ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಂತರ ಜ್ಯೋತಿ: ಮಾರ್ಚ್‌ ಅಂತ್ಯಕ್ಕೆ ಪೂರ್ಣ’

ಹರಪನಹಳ್ಳಿ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆ
Last Updated 15 ಫೆಬ್ರುವರಿ 2017, 6:01 IST
ಅಕ್ಷರ ಗಾತ್ರ
ಹರಪನಹಳ್ಳಿ: ನಿರಂತರ ಜ್ಯೋತಿ ಯೋಜನೆ ಅನುಷ್ಠಾನ, ದಡಾರ– ರುಬೆಲ್ಲಾ ಲಸಿಕೆಯಿಂದ ಬಂಜೆತನ, ಕುಡಿದು ಬರುವ ಶಿಕ್ಷಕರು, ಕಾರಾಗೃಹ ಮತ್ತು ನ್ಯಾಯಾಲಯ ಕಟ್ಟಡಗಳ ಪ್ರಗತಿ, ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಯಿತು. 
 
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. 
 
ನಿರಂತರ ಜ್ಯೋತಿ: ‘ತಾಲ್ಲೂಕನ್ನು ನಿರಂತರ ಜ್ಯೋತಿ ಯೋಜನೆಗೆ ಒಳಪಡಿಸಲು ಚಿಗಟೇರಿ, ಅರಸಿಕೇರೆ ಹೋಬಳಿಯಲ್ಲಿ ಕೈಗೊಂಡ ಕಾಮಗಾರಿ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ರೈತರಿಗೆ ಮತ್ತು ನಾಗರಿಕರಿಗೆ ನಿರಂತರ ವಿದ್ಯುತ್‌ ಸೌಲಭ್ಯ ಸಿಗಲಿದೆ. 62 ಹಳ್ಳಿಗಳಲ್ಲಿ ಮತ್ತು ಶಾಲಾ– ಕಾಲೇಜಿನ ಆವರಣದಲ್ಲಿರುವ ಹಳೆ ವಿದ್ಯುತ್‌ ತಂತಿಗಳನ್ನು ಬದಲಾಯಿಸುತ್ತಿದ್ದೇವೆ’ ಎಂದು ಬೆಸ್ಕಾಂ ಎಂಜಿನಿಯರ್‌ ಎಸ್‌.ಭೀಮಪ್ಪ ತಿಳಿಸಿದರು.
 
ಬಂಜೆತನ: ‘ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಿಸಿಕೊಂಡಲ್ಲಿ ಬಂಜೆತನ ಉಂಟಾಗುತ್ತದೆ ಎಂದು ಮೊಬೈಲ್‌ನಲ್ಲಿ ಬಂದಿರುವ ಸಂದೇಶದಿಂದ ಮುಸ್ಲಿಂ ಸಮಾಜದವರು ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಲಸಿಕೆ ಅಭಿಯಾನಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಇದು ತಪ್ಪು ತಿಳಿವಳಿಕೆಯಾಗಿದ್ದು, ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ’ ಎಂದು ಆರೋಗ್ಯ ಇಲಾಖೆಯ ವೈದ್ಯ ಡಾ.ನಿರಂಜನ್‌ ಸಭೆಗೆ ತಿಳಿಸಿದರು.
 
ಕುಡಕ ಶಿಕ್ಷಕರು: ಮತ್ತಿಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಕುಡಿದು ಬಂದು ದೈಹಿಕ ಶಿಕ್ಷಕ ವಿದ್ಯಾರ್ಥಿನಿಯರಿಂದ ಮಸಾಜ್‌ ಮಾಡಿಸಿಕೊಂಡ ಘಟನೆಯಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ. ತಾಲ್ಲೂಕಿನಲ್ಲಿ ಕುಡುಕ ಶಿಕ್ಷಕರ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆದಿದೆ. ತಾಲ್ಲೂಕಿನಲ್ಲಿ ಋತುಮಾನದ ಮೂರು ಶಾಲೆಗಳನ್ನು ಆರಂಭಿಸಲಾಗಿದೆ. 4ರಿಂದ 6ನೇ ತರಗತಿ ಶಿಕ್ಷಕರು ಮಕ್ಕಳಿಗೆ ಎಷ್ಟರ ಮಟ್ಟಿಗೆ ಬೋಧನೆ ಮಾಡಿದ್ದಾರೆ ಎಂದು ಸರ್ಕಾರ ಸಮೀಕ್ಷೆ ನಡೆಸುತ್ತಿದ್ದು, ಮಾ. 5ರಂದು ಶಿಕ್ಷಕರನ್ನು ಲಿಖಿತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
 
‘ತಾಲ್ಲೂಕಿನಲ್ಲಿ ಕಾರಾಗೃಹ ಮತ್ತು ಹಿರಿಯ ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಗುಂಡಗತ್ತಿ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಯನ್ನು ₹ 50 ಸಾವಿರ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದರೂ ಸೋರುತ್ತಿದೆ’ ಎಂದು ಸಿ.ಡಿ.ಪಿ.ಒ ದೂರಿದರು. 
 
‘ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಒಂದು ಶಾಲೆಯ ಬಿಸಿಯೂಟದಲ್ಲಿ ಹುಳು ಬಂದಿರುವು ದಕ್ಕೆ ಎಲ್ಲಾ ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಸಮೀಕರಿಸಬೇಡಿ. ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಪ್ರೋತ್ಸಾಹಿಸಿ’ ಎಂದು ಅಕ್ಷರ ದಾಸೋಹ ಅಧಿಕಾರಿ ಮಹೇಶ್‌ ದೊಡ್ಡಮನಿ ಪ್ರತಿಕ್ರಿಯಿಸಿದರು. 
 
ಸಣ್ಣ ನೀರಾವರಿ ಇಲಾಖೆ, ಕೈಗಾರಿಕೆ ವಿಸ್ತರಣಾಧಿಕಾರಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸತತವಾಗಿ ಗೈರು ಹಾಜರಾಗುತ್ತಿದ್ದಾರೆ. ಅಧಿಕಾರ ವಹಿಸಿಕೊಂಡು ಒಂಬತ್ತು ತಿಂಗಳಾದರೂ ಕೆಲ ಇಲಾಖೆಗಳ ಅಧಿಕಾರಿಗಳ ಮುಖವನ್ನೇ ನೋಡಿಲ್ಲ. ಅವರಿಗೆ ಕಡ್ಡಾಯವಾಗಿ ಸಭೆಗೆ ಬರು ವಂತೆ ಸೂಚಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ಮಂಜ್ಯಾನಾಯ್ಕ ಸೂಚಿಸಿದರು.
 
ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಟಿ.ತಿಪ್ಪೇಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಹಮತ್ತುಲ್ಲಾ ಸಾಬ್‌ ಮತ್ತು ಯೋಜನಾಧಿಕಾರಿ ವಿಜಯಕುಮಾರ್‌ ಹಾಜರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT