ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಪ್ರಮಾಣ ವಚನ ವೀಕ್ಷಿಸಿದ ಶಶಿಕಲಾ!

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಮಧ್ಯಾಹ್ನದವರೆಗೂ ಮೌನಕ್ಕೆ ಶರಣು.  ಒಲ್ಲದ ಮನಸ್ಸಿನಿಂದಲೇ ಆಹಾರ ಸೇವನೆ.  ತಮ್ಮ ಜತೆ ಸೆಲ್‌ನಲ್ಲಿರುವ ಸೋದರ ಸಂಬಂಧಿ ಜತೆಗೂ ವಿರಳ ಮಾತುಕತೆ. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ನೇರಪ್ರಸಾರ ವೀಕ್ಷಣೆ...
ಇದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಸೆರೆವಾಸದ ಮೊದಲ ದಿನದ ದಿನಚರಿ.

ಬಿಳಿ ಬಣ್ಣದ ಸಮವಸ್ತ್ರ ತೊಟ್ಟಿರುವ ಅವರು, ಯಾವುದೇ ವಿಶೇಷ ಸೌಲಭ್ಯಗಳಿಲ್ಲದೆ ಸಾಮಾನ್ಯ ಕೈದಿಯಂತೆ  ದಿನ ದೂಡಿದ್ದಾರೆ. ಅವರ ಸೆಲ್‌ ಬಳಿ ತಮಿಳು ಭಾಷೆ ಬಲ್ಲ ಒಂಬತ್ತು ಮಹಿಳಾ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

‘ಮಹಿಳಾ ಬ್ಯಾರಕ್ ಕಟ್ಟಡದ ಮೊದಲ ಮಹಡಿಯ ಸೆಲ್‌ನಲ್ಲಿರುವ ಶಶಿಕಲಾ,  ಶಾಂತಚಿತ್ತರಾಗಿಯೇ ಇದ್ದಾರೆ. ತಮ್ಮನ್ನು ಕಾಣಲು ಬಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿಯನ್ನೂ ನಿರಾಕರಿಸಿದ ಅವರು, ಒಲ್ಲದ ಮನಸ್ಸಿನಿಂದಲೇ ಜೈಲಿನ ಆಹಾರ ಸೇವಿಸಿದ್ದಾರೆ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

‘ಬುಧವಾರ ಸಂಜೆ ಜೈಲಿಗೆ ಬಂದ ಅವರು, ಸೋದರ ಸಂಬಂಧಿ ಇಳವರಸಿ ಜತೆ ಕೊಠಡಿ ಹಂಚಿಕೊಂಡಿದ್ದಾರೆ. ಅವರ ಪಕ್ಕದ ಸೆಲ್‌ನಲ್ಲಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸೈನೈಡ್ ಮಲ್ಲಿಕಾ ಇದ್ದಾಳೆ.’

‘ಬುಧವಾರ ರಾತ್ರಿ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ಜೈಲಿಗೆ ಬರುವುದು ತಡವಾದ ಕಾರಣ ಹೊರಗಿನಿಂದ ಊಟ ತರಿಸಿಕೊಡಲಾಗಿತ್ತು.’
‘ಜೈಲು ಆವರಣದಲ್ಲಿರುವ ಸಾಮಾನ್ಯ ಕೈದಿಗಳ ಶೌಚಗೃಹದಲ್ಲಿ ಗುರುವಾರ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ ಕೊಠಡಿಗೆ ಮರಳಿದರು. ಅಷ್ಟರಲ್ಲಿ ಇಳವರಸಿ, ಶಶಿಕಲಾ ಅವರಿಗೂ ಒಂದು ಬಟ್ಟಲು ಪುಳಿಯೊಗರೆ ತಂದಿದ್ದರು. ಸ್ನಾನ ಮುಗಿಸಿ 1 ತಾಸು ಧ್ಯಾನ ಮಾಡಿದರು.’

‘ಆರಂಭದಲ್ಲಿ ಶಶಿಕಲಾ ಉಪಹಾರ ಸೇವನೆಗೆ ನಿರಾಕರಿಸಿದರು. ಆದರೆ, ತಮಗೆ ಮಧುಮೇಹ ಇರುವ ಕಾರಣ ಖಾಲಿ ಹೊಟ್ಟೆಯಲ್ಲಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಉಪಹಾರ ಸೇವಿಸಲೇಬೇಕು ಎಂಬ ಇಳವರಸಿಯ ಒತ್ತಾಯಕ್ಕೆ ಮಣಿದು ಅರ್ಧ ಬಟ್ಟಲು ಪುಳಿಯೊಗರೆ ತಿಂದರು.’  ‘ಶಶಿಕಲಾ ಕೋರಿಕೆ ಮೇರೆಗೆ ಆಂಗ್ಲ ಮತ್ತು ತಮಿಳು ಭಾಷೆಯ ದಿನಪತ್ರಿಕೆಗಳನ್ನು ಅವರ ಕೊಠಡಿಗೆ ನೀಡಲಾಗಿತ್ತು. ತಾವು ಜೈಲುಪಾಲಾದ ಸುದ್ದಿ ಹಾಗೂ ಛಾಯಾಚಿತ್ರಗಳನ್ನು ನೋಡಿ ಅವರು ಭಾವುಕರಾದರು.’

‘ಮಧ್ಯಾಹ್ನ 12.30ರ ಸುಮಾರಿಗೆ ಇಳವರಸಿ ಸಾಮಾನ್ಯ ಕೊಠಡಿಗೆ ತೆರಳಿ, ಕೆಲ ಕಾಲ ಟಿ.ವಿ ವೀಕ್ಷಿಸಿದರು. ನಂತರ ಸೆಲ್‌ಗೆ ಮರಳಿ, ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಮಿಳುನಾಡಿನ ರಾಜಕೀಯದ ಪ್ರಚಲಿತ ವಿದ್ಯಾಮಾನದ ವಿಷಯಗಳನ್ನು ಶಶಿಕಲಾ ಅವರಿಗೆ ಮುಟ್ಟಿಸಿದರು.’

‘ತಮ್ಮ ನೆಚ್ಚಿನ ಬೆಂಬಲಿಗ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರಿಂದ ಆಹ್ವಾನ ಬಂದಿರುವ ವಿಷಯ ತಿಳಿದು ಮಂದಹಾಸ ಬೀರಿದ ಶಶಿಕಲಾ, ಆ ನಂತರ ಇಳವರಸಿ ಜತೆ ಎಂದಿನಂತೆ ಚರ್ಚೆಯಲ್ಲಿ ತೊಡಗಿದ್ದರು.’

‘ಮಧ್ಯಾಹ್ನ ಕೂಡ ಊಟಕ್ಕೆ ಒಲ್ಲೆ ಎಂದ ಶಶಿಕಲಾ, ಮತ್ತೆ ಇಳವರಸಿಯ ಮಾತಿನಂತೆ ಒಂದು ಚಪಾತಿ ಹಾಗೂ ಮಜ್ಜಿಗೆ–ಅನ್ನ ಸೇವಿಸಿದರು. ಆ ನಂತರ ಕೆಲ ಕಾಲ ವಿಶ್ರಾಂತಿ ಪಡೆದ ಅವರು, ಸಂಜೆ 5 ಗಂಟೆಗೆ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕಾರದ ನೇರ ಪ್ರಸಾರ ವೀಕ್ಷಿಸಲು ಅನುಮತಿ ಕೋರಿದರು. ನಮ್ಮ ಕೊಠಡಿಗೇ ಕರೆದೊಯ್ದು ಟಿ.ವಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟೆವು’ ಎಂದು ಮಾಹಿತಿ ನೀಡಿದರು.

ಮೂವರು ವಕೀಲರು ಭೇಟಿ: ಎಐಎಡಿಎಂಕೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಪುಗಳೆಂದಿ ಸೇರಿದಂತೆ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರುಗಳು ಗುರುವಾರ ಸಹ ಕಾರಾಗೃಹದ ಬಳಿ ಬಂದಿದ್ದರು. ಆದರೆ, ಮೂವರು ವಕೀಲರನ್ನು ಹೊರತುಪಡಿಸಿ ಯಾರೊಬ್ಬರ ಭೇಟಿಗೂ ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಪಳನಿಸ್ವಾಮಿ ಭೇಟಿ?
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎಡಪ್ಪಾಡಿ ಪಳನಿಸ್ವಾಮಿ, ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಶಶಿಕಲಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ತಮಗೆ ಖಚಿತ ಮಾಹಿತಿ ಬಂದಿಲ್ಲ ಎಂದಿರುವ ಪೊಲೀಸರು, ‘ಜೈಲಿನ ಬಳಿ ಇನ್ನು ನಾಲ್ಕೈದು ದಿನ ಪೊಲೀಸ್ ಭದ್ರತೆ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT