ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಅಕ್ರಮ: ರೈತರ ಮೇಲೆ ಆರೋಪ ಸಲ್ಲ

ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ; ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ
Last Updated 16 ಫೆಬ್ರುವರಿ 2017, 12:47 IST
ಅಕ್ಷರ ಗಾತ್ರ
ರಾಮದುರ್ಗ: ಮುಂಗಾರು ಬೆಳೆ ಪರಿಹಾರ ವಿತರಣೆಯಲ್ಲಾದ ಅಕ್ರಮ ಎಸಗಿರುವ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ರಕ್ಷಿಸಲು ರೈತರನ್ನು ಹೊಣೆಗಾರರನ್ನಾಗಿ ಮಾಡಲು ಹೊರಟಿರುವ ತಾಲ್ಲೂಕು ಆಡಳಿತದ ಕ್ರಮವನ್ನು ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ತಾಲ್ಲೂಕು ದಂಡಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 
 
ಅಧಿಕಾರಿಗಳ ಬೇಜವಾಬ್ದಾರಿಯಿಂದ 2015–16ನೇ ಸಾಲಿನ ಮುಂಗಾರು ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಿದ್ದಾರೆ. ಹಣ ಮರಳಿ ನೀಡಬೇಕು ಇಲ್ಲದಿದ್ದರೆ ರೈತರನ್ನೇ ಹೊಣೆಗಾರರನ್ನಾಗಿ ಮಾಡಿ ಜಮೀನುಗಳ ಮೇಲೆ ಬೋಜಾ ದಾಖಲಿಸುವುದಾಗಿ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
 
ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸರ್ಕಾರ ನಿಗದಿ ಪಡಿಸಿದ ಹಣಕ್ಕಿಂತ ಅಧಿಕ ಮೊತ್ತದ ಹಣವನ್ನು ರೈತರ ಖಾತೆಗೆ ಜಮಾ ಮಾಡಿದ್ದಾರೆ. ಈಗ ಜಿಲ್ಲಾಡಳಿತ ಅವ್ಯವಹಾರದ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸುವಂತೆ ಒತ್ತಡ ಹಾಕಿದೆ. ಅದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ರೈತರ ಮನೆಗೆ ತೆರಳಿ ಬೆದರಿಸಿ ಹಣ ವಾಪಸ್ ಪಡೆಯುತ್ತಿದ್ದಾರೆ. ಇದು ಖಂಡನೀಯ ಎಂದರು.
 
ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಫಲಕ ಹಾಕಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮಹಾದಾಯಿ ಮತ್ತು ಕಳಸಾ ಬಂಡೂರಿ ಹೋರಾಟಗಾರರಿಗೆ ಬೆದರಿಕೆ ಹಾಕುವುದನ್ನು ಬಿಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳನ್ನು ಶೀಘ್ರ ಗುರುತಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 
 
ಬರಗಾಲದಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ತಾಲ್ಲೂಕಿನಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು. ಗ್ರಾಮ ಮಟ್ಟದಲ್ಲಿಯೇ ರೈತರ ಪಹಣಿ ಪತ್ರಿಕೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. 
 
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ದೇವರಡ್ಡಿ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ರಾಮದುರ್ಗ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಲಮಾಣಿ, ಕ ಯಲ್ಲಪ್ಪ ದೊಡಮನಿ, ಶಿವಾನಂದ ದೊಡವಾಡ, ಮಾರುತಿ ಕುಂಬಾರ, ಸುರೇಶ ಗುಂಜೇರಿ, ಕೃಷ್ಣಪ್ಪಗೌಡ ಪಾಟೀಲ, ವೆಂಕಣ್ಣ ಕೆಂಚರಡ್ಡಿ, ರಮೇಶ ಮಾದರ, ನೂರಸಾಬ್ ಕಡಕೋಳ, ಈಶ್ವರ ಹೂಗಾರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT