ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಚಿಂತರಿಗೆ ಭಾವಪೂರ್ಣ ವಿದಾಯ

ಸಾಹಿತಿಗಳು, ಹೋರಾಟಗಾರರ ಅಶ್ರುಧಾರೆ; ಅಸ್ಕಿಹಾಳ ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ
Last Updated 15 ಫೆಬ್ರುವರಿ 2017, 9:18 IST
ಅಕ್ಷರ ಗಾತ್ರ
ರಾಯಚೂರು: ಹೈದರಾಬಾದ್‌ ಕರ್ನಾಟಕದ ಹಿರಿಯ ಕವಿ ಜಂಬಣ್ಣ ಅಮರಚಿಂತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜಿಲ್ಲಾ ಸಾಹಿತಿಗಳ ಮತ್ತು ಹೋರಾಟಗಾರರ ಅಶ್ರುಧಾರೆಯ ಮಧ್ಯೆ ಮಂಗಳವಾರ ಸಂಜೆ ನಡೆಯಿತು.
 
ರಾಯಚೂರಿನ ಹೊರವಲಯದ ಅಸ್ಕಿಹಾಳದ ಪವರ್‌ಗ್ರಿಡ್‌ ಬಳಿ ಇರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಜಂಬಣ್ಣ ಅವರ ಮಕ್ಕಳಾದ ರಾಜಶೇಖರ ಮತ್ತು ರವಿ ನಡೆಸಿದರು.
 
ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದ ಜಂಬಣ್ಣ ಅವರ ಪಾರ್ಥಿವ ಶರೀರವನ್ನು ರಾಯಚೂರಿನ ಅವರ ಮನೆಗೆ ‘ಅಮರಂಚಿತ ನಿಲಯ’ಕ್ಕೆ ಮಧ್ಯಾಹ್ನ 12ರ ಹೊತ್ತಿಗೆ ತರಲಾಯಿತು.  ಸಂಬಂಧಿ ಸ್ನೇಹಿತರು,  ಸಾಹಿತಿಗಳು, ಹೋರಾಟಗಾರರು ಮನೆ ಬಳಿ ಸೇರತೊಡಗಿದ್ದರು. ಹೋರಾಟಗಾರರಾದ ಅಂಬಣ್ಣ ಅರೋಲಿ ಮತ್ತು ಅವರ ಸಂಗಡಿಗರು, ಸಿ. ದಾನಪ್ಪ ನಿಲೋಗಲ್‌ ಜಂಬಣ್ಣ ಅವರ ಬಗ್ಗೆ ರಚಿಸಿದ ‘ಅಮರಂಚಿತನೆ ಜಂಬಣ್ಣ, ಜಂಭ ಇಲ್ಲದ ಜಂಬಣ್ಣನೆ’ ಹಾಡನ್ನು ಹಾಡುತ್ತಿದ್ದಾಗ ಕುಟುಂಬದವರ ಉಮ್ಮಳಿಸಿ ರೋದಿಸಿದರು.
 
ಸಂಜೆ 4.30ರ ಹೊತ್ತಿಗೆ ಶವವನ್ನು ಅಸ್ಕಿಹಾಳದ ಬಳಿ ಅವರ ಜಮೀನಿಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಈ ಸಮಯದಲ್ಲೂ ಅನೇಕರು ಅಂತಿಮ ನಮನ ಸಲ್ಲಿಸಿದರು. 
 
‘25 ವರ್ಷಗಳ ಹಿಂದೆ ಅಪ್ಪನಿಗೆ ಹೃದಯಾಘಾತವಾಗಿತ್ತು. ಆದರೂ ಚೇತರಿಸಿಕೊಂಡಿದ್ದರು. ನಿವೃತ್ತರಾದ ಬಳಿಕ ಅಂದರೆ ಸುಮಾರು 10 ವರ್ಷಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಮಧುಮೇಹ, ರಕ್ತದೊತ್ತಡ ಇತ್ತು. ನಾಲ್ಕೈದು ವರ್ಷಗಳ ಹಿಂದೆ ಕಿಡ್ನಿ ಸಮಸ್ಯೆ ಕೂಡ ಕಾಣಿಸಿಕೊಂಡಿತು. ತಮ್ಮ ಕೆಲಸವನ್ನು ಮಾಡಿಕೊಳ್ಳುವಷ್ಟು ಶಕ್ತರಾಗಿದ್ದರು. ಈಗ್ಗೆ ಎಂಟು ದಿನಗಳಿಂದ ಹಾಸಿಗೆ ಹಿಡಿದಿದ್ದರು’ ಎಂದ ಜಂಬಣ್ಣ ಅವರ ಹಿರಿಯ ಮಗ ರಾಜಶೇಖರ ಗದ್ಗಿತರಾದರು.
 
‘ಜಂಭವಿಲ್ಲದ ಮಹಾಕವಿ ಜಂಬಣ್ಣ’
 
‘ಜಂಬಣ್ಣ ಮಹಾಕವಿ ಮಾತ್ರವಲ್ಲ ಮಹಾಮಾನವ. ಹೆಸರು ಜಂಬಣ್ಣ ಎಂದಿದ್ದರೂ ಒಂದಿನಿತು ಜಂಭ ಅವರಲ್ಲಿ ಇರಲಿಲ್ಲ. ಶೋಷಿತರು, ಅನಾಥರು, ಅಲ್ಪಸಂಖ್ಯಾತರ ಬಗ್ಗೆ ತಮ್ಮ ಕಾವ್ಯ ಮತ್ತು ಬದುಕಿನಿಂದ ಒಳ್ಳೆಯದನ್ನು ಬಯಸಿದ ಸಜ್ಜನ.

ಬಿ.ಬಸವಲಿಂಗಪ್ಪನವರ ಬೂಸ ಹೇಳಿಕೆ ನಂತರದ ಕಾಲಘಟ್ಟದಲ್ಲಿ ದಲಿತ, ಬಂಡಾಯ ಮತ್ತು ಪ್ರಗತಿಪರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಗೆಳೆಯ ಜಂಬಣ್ಣ, ನನಗೆ ಗುರುಸ್ವರೂಪಿಯಾಗಿದ್ದರು. ಅವರ ಕಾವ್ಯದ ಮಹತ್ವವನ್ನ ಯಾವತ್ತೂ ನೆನೆಯಬೇಕು’ ಎಂದು ಹಿರಿಯ ಕವಿ ಚನ್ನಣ್ಣವಾಲಿಕಾರ ಹೇಳಿದರು.

‘ಜಂಬಣ್ಣ ಅವರೊಂದಿಗೆ 40–45 ವರ್ಷಗಳ ಒಡನಾಟ. ದಲಿತ ಮತ್ತು ಬಂಡಾಯ ಚಳವಳಿಗೆ ಜಿಲ್ಲೆಯಲ್ಲಿ ನಾಂದಿ ಹಾಡಿದವರು. ಇಂತಹ ಒಂದು ಹೋರಾಟದ ಕೊಂಡಿ ಇಂದು ಕಳಚಿಬಿತ್ತು’ ಸಾಹಿತಿ ಬಾಬು ಭಂಡಾರಿಗಲ್‌ ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆಯ ಆತ್ಮಸಾಕ್ಷಿಯಾಗಿ ಶೋಷಣೆಯ ವಿರುದ್ಧದ ಜೀವಧ್ವನಿಯಾಗಿ ಕಾವ್ಯ– ಗಜಲ್‌– ಕಾದಂಬರಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಜಂಬಣ್ಣವರ ದೃಷ್ಟಿಕೋನ ಇಂದಿನ ಯುವ ಸಾಹಿತಿಗಳಿಗೆ ಪ್ರೇರಣಾ ಶಕ್ತಿಯಾಗಿದೆ. ಗಾಂಧೀಜಿ ಕುರಿತಂತೆ ಹುಟ್ಟುಕುರುಡ ಓಣಿಯಲ್ಲಿ ಚಾಲೀಸು ಮಾರುವಾತ ಎನ್ನುವ ಕವನದ ಸಾಲುಗಳು ಗಾಂಧಿ ಮತ್ತು ಗೋಡ್ಸೆ ಮಧ್ಯದ ಕಂದರವನ್ನು ಸಾರುತ್ತವೆ.

ಜಂಬಣ್ಣ ಒಂದು ನಾಡು ಅಥವಾ ಭಾಷೆಯ ಕವಿಯಾಗದೆ ಅವರು ಒಂದು ಜನಾಂಗದ ಕವಿಯಾದವರು’ ಎಂದು ಹಿರಿಯ ಸಾಹಿತಿ ಅಯ್ಯಪ್ಪ ತುಕ್ಕಾಯಿ ತಿಳಿಸಿದರು.
 
‘50 ವರ್ಷದ ದಾಂಪತ್ಯ ನಮ್ಮದು’

‘50 ವರ್ಷದ ದಾಂಪತ್ಯ ನಮ್ಮದು ಇಂದು ಒಂಟಿಯಾಗಿ ಬಿಟ್ಟು ಹೋದರು. ಕೆಲಸ ಮತ್ತು ಸಾಹಿತ್ಯ ಕಾರ್ಯ, ಹೋರಾಟದಲ್ಲಿ ತೊಡಗಿದ್ದರು ಕುಟುಂಬವನ್ನು ಕಡೆಗಣಿಸಿದವರಲ್ಲ. ಅವರಿಗೆ ಪ್ರಶಸ್ತಿ, ಸನ್ಮಾನ ದೊರೆತಾಗ ಬಹಳ ಖುಷಿ ಆಗುತ್ತಿತ್ತು. ಇಂದು ಅವರನ್ನು ಕಳೆದುಕೊಂಡಿದ್ದೇನೆ’  ಎಂದು ಜಂಬಣ್ಣ ಅಮರಚಿಂತರ ಪತ್ನಿ ರಾಮಲಿಂಗಮ್ಮ ಹೇಳಿದರು.
 
‘ಅಮರಚಿಂತರು ದಿನದ 24 ತಾಸುಗಳೂ ಕಾವ್ಯದ ಬಗ್ಗೆ ಚಿಂತಿಸುತ್ತಿದ್ದ ದೊಡ್ಡ ಸಾಹಿತಿ. ಸಾಹಿತ್ಯ, ಸಂಸ್ಕೃತಿ– ಹೋರಾಟದ ಚೈತನ್ಯವನ್ನು ಇಂದು ಕಳೆದುಕೊಂಡೆವು. ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿದ ಅಮರಚಿಂತರು ಬಂಡಾಯ ಸಾಹಿತ್ಯ ಚಳವಳಿ ರೂಪುಗೊಳ್ಳಲು ಕಾರಣೀಭೂತರು. ಅವರ ಸಾಹಿತ್ಯ ಕರ್ತೃತ್ವದ ಹಿಂದೆ ಅವರ ಮಡದಿ ಮತ್ತು ಮಕ್ಕಳ ಸಹಕಾರ ಕೂಡ ಸ್ಮರಣೀಯ’ ಎಂದು ಸಾಹಿತಿ ಭಗತರಾಜ ನಿಜಾಮಕಾರಿ ಹೇಳಿದರು.

‘ಜಂಬಣ್ಣರ ಕಾವ್ಯ, ಕಥೆ, ಕಾದಂಬರಿಗಳಲ್ಲಿ ಜನಪರ ಕಾಳಜಿ ಇದೆ. ಮೌನ ಬಂಡಾಯ, ಹಿಮಜ್ವಾಲೆ ವ್ಯಕ್ತಿತ್ವ ಹೊಂದಿದ್ದ ಅವರಲ್ಲಿ ತೋರಿಕೆ, ವೈಭವೀಕರಣ ಇರಲಿಲ್ಲ. ತೆಲುಗು ಕವಿಗಳಾದ ಶ್ರೀ ಶ್ರೀ ಶ್ರೀ ಮತ್ತು ಚರಬಂಡರಾಜು ಅವರಿಂದ ಸಾಕಷ್ಟು ಪ್ರಭಾವಿತರಾದ ಅವರಲ್ಲಿ ಆದಮ್ಯ ಕಾವ್ಯಾಸಕ್ತಿ ಇತ್ತು. ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಿಡಿದೆದ್ದವರಲ್ಲಿ ಜಂಬಣ್ಣ, ಚನ್ನಣ್ಣವಾಲಿಕಾರ, ಬೋಳಬಂಡೆಪ್ಪ ಪ್ರಮುಖರು. ನಂತರ ಪರ್ಯಾಯವಾಗಿ ಅವರು ಬಂಡಾಯ ಸಾಹಿತ್ಯ ಸಮ್ಮೇಳನವನ್ನೆ ನಡೆಸಿದರು’ ಎಂದು ಸಾಹಿತಿ ಅಯ್ಯಪ್ಪಯ್ಯ ಹೂಡಾ ಹೇಳಿದರು.
 
‘ನೋವಿಗೆ ಕೊನೆಯಿಲ್ಲ’

‘ಜಂಬಣ್ಣ ಅಮರಚಿಂತರು ಮಾನವ ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದವರು.  ಒಂದೇ ಮಾತಿನಲ್ಲಿ ಹೇಳುವುದಾದರೆ ಜಂಬಣ್ಣ ಇನ್ನಿಲ್ಲ; ನೋವಿಗೆ ಕೊನೆಯಿಲ್ಲ. ಜಂಬಣ್ಣ ತಮ್ಮ ಕಾವ್ಯದಲ್ಲಿ ಕೊರಳಿನ ಜಾಗದಲ್ಲಿ ಕರುಳನ್ನಿಟ್ಟವರು. ಚಳವಳಿಯಲ್ಲಿದ್ದು ಕಾವ್ಯವನ್ನು ಘೋಷವಾಕ್ಯವಾಗದಂತೆ ಬರೆದ ಮೆಲುದನಿ ಕವಿ. ಜಂಬಣ್ಣ, ನಿರಂತರವಾಗಿ ಪ್ರಯೋಗಕ್ಕೆ ತೆರೆದುಕೊಂಡವರು. ಹೊಸ ಸಾಮಾಜಿಕ ಆಯಾಮ ನೀಡಿದ ಗಟ್ಟಿ ಬರಹ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
 
ಸಂದ ಗೌರವ: 
- 1997ರಲ್ಲಿ ರಾಯಚೂರು ಜಿಲ್ಲಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
- 1999ರಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಆಕಾವಾಣಿಯ ಅಖಿಲ ಭಾರತ ಮಟ್ಟದ ಕವಿ ಸಮ್ಮೇಳನದಲ್ಲಿ ರಾಜ್ಯದ ಪ್ರತಿನಿಧಿ
- 2009ರಲ್ಲಿ ಚೆನ್ನೈನಲ್ಲಿ ನಡೆದ ಬಹುಭಾಷ ಕವಿಗೋಷ್ಠಿಯಲ್ಲಿ ರಾಜ್ಯದ ಪ್ರತಿನಿಧಿ
- ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ
- ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ
- ಅಮರಚಿಂತರ ಕಾವ್ಯ, ಗಜಲ್‌, ಕಾದಂಬರಿ ಗುಲಬರ್ಗಾ, ಧಾರವಾಡದ ಕರ್ನಾಟಕ, ಮೈಸೂರು, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವ ವಿದ್ಯಾಲಯಗಳ ಪಠ್ಯವಾಗಿತ್ತು.
 
* 80ರ ದಶಕದಲ್ಲಿ ದಲಿತ ಚಳವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಬೋಳಬಂಡೆಪ್ಪ, ಚನ್ನಣ್ಣ ವಾಲಿಕರ, ಜಂಬಣ್ಣ ಪ್ರಮುಖರು. ಜಂಬಣ್ಣ ಕಾವ್ಯದಿಂದ ಸ್ಮರಣೀಯರು.
ಅಂಬಣ್ಣ ಅರೋಲಿ, ಹೋರಾಟಗಾರ
 
* ಅಗಸರಾಗಿ ಹುಟ್ಟಿ ಆಗಸದ ಎತ್ತರಕ್ಕೆ ಬೆಳೆದವರು ಜಂಬಣ್ಣ, ದಲಿತರಲ್ಲದಿದ್ದರೂ ದಮನಿತ ವರ್ಗದ ಚಳವಳಿ ಕಟ್ಟಿ ಬೆಳೆಸಿದ ಧೀಮಂತ.
ಕೋರೆನಲ್‌, ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT