ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಹಬ್ಬಕ್ಕೆ ಕಳೆಗಟ್ಟಿದ ಮಿಡಿಗೇಶಿ

ಇಂದಿನಿಂದ ಮಧುಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಮೂರು ಸಾವಿರ ಆಸನ ವ್ಯವಸ್ಥೆ
Last Updated 15 ಫೆಬ್ರುವರಿ 2017, 10:28 IST
ಅಕ್ಷರ ಗಾತ್ರ
ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. 
 
ಸಮ್ಮೇಳನಕ್ಕೆ ಸುಮಾರು 3 ಸಾವಿರ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದ್ದು ವಿಶಾಲವಾದ ಪೆಂಡಾಲ್, ಬೃಹತ್ ವೇದಿಕೆ ಹಾಗೂ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗ್ರಾಮದಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಾರಾಜಿಸುತ್ತಿವೆ. 
 
ಊಟದ ವ್ಯವಸ್ಥೆ: ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಲಾಡು, ಜಿಲೇಬಿ, ಬಾದುಷ, ತರಕಾರಿ ಬೋಂಡಾ, ಮಂಗಳೂರುಬಜ್ಜಿ, ಬಿಸಿಬೇಳೆಬಾತ್, ಮೊಸರನ್ನ, ಶುದ್ಧ ಕುಡಿಯುವ ನೀರು, ಮಜ್ಜಿಗೆ ಸಾಹಿತ್ಯಾಸಕ್ತರಿಗೆ ವಿತರಿಸಲಾಗುವುದು. ಸಮ್ಮೇಳನಕ್ಕೆ ಬರುವವರಿಗೆ ಮಧುಗಿರಿಯಿಂದ ಉಚಿತ ಬಸ್ಸಿನ ಸೌಕರ್ಯ ಕಲ್ಪಿಸಲಾಗಿದೆ. 
 
ಒಒಡಿ ಸೌಲಭ್ಯ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗಿದ್ದು, ಶಾಲೆಯಲ್ಲಿ ಒಬ್ಬರು ಶಿಕ್ಷಕರು ಕಡ್ಡಾಯವಾಗಿ ಹಾಜರಿದ್ದು, ರುಬೆಲ್ಲಾ ಮತ್ತು ದಡಾರ ಚುಚ್ಚು ಮದ್ದು ಹಾಕಿಸುವುದು ಮತ್ತು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ  ಕ್ಷೇತ್ರ ಶಿಕ್ಷಣ ಅಧಿಕಾರಿ ಎಂ.ವಿ.ರಾಜಣ್ಣ ತಿಳಿಸಿದ್ದಾರೆ. 
 
ತಾಲ್ಲೂಕು ಘಟಕದ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ರಾಮಚಂದ್ರಪ್ಪ, ಖಜಾಂಚಿ ರಂಗರಾಜು, ಹೋಬಳಿ ಘಟಕದ ಅಧ್ಯಕ್ಷ ಹನುಮಂತ ರೆಡ್ಡಿ, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಗ್ರಾ.ಪಂ ಉಪಾಧ್ಯಕ್ಷ ಎಸ್.ಎನ್.ರಾಜು, ಪಿಡಿಒ ಗೌಡಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾ.ಮಹಾಲಿಂಗೇಶ್, ಎಪಿಎಂಸಿ ಸದಸ್ಯ ಡಿ.ಶ್ರೀನಿವಾಸ್, ವಕೀಲ ಎಚ್.ವಿ.ಮಂಜುನಾಥ್, ನಿಜಲಿಂಗಪ್ಪ, ವಿನೀಪ್ ರೆಡ್ಡಿ ಇತರರು ಉಪಸ್ಥಿತರಿದ್ದರು.
 
ಸಾಹಿತ್ಯ ಸಮ್ಮೇಳನದ ಹೈಲೈಟ್ಸ್: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಫೆ.15 ಮತ್ತು 16ರಂದು ತಾಲ್ಲೂಕಿನ ಮಿಡಿಗೇಶಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಫೆ.15 ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಾರ್ಯಕ್ರಮವನ್ನು ಜಿ.ಪಂ ಸದಸ್ಯೆ ಸಶಾಂತಲಾ ಉದ್ಘಾಟಿಸುವರು, ಪುಸ್ತಕ ಮಳಿಗೆ ಡಿಡಿಪಿಐ ಕೆ.ಜಿ.ರಾಜೇಂದ್ರ, ಸಮ್ಮೇಳನದ ಸಮಾರಂಭ ಸಾಹಿತಿ ಪ್ರಧಾನ್ ಗುರುದತ್ ಉದ್ಘಾಟಿಸುವರು. 
 
ಸಮ್ಮೇಳನದ ಅಧ್ಯಕ್ಷ ಕೇಶವರೆಡ್ಡಿ ಹಂದ್ರಾಳ, ಅಧ್ಯಕ್ಷತೆ ಶಾಸಕ ಕೆ.ಎನ್.ರಾಜಣ್ಣ, ಗಿರಿದನಿ ನೆನಪಿನ ಸಂಚಿಕೆಯನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಬಿಡುಗಡೆಗೊಳಿಸುವರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ       ಪ್ರಾಸ್ತಾವಿಕ ನುಡಿ, 5ನೇ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರ ಎಂ.ಡಿ.ಶ್ರೀನಿವಾಸ್ ನುಡಿ, ಮುಖ್ಯ ಅತಿಥಿಗಳಾಗಿ ಕೊರಟಗೆರೆ ಕ್ಷೇತ್ರದ ಶಾಸಕ ಪಿ.ಆರ್.ಸುಧಾಕರ್‌ಲಾಲ್‌, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾರಾಮ್‌, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಕಸಪಾ ಜಿಲ್ಲಾ ಅಧ್ಯಕ್ಷೆ ಬಾ.ಹ.ರಮಾಕುಮರಿ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಇತರರು ಭಾಗವಹಿಸುವರು. 
 
ಮಧ್ಯಾಹ್ನ 1 ಗಂಟೆಗೆ ಗೋಷ್ಠಿ-1 ಧೈರ್ಯ ಸ್ತ್ರಿ, ಗೋಷ್ಠಿ-2 ಭಾಷೆ, ಸಂಸ್ಕೃತಿ ಮತ್ತು ಮಾಧ್ಯಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ರಾಷ್ಟ್ರ ವೀರ ಎಚ್ಚಮನಾಯಕ ನಾಟಕ, ಫೆ.16ರಂದು ಬೆಳಿಗ್ಗೆ ಗೋಷ್ಠಿ-3 ಸಾಹಿತ್ಯ ಸಂಗಮ, ಮಧ್ಯಾಹ್ನ 1 ಗಂಟೆಗೆ ಗೋಷ್ಠಿ-4 ಕವಿ ಗೋಷ್ಠಿ, 3 ಗಂಟೆಗೆ ಸನ್ಮಾನ ಸಮಾರಂಭ, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಂಜೆ ರಂಗ ಗೀತೆಗಳ ಗಾಯನ, ಭರತನಾಟ್ಯ ಹಾಗೂ ಕಾಮಿಡಿ ಕುರುಕ್ಷೇತ್ರ ನಾಟಕಗಳನ್ನು ಆಯೋಜಿಸಲಾಗಿದೆ. 
 
ಸಮ್ಮೇಳನಾಧ್ಯಕ್ಷ ಹಂದ್ರಾಳ ಪರಿಚಯ

ಮಧುಗಿರಿ ತಾಲ್ಲೂಕಿನ ಹಂದ್ರಾಳು ಗ್ರಾಮದ ಸಂಜೀವರೆಡ್ಡಿ, ವೆಂಕಟಮ್ಮ ದಂಪತಿ ಪುತ್ರನಾಗಿ 1958ರ ಜುಲೈ 22ರಂದು ಕೇಶವ ರೆಡ್ಡಿ ಹಂದ್ರಾಳ ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನು ಹಂದ್ರಾಳು ಮತ್ತು ಬ್ಯಾಲ್ಯ ಗ್ರಾಮಗಳಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಬೆಂಗಳೂರಿನಲ್ಲಿ ಆರಂಭಿಸಿ ನಂತರ ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದು 1984ರಿಂದ 6 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 1991ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿ ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

500ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಕೆಲವು ಕಥೆಗಳು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಹಿಂದಿ ಡೌನ್ ಚಳವಳಿಯಿಂದ ಗೋಕಾಕ್ ಚಳವಳಿವರೆಗೂ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ.

2002ರಲ್ಲಿ ಯುದ್ಧ ಮತ್ತು ಸ್ವಾತಂತ್ರ್ಯ ಸಿನೆಮಾದ ಕಥೆ ಮತ್ತು ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ದೊರೆತಿದೆ. ಹಲವು ಧಾರವಾಹಿಗಳು, ಪ್ರಬಂಧಗಳಿಗೂ ಪ್ರಶಸ್ತಿ ಪಡೆದಿದ್ದು, ಗಾಂಧಿ ಕಥೆಗೆ ಮಾಸ್ತಿ ಕಥಾ ಪುರಸ್ಕಾರ, ಮೋಡ ಕರಗುವ ಮುನ್ನ ಸಂಕಲನಕ್ಕೆ ಪುಸ್ತಕ ಸೊಗಸು ಬಹುಮಾನ, ಒಂದು ಹಿಡಿ ಮಣ್ಣು ಕಥಾ ಸಂಕಲನಕ್ಕೆ 2005ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಕ್ಕಲ ವನಪು ಸಂಕಲನಕ್ಕೆ 2006ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರೆತ ಭಾರತಕ್ಕೆ 2015ರ ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT