ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನಗಳ ಇ–ಹರಾಜಿಗೆ ಭಾರಿ ಸ್ಪಂದನೆ

ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ ನಿರೀಕ್ಷಿಸಿದ ಹಣ ₹7.90 ಕೋಟಿ,ಬಂದಿದ್ದು ₹14.83 ಕೋಟಿ!
Last Updated 15 ಫೆಬ್ರುವರಿ 2017, 7:11 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ(ಕುಡಾ)ವು ಬಿಡಿ, ಮೂಲೆ ಹಾಗೂ ವಾಣಿಜ್ಯ ನಿವೇಶನಗಳ ವಿಲೇ­ವಾ­ರಿಗೆ ಇದೇ ಮೊದಲ ಬಾರಿಗೆ ನಡೆಸಿದ ಇ–ಹರಾಜು ಪ್ರಕ್ರಿಯೆಗೆ ಗ್ರಾಹಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಧರಿಯಾಪುರ–ಕೋಟನೂರ, ಫಿಲ್ಟರ್‌ಬೆಡ್‌ ಹಂತ–1, 2 ಮತ್ತು 4, ಮಹಾತ್ಮಗಾಂಧಿ ಲಾರಿ ತಂಗುದಾಣ, ಬಾಪುಗೌಡ ದರ್ಶನಾ­ಪುರ, ಶೇಖರೋಜಾ ಹಂತ–2 ಬಡಾವ ಣೆಗಳಲ್ಲಿ ಒಟ್ಟಾರೆ 132 ನಿವೇಶನಗಳನ್ನು ಇ–ಹರಾಜಿಗೆ ಇಡಲಾ ಗಿತ್ತು.  ಈ ಪೈಕಿ 78 ನಿವೇಶನಗಳಿಗೆ ಗ್ರಾಹಕರು ಯಶಸ್ವಿ ಬಿಡ್‌ ಸಲ್ಲಿಸಿದ್ದಾರೆ. ಶೇ 25ರಷ್ಟು ಮುಂಗಡ ಹಣ ಪಾವತಿ ಮಾಡದಿರು ವುದು ಮತ್ತಿತರ ಕಾರಣಗಳಿಂದ 54 ನಿವೇಶನಗಳು ವಿಲೇವಾರಿ ಆಗಿಲ್ಲ.

‘ಈ 132 ನಿವೇಶನಗಳಿಂದ ಪ್ರಾಧಿಕಾರಕ್ಕೆ ₹7.90 ಕೋಟಿ ಆದಾಯ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹರಾಜಿನಲ್ಲಿ 78 ನಿವೇಶನಗಳಿಗೆ ₹14.83 ಕೋಟಿ ಆದಾಯ ಬಂದಿದೆ. ಯಶಸ್ವಿ ಬಿಡ್‌ದಾರರು ಒಟ್ಟು ಮೌಲ್ಯದ ಶೇ 25ರಷ್ಟು ಹಣ ಒಟ್ಟಾರೆ ₹3.77 ಕೋಟಿಯನ್ನು ಈಗಾಗಲೇ ನಮಗೆ ಪಾವತಿಸಿದ್ದಾರೆ’ ಎಂದು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿಕಿರಣ ವಂಟಿ ಹೇಳಿದರು.

‘ಶೇ 25ರಷ್ಟು ಮುಂಗಡ ಮೊತ್ತ ಪಾವತಿಸಿ ಮಾಡಿದ ಎಚ್‌–1 ಬಿಡ್‌ದಾ­ರರಿಗೆ ನಿವೇಶನ ದೃಢೀಕರಿಸಲಾಗಿದೆ. ಈ ಪಟ್ಟಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅವರು ಅನುಮೋದನೆ ನೀಡಲಿದ್ದಾರೆ. ಈ ಎಲ್ಲ ನಿವೇಶನ ಗಳ ಅಳತೆಯನ್ನು ನಿಖರವಾಗಿ ಪಡೆದುಕೊಂಡು ಅದಕ್ಕೆ ಅನುಸಾರವಾಗಿ ಹಣ ಪಡೆದು, ಬಿಡ್‌ದಾರರ ಹೆಸರಿಗೆ ವರ್ಗಾಯಿಸ ಲಾಗುವುದು’ ಎನ್ನುವುದು ಅವರ ವಿವರಣೆ.

‘ಪ್ರತಿ ನಿವೇಶನಕ್ಕೆ ಇ–ಹರಾಜಿನಲ್ಲಿ ಕನಿಷ್ಠ ಇಬ್ಬರು ಬಿಡ್‌ ಸಲ್ಲಿಸಬೇಕು ಎಂಬ ಷರತ್ತು ಇದೆ.  ಕೆಲ ನಿವೇಶನಗಳಿಗೆ ಒಬ್ಬರು ಮಾತ್ರ ಇ–ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಅಂತಹ ನಿವೇಶನಗಳ ಪಟ್ಟಿಯನ್ನು ತಿರಸ್ಕರಿಸಿ, ಅವರು ಪಾವತಿಸಿದ ಮೊತ್ತವನ್ನು ಮರಳಿಸಲು ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಇ–ಹರಾಜು ಕಡ್ಡಾಯ: ವಾಣಿಜ್ಯ, ಬಿಡಿ ಹಾಗೂ ಮೂಲೆ ನಿವೇಶನಗಳನ್ನು ಹಿಂದೆ ಬಹಿರಂಗ ಹರಾಜು ಮಾಡಲಾಗುತ್ತಿತ್ತು. ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ಒಟ್ಟಾಗಿ ಪಾಲ್ಗೊಳ್ಳು ತ್ತಿದ್ದರು. ಪ್ರಭಾವ ಬೀರುವ, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ರಾಜ್ಯ ಸರ್ಕಾರ ಇ–ಹರಾಜು ಕಡ್ಡಾಯಗೊಳಿಸಿದೆ.

ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು, ಒಂದು ನಿವೇಶನಕ್ಕೆ ಠೇವಣಿ ಪಾವತಿಸಿದ್ದರೂ ಸಹ ಹತ್ತು ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಿತ್ತು. ಆದರೆ, ಇ–ಹರಾಜಿನಲ್ಲಿ ಒಂದು ನಿವೇಶನಕ್ಕೆ ಠೇವಣಿ ಪಾವತಿಸಿದವರು ಆ ನಿವೇಶನಕ್ಕೆ ಮಾತ್ರ ಬಿಡ್‌ ಮಾಡಬೇಕು.

2016ರ­ಅಕ್ಟೋಬರ್‌ 20ರಿಂದ ನವೆಂಬರ್‌ 21ರ ವರೆಗೆ ಇ–ಹರಾಜು ಪ್ರಕ್ರಿಯೆಯನ್ನು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ ನಡೆಸಿತ್ತು.

ಖರೀದಿಗೆ ಪೈಪೋಟಿ!

‘ಕೆಲ ನಿವೇಶನಗಳ ಖರೀದಿಗೆ ಪೈಪೋಟಿ ಕಂಡು ಬಂತು. ಕೆಲವರು ಜಿದ್ದಿಗೆ ಬಿದ್ದವರಂತೆ ಬಿಡ್‌ ಮಾಡಿದರು. ಧರಿಯಾಪುರ–ಕೋಟನೂರ ಬಡಾವಣೆಯಲ್ಲಿ 6400 ಚದುರ ಅಡಿ ವಿಸ್ತೀರ್ಣದ ಮೂಲೆ ನಿವೇಶನಕ್ಕೆ ನಾವು ₹38.40 ಲಕ್ಷ ದರ ನಿಗದಿ ಮಾಡಿದ್ದೆವು. ಈ ನಿವೇಶನಕ್ಕೆ 10 ಜನ ಬಿಡ್‌ ಸಲ್ಲಿಸಿದ್ದರು. ಅಂತಿಮವಾಗಿ ಆ ನಿವೇಶನ ₹1.31 ಕೋಟಿ ಮೊತ್ತಕ್ಕೆ ಹರಾಜಾಯಿತು’ ಎಂದು ಪ್ರಾಧಿಕಾರದ ಸಿಬ್ಬಂದಿ ಹೇಳಿದರು.

‘ಇದೇ ಬಡಾವಣೆಯ 1200 ಚದುರ ಅಡಿಯ ವಾಣಿಜ್ಯ ನಿವೇಶನಕ್ಕೆ ₹8.40 ಲಕ್ಷ ಬೆಲೆ ನಿಗದಿ ಮಾಡಿದ್ದು, ಅದು ₹37.60 ಲಕ್ಷಕ್ಕೆ ಮಾರಾಟವಾಗಿದೆ. ಇಂತಹ ಸಾಕಷ್ಟು ಉದಾಹರಣೆ ಇವೆ’ ಎಂದು ಅವರು ತಿಳಿಸಿದರು.

* ನಿವೇಶನ ಖರೀದಿಸುವವರು ತಮ್ಮ ಮನೆಗಳಲ್ಲಿಯೇ ಕುಳಿತು ಬಿಡ್‌ ಮಾಡಬಹುದಾಗಿತ್ತು. ಹೀಗಾಗಿ ಹೆಚ್ಚಿನ ಜನ ಭಾಗವಹಿಸಿದ್ದರು. ಮೈಸೂರಿನಿಂದಲೂ ಒಬ್ಬರು ಬಿಡ್‌ ಮಾಡಿದ್ದಾರೆ.
–ರವಿಕಿರಣ ವಂಟಿ, ಕುಡಾ ಆಯುಕ್ತ

ಅಂಕಿ–ಅಂಶ

132 - ನಿವೇಶನ ಇ–ಹರಾಜು
12   - ನಿವೇಶನ ವಾಣಿಜ್ಯ ಉದ್ದೇಶ
120 - ನಿವೇಶನ ವಸತಿ ಉದ್ದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT