ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಪ್ರದರ್ಶನದ ಪ್ರಯೋಜನ ಪಡೆಯಲಿ

ಸಿದ್ದಗಂಗಾಮಠದ ಆವರಣದಲ್ಲಿ ಕೃಷಿ, ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ: ನೂರಕ್ಕೂ ಅಧಿಕ ಮಳಿಗೆಗಳು ಭಾಗಿ
Last Updated 16 ಫೆಬ್ರುವರಿ 2017, 10:50 IST
ಅಕ್ಷರ ಗಾತ್ರ
ತುಮಕೂರು: ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಪ್ರತಿ ವರ್ಷದಂತೆ  ಸಿದ್ದಗಂಗಾಮಠದ ಆವರಣದಲ್ಲಿ ಹಮ್ಮಿಕೊಳ್ಳುವ  ‘ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ ಬುಧವಾರ ಸಂಜೆ ಆರಂಭಗೊಂಡಿತು.
 
ಸಾವಯವ ಕೃಷಿ, ಸಾವಯವ ಗೊಬ್ಬರ ಬಳಕೆ, ಕೃಷಿ ತಾಂತ್ರಿಕತೆ, ಕೃಷಿ ಯಂತ್ರೋಪಕರಣ, ಸೌರ ವಿದ್ಯುತ್ ಶಕ್ತಿ ಸಾಧನಗಳು, ಹೆಚ್ಚು ಇಳುವರಿ ಕೊಡುವ ಬಿತ್ತನೆ ಬೀಜ, ಪರ್ಯಾಯ ಇಂಧನ ಮಾರ್ಗೋಪಾಯಗಳು, ಗಿಡ ಮೂಲಿಕೆ, ಅರಣ್ಯ ಸಂರಕ್ಷಣೆ, ಅರಣ್ಯ ಉತ್ಪನ್ನಗಳಿಂದ ಆರ್ಥಿಕ ಸ್ವಾವಲಂಬನೆ, ಬರಗಾಲದಲ್ಲೂ ಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸುವ ಬೆಳೆಗಳು, ಟ್ರ್ಯಾಕ್ಟರ್, ರೋಟೊವೇಟರ್, ಔಷಧಿ ಸಿಂಪರಣ ಯಂತ್ರಗಳು ಹೀಗೆ ನೂರಾರು ವಿಷಯಗಳ ಕುರಿತ ಮಳಿಗೆಗಳು ಪ್ರದರ್ಶನಕ್ಕೆ ತೆರೆದುಕೊಂಡವು.
ಈ ವರ್ಷದ ವಸ್ತು ಪ್ರದರ್ಶನದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ 4 ಮಳಿಗೆಗಳು, ರಾಜ್ಯ ಸರ್ಕಾರದ 26 ಮಳಿಗೆಗಳು ಸೇರಿ 195 ಮಳಿಗೆ ಇವೆ.
 
ಅಲ್ಲದೇ, ಮಕ್ಕಳಿಗೆ ಮನೋರಂಜನೆಗಾಗಿ ಆಟಿಕೆ, ತಿಂಡಿ ತಿನಿಸು ಮಾರಾಟ ಮಳಿಗೆಗಳು, ಕಲಾತ್ಮಕ ವಸ್ತು ಮಾರಾಟ ಮಳಿಗೆಗಳೂ ಇವೆ.
ಉದ್ಘಾಟನೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಉದ್ಘಾಟಿಸಿ ಶುಭ ಕೋರಿದರು.
 
ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ‘ಸಿದ್ದಗಂಗಾ ಮಠ ಬರೀ ಧಾರ್ಮಿಕ ಕ್ಷೇತ್ರವಲ್ಲ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದೆ. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಿ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
 
ಶಾಸಕ ಬಿ.ಸುರೇಶಗೌಡ ಮಾತನಾಡಿ, ‘ಡಾ.ಶಿವಕುಮಾರ ಸ್ವಾಮೀಜಿಯವರು 1964ರಲ್ಲಿಯೇ ಬಹಳ ದೂರದೃಷ್ಟಿಯಿಂದ ರೈತರ ಹಿತಾಸಕ್ತಿಗೆ ಪೂರಕವಾಗಿ ಈ ಪ್ರದರ್ಶನ ಆಯೋಜಿಸಿಕೊಂಡು ಬಂದಿದ್ದಾರೆ. ಬರಗಾಲದಲ್ಲಿ ರೈತರು ಈ ಪ್ರದರ್ಶನಕ್ಕೆ ಭೇಟಿ ನೀಡಿ ತಜ್ಞರಿಂದ ಸಲಹೆ ಪಡೆಯಬೇಕು. ಜಿಲ್ಲೆಯ ಹೆಚ್ಚಿನ ರೈತರು ಭಾಗವಹಿಸಬೇಕು’ ಎಂದರು.
 
‘ಮಠಕ್ಕೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೈದಾಳ ಕೆರೆ, ದೇವರಾಯನದುರ್ಗದ ಕೆರೆಗೆ ಹೇಮಾವತಿ ನಾಲಾ ನೀರು ಬಂದರೆ ಪರಿಹಾರವಾಗಲಿದೆ. ಶಾಸಕ ರಫೀಕ್ ಅಹಮ್ಮದ್ ಅವರು ಬೇಗ ನೀರು ಹರಿಸುವ ಪ್ರಯತ್ನ ಮಾಡಬೇಕು’ ಎಂದು ಮನವಿ ಮಾಡಿದರು.
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಶಾಂತಾರಾಂ, ಸಿದ್ದಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ತಾ.ಪಂ. ಸದಸ್ಯೆ ಮಮತಾ ಕಾಂತರಾಜ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT