ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢರ ಮಹಾರಥೋತ್ಸವ 25ಕ್ಕೆ

ದೇಣಿಗೆ ನೀಡುವವರು ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕವೂ ಹಣ ಸಂದಾಯ ಮಾಡಲು ವ್ಯವಸ್ಥೆ
Last Updated 15 ಫೆಬ್ರುವರಿ 2017, 12:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಲ್ಲಿನ ಸದ್ಗುರು ಸಿದ್ಧಾರೂಢರ ರಥೋತ್ಸವವು ಇದೇ 25ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಶ್ರೀ ಸಿದ್ಧಾರೂಢ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಧರಣೇಂದ್ರ ಭ. ಜವಳಿ ತಿಳಿಸಿದರು.

ಶ್ರೀಮಠದ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಬರಗಾಲವಿದೆ. ಆದರೂ, ಸಿದ್ಧಾರೂಢರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಬರಗಾಲದಿಂದ ಜನರನ್ನು ಪಾರು ಮಾಡುವಂತೆ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಗುವುದು’ ಎಂದರು.

ಇದೇ 19ರಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿದ್ದು, 27ರವರೆಗೂ ಮುಂದುವರಿಯಲಿವೆ. 19ರಿಂದ 24ರವರೆಗೆ ಪ್ರತಿ ದಿನ ರಾತ್ರಿ 8ಕ್ಕೆ ರಾಜ್ಯದ ಹಾಗೂ ಹೊರರಾಜ್ಯಗಳ ಸಂಗೀತಗಾರರಿಂದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. 24ರಂದು ಶ್ರೀಗಳವರ ಪಾಲಕಿಯು ವಾದ್ಯ ಮೇಳದೊಂದಿಗೆ ನಗರದಲ್ಲಿ ಸಂಚರಿಸಿ ರಾತ್ರಿ ಮಠಕ್ಕೆ ಬರಲಿದೆ. ಅಂದು ಅಹೋರಾತ್ರಿ ಜಾಗರಣೆ ನಡೆಯಲಿದೆ.

25ರಂದು ಪಾಲಕಿಯು ಊರೊಳಗೆ ಹೋಗಿ ಬಂದ ನಂತರ ಸಂಜೆ ರಥೋತ್ಸವ ಜರುಗುವುದು. ಶ್ರೀಮಠದಲ್ಲಿ ನಡೆಯುವ ಕೌದಿಪೂಜೆಯು ವಿಶೇಷವಾಗಿದ್ದು, ಯಾವುದೇ ಆಡಂಬರವಿಲ್ಲದೇ ಅಲಂಕಾರಕ್ಕೆ ಕೌದಿ, ಪ್ರಸಾದಕ್ಕೆ ಮಣ್ಣಿನ ಪಾತ್ರೆ, ನೀರಿಗಾಗಿ ಮಣ್ಣಿನ ಮಡಕೆ ಸಾಕು ಎಂದು ಸಿದ್ಧಾರೂಢರು ಬಯಸಿದ್ದರು. ಹಾಗಾಗಿ 27ರಂದು ಸಂಜೆ 6ಕ್ಕೆ ಕೌದಿಪೂಜೆ ನಡೆಯಲಿದೆ ಎಂದು ವಿವರಿಸಿದರು.

ದಕ್ಷಿಣೆ ನೀಡಲು ಪಿಒಎಸ್‌ ಯಂತ್ರ: ಭಾರಿ ಮುಖಬೆಲೆಯ ನೋಟುಗಳು ರದ್ದುಗೊಂಡ ಬಳಿಕ ಸಿದ್ಧಾರೂಢ ಮಠದ ಆಡಳಿತ ಮಂಡಳಿಯು ವಿವಿಧ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ನಿರ್ಧರಿಸಿದೆ. ಈಗಾಗಲೇ ಪಿಒಎಸ್‌ (ಪಾಯಿಂಟ್‌್ ಆಫ್‌ ಸೇಲ್‌) ಮಷಿನ್‌ಗೆ ಬೇಡಿಕೆ ಇಡಲಾಗಿದ್ದು, ಒಂದು ವಾರದಲ್ಲಿ ಯಂತ್ರ ಬರಲಿದೆ. ಆ ಬಳಿಕ ಭಕ್ತರು ದಕ್ಷಿಣೆ ಹಾಗೂ ವಿವಿಧ ಬಗೆಯ ಸೇವೆಗಳಿಗೆ ಹಣವನ್ನು ತಮ್ಮ ಡೆಬಿಟ್‌ ಹಾಗೂ ಕ್ರೆಡಿಟ್ ಕಾರ್ಡ್‌ ಮೂಲಕವೇ ಪಾವತಿಸಬಹುದು. ಕೊಠಡಿಗಳನ್ನೂ ಆನ್‌ಲೈನ್‌ ಮೂಲಕವೇ ಕಾಯ್ದಿರಿಸಬಹುದು ಎಂದು ಜವಳಿ ಹೇಳಿದರು.

ಇದಕ್ಕಾಗಿ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆಯನ್ನು ತೆರೆಯಲಾಗಿದ್ದು, ಎರಡು ಪಿಒಎಸ್‌ ಯಂತ್ರಗಳನ್ನು ಬಳಸಲಾಗುವುದು. ಇದರಿಂದ ಜನರು ನಗದಿನ ಬದಲು ಪ್ಲಾಸ್ಟಿಕ್‌ ಕಾರ್ಡ್‌ ಮೂಲಕವೇ ದೇಣಿಗೆ ಸಲ್ಲಿಸಬಹುದು ಎಂದರು.

ಟ್ರಸ್ಟ್‌ ಕಮಿಟಿ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ‘ಆನ್‌ಲೈನ್‌ ವ್ಯವಹಾರ ಸುಲಲಿತಗೊಳಿಸಲು ವಿಶೇಷ ಸಾಫ್ಟ್‌ವೇರ್‌ ರೂಪಿಸಲಾಗುತ್ತಿದೆ. ಸಿಬ್ಬಂದಿಗೆ ಕಂಪ್ಯೂಟರ್‌ ಬಳಕೆಯ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದು ಹೇಳಿದರು.


ಟ್ರಸ್ಟ್‌ ಕಮಿಟಿ ಉಪಾಧ್ಯಕ್ಷೆ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್‌.ಜಿ, ಟ್ರಸ್ಟಿಗಳಾದ ನಾರಾಯಣಪ್ರಸಾದ ಪಾಠಕ, ಬಸವರಾಜ ಕಲ್ಯಾಣಶೆಟ್ಟರ, ಶಿವರುದ್ರಪ್ಪ ಉಕ್ಕಲಿ, ಯಲ್ಲಪ್ಪ ದೊಡ್ಡಮನಿ, ಪರ್ವತಗೌಡ ಎಸ್‌. ಪಾಟೀಲ, ನಾರಾಯಣ ನಿರಂಜನ, ನಾರಾಯಣಸಾ ಟಿ. ಮೇಹರವಾಡೆ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT