ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಜೆಡಿಎಸ್‌ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದ, ಹಲವರಿಗೆ ಗಾಯ
Last Updated 16 ಫೆಬ್ರುವರಿ 2017, 10:37 IST
ಅಕ್ಷರ ಗಾತ್ರ
ಕೋಲಾರ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಲು ಮುಂದಾದ ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದ್ದರಿಂದ ಪರಸ್ಪರ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
 
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ನಡೆಯುತ್ತಿದ್ದ ಕಾರಣ ಪೊಲೀಸರು ಪ್ರತಿಭಟನಾಕಾರರನ್ನು ಜಿ.ಪಂ ಕಾಂಪೌಂಡ್‌ನ ಬಳಿಯೇ ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ಜತೆ ವಾಗ್ವಾದ ನಡೆಸಿ, ಜಿ.ಪಂ ಆವರಣ ಪ್ರವೇಶಿಸಿದರು.
 
ಜಿ.ಪಂ ಕಟ್ಟಡದ ಎದುರು ಶಾಸಕ ವರ್ತೂರು ಪ್ರಕಾಶ್‌ ಅವರ ಅಣಕು ಶವಯಾತ್ರೆ ನಡೆಸಿ ಖಾಲಿ ಬಿಂದಿಗೆಗಳೊಂದಿಗೆ ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ, ಕೆಡಿಪಿ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಪರಸ್ಪರ ತಳ್ಳಾಟವಾಗಿ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು.
 
ಜೆಡಿಎಸ್‌ ಆಡಳಿತವಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶಾಸಕ ವರ್ತೂರು ಪ್ರಕಾಶ್‌ ಹೊಸದಾಗಿ ಕೊಳವೆ ಬಾವಿ ಕೊರೆಸುತ್ತಿಲ್ಲ ಮತ್ತು ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ವಕ್ಕಲೇರಿ, ಅರಾಭಿಕೊತ್ತನೂರು, ಚಲುವನಹಳ್ಳಿ ಗ್ರಾಮಗಳಲ್ಲಿ ಮೂರ್‌್ನಾಲ್ಕು ತಿಂಗಳಿನಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ಶಾಸಕರ ಗುಲಾಮರಂತೆ ವರ್ತಿಸುತ್ತಿರುವ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಈ ವೇಳೆ ಕೆಡಿಪಿ ಸಭೆಯಲ್ಲಿದ್ದ ಜಿ.ಪಂ ಅಧ್ಯಕ್ಷೆ ಜಿ.ಗೀತಾ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಸಭಾಂಗಣದ ಹೊರಗೆ ನಡೆಯುತ್ತಿದ್ದ ಗದ್ದಲ ಕೇಳಿ ಸಭೆ ಮಧ್ಯೆಯೇ ಹೊರಬಂದು ಪ್ರತಿಭಟನಾಕಾರರ ಅಹವಾಲು ಆಲಿಸಿದರು.
 
ಕೀಳು ರಾಜಕೀಯ: ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಶಾಸಕ ವರ್ತೂರು ಪ್ರಕಾಶ್‌ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜೆಡಿಎಸ್‌ ತೊರೆದು ಶಾಸಕರ ಬಣ ಸೇರುವ ಗ್ರಾ.ಪಂ ಸದಸ್ಯರ ಕ್ಷೇತ್ರದಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಯಾವುದೇ ರಾಜಕಾರಣಿ ಈ ರೀತಿ ಕೀಳು ಮಟ್ಟದ ರಾಜಕೀಯ ಮಾಡಿರುವುದನ್ನು ಜನ್ಮದಲ್ಲೇ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಲ್ಲಿ ಕಮಿಷನ್‌ ಪಡೆದು ಶಾಸಕರಿಗೆ ಕೊಡುತ್ತಾರೆ. ಶಾಸಕರ ಕೈಗೊಂಬೆಗಳಾಗಿರುವ ಅಧಿಕಾರಿಗಳ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ವೇಮಗಲ್‌ ಪೊಲೀಸ್‌ ಠಾಣೆ ಎಸ್‌ಐ ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅವರು ಮರಳು ದಂಧೆಯಿಂದಲೇ ತಿಂಗಳಿಗೆ ₹ 10 ಲಕ್ಷ ಸಂಪಾದನೆ ಮಾಡುತ್ತಾರೆ. ಈ ಹಣದಲ್ಲಿ ಶಾಸಕರಿಗೂ ಪಾಲು ಹೋಗುತ್ತಿದೆ. ಕ್ಷೇತ್ರದ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿನ ಕೆಳ ಹಂತದ ಸಿಬ್ಬಂದಿ ಗೂಂಡಾಗಿರಿ ಮಾಡುತ್ತಾರೆ ಎಂದು ಆರೋಪಿಸಿದರು.
 
ಭ್ರಷ್ಟರ ಕೂಪ: ಶಾಸಕರು ಬಡ ಜನರಿಗೆ ಸ್ವಲ್ಪ ಹಣ ಕೊಟ್ಟು ‘ಪಿ’ ನಂಬರ್‌ ಜಮೀನುಗಳನ್ನು ಖರೀದಿಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ತಹಶೀಲ್ದಾರ್‌ ಕಚೇರಿಯು ಭ್ರಷ್ಟರ ಕೂಪವಾಗಿದೆ. ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ. ಬಡವರ ಬದಲಿಗೆ ಸರ್ಕಾರಿ ನೌಕರರು ಹಾಗೂ ಮನೆ ಇರುವವರಿಗೆಯೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಜೆಡಿಎಸ್‌ ಆಡಳಿತವಿರುವ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿಯೇ ಇಲ್ಲ ಎಂದು ದೂರಿದರು.
 
ವರ್ತೂರು ಪ್ರಕಾಶ್‌ ಹಣ ಮಾಡುವ ಉದ್ದೇಶಕ್ಕಾಗಿಯೇ ಶಾಸಕರಾಗಿದ್ದಾರೆ. ಪೊಲೀಸರು ಶಾಸಕರ ಮನೆ ಆಳುಗಳಾಗಿದ್ದಾರೆ. ವಕ್ಕಲೇರಿಯಂತ ದೊಡ್ಡ ಹೋಬಳಿ ಕೇಂದ್ರದಲ್ಲೇ ನೀರಿನಲ್ಲ. ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. ಶಾಸಕರ ಹಾಗೂ ಅಧಿಕಾರಿ ವರ್ಗದ ದುರಾಡಳಿತಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ತಾಲ್ಲೂಕು ಬಂದ್‌ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
 
ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಕೋಚಿಮುಲ್‌ ನಿರ್ದೇಶಕ ರಾಮಕೃಷ್ಣೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ರಾಧಾಕೃಷ್ಣ ಇದ್ದರು.
 
ಎಸ್‌ಐಗೆ ತರಾಟೆ: ಪ್ರತಿಭಟನೆ ವೇಳೆ ತಾ.ಪಂ ಸದಸ್ಯ ಪಾಲಾಕ್ಷಗೌಡ ಮತ್ತು ನಗರದ ಗಲ್‌ಪೇಟೆ ಪೊಲೀಸ್‌ ಠಾಣೆಯ ಎಸ್‌ಐ ಮುರಳಿ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಎಸ್‌ಐ ಮುರಳಿ, ಪಾಲಾಕ್ಷಗೌಡ ಅವರನ್ನು ಗದರಿಸಿದರು. ಇದರಿಂದ ಕೋಪಗೊಂಡ ಮಾಜಿ ಸಚಿವ ಶ್ರೀನಿವಾಸಗೌಡ, ‘ಪೊಲೀಸ್‌ ದರ್ಪ ತೋರಿಸಬೇಡಿ. ರಾಜಕೀಯ ಜೀವನದಲ್ಲಿ ನಿಮ್ಮಂತಹ ಸಾಕಷ್ಟು ಪೊಲೀಸ್‌ ಅಧಿಕಾರಿಗಳನ್ನು ನೋಡಿದ್ದೇನೆ. ಜನಪ್ರತಿನಿಧಿಗಳ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಿರಿ’ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT