ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ ಸಂಗ್ರಹದ ಹಾದಿ ಸ್ವರೂಪ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅದೊಂದು ಅಪರೂಪದ ಪ್ರದರ್ಶನ. ಅಲ್ಲಿ ಹೊಯ್ಸಳ, ಗಂಗ, ಚಾಲುಕ್ಯ ಸೇರಿದಂತೆ ಅನೇಕ ರಾಜವಂಶಸ್ಥರ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕ್ರಿಸ್ತಪೂರ್ವ ಕಾಲದ ನಾಣ್ಯಗಳು ಆ ಪ್ರದರ್ಶನದ ಅಂದವನ್ನು ಹೆಚ್ಚಿಸಿದ್ದವು.

ಕಲಾವಿದೆ ರುಕ್ಮಿಣಿ ವರ್ಮಾ ಅವರ ಚಿತ್ರಪ್ರದರ್ಶನ ನಡೆಯುತ್ತಿರುವ ‘ಗ್ಯಾಲರಿ– ಜಿ’ಯಲ್ಲಿಯೇ ಈ ನಾಣ್ಯಗಳ ಪ್ರದರ್ಶನವೂ ನಡೆಯುತ್ತಿದೆ.
ಕರ್ನಾಟಕ ನಾಣ್ಯಶಾಸ್ತ್ರ ಸಂಸ್ಥೆಯ ಸದಸ್ಯರಾಗಿರುವ ರಾಜೇಂದ್ರ ಮರೋ ಅವರು ಸಂಗ್ರಹಿಸಿದ ನಾಣ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. 

ರಾಜಸ್ಥಾನ ಮೂಲದ ರಾಜೇಂದ್ರ ಮರೋ ಅವರು 1966ರಿಂದ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಇದು ಅವರಿಗೆ ತಂದೆಯಿಂದ ಬಂದ ಬಳುವಳಿ. ಇದೀಗ ರಾಜೇಂದ್ರ ಅವರ ಮಗ ಆಚಿ ಮರೋ ಕೂಡ ನಾಣ್ಯ ಸಂಗ್ರಹದ ಹಾದಿಯಲ್ಲೇ ಮುನ್ನಡೆದಿದ್ದಾರೆ. ನಾಣ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಾಣ್ಯಶಾಸ್ತ್ರದಲ್ಲಿ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದು.

ನಾಣ್ಯ ಸಂಗ್ರಹ  ಮನಸ್ಸನ್ನು ನಿಗ್ರಹಿಸುವ ಒಂದು ಹವ್ಯಾಸ ಎಂದು ವ್ಯಾಖ್ಯಾನಿಸುವ ರಾಜೇಂದ್ರ ಅವರು ತಮ್ಮ ಹವ್ಯಾಸದ ಹಾದಿಯ ಬಗ್ಗೆ ಹೇಳುವುದು ಹೀಗೆ...

‘ನಮ್ಮ ಮನೆಯಲ್ಲಿ ಹಳೆಯ ಕಾಲದ ನಾಣ್ಯಗಳ ಸಂಗ್ರಹವಿತ್ತು. ಹಳೆಯ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ನಾಣ್ಯಗಳು ನನ್ನನ್ನು ಆಕರ್ಷಿಸಿದ್ದವು. ನಾಣ್ಯಗಳನ್ನು ಸಂಗ್ರಹಿಸುವ ಆಸಕ್ತಿಯು ಕ್ರಮೇಣ ನನ್ನ  ಉದ್ದಿಮೆಯ ಭಾಗವೂ ಆಯಿತು’.

ಭಾರತ ಮೂಲದ ನಾಣ್ಯಗಳಷ್ಟೇ ಸಂಗ್ರಹ ಮಾಡುತ್ತಿರುವ ಮರೋ ಕುಟುಂಬ ಆಗಾಗ್ಗೆ ನಾಣ್ಯಗಳ ಹರಾಜನ್ನೂ ನಡೆಸುತ್ತದೆ. ದಕ್ಷಿಣ ಭಾರತದಲ್ಲಿ ನಾಣ್ಯಗಳನ್ನು ಹರಾಜು ನಡೆಸುವ ಏಕೈಕ ಕುಟುಂಬ ಎಂಬ ಹೆಗ್ಗಳಿಕೆ ಮರೋ ಕುಟುಂಬದ್ದು.

ಬೆಂಗಳೂರಿನ ಬಗ್ಗೆ ರಾಜೇಂದ್ರ ಅವರಿಗೆ ಕೃತಜ್ಞತೆಯ ಭಾವ ಇದೆ. ‘ನಾನು ಬೆಂಗಳೂರಿಗೆ ವ್ಯಾಪಾರದ ಉದ್ದೇಶದಿಂದ ಬಂದವನಲ್ಲ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಬಂದವನು. ಬೆಂಗಳೂರಿನಲ್ಲಿ ನನ್ನ ಬದುಕು ಕಟ್ಟಿಕೊಂಡಿದ್ದೇನೆ’ ಎಂದು ನುಡಿಯುತ್ತಾರೆ. ರಾಜೇಂದ್ರ ಮರೋ ಸಂಗ್ರಹಿಸಿರುವ ನಾಣ್ಯಗಳ ಹರಾಜು ಫೆ.25ರಂದು ನಡೆಯಲಿದೆ. ಮಾಹಿತಿಗೆ ಮೊ– 9008490014 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT