ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.19ರಂದು ಅಂಬೇಡ್ಕರ್‌ 125ನೇ ಜಯಂತ್ಯುತ್ಸವ

ಫೆ.18ರಂದು ‘ಸಮಾನತೆಗಾಗಿ ಓಟ’ ಮ್ಯಾರಥಾನ್‌
Last Updated 16 ಫೆಬ್ರುವರಿ 2017, 10:57 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ:‘ಶ್ರೀಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ಸಹಯೋಗದಿಂದ ಫೆಬ್ರುವರಿ 19ರಂದು ನಗರದಲ್ಲಿ ಬಿ.ಆರ್.ಅಂಬೇಡ್ಕರ್‌ ಅವರ 125ನೇ ಜಯಂತ್ಯುತ್ಸವ ಮತ್ತು 8ನೇ ವರ್ಷದ ‘ಸಂಕ್ರಾಂತಿ ಸುಗ್ಗಿ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ, ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು. 
 
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾರ್ಯಕ್ರಮದ ಭಾಗವಾಗಿ ಫೆಬ್ರುವರಿ 18ರಂದು ಬೆಳಿಗ್ಗೆ 7.30ಕ್ಕೆ ನಗರದ ಜೈಭೀಮ್‌ ವಿದ್ಯಾರ್ಥಿ ನಿಲಯದಿಂದ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿರುವ ನಂದಿ ರಂಗಮಂದಿರದವರೆಗೆ ‘ಸಮಾನತೆಗಾಗಿ ಓಟ’ ಎಂಬ ಮ್ಯಾರಥಾನ್‌ ಆಯೋಜಿಸಲಾಗಿದೆ’ ಎಂದು ತಿಳಿಸಿದರು. 
 
‘ಫೆ.19 ರಂದು ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್‌ ಮೂರ್ತಿ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಂದಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸುವರು.
 
ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದರಾದ ವೀರಪ್ಪ ಮೊಯಿಲಿ ಮತ್ತು ಕೆ.ಎಚ್‌.ಮುನಿಯಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದರು. 
 
‘ಕಾರ್ಯಕ್ರಮದಲ್ಲಿ 108 ಅಂಗವಿಕಲರಿಗೆ ನಾಲ್ಕು ಚಕ್ರವುಳ್ಳ ಸ್ಕೂಟರ್‌ಗಳನ್ನು ವಿತರಿಸಲಾಗುತ್ತದೆ. ಅಂಬೇಡ್ಕರ್‌ ಅವರ ಕುರಿತಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ಪ್ರದಾನ ಮಾಡಲಾಗುತ್ತದೆ. ಅಂಬೇಡ್ಕರ್‌ ಅವರು ಬದುಕನ್ನು ಅನಾವರಣಗೊಳಿಸುವ ಸಿನಿಮಾ ಪ್ರದರ್ಶಿಸಲಾಗುತ್ತದೆ’ ಎಂದು ಹೇಳಿದರು. 
 
‘ತಾಲ್ಲೂಕಿನ ಒಬ್ಬ ಸಾಧಕರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 100 ಜನರಿಗೆ ₹1 ಲಕ್ಷ ನಗದು ಪುರಸ್ಕಾರ ಹೊಂದಿರುವ ‘ಅಂಬೇಡ್ಕರ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುತ್ತದೆ. ಪ್ರಶಸ್ತಿಗಳಿಗಾಗಿ ಅರ್ಹ ಸಾಧಕರ ಆಯ್ಕೆ ಮಾಡುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ತಿಳಿಸಿದರು. 
 
‘ಅದೇ ದಿನ ಸಂಜೆ 5 ಗಂಟೆಗೆ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ದೃತನೃತ್ಯ’ ತಂಡದ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮತ್ತವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ. ಕನ್ನಡ ಚಿತ್ರರಂಗದ ಕೆಲ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದರು. 
 
‘ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರತಿ ಹಳ್ಳಿಯಿಂದ ವಾಹನ ವ್ಯವಸ್ಥೆ ಜತೆಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು. 
 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ.ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಯುಥ್ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT