ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ ಈಡೇರದ ಚಿನ್ನಮ್ಮ ಸೆರೆಮನೆಯತ್ತ

ಅಕ್ರಮ ಆಸ್ತಿ ಗಳಿಕೆ ಸಾಬೀತು l ಅಧೀನ ನ್ಯಾಯಾಧೀಶ ಕುನ್ಹ ತೀರ್ಪು ಎತ್ತಿ ಹಿಡಿದ ‘ಸುಪ್ರೀಂ’ l ಜಯಲಲಿತಾ ಮನೆಯೇ ಅಕ್ರಮದ ಕೇಂದ್ರ
Last Updated 15 ಫೆಬ್ರುವರಿ 2017, 11:23 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿಯಾಗುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಆಕಾಂಕ್ಷೆಯನ್ನು ಸುಪ್ರೀಂ ಕೋರ್ಟ್‌ ನುಚ್ಚುನೂರಾಗಿಸಿದೆ.

ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ ಮತ್ತು ಅವರ ಸಂಬಂಧಿಕರಾದ  ವಿ.ಎನ್‌ ಸುಧಾಕರನ್‌, ಇಳವರಸಿ ಅವರನ್ನು ಖುಲಾಸೆಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯ 2014ರ ಸೆಪ್ಟೆಂಬರ್‌ 27ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ಎಲ್ಲ ನಾಲ್ವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮೂವರು ಅಪರಾಧಿಗಳು ತಲಾ ₹10 ಕೋಟಿ ದಂಡ ಪಾವತಿಸಬೇಕು ಮತ್ತು ಅವರು ಆರಂಭಿಸಿರುವ ಆರು ವಾಣಿಜ್ಯ ಸಂಸ್ಥೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್‌ ಮತ್ತು ಅಮಿತಾವ ರಾಯ್‌ ಅವರ ಪೀಠ ಅದನ್ನೂ ಎತ್ತಿ ಹಿಡಿದಿದೆ.

ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆಯಾಗಿ ಆಯ್ಕೆಯಾದ ನಂತರ ಶಶಿಕಲಾ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಇದು ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರ ಬಂಡಾಯಕ್ಕೂ ಕಾರಣವಾಯಿತು.

ಜನಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಮುಂದಿನ ಹತ್ತು ವರ್ಷ  ಶಶಿಕಲಾ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಕಾನೂನು ಪ್ರಕಾರ ಶಿಕ್ಷೆ ಮುಗಿದ ನಂತರ ಅವರು ಆರು ವರ್ಷ ಸ್ಪರ್ಧಿಸುವುದಕ್ಕೆ ಅವಕಾಶ ಇರುವುದಿಲ್ಲ.

ಹೈಕೋರ್ಟ್‌ ಗ್ರಹಿಕೆ ತಪ್ಪು: ಸಾಕ್ಷ್ಯಗಳನ್ನು ಹೈಕೋರ್ಟ್‌ ಸಂಪೂರ್ಣ ತಪ್ಪಾಗಿ ಗ್ರಹಿಸಿದೆ. ಅಕ್ರಮ ಆಸ್ತಿಯ ಪ್ರಮಾಣದ ಲೆಕ್ಕವನ್ನೂ ತಪ್ಪಾಗಿ ಮಾಡಿದ್ದು ಇನ್ನಷ್ಟು ತಪ್ಪು ಗ್ರಹಿಕೆಗೆ ಕಾರಣವಾಯಿತು ಎಂದು ಸುಪ್ರೀಂ ಕೋರ್ಟ್  ಹೇಳಿದೆ. ಪ್ರಕರಣ ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದ ಕರ್ನಾಟಕ ಹೈಕೋರ್ಟ್‌, 2015ರ ಮೇ 11ರಂದು ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿತ್ತು.

ನಾಲ್ವರು ಆರೋಪಿಗಳು ಗಳಿಸಿದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಪ್ರಮಾಣ ಶೇ 8.12ರಷ್ಟು ಮಾತ್ರ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಆದರೆ ಈ ಲೆಕ್ಕಾಚಾರವೇ ತಪ್ಪು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಿ.ಎಂ  ಗಾದಿಗೆ ಕುತ್ತಾದ ಭ್ರಷ್ಟಾಚಾರ: ಜಯಲಲಿತಾ ಅವರು ಕಳೆದ ಡಿ. 5ರಂದು ನಿಧನರಾದ ನಂತರ ಅವರ ವಿರುದ್ಧದ ವಿಚಾರಣೆಯನ್ನು ಸ್ಥಗಿತಗೊಳಿಸಲಾಯಿತು.

2014ರಲ್ಲಿ ವಿಚಾರಣಾ ನ್ಯಾಯಾಲಯವು ಜಯಲಲಿತಾ ಅಪರಾಧಿ ಎಂದು ಆದೇಶ ನೀಡಿತು. ಹೀಗಾಗಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಈಗ ಅದೇ ಪ್ರಕರಣ ಶಶಿಕಲಾ ಅವರ ಮುಖ್ಯಮಂತ್ರಿ ಹುದ್ದೆಯ ಕನಸನ್ನು ಭಗ್ನಗೊಳಿಸಿದೆ. ಕಾಂಪೌಂಡರ್‌ ಒಬ್ಬರ ಮಗಳಾಗಿರುವ ಶಶಿಕಲಾ 1988ರಿಂದಲೂ ಜಯಲಲಿತಾ ಜತೆ ವಾಸವಿದ್ದರು.

ಈ ಕಾಯ್ದೆಗಳಡಿ ಶಶಿಕಲಾ ತಪ್ಪಿತಸ್ಥೆ

- ಐಪಿಸಿ ಸೆಕ್ಷನ್ 109:  ಅಪರಾಧಕ್ಕೆ ಕುಮ್ಮಕ್ಕು
- ಐಪಿಸಿ ಸೆಕ್ಸನ್ 120–ಬಿ: ಅಪರಾಧಕ್ಕೆ ಸಂಚು
- ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13 (1) (ಇ): ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ, ತಾನು ಸೇವೆಯಲ್ಲಿ ಇದ್ದ ಅವಧಿಯಲ್ಲಿ ತನ್ನ ಘೋಷಿತ ಆದಾಯಕ್ಕಿಂತ ಹೆಚ್ಚು ಹಣ ಅಥವಾ ಇತರ ಸ್ವತ್ತುಗಳನ್ನು ಗಳಿಸುವಂತಿಲ್ಲ. ಇಂತಹ ಆಸ್ತಿ ಗಳಿಕೆ ಸಂಚಿನಲ್ಲಿ ಸೇವೆಯಲ್ಲಿರುವ ವ್ಯಕ್ತಿಯ ಪರವಾಗಿ ಮತ್ತೊಬ್ಬ ವ್ಯಕ್ತಿಯೂ ಭಾಗಿಯಾಗಿರುವಂತಿಲ್ಲ.
- ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13 (2): ಸೇವಾ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗೆ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದಂತೆ  ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಜತೆಗೆ ದಂಡ ವಿಧಿಸಲೂ ಅವಕಾಶವಿದೆ.

ಪಳನಿ ಆಯ್ಕೆ, ಪನ್ನೀರ್‌ ಉಚ್ಚಾಟನೆ

ಚೆನ್ನೈ:ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್‌ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳ ನಂತರ ಸಭೆ ಸೇರಿದ ಎಐಎಡಿಎಂಕೆ, ಲೋಕೋಪಯೋಗಿ ಸಚಿವ ಈಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ.

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಪಳನಿಸ್ವಾಮಿ ಅವರು ರಾಜ್ಯಪಾಲ ವಿದ್ಯಾಸಾಗರ್‌ ರಾವ್ ಅವರಲ್ಲಿ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸಬೇಕಿದೆ.

ಎಐಎಡಿಎಂಕೆ ಶಾಸಕರು ಬೀಡುಬಿಟ್ಟಿದ್ದ ರೆಸಾರ್ಟ್‌ನಲ್ಲಿ ಶಶಿಕಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯು, ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿತು. ಕಳೆದ ವಾರವಷ್ಟೇ ಸಭೆ ಸೇರಿದ್ದ ಎಐಎಡಿಎಂಕೆ ಶಾಸಕರು, ಶಶಿಕಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು.

ರೆಸಾರ್ಟ್‌ನಲ್ಲಿ ಶಾಸಕರ ಜೊತೆ ಇದ್ದ ಶಶಿಕಲಾ ಅವರು ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸುವ ಆದೇಶ ಹೊರಡಿಸಿದರು. ಅಲ್ಲದೆ, ಪನ್ನೀರ್‌ಸೆಲ್ವಂ ಅವರಿಗೆ ಬೆಂಬಲ ನೀಡಿರುವ 19 ಜನ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳನ್ನೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಅಡಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು.

ರಾಜ್ಯಪಾಲರನ್ನು ಮಂಗಳವಾರ ಸಂಜೆ ಭೇಟಿ ಮಾಡಿದ ಪಳನಿಸ್ವಾಮಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಪಳನಿಸ್ವಾಮಿ ಅವರಿಗೆ ಬೆಂಬಲ ಸೂಚಿಸುವ ಪತ್ರಕ್ಕೆ ಎಷ್ಟು ಜನ ಸಹಿ ಮಾಡಿದ್ದಾರೆ ಎಂಬ ಬಗ್ಗೆ ಪಕ್ಷ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ 120 ಶಾಸಕರು ಪಳನಿಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಹೇಳಿದ್ದು

- ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಪರಾಧಗಳ ಪಿತೂರಿ, ಅಕ್ರಮಗಳ ಕೇಂದ್ರ ವಾಗಿತ್ತು
- ಜಯಲಲಿತಾ ಅವರು ಮುಖ್ಯಮಂತ್ರಿ  ಆಗಿದ್ದಾಗ 1992ರಲ್ಲಿ ಅವರ ಹುಟ್ಟುಹಬ್ಬದ ದಿನ ಉಡುಗೊರೆ ರೂಪದಲ್ಲಿ ಬಂದ ನಗದು, ಹಣ, ಆಭರಣ, ಸೀರೆ ಮತ್ತು ಫೋಟೊ ಫ್ರೇಂಗಳನ್ನು ಅವರ ಆದಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ
-  1991ರಿಂದ 1995ರ ಅವಧಿಯಲ್ಲಿ ಜಯಲಲಿತಾ ಮತ್ತು ವಿ.ಕೆ. ಶಶಿಕಲಾ ಹೆಸರಿನಲ್ಲಿ ತೆಗೆಯಲಾದ 50 ಬ್ಯಾಂಕ್‌ ಖಾತೆಗಳನ್ನು ಅಘೋಷಿತ ಹಣದ ವರ್ಗಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ
- ಆರು ಷೆಲ್‌ ಕಂಪೆನಿಗಳ ಹೆಸರಿನಲ್ಲಿ ಖರೀದಿಸಲಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೆಳ ನ್ಯಾಯಾಲಯ ನೀಡಿರುವ ಆದೇಶವನ್ನು ತಡೆಹಿಡಿಯಲು ಸಾಧ್ಯವಿಲ್ಲ
- ಸಂಪತ್ತಿನ ಬಗೆಗಿನ ದುರಾಸೆಯ ಪ್ರತೀಕವಾದ ಭ್ರಷ್ಟಾಚಾರವು, ಅಪ್ರಾಮಾಣಿಕರಿಗೆ ಕೆಟ್ಟ ಅವಕಾಶಒಂದನ್ನು ಒದಗಿಸುತ್ತದೆ. ಇದರಿಂದ ಉಳ್ಳವರು ಮತ್ತು ಇಲ್ಲದವರ ನಡುವಣ ಅಂತರವನ್ನು ಹೆಚ್ಚಿಸುತ್ತದೆ
- ಜಯಾಲಲಿತಾ ಅವರ ಆಸ್ತಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಶಶಿಕಲಾ ಮತ್ತು ಇತರರು ಪೋಯಸ್‌ ಗಾರ್ಡನ್‌ ನಿವಾಸದಲ್ಲಿ (ಜಯಾ ಮನೆ) ಇದ್ದರೇ ಹೊರತು,  ಪ್ರೀತಿಯಿಂದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT