಟ್ಟಿಸುವಂತಹ ತೀರ್ಪು ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಿದೆ. ಇದರ ತಕ್ಷಣದ ಪರಿಣಾಮ ಎಂದರೆ, ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ  ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್‌ ಜೈಲು ಸೇರುವಂತಾಗಿದೆ. ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ಏರುವ ಅವರ ಕನಸು ನುಚ್ಚುನೂರಾಗಿದೆ.
 
ಕೋರ್ಟ್‌ ಮುಂದೆ ಇದ್ದ ಪ್ರಕರಣದಲ್ಲಿ ಮೂಲ ಆರೋಪಿ ಜಯಲಲಿತಾ.  ಈಗ ಅವರು ಬದುಕಿಲ್ಲ.   ಶಶಿಕಲಾ, ಅವರ ಬಂಧುಗಳಾದ ಇಳವರಸಿ ಮತ್ತು  ಸುಧಾಕರನ್‌ ಈ ಪ್ರಕರಣದಲ್ಲಿ ಸಹ–ಆರೋಪಿಗಳು. ‘ಜಯಲಲಿತಾ ಅವರು 1991–96ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆದಾಯ ಮೀರಿ ₹66.65 ಕೋಟಿ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ, ಉಳಿದ ಮೂವರು ಈ ಕೃತ್ಯದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ’ ಎಂದು ದೂರಿ ಆಗ ಜನತಾ ಪಕ್ಷದ ನಾಯಕರಾಗಿದ್ದ ಡಾ. ಸುಬ್ರಮಣಿಯನ್‌ ಸ್ವಾಮಿ  ಚೆನ್ನೈ ನ್ಯಾಯಾಲಯದ ಮೆಟ್ಟಲೇರಿದ್ದರು.  ಈ ಪ್ರಕರಣದಲ್ಲಿ ಜಯಾ ಮಾತ್ರವಲ್ಲದೆ ಈ ಮೂವರೂ ಆರೋಪಿಗಳು ಕೆಲ ಕಾಲ ಜೈಲಿನಲ್ಲಿದ್ದರು. ಮುಂದೆ ವಿಚಾರಣೆ ಅಲ್ಲಿಂದ ಬೆಂಗಳೂರಿನ ವಿಶೇಷ ಕೋರ್ಟ್‌ಗೆ ವರ್ಗಾವಣೆಯಾಗಿತ್ತು.  ಭ್ರಷ್ಟಾಚಾರ ಸಾಬೀತಾಗಿದೆ ಎಂದು ವಿಶೇಷ ಕೋರ್ಟ್ ಕೂಡ ಹೇಳಿ, ನಾಲ್ವರಿಗೂ ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಖುಲಾಸೆಯಾಗಿ ಹೊರಬಂದರೂ ಈಗ ಮತ್ತೆ  ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ತೀರ್ಪಿನಿಂದಾಗಿ ಇನ್ನುಳಿದ ಸುಮಾರು ಮೂರೂವರೆ ವರ್ಷಗಳನ್ನು ಮೂವರೂ ಸಹ–ಅಪರಾಧಿಗಳು ಜೈಲಿನಲ್ಲಿ ಕಳೆಯಬೇಕಾಗಿದೆ. ಸೆರೆವಾಸ ಮುಗಿದ ನಂತರ 6 ವರ್ಷಗಳು ಯಾವುದೇ ಚುನಾವಣೆಗೆ ಅವರು ಸ್ಪರ್ಧಿಸುವಂತಿಲ್ಲ.  ಒಂದೊಂದು ದಿನವೂ ಚಲಾವಣೆಯಲ್ಲಿ  ಇರುವುದು ಅನಿವಾರ್ಯವಾದ ಇಂದಿನ ರಾಜಕಾರಣದಲ್ಲಿ 10 ವರ್ಷ ಕಡಿಮೆ ಅವಧಿಯೇನಲ್ಲ. ಅಧಿಕಾರ ಪ್ರತ್ಯಕ್ಷವಾಗಿ ತನ್ನ ಕೈಯಲ್ಲಿ ಇಲ್ಲದಿದ್ದರೂ ಭ್ರಷ್ಟರ ಜತೆ ಕೈಜೋಡಿಸುವ ಅಧಿಕಾರೇತರ ವ್ಯಕ್ತಿಯೂ ಭ್ರಷ್ಟಾಚಾರ ನಿರೋಧ ಕಾಯ್ದೆಯನ್ವಯ ಶಿಕ್ಷೆ ಅನುಭವಿಸಲೇಬೇಕು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವುದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಮತ್ತೆ ಸಾಬೀತಾದಂತಾಗಿದೆ. 19 ವರ್ಷಗಳಷ್ಟು ಸುದೀರ್ಘ ವಿಳಂಬದ ನಂತರ ತಾರ್ಕಿಕ ಅಂತ್ಯ ಕಂಡರೂ, ಇದೊಂದು ದೂರಗಾಮಿ ಪರಿಣಾಮ ಬೀರುವ ಐತಿಹಾಸಿಕ ತೀರ್ಪು. ನ್ಯಾಯಕ್ಕೆ ಸಂದ ಜಯ. 
 
ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಬಗ್ಗೆ ಪೀಠ ತೀವ್ರ ಆತಂಕ ವ್ಯಕ್ತಪಡಿಸಿರುವುದು ಉಲ್ಲೇಖನೀಯ. ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್‌ ಮತ್ತು ಅಮಿತಾವ್‌ ರಾಯ್‌ ಅವರು ಪ್ರತ್ಯೇಕ ತೀರ್ಪು ಬರೆದರೂ, ಅಪರಾಧಿಗಳನ್ನು ಶಿಕ್ಷಿಸುವ ವಿಚಾರದಲ್ಲಿ  ಒಮ್ಮತಕ್ಕೆ ಬಂದಿದ್ದಾರೆ. ‘ಭ್ರಷ್ಟಾಚಾರ ನಮ್ಮ ಸಾರ್ವಜನಿಕ ಬದುಕನ್ನೇ ಹಾಳುಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರಲ್ಲೂ ಇದೇ ಭಾವನೆಯಿದೆ. ತಾವು ಅಸಹಾಯಕರು ಎಂಬ ಹತಾಶೆಯೂ ಕಾಡುತ್ತಿದೆ. ಆದರೆ ಈ ತೀರ್ಪು ನ್ಯಾಯ ವ್ಯವಸ್ಥೆಯ ಬಗ್ಗೆ ಜನರಲ್ಲಿ ಮತ್ತೆ ವಿಶ್ವಾಸ ಹೆಚ್ಚಿಸುವ ದಿಸೆಯಲ್ಲಿ ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆಯಾಗಬಲ್ಲದು.
 
ಅಧಿಕಾರ, ಪಕ್ಷ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ, ಹಿಂಬಾಲಕರ ಬಲ ಇವ್ಯಾವುವೂ ಭ್ರಷ್ಟರನ್ನು ಪಾರು ಮಾಡಲಾರವು ಎಂಬ ಸಂದೇಶ ರವಾನಿಸುವಲ್ಲಿ ಇದು ಸಫಲವಾದರೆ ಅದಕ್ಕಿಂತ ದೊಡ್ಡ ಸಾಧನೆ ಬೇರಿಲ್ಲ.  ಜಯಾ, ಶಶಿಕಲಾ, ಇಳವರಸಿ ಮತ್ತು ಸುಧಾಕರನ್‌ ಅಪರಾಧಿಗಳು ಎಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯದ ಆದೇಶವನ್ನು, ‘ಅಕ್ರಮ ಆಸ್ತಿ ಗಳಿಕೆ  ಪ್ರಮಾಣ ಶೇ 8.12ರಷ್ಟು ಮಾತ್ರ’ ಎಂಬ ಕಾರಣ ಕೊಟ್ಟು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದು ಮಾಡಿದಾಗ ಜನಮಾನಸದಲ್ಲಿ ನ್ಯಾಯಾಂಗದ ಬಗ್ಗೆ ಒಂದು ಬಗೆಯ ಅಪನಂಬಿಕೆ ಮೂಡಿತ್ತು. ದೊಡ್ಡ ಆಘಾತವೇ ಆಗಿತ್ತು. ‘ಹೈಕೋರ್ಟ್ ತಪ್ಪಾಗಿ ಲೆಕ್ಕ ಹಾಕಿದೆ. ಇದು ಕೆಟ್ಟ ಗಣಿತ’ ಎಂದು ದೂರುದಾರ  ಸುಬ್ರಮಣಿಯನ್‌ ಸ್ವಾಮಿ ಮತ್ತು ವಿಶೇಷ ಸರ್ಕಾರಿ ವಕೀಲ ಬಿ.ವಿ. ಆಚಾರ್ಯ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.   ಅಂಕಿಅಂಶಗಳು ಎದುರೇ ಇರುವಾಗ ಈ ಬಗೆಯ ತಪ್ಪು ಲೆಕ್ಕಾಚಾರ ಹೇಗೆ ಸರಿ,  ಇದಕ್ಕೆ ಪರಿಹಾರ ಇಲ್ಲವೇ ಎಂಬ ಪ್ರಶ್ನೆಗಳು ಜನಮಾನಸದಲ್ಲಿ ಮೂಡಿದ್ದವು.  ಹೈಕೋರ್ಟ್  ತೀರ್ಪು ತಪ್ಪು ಎಂದು ಸುಪ್ರೀಂ ಕೋರ್ಟ್ ಈಗ ಹೇಳಿರುವುದು  ಹೊಸ ಭರವಸೆ ಮೂಡಿಸಿದೆ. ಸಮಾಜವನ್ನು ಕ್ಯಾನ್ಸರ್‌ನಂತೆ ಕಾಡುತ್ತಿರುವ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಲು ಇದು ಪ್ರೇರಣೆಯಾಗಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT