ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪೇ ಕಾರ್ಡ್‌ ಬಳಕೆಯಿಂದ ಲಾಭ

ರೇಡಿಯೊ ಕಿಸಾನ್ ದಿನಾಚರಣೆಯಲ್ಲಿ ನಬಾರ್ಡ್‌ನ ರಮೇಶ್‌ ಹೇಳಿಕೆ
Last Updated 16 ಫೆಬ್ರುವರಿ 2017, 9:48 IST
ಅಕ್ಷರ ಗಾತ್ರ
ಮೈಸೂರು: ವಿದೇಶಿ ಕಂಪೆನಿಗಳ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರಿಂದ ಸುಮಾರು ₹ 5 ಸಾವಿರ ಕೋಟಿ ಬೇರೆ ದೇಶಗಳ ಪಾಲಾಗುತ್ತಿತ್ತು. ರೂಪೇ ಕಾರ್ಡ್‌ ಬಳಕೆಯಿಂದ ಆ ಹಣ ದೇಶದಲ್ಲೇ ಉಳಿಯುತ್ತಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್‌) ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್‌ ತಿಳಿಸಿದರು.
 
ರೇಡಿಯೊ ಕಿಸಾನ್ ದಿನಾಚರಣೆ ಅಂಗವಾಗಿ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಮೈಸೂರು ಆಕಾಶವಾಣಿ ಆಶ್ರಯದಲ್ಲಿ ಬುಧವಾರ ನಡೆದ ‘ರೈತ ಉತ್ಪಾದಕ ಸಂಸ್ಥೆಗಳ ನಿರ್ವಹಣೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 
ರೈತರ ಪ್ರಯೋಜನಕ್ಕಾಗಿ ರೂಪೇ ಕಾರ್ಡ್‌ ಜಾರಿಗೆ ತರಲಾಗಿದೆ. ಶೇ 85ರಷ್ಟು ರೈತರಿಗೆ ಈ ಕಾರ್ಡ್‌ ವಿತರಿಸಲಾಗಿದ್ದು, ಮಾರ್ಚ್‌ನೊಳಗೆ ಶೇ 100 ಗುರಿ ತಲುಪಲಾಗುವುದು ಎಂದು ಹೇಳಿದರು.ರೈತರ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕುವುದು ಸುಲಭ. ಆದರೆ, ನಿರ್ವಹಣೆ ಕಷ್ಟ. ಈಗ ಸಂಘಗಳ ಹಣಕಾಸು ವಹಿವಾಟನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ರೈತರು ಕೂಡ ಡಿಜಿಟಲ್‌ ವಹಿವಾಟಿಗೆ ಮೊರೆ ಹೋಗಬೇಕು. ಮೊಬೈಲ್‌ ಬ್ಯಾಂಕಿಂಗ್‌, ರೂಪೇ ಕಾರ್ಡ್‌ ಬಳಕೆ ಹೆಚ್ಚಬೇಕು ಎಂದು ಸಲಹೆ ನೀಡಿದರು. 
 
ಕೇಂದ್ರೀಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ನಿರ್ದೇಶಕ ವಿ.ಶಿವಪ್ರಸಾದ್ ಮಾತನಾಡಿ, ರೈತರನ್ನು ಸಂಘಟಿಸುವುದೆ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ. ಸಹಕಾರಿ ತತ್ವದಂತೆ ‘ಒಬ್ಬನಿಗಾಗಿ ಎಲ್ಲರು ಹಾಗೂ ಎಲ್ಲರಿಗಾಗಿ ಒಬ್ಬ’ ಎಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಸಂಘಟಿತರಾಗಲು ಸಾಧ್ಯ ಎಂದರು.
 
ದೇಶದಲ್ಲಿ ದೊಡ್ಡ ರೈತರ ಸಂಖ್ಯೆ ಕಡಿಮೆಯಾಗಿದ್ದು, ಸಣ್ಣ ಪ್ರಮಾಣದ ರೈತರ ಸಂಖ್ಯೆ ಹೆಚ್ಚಿದೆ. ಅವರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು, ಉತ್ಪಾದನೆ ಹೆಚ್ಚಿಸಲು, ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳಲು, ಆದಾಯ ದ್ವಿಗುಣಗೊಳಿಸಲು ಅನುಕೂಲವಾಗುವಂತೆ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವು ನೀಡಲಿವೆ ಎಂದರು.
 
ಆಕಾಶವಾಣಿ ಸಹಾಯಕ ನಿರ್ದೇಶಕ ಎಚ್‌.ಶ್ರೀನಿವಾಸ ಮಾತನಾಡಿ, 200 ಆಕಾಶವಾಣಿ ಕೇಂದ್ರಗಳಲ್ಲಿ ರೇಡಿಯೊ ಕಿಸಾನ್ ದಿನಾಚರಣೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ನೂರು ರೈತರನ್ನು ಆಯ್ಕೆ ಮಾಡಲಾಗಿದೆ. ಪ್ರಗತಿಪರವಾಗಿ ಯೋಚನೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
 
ಲೆಕ್ಕಪರಿಶೋಧಕ ಕೆ.ಎಸ್‌.ರವಿ, ಕೃಷಿ ವ್ಯವಸ್ಥಾಪಕರ ಸಂಸ್ಥೆಯ ಅಧ್ಯಕ್ಷ ಸಿ.ಎಸ್‌.ಸತೀಶ್‌ ಚಂದ್ರ ಅವರು ವಿಷಯ ಮಂಡಿಸಿದರು. ಬಳಿಕ ರೈತ ಉತ್ಪಾದಕ ಸಂಸ್ಥೆಗಳ ಅಧ್ಯಕ್ಷರೊಂದಿಗೆ ಸಂವಾದ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT