ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಂತರ್ಜಲ, ಬತ್ತುತ್ತಿವೆ ಕೆರೆ–ಕಟ್ಟೆ

ಸತತ ಮೂರನೇ ವರ್ಷದಲ್ಲೂ ಬರದ ಪರಿಣಾಮ ಹೆಚ್ಚಿದ ಭೀಕರತೆ; ಜಿಲ್ಲೆಯ 1,400ಕ್ಕೂ ಹೆಚ್ಚು ಕೆರೆಗಳಿಲ್ಲ ನೀರಿಲ್ಲ
Last Updated 15 ಫೆಬ್ರುವರಿ 2017, 13:21 IST
ಅಕ್ಷರ ಗಾತ್ರ

ಹಾವೇರಿ: ಸತತ ಮೂರನೇ ವರ್ಷ ಕಾಡುತ್ತಿರುವ ಬರದ ಛಾಯೆಯು ದಿನೇ ದಿನೇ ಭೀಕರಗೊಳ್ಳುತ್ತಿದೆ. ಒಂದೆಡೆ ಬಿಸಿಲಿನ ತಾಪಮಾನವು ಈಗಾಗಲೇ 35 ಡಿಗ್ರಿ ಸೆಲ್ಸಿಯಸ್ ಸಮೀಪಿಸಿದರೆ, ಇತ್ತ ಅಂತರ್ಜಲ ದಿನೇ ದಿನೇ ಕುಸಿತಗೊಳ್ಳುತ್ತಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಹಾಹಾಕಾರ ಕ್ರಮೇಣ ಹೆಚ್ಚುತ್ತಿದೆ.

ಕೈಕೊಟ್ಟ ಮಳೆ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಸುಮಾರು 170.1 ಮಿ.ಮೀ ಮಳೆಯಾಗುತ್ತದೆ. 2015ರಲ್ಲಿ ಅನಿಯಂತ್ರಿತ ಮಳೆ ಸುರಿದಿದ್ದರೂ, ಈ ಅವಧಿಯಲ್ಲಿ ಒಟ್ಟಾರೆ 122.3 ಮಿ.ಮೀ ಮಳೆಯಾಗಿತ್ತು. ಆದರೆ, 2016ರಲ್ಲಿ ಕೇವಲ 24.87 ಮಿ.ಮೀ. ಮಳೆಯಾಗಿದೆ. ಈ ಹಿಂಗಾರಿನ ಅಕ್ಟೋಬರ್‌ 2016ರಿಂದ ಫೆಬ್ರುವರಿ 2017ರ ತನಕ ವಾಡಿಕೆಯ ಕೇವಲ ಶೇ 14.53 ಮಾತ್ರ ಮಳೆಯಾಗಿದೆ. ಅದೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ. ಉಳಿದೆಡೆ ಮಳೆಯ ಸುಳಿವೇ ಇಲ್ಲ. ಸವಣೂರು ತಾಲ್ಲೂಕಿನಲ್ಲಿ ಜಿಲ್ಲೆಯ ಗರಿಷ್ಠ ಶೇ 90ರಷ್ಟು ಹಾಗೂ ಬ್ಯಾಡಗಿಯಲ್ಲಿ ಕನಿಷ್ಠ ಶೇ 79ರಷ್ಟು ಮಳೆ ಕೊರತೆಯಾಗಿದೆ.

ಸಣ್ಣ ನೀರಾವರಿ ಇಲಾಖೆ ಅಧೀನದ ಒಟ್ಟು 263 ಕೆರೆಗಳ ಪೈಕಿ 207 ಕೆರೆಗಳು ಬತ್ತಿ ಹೋಗಿವೆ. ಕೇವಲ 3 ಕೆರೆಗಳಲ್ಲಿ ಮಾತ್ರ ಶೇ 50ಕ್ಕೂ ಹೆಚ್ಚು ನೀರಿದೆ. ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನದ 1153 ಕೆರೆಗಳ ಪೈಕಿ 1038 ಬತ್ತಿ ಹೋಗಿವೆ. ಸುಮಾರು 32ಕ್ಕೂ ಅಧಿಕ ಖಾಸಗಿ ಕೊಳವೆಬಾವಿಗಳಿಂದ  ಬಾಡಿಗೆ ಮೂಲಕ ನೀರು ಪಡೆದು ಜನರಿಗೆ ಪೂರೈಸುತ್ತಿದ್ದರೆ, ಸವಣೂರಿನ ಕಾರಡಗಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾರಡಗಿಗೆ ಪ್ರತಿನಿತ್ಯ 38 ಟ್ಯಾಂಕರ್ ಪೂರೈಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಬಿಡುವ ನೀರಿಗೆ ಮರಳಿನ ತಡೆಗೋಡೆ ನಿರ್ಮಿಸುವ ಮೂಲಕ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಮತ್ತು ಗುತ್ತಲ ಪಟ್ಟಣಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ವಾರಕ್ಕೊಮ್ಮೆ ನೀರು ಪೂರೈಕೆಯೇ ಕಷ್ಟ ಎನ್ನುತ್ತಾರೆ ಜನತೆ.

ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಕಾಡಿದ್ದು, ಭದ್ರಾ ಜಲಾಶಯದಿಂದ ಬಿಟ್ಟ ನೀರು ಸೋಮವಾರ ಹಾವೇರಿ ನಗರಕ್ಕೆ ನೀರು ಪೂರೈಸುವ ಕೆಂಚಾರಗಟ್ಟಿ ಜಾಕ್‌ವೆಲ್‌ಗೆ ತಲುಪಿದೆ. ಜಿಲ್ಲೆಯಲ್ಲಿ ಹಿಂಗಾರು ಅವಧಿಯ ಬರದಿಂದ ಉಂಟಾದ ಬೆಳೆ, ನೀರು ಮತ್ತಿತರ ನಷ್ಟವನ್ನು ಪರಿಹರಿಸಲು  ₹54.41 ಕೋಟಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ಸರ್ಕಾರವನ್ನು ಕೋರಿದ್ದಾರೆ. ಅಲ್ಲದೇ, ಈಗಾಗಲೇ ಸಹಾಯವಾಣಿಯನ್ನು ತೆರೆಯಲಾಗಿದೆ.

ದಿನೇ ದಿನೇ ಹೆಚ್ಚುತ್ತಿರುವ  ಅಂತರ್ಜಲ ಕುಸಿತ, ಬತ್ತುತ್ತಿರುವ ಕೊಳವೆ ಬಾವಿ ಹಾಗೂ ಕೆರೆಗಳು ಜನತೆಯಲ್ಲಿ ಅವಧಿಗೂ ಪೂರ್ವದಲ್ಲೇ ಆತಂಕ ಸೃಷ್ಟಿಸಿದೆ. ನೀರಿನ ಮಿತಬಳಕೆ ಹಾಗೂ ಸಂರಕ್ಷಣೆ ಜಾಗೃತಿ ಮೂಡಬೇಕಿದೆ.

* ನನ್ನ ಮನೆಯ ಕೊಳವೆ ಬಾವಿಯೇ ಬತ್ತಿ ಹೋಗಿದೆ. ಇನ್ನು ಟ್ಯಾಂಕರ್ ನೀರೇ ಗತಿ
ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ

‘ಹೆಚ್ಚುತ್ತಿರುವ ಭೀಕರತೆ’

‘ಸತತ ಮೂರನೇ ವರ್ಷ ‘ಬರ’ ಕಾಡುತ್ತಿರುವ ಕಾರಣ ಭೀಕರತೆ ಹೆಚ್ಚಿದೆ. ಮಣ್ಣಿನಲ್ಲಿನ ತೇವಾಂಶವೂ ಸಂಪೂರ್ಣ ಶುಷ್ಕಗೊಂಡಿದೆ. ಹೀಗಾಗಿ ಒಂದೆಡೆ ಕುಡಿಯುವ ನೀರಿನ ಸಮಸ್ಯೆಯಾದರೆ, ಇನ್ನೊಂದೆಡೆ ನೀರಾವರಿ ಪ್ರದೇಶದಲ್ಲೇ ಬೆಳೆ ಬರುತ್ತಿಲ್ಲ’ ಎನ್ನುತ್ತಾರೆ ಶಾಸಕ ಬಸವರಾಜ ಬೊಮ್ಮಾಯಿ.

‘ಮಣ್ಣಿನ ಮತ್ತು ವಾತಾವರ ಣದಲ್ಲಿನ ತೇವಾಂಶ ಹಾಗೂ ತಕ್ಕಮಟ್ಟಿಗೆ ನೀರು ಹಾಯಿಸುವ ಮೂಲಕ ಜಿಲ್ಲೆಯಲ್ಲಿ ಹಿಂಗಾರು ಬೆಳೆ ತೆಗೆಯುತ್ತಾರೆ. ಹಿಂಗಾರಿನಲ್ಲಿ ಸುರಿವ ಒಂದೆರಡು ಮಳೆಯ ತೇವಾಂಶದಲ್ಲೇ ಬೆಳೆ ತೆಗೆಯುವ ಸಾಮರ್ಥ್ಯವು ಇಲ್ಲಿನ ಮಣ್ಣಿನ ಲ್ಲಿದೆ. ಆದರೆ, ಈ ಬಾರಿ ಒಂದೆಡೆ ಮಳೆ ಇಲ್ಲ, ಇನ್ನೊಂದೆಡೆ ವಾತಾವರಣ ಶುಷ್ಕಗೊಳ್ಳು ತ್ತಿರುವುದು ಹಾಗೂ ನೀರಿನಾಂಶ ಇಲ್ಲದೇ ಭೂಮಿಯೂ ಬರಡಾಗುತ್ತಿರುವುದು ಈ ಬಾರಿ ಬರದ ಭೀಕರತೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT