ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯ್ತಿಗಳಿಂದ ₹4.24 ಕೋಟಿ ಕರ ಬಾಕಿ

ಚನ್ನಗಿರಿ ತಾ.ಪಂ. ಜಮಾಬಂದಿಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಸವನಗೌಡ
Last Updated 16 ಫೆಬ್ರುವರಿ 2017, 5:09 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯೊಳಗೆ 61 ಗ್ರಾಮ ಪಂಚಾಯ್ತಿಗಳಿದ್ದು, ಒಟ್ಟು ₹ 6.37 ಕೋಟಿ ಕರ ವಸೂಲಾತಿ ಆಗಬೇಕಾಗಿದೆ. ಇದುವರೆಗೆ ಕೇವಲ ₹ 2.13 ಕೋಟಿ ಕರ ವಸೂಲಾತಿಯಾಗಿದ್ದು, ಇನ್ನೂ ₹ 4.23 ಕೋಟಿ ಕರ ವಸೂಲು ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಬಸವನಗೌಡ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ 2015–16ನೇ ತಾಲ್ಲೂಕು ಪಂಚಾಯ್ತಿ ಜಮಾಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯ್ತಿಗಳ ಕರ ವಸೂಲಾತಿ ಪ್ರಕ್ರಿಯೆ ತೃಪ್ತಿಕರವಾಗಿರುವುದಿಲ್ಲ. ಶೇ 33ರಷ್ಟು ಮಾತ್ರ ವಸೂಲಾತಿ ನಡೆದಿದೆ. ಈ ರೀತಿ ವಸೂಲಾತಿ ನಡೆದರೆ ಗ್ರಾಮಗಳ ಅಭಿವೃದ್ಧಿಗೆ ಹಣ ಇಲ್ಲದಂತಾಗುತ್ತದೆ. ಮೊದಲು ಕರ ವಸೂಲಾತಿ ಮಾಡುವುದರ ಕಡೆಗೆ ಗಮನಹರಿಸಬೇಕು. 61 ಗ್ರಾಮ ಪಂಚಾಯ್ತಿಗಳಿದ್ದು, 202 ಚಾರಕ್ ಹಾಗೂ 47 ಬೇಚಾರಕ್ ಗ್ರಾಮಗಳು ಸೇರಿ ಒಟ್ಟು 249 ಕಂದಾಯ ಗ್ರಾಮಗಳನ್ನು ಹೊಂದಿದೆ.

ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆಗಾಗಿ ಗ್ರಾಮ ಪಂಚಾಯ್ತಿಗಳಲ್ಲಿ 464 ಕೊಳವೆಬಾವಿ ನೀರು ಸರಬರಾಜು, 267 ಕಿರು ನೀರು ಸರಬರಾಜು ಯೋಜನೆಗಳು ಹಾಗೂ 356 ಕೈ ಪಂಪ್‌ಗಳನ್ನು ಹಾಕಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮದ ಯೋಜನೆ ಅಡಿ ಬಡತನ ರೇಖೆಗಿಂತ ಕೆಳಗಿನ ಅರ್ಹ ಬಡ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ.ಎನ್. ಪುಷ್ಪಾವತಿ ಮಾತನಾಡಿ, ಗ್ರಾಮ ಪಂಚಾಯ್ತಿಗಳಲ್ಲಿನ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡುತ್ತಿಲ್ಲ. ಕೆಲ ಪಂಚಾಯ್ತಿಗಳು ಏಳೆಂಟು ತಿಂಗಳಾದರೂ ನೌಕರರ ವೇತನವನ್ನು ಪಾವತಿ ಮಾಡಿಲ್ಲ. ಇದರಿಂದ ಕರ ವಸೂಲಾತಿ ಶೇಕಡವಾರು ಪ್ರಮಾಣ ಕುಂಠಿತವಾಗಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಗೆ ತಾಲ್ಲೂಕು ಪಂಚಾಯ್ತಿ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಈ ಜನಪ್ರತಿನಿಧಿಗಳಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ವಸತಿ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಣೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಇಒ ಜಿ.ಎನ್. ಕುಮಾರ್, ಸದಸ್ಯರಾದ ಜಗದೀಶ್, ಗಾಯಿತ್ರಿಬಾಯಿ, ಸುಧಾ ಉಪಸ್ಥಿತರಿದ್ದರು.

ಚನ್ನಗಿರಿ ತಾಲ್ಲೂಕು ಅಂಕಿ ಅಂಶಗಳು

61 - ಗ್ರಾಮ ಪಂಚಾಯ್ತಿಗಳು

202 - ಚಾರಕ್ ಗ್ರಾಮಗಳು

42   - ಬೇಚಾರಕ್ ಗ್ರಾಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT