ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮಕೈಗೊಳ್ಳದೆ ಅನುಪಾಲನಾ ವರದಿ ಸಲ್ಲಿಕೆ

ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರ ಕಿಡಿ
Last Updated 16 ಫೆಬ್ರುವರಿ 2017, 6:18 IST
ಅಕ್ಷರ ಗಾತ್ರ
ಕಲಬುರ್ಗಿ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಅನುಪಾಲನಾ ವರದಿ ಸಲ್ಲಿಸುತ್ತಿದ್ದಾರೆ. ಪ್ರತಿ ಸಭೆಯಲ್ಲೂ ಹಳೇ ವಿಷಯವನ್ನೇ ಮಾತನಾಡುವುದಾದರೆ ಸಭೆ ಏಕೆ ನಡೆಸಬೇಕು ಎಂದು ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ಕಿಡಿಕಾರಿದರು.
 
ಬುಧವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಶಿವರಾಜ ಪಾಟೀಲ, ‘ಕೆಆರ್‌ಐಡಿಎಲ್‌ನಿಂದ ನಡೆದ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ವರದಿ ನೀಡುವಂತೆ ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು. ಇಲ್ಲಿಯವರೆಗೂ ಮಾಹಿತಿ ಕೊಟ್ಟಿಲ್ಲ. ಮಾಹಿತಿ ಮುಚ್ಚುಮರೆ ಮಾಡುತ್ತಿರುವುದನ್ನು ಗಮನಿಸಿದರೆ ಅದರಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಮಾಹಿತಿ ಕೊಡಬೇಕಾದ ಅಧಿಕಾರಿ ಸಭೆಗೆ ಬಂದಿಲ್ಲ. 
 
ಅಧಿಕಾರಿ ಬರೋವರೆಗೂ ನಾವ್‌ ಕತ್ತೆ ಕಾಯ್ಬೇಕಾ. ಜೇವರ್ಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಅವರಿಗೆ ವರ್ಗಾವಣೆಯಾಗಿದ್ದರೂ ಬಿಡುಗಡೆಯಾಗಿಲ್ಲ. ಸಭೆಗೂ ಬರುತ್ತಿಲ್ಲ. ಈ ಬಗ್ಗೆ ಸಿಇಒ ಅವರು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಏರುದನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
 
ರಾಮಲಿಂಗರೆಡ್ಡಿ ಮಾತನಾಡಿ, ಚಿಂಚೋಳಿ ತಾಲ್ಲೂಕು ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹಿಂದಿನ ಸಭೆಯಲ್ಲಿ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಕಟ್ಟಡ ತೆರವುಗೊಳಿಸುವುದಕ್ಕೆ ತಹಶೀಲ್ದಾರರು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದ್ದಾರೆ. ಆದರೆ ಕಾರ್ಯಗತವಾಗಿಲ್ಲ. ರಟಕಲ್‌ನಲ್ಲಿ ನಾಲಾದಲ್ಲೇ ಶಾಲಾ ಕಟ್ಟಡ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗುತ್ತಿದೆ. ಈ ಬಗ್ಗೆಯೂ ಯಾವ ಕ್ರಮಗಳಾಗಿಲ್ಲ 
ಎಂದು ದೂರಿದರು.
 
ಅನಸೂಯಾ ಶರಣಪ್ಪ ತಳವಾರ ಮಾತನಾಡಿ, ಚಿಂಚೋಳಿ ತಾಲ್ಲೂಕು ಸುಲೇಪೇಟದಲ್ಲಿ ನಿರ್ಮಿಸಿದ ವಸತಿ ನಿಲಯ ಕಟ್ಟಡವು ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಕೊಳ್ಳುವುದಕ್ಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ನೆಲೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲ. ವಸತಿ ನಿಲಯ ಮಾಡದಿದ್ದರೆ ಬೇರೆ ಉದ್ದೇಶಕ್ಕಾದರೂ ಸರ್ಕಾರ ಕಟ್ಟಡ ಬಳಸಬೇಕು ಎಂದು ಹೇಳಿದರು.
 
ಗೌತಮ್‌ ಪಾಟೀಲ ಮಾತನಾಡಿ, ಚಿಂಚೋಳಿ –ದೇಗಲಮಡಿ 5 ಕಿಲೋ ಮೀಟರ್‌ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ರಸ್ತೆ ಅಭಿವೃದ್ಧಿಗಾಗಿ ಒಬ್ಬರಿಗೆ ಗುತ್ತಿಗೆ ವಹಿಸಿದ್ದಾರೆ. ಆ ಕೆಲಸ ಇನ್ನೂ ಮುಗಿದಿಲ್ಲ. ಅದರ ನಿರ್ವಹಣೆಯನ್ನು ಇನ್ನೊಬ್ಬರಿಗೆ ಗುತ್ತಿಗೆ ನೀಡಲಾಗಿದ್ದು, ಒಂದೇ ರಸ್ತೆಯಲ್ಲಿ ಎರಡು ಕಡೆ ಕೆಲಸಗಳಾಗುತ್ತಿವೆ. ಆದರೂ ರಸ್ತೆ ಹಾಳಾಗುತ್ತಲೇ ಇದೆ ಎಂದು ತಿಳಿಸಿದರು.
 
ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರು, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವಾಣ್‌ ಸೇರಿದಂತೆ ಅನೇಕರು ಅನುಪಾಲನಾ ವರದಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಆಗ್ರಹಿಸಿದರು.
 
ಕ್ರಮಕ್ಕೆ ಆಗ್ರಹ: ಅಂಗನವಾಡಿಗಳನ್ನು ಬಂದ್‌ ಮಾಡಿಕೊಂಡು ಆಳಂದದಲ್ಲಿ ಈಚೆಗೆ ನಡೆದ ಸ್ತ್ರೀ ಶಕ್ತಿ ಸಮಾವೇಶಕ್ಕೆ ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಡಿಪಿಒ ವಿರುದ್ಧವೂ ಕ್ರಮವಾಗಬೇಕು. ಸಮಾವೇಶದ ಬಗ್ಗೆ ಆಕ್ಷೇಪವಿಲ್ಲ. ಆದರೆ ಅಂಗನವಾಡಿ ಬಂದ್‌ ಮಾಡಿದ್ದು ಸರಿಯಲ್ಲ ಎಂದು ಹರ್ಷಾನಂದ ಗುತ್ತೇದಾರ್‌ ಹೇಳಿದರು.
 
ಸಿದ್ರಾಮ ಪ್ಯಾಟಿ ಮಾತನಾಡಿ, ಸಾಮಾಜಿಕ ಹಿತದೃಷ್ಟಿಯಿಂದ ಮಹಿಳಾ ಜನಜಾಗೃತಿಗಾಗಿ ಸಮಾವೇಶ ಮಾಡಲಾಗಿದೆ. ಆಸಕ್ತಿ ಇದ್ದವರು ಬರುವಂತೆ ಶಾಸಕರು ಕೇಳಿಕೊಂಡಿದ್ದರು. ಆಸಕ್ತಿ ಇರುವ ಕೆಲವು ಸರ್ಕಾರಿ ಸಿಬ್ಬಂದಿಯೂ ಹಾಜರಾಗಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಕ್ರಮ ಕೈಗೊಂಡರೆ ಮಹಿಳಾ ವಿರೋಧಿ ಧೋರಣೆಯಾಗುತ್ತದೆ ಎಂದರು.
 
ಸಭೆಯಲ್ಲಿ ಇಬ್ಬರೂ ಏಕಕಾಲಕ್ಕೆ ಸಮಾವೇಶದ ಪರ–ವಿರೋಧವಾಗಿ ಮಾತನಾಡಿದ್ದರಿಂದ ಸಭೆಯಲ್ಲಿ ಸ್ವಲ್ಪ ಗೊಂದಲ ನಿರ್ಮಾಣವಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿ. ಸಿರಸಗಿ, ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್‌ ಇದ್ದರು.
 
ಉದ್ದಿನ ಬೇಳೆಯಲ್ಲಿ ಅಲಸಂದಿ ಬೇಳೆ ಮಿಶ್ರಣ!
 
ಅಂಗನವಾಡಿಗಳಿಗೆ ಎಂಎಸ್‌ಟಿಪಿಯಿಂದ ಪೂರೈಸುತ್ತಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಪರೀಕ್ಷಿಸಿ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಅಂಗನವಾಡಿಗಳಿಗೆ ದಿಢೀರ್‌ ಭೇಟಿ ಕೊಡುವುದಾಗಿ ಹೇಳಿದ್ದರು. ಆದರೆ ಇದ್ಯಾವುದು ಪಾಲನೆಯಾಗಿಲ್ಲ ಎಂದು ವಿಜಯಲಕ್ಷ್ಮಿ ರಾಗಿ ಆರೋಪಿಸಿದರು.

ಅಂಗನವಾಡಿಗಳಿಗೆ ಈಗಲೂ ಕಳಪೆ ಪದಾರ್ಥಗಳೇ ಬರುತ್ತಿವೆ. ಕಪ್ಪು ಬಣ್ಣದ ಬೆಲ್ಲವನ್ನು ಮಕ್ಕಳು ಹೇಗೆ ಸೇವಿಸುತ್ತಾರೆ? ಎಂಎಸ್‌ಟಿಪಿ ಅವರು ಉದ್ದಿನ ಬೇಳೆ ಎಂದು ಹೇಳಿದ್ದರಲ್ಲಿ ಅಲಸಂದೆ ಬೇಳೆಗಳು ಮಿಶ್ರಣವಾಗಿವೆ. ಅಪೌಷ್ಟಿಕ ಮಕ್ಕಳ ಕುರಿತು ಕೇಳಿದ ಮಾಹಿತಿಗೆ ಸಿಡಿಪಿಒ ಸ್ಪಂದಿಸುತ್ತಿಲ್ಲ. ಶೇಂಗಾ ಹುರಿದು ವಿತರಿಸುವ ನಿಯಮವಿದ್ದರೂ ಕಚ್ಚಾ ಶೇಂಗಾ ಕೊಡಲಾಗುತ್ತಿದೆ ಎಂದರು.

ಪ್ಯಾಕೇಟ್‌ಗಳಲ್ಲಿ ಸಂಗ್ರಹಿಸಿ ತಂದಿದ್ದ ಆಹಾರ ಪದಾರ್ಥಗಳನ್ನು ಸಿಇಒ ಅವರಿಗೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ರತ್ನವ್ವ ಕಲ್ಲೂರ, ‘ಅಂಗನವಾಡಿಗಳಲ್ಲಿ ತತ್ತಿ ಕೊಡ್ತಾರ್‌, ಹಾಲ್‌ ಕೊಡ್ತಾರ್‌ ಅಂಥ ಹೇಳ್ತಾರ. ಇಲ್ಲಿತನಕ ಏನೂ ಕೊಟ್ಟಿಲ್ಲ. ಕರೀ ಬೆಲ್ಲದ ಪುಡ್ಕಿ ಕೊಟ್ರ, ಮಕ್ಳ್‌ ಹೇಂಗ್‌ ತಿಂತಾವು’ ಎಂದು ತಮ್ಮದೇ ಧಾಟಿಯಲ್ಲಿ ಸಭೆಯ ಗಮನ ಸೆಳೆದರು.
 
ಗದ್ದಲ ಎಬ್ಬಿಸಿದ ತೊಗರಿ ಮಂಡಳಿ ಕಚೇರಿ
 
ಜಿಲ್ಲಾ ಪಂಚಾಯಿತಿ ನೂತನ ಕಟ್ಟಡದಲ್ಲಿ ತೊಗರಿ ಮಂಡಳಿ ಕಚೇರಿಗೆ ತಾತ್ಕಾಲಿಕ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಅಧ್ಯಕ್ಷರಾದ ಭಾಗಣಗೌಡ ಪಾಟೀಲ ಅವರು ಕೇಳಿಕೊಂಡಿದ್ದಾರೆ. ಇದರ ಬಗ್ಗೆ ಸಭೆಯ ಅಭಿಪ್ರಾಯ ತಿಳಿಸಿಬೇಕು ಎಂದು ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಪ್ರಸ್ತಾಪಿಸಿದ ವಿಷಯವು ಸಭೆಯಲ್ಲಿ ಗದ್ದಲಕ್ಕೆ ಎಡೆಮಾಡಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಮಂಡಳಿ ಕಚೇರಿಗೆ ಅನುಮತಿ ಕೊಡಲು ಆರಂಭದಲ್ಲಿ ನಕಾರ ಸೂಚಿಸಿದರು. ಆದರೆ ಬಹುತೇಕ ಸದಸ್ಯರ ಸಹಮತದ ಅಭಿಪ್ರಾಯಕ್ಕೆ ಮಣಿದು ಕೊನೆಗೆ ಒಪ್ಪಿಗೆ ಕೊಟ್ಟರು. ‘ರೈತರು ತೊಗರಿ ಮಾರಾಟಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಎಂಪಿಎಂಸಿಗೆ ಬರುತ್ತಾರೆ. ಹೀಗಾಗಿ ತೊಗರಿ ಮಂಡಳಿ ಎಂಪಿಎಂಸಿಯಲ್ಲಿ ಇದ್ದರೆ ರೈತರಿಗೆ ಅನುಕೂಲ’ ಎಂದು ಹರ್ಷಾನಂದ ಗುತ್ತೇದಾರ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ಯಾಕಾಪುರ ಮಾತನಾಡಿ, ಅನೇಕ ಕೆಲಸಕ್ಕೆ ರೈತರು ಜಿಲ್ಲಾ ಪಂಚಾಯಿತಿಗೆ ಬರುವುದರಿಂದ ತೊಗರಿ ಮಂಡಳಿಯು ಜಿಲ್ಲಾ ಪಂಚಾಯಿತಿಯಲ್ಲಿದ್ದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು. ಅನೇಕರು ಪರ–ವಿರೋಧ ವ್ಯಕ್ತಪಡಿಸಿದ್ದರಿಂದ ವಿಷಯವನ್ನು ಮತದಾನಕ್ಕೆ ಹಾಕಲಾಗುವುದು ಎಂದು ಸಿಇಒ ಹೇಳಿದರು. ಸಣ್ಣ ವಿಷಯ ದೊಡ್ಡದು ಮಾಡುವುದು ಅನಗತ್ಯ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಸರ್ಕಾರಿ ಸಂಸ್ಥೆಯು ಇನ್ನೊಂದು ಸರ್ಕಾರಿ ಅಂಗಸಂಸ್ಥೆಗೆ ಸ್ಥಳಾವಕಾಶ ಮಾಡಿಕೊಡುವ ವಿಷಯಕ್ಕೆ ಮತದಾನ ಪ್ರಕ್ರಿಯೆ ನಡೆಸುವುದು ಸರಿಯಲ್ಲ’ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ ಹೇಳಿದರು. ಕೊನೆಗೆ ಕಚೇರಿಗೆ ಸ್ಥಳ ಕೊಡಲು ಎಲ್ಲರೂ ಒಮ್ಮತ ಸೂಚಿಸಿದರು.
 
* ಜನಪ್ರತಿನಿಧಿಗಳು ಕೇಳುವ ಮಾಹಿತಿಯನ್ನು ಅಧಿಕಾರಿಗಳು ಕೂಡಲೇ ಒದಗಿಸಬೇಕು. ಕರ್ತವ್ಯದಲ್ಲಿ ಉದಾಸೀನ ತೋರಿಸುತ್ತಿರುವ ಚಿಂಚೋಳಿ ತಾಪಂ ಇಒ ಅವರಿಗೆ ನೋಟಿಸ್‌ ನೀಡಲಾಗುವುದು
- ಅನಿರುದ್ಧ ಶ್ರವಣ ಪಿ. ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT