ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ವನ; ವನ್ಯಜೀವಿಗಳು ತಲ್ಲಣ!

ಬರ – ಭೀಕರ ವನದೇವಿ ಮಕ್ಕಳಿಗೆ ಬಂತು ಕುತ್ತು
Last Updated 16 ಫೆಬ್ರುವರಿ 2017, 10:10 IST
ಅಕ್ಷರ ಗಾತ್ರ
ಕೆ.ಎಸ್.ಗಿರೀಶ
ಮೈಸೂರು: ತಾಲ್ಲೂಕಿನ ಅರಣ್ಯ ಪ್ರದೇಶಗಳ ಬಹುತೇಕ ಕೆರೆಕಟ್ಟೆಗಳು ಬತ್ತಿ ಹೋಗಿದ್ದು, ವನ್ಯಜೀವಿಗಳು ಕುಡಿಯುವುದಕ್ಕೆ ನೀರಿಲ್ಲದೇ ಪರಿತಪಿಸುತ್ತಿವೆ. ಈಗಾಗಲೇ ಹಲವು ಪ್ರಾಣಿ, ಪಕ್ಷಿಗಳು ವಲಸೆ ಹೊರಟಿವೆ. ಸಣ್ಣಪುಟ್ಟ ಪ್ರಾಣಿಗಳ ಮಾಂಸವನ್ನೇ ಆಹಾರಕ್ಕಾಗಿ ಅವಲಂಬಿಸಿದ್ದ ಚಿರತೆಗಳು ಆಹಾರ ಇಲ್ಲದೇ ಜನವಸತಿಯತ್ತ ಮುಖ ಮಾಡುತ್ತಿವೆ.
 
ಈಚೆಗೆ ನಂಜನಗೂಡು ತಾಲ್ಲೂಕಿನಲ್ಲಿ ಚಿರತೆಯೊಂದು ನೀರು ಮತ್ತು ಆಹಾರ ಇಲ್ಲದೇ ಮೃತಪಟ್ಟ ಘಟನೆ ಜರುಗಿತು. ಇಂತಹುದೇ ಪರಿಸ್ಥಿತಿ ಮೈಸೂರು ತಾಲ್ಲೂಕಿನಲ್ಲೂ ನಿರ್ಮಾಣವಾಗುವ ಸಾಧ್ಯತೆ ಢಾಳಾಗಿ ಗೋಚರಿಸುತ್ತಿದೆ.
 
ಬೇಸಿಗೆ ಬಿರುಬಿಸಿಲಿಗೆ ದಿನೇ ದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಕೆಲವೆಡೆ ಗರಿಷ್ಠ ಉಷ್ಣಾಂಶ 32ನ್ನೂ ದಾಟಿದೆ. ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೇ ತೀವ್ರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ತಾಲ್ಲೂಕಿನ ಶೇ 90ರಷ್ಟು ಕೆರೆಗಳು ಬತ್ತಿ ಹೋಗಿವೆ. ಉಳಿದಿರುವ ಕೆಲವು ಕೆರೆಗಳಲ್ಲಿ ಪಾಚಿಗಟ್ಟಿದ ಕೆಸರು ನೀರಷ್ಟೇ ಉಳಿದಿದ್ದು, ಅವೂ ಬಿಸಿಲಿಗೆ ಆವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
 
ತಾಲ್ಲೂಕಿನಲ್ಲಿ ಒಟ್ಟು 9 ಅರಣ್ಯ ವಲಯಗಳಿದ್ದು, 14 ಗ್ರಾಮವ್ಯಾಪ್ತಿಯಲ್ಲಿ ಅರಣ್ಯ ಇದೆ. ಕೂರ್ಗಳ್ಳಿ ವಲಯದಲ್ಲಿ ಬೊಮ್ಮನಹಳ್ಳಿ, ವರಕೋಡುವಿನಲ್ಲಿ ಪಿಳ್ಳಹಳ್ಳಿ, ಅಯ್ಯರಹಳ್ಳಿ. ಮಾದಳ್ಳಿ ವಲಯ1 ಮತ್ತು 2ರಲ್ಲಿ ಮಂಡನಹಳ್ಳಿ, ಚಿಕ್ಕನಹಳ್ಳಿ, ಹಾರೋಹಳ್ಳಿ, ಬೆಟ್ಟದಬೀಡು, ಮಾವಿನಹಳ್ಳಿ, ಗೋಪಾಲಪುರ, ಕಣಿಯನಹುಂಡಿ. ಚಾಮುಂಡಿ ಬೆಟ್ಟ ವಲಯದಲ್ಲಿ ಉತ್ತನಹಳ್ಳಿ, ಲಲಿತಾದ್ರಿಪುರ ಹಾಗೂ ಮೈಸೂರು ವಾಯವ್ಯ, ಈಶಾನ್ಯ ಹಾಗೂ ನೈಋತ್ಯ ವಲಯಗಳಲ್ಲಿ ಅರಣ್ಯ ಇದೆ. ಇಲ್ಲೆಲ್ಲಾ ಈ ಬಾರಿಯ ಬೇಸಿಗೆ ನಿಭಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
 
ಚಾಮುಂಡಿ ಬೆಟ್ಟದಲ್ಲಿ ಕಾಳ್ಗಿಚ್ಚಿನ ಭೀತಿ: ವಿಶೇಷವಾಗಿ ಚಾಮುಂಡಿ ಬೆಟ್ಟದಲ್ಲಿ ಕಾಳ್ಗಿಚ್ಚಿನ ಭೀತಿ ಆವರಿಸಿದೆ. ಇಡೀ ಬೆಟ್ಟದ ಅರಣ್ಯದಲ್ಲಿ ಎಲ್ಲೂ ತೇವಾಂಶ ಎಂಬುದಿಲ್ಲ. ಕೆರೆ ಕಟ್ಟೆಗಳೆಲ್ಲ ಬತ್ತಿ ಹೋಗಿವೆ. ಇಲ್ಲಿರುವ ಮರಗಳೆಲ್ಲಾ ಬಹುತೇಕ ಎಲೆ ಉದುರಿಸಿಕೊಂಡಿವೆ. ಇನ್ನುಳಿದ ಮರ, ಗಿಡಗಳಲ್ಲಿ ಹಸಿರು ಕಡಿಮೆಯಾಗಿದೆ. ಒಂದು ಕಿಡಿ ಬಿದ್ದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯದಲ್ಲಿ ಚಾಮುಂಡಿ ಬೆಟ್ಟ ಇದೆ.
 
ಅರಣ್ಯ ಇಲಾಖೆ ಸಿಬ್ಬಂದಿ ನವೆಂಬರ್, ಡಿಸೆಂಬರ್‌ನಲ್ಲೇ ಕಾಳ್ಗಿಚ್ಚನ್ನು ತಡೆಯಲು ‘ಫೈರ್‌ಲೈನ್‌’ಗಳನ್ನು ಮಾಡಿದ್ದಾರೆ. ಇದರಿಂದ ಹೊತ್ತಿಕೊಳ್ಳುವ ಬೆಂಕಿ ಇಡೀ ಅರಣ್ಯ ವ್ಯಾಪಿಸುವ ಸಾಧ್ಯತೆ ಕಡಿಮೆ. ಜತೆಗೆ, ಸುಮಾರು 30 ಸಿಬ್ಬಂದಿ ಬೆಟ್ಟದಲ್ಲಿರುವ 3 ವೀಕ್ಷಣಾ ಗೋಪುರಗಳಲ್ಲಿ ಬೆಂಕಿ ಕುರಿತು ಹದ್ದಿನ ಕಣ್ಣಿಟ್ಟಿದ್ದಾರೆ. ಆದರೂ, ಕಾಳ್ಗಿಚ್ಚಿನ ಭೀತಿ ದೂರವಾಗಿಲ್ಲ.
 
ವನ್ಯಜೀವಿಗಳು ನಗರದತ್ತ: ನೀರಿನ ಕೊರತೆಯಿಂದ ವನ್ಯಜೀವಿಗಳು ನಗರದತ್ತ ವಲಸೆ ಬರುವ ಸಾಧ್ಯತೆ ಇದೆ. ಈಗಾಗಲೇ ಲಿಂಗಾಂಬುಧಿ ಕೆರೆಯ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದಕ್ಕೊಂದು ತಾಜಾ ಉದಾಹರಣೆ. ಈ ರೀತಿ ಅನೇಕ ಪ್ರಾಣಿಗಳು ನೀರಿಗಾಗಿ, ಆಹಾರಕ್ಕಾಗಿ ನಗರಕ್ಕೆ ಬರುವ ಸಂಭವ ಅಧಿಕ ಎನ್ನಲಾಗಿದೆ.
 
ಬತ್ತಿರುವ ಕೆರೆಗಳು
 
ಮೈಸೂರು: ಇಲವಾಲ ವಲಯದಲ್ಲಿ ಶೇ 99ರಷ್ಟು ಕೆರೆಗಳು ಬತ್ತಿವೆ. ಚಿಕ್ಕೇಗೌಡನಕೊಪ್ಪಲು, ಕರತನಹಳ್ಳಿ, ನಿಂಗಧಾರಣಾ ಕೊಪ್ಪಲಿನ ಕೆರೆಗಳು, ಈರಪ್ಪನ ಕಟ್ಟೆ ಸೇರಿದಂತೆ 10ಕ್ಕೂ ಹೆಚ್ಚಿನ ಕೆರೆಗಳು ಒಣಗಿವೆ. ಇಲವಾಲ ಕೆರೆಯಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ. ಐದು ವರ್ಷದ ಹಿಂದೆ ಬಹುತೇಕ ಕೆರೆಗಳು ತುಂಬಿದ್ದವು. ವರ್ಷದಿಂದ ವರ್ಷಕ್ಕೆ ಬತ್ತುತ್ತಿರುವ ಕೆರೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಇಲವಾಲ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಹೇಳಿದರು.
ಗೋಪಾಲಪುರ ವಲಯದಲ್ಲಿ ಮುಳ್ಳೂರು ಕೆರೆ, ದೊಡ್ಡಕೆರೆ, ಬೋರನಕಟ್ಟೆಗಳು ಎರಡು ವರ್ಷದಿಂದ ಒಣಗಿ ಹೋಗಿವೆ. ಸುತ್ತಮುತ್ತಲ 7 ಕೆರೆಗಳಲ್ಲಿ ಒಂದರಲ್ಲೂ ನೀರಿಲ್ಲ ಎಂದು ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯ ಮಹದೇವಸ್ವಾಮಿ ತಿಳಿಸಿದರು.
 
ಕೆರೆಗಳ ಒಡೆತನದ ಸಮಸ್ಯೆ!
 
ಮೈಸೂರು: ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಒಂದೇ ಕೆರೆ ಎಂದರೆ ಲಿಂಗಾಂಬುಧಿ. ಇದನ್ನು ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಆದರೆ, ಉಳಿದ ಕೆರೆಗಳು ಸಣ್ಣ ನೀರಾವರಿ ಇಲಾಖೆ, ಪಾಲಿಕೆ, ‘ಮುಡಾ’ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೇರುತ್ತವೆ. ಇವುಗಳ ಅಭಿವೃದ್ಧಿ, ಪುನಶ್ಚೇತನಕ್ಕೆ ಎಲ್ಲ ಇಲಾಖೆಗಳೂ ಒಳಗೊಂಡ ಒಂದು ವಿಸ್ತೃತ ಯೋಜನೆಯ ಅಗತ್ಯ ಇದೆ.
 
ನದಿಮೂಲ ಬಳಸಿಕೊಳ್ಳಿ
 
ಮೈಸೂರು: ಬತ್ತಿರುವ ಕೆರೆಗಳಿಗೆ ಜಲಾಶಯಗಳು ತುಂಬಿದಾಗ ನದಿಮೂಲದಿಂದ ನೀರು ತುಂಬಿಸಿದರೆ ಸಮಸ್ಯೆ ಸ್ವಲ್ಪವಾದರೂ ಶಮನವಾಗುತ್ತದೆ. ವನ್ಯಜೀವಿಗಳು ನೀರಿಗಾಗಿ ಕೊಳವೆಬಾವಿ ಇರುವ ಜಮೀನಿಗೆ, ಗ್ರಾಮಗಳಿಗೆ ನುಗ್ಗುವುದಿಲ್ಲ. ಪಕ್ಷಿಗಳು ವಲಸೆ ಹೋಗದೇ ಇಲ್ಲಿಯೇ ಉಳಿಯುತ್ತವೆ. ಜತೆಗೆ, ಅಂತರ್ಜಲವೂ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಪರಿಸರವಾದಿಗಳು ಸಲಹೆ ನೀಡುತ್ತಾರೆ.
 
ವಲಸೆ ಸಾಮಾನ್ಯ ಪ್ರಕ್ರಿಯೆ
ವನ್ಯಜೀವಿಗಳ ವಲಸೆ ಸಾಮಾನ್ಯ ಪ್ರಕ್ರಿಯೆ. ನೀರು ಇರುವ ಜಾಗಕ್ಕೆ ಹೋಗಿ ಅವು ಮತ್ತೆ ವಾಪಸ್ ಬರುತ್ತವೆ. ನೀರಿನ ಕೊರತೆ ಈಗ
ಕಳೆದ ಬಾರಿಗಿಂತ ತೀವ್ರವಾಗಿರುವುದು ನಿಜ ಎನ್ನುತ್ತಾರೆ ಡಿಸಿಎಫ್ ವಿ.ಕರಿಕಾಳನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT