ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತ್ರದಿಂದ ಪಂಟನವರೆಗೆ...

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಇಪ್ಪತ್ತೈದು ವರ್ಷಗಳ ಹಿಂದೆ ಇದೇ ದಿನ ನನ್ನ ಮೊದಲ ಸಿನಿಮಾ ‘ಚೈತ್ರದ ಪ್ರೇಮಾಂಜಲಿ’ ಬಿಡುಗಡೆಯಾಗಿತ್ತು’ ಇಷ್ಟು ಹೇಳಿ ತುಸು ತಡೆದರು ಎಸ್‌. ನಾರಾಯಣ್‌. ಈ ಅರೆಕ್ಷಣದ ಮೌನದಲ್ಲಿ ಅವರೊಮ್ಮೆ ಆ ದಿನಗಳ ನೆನಪಿನಲ್ಲಿ ಮಿಂದೆದ್ದಂತಿತ್ತು.

‘ಈ ಇಪ್ಪತ್ತೈದು ವರ್ಷಗಳಲ್ಲಿ ಹಲವರು ನನ್ನ ಜತೆ ಸೇರಿದ್ದಾರೆ. ಇನ್ನು ಹಲವರು ನನ್ನನ್ನು ಅಗಲಿ ಹೋಗಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕ ರಘುವೀರ್‌ ಅವರು ಹಾಗೆ ನನ್ನನ್ನು ಬಿಟ್ಟು ಹೋದವರು. ಮೊದಲ ಅವಕಾಶ, ಮೊದಲ ತುತ್ತಿನಷ್ಟೇ ಸ್ಮರಣೀಯವಾದದ್ದು. ನನ್ನ ಬದುಕಿನ ಅಂಥ ಅವಕಾಶದಲ್ಲಿ ಜತೆಯಾದವರು ಅವರು’ ಎನ್ನುವಾಗ ಅವರ ಮಾತಿನಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು.

ಎಸ್‌. ನಾರಾಯಣ್‌ ಹೀಗೆ ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ನೆನಪಿಸಿಕೊಂಡಿದ್ದು ಅವರದೇ ನಿರ್ದೇಶನದ ‘ಪಂಟ’ ಪತ್ರಿಕಾಗೋಷ್ಠಿಯಲ್ಲಿ.
ಬಹುಬೇಗನೇ ಹಳೆಯ ನೆನಪಿನ ಗುಂಗಿನಿಂದ ಹೊಸ ಸಿನಿಮಾ ಬಗೆಗಿನ ಮಾತಿಗೆ ಹೊರಳಿದ ನಾರಾಯಣ್‌, ‘ಪಂಟ ನನ್ನ ಇದುವರೆಗಿನ ಎಲ್ಲ ಚಿತ್ರಕ್ಕಿಂತ ಭಿನ್ನವಾದದ್ದು. ಆಫ್‌ ಬೀಟ್‌, ಫುಲ್‌ ಬೀಟ್‌ಎರಡೂ ಅಲ್ಲದ ಹೊಸ ಬೀಟ್‌ನ ಸಿನಿಮಾ ಇದು’ ಎಂದು ವ್ಯಾಖ್ಯಾನಿಸಿಕೊಂಡರು.

ಅವರ ಈ ಹೊಸ ಥರದ ಚಿತ್ರಕ್ಕೆ ಅನೂಪ್‌ ನಾಯಕನಾಗಿದ್ದರೆ, ರಿತೀಕ್ಷಾ ನಾಯಕಿ. ಕರಿಸುಬ್ಬು, ರವಿ ಕಾಳೆ, ವಿಶ್ವ ಇವರೆಲ್ಲರ ಜತೆ ಸೈಯ್ಯದ್‌ ಇರ್ಫಾನ್‌ ಎಂಬ ಹೊಸಬರೂ ಮುಖ್ಯಭೂಮಿಕೆಯಲ್ಲಿದ್ದಾರೆ. ನಾರಾಯಣ್ ಪ್ರಕಾರ, ‘ಜಾಣನ ಎರಡು ಗಂಟೆಯ ಜರ್ನಿಯೇ ಪಂಟ’.

ಇದು ಭಿನ್ನರೀತಿಯ ಚಿತ್ರವಾಗಿದ್ದರಿಂದ ಹಾಡು ಬೇಕಾಗಿಲ್ಲ ಎಂದು ನಿರ್ದೇಶಕರು ನಿರ್ಧರಿಸಿದ್ದರಂತೆ. ಆದರೆ ನಿರ್ಮಾಪಕ ಸುಬ್ರಹ್ಮಣ್ಯಮ್‌ ಕೆ. ಅವರು ಒಂದಾದರೂ ಹಾಡು ಇರಲೇಬೇಕು ಎಂದು ಒತ್ತಾಯಿಸಿದ್ದಕ್ಕಾಗಿ ಬರೆದ ಒಂದು ಹಾಡನ್ನು ನಟ ಸುದೀಪ್‌ ಹಾಡಿದ್ದಾರೆ. ಅದು ಜನಪ್ರಿಯವಾಗಿದ್ದನ್ನು ನೋಡಿ ನಿರ್ಮಾಪಕರು ಒತ್ತಾಯ ಮಾಡಿ ಇನ್ನೊಂದು ಹಾಡನ್ನೂ ಮಾಡಿಸಿದ್ದಾರಂತೆ.

ತಮ್ಮ ಎರಡನೇ ಸಿನಿಮಾದ ಬಗ್ಗೆ ಉತ್ಸಾಹದಿಂದಲೇ ಮಾತನಾಡಿದ ಅನೂಪ್‌, ‘ಮೊದನೇ ಸಿನಿಮಾ ಬಿಡುಗಡೆಯಾಗುವ ಮೊದಲೇ ನನಗೆ ಈ ಸಿನಿಮಾಕ್ಕೆ ಅವಕಾಶ ಕೊಟ್ಟಿದ್ದರು. ಇದು ನನ್ನ ಅದೃಷ್ಟ. ಇದೊಂದು ದರೋಡೆ ಪ್ರಸಂಗವನ್ನು ಆಧರಿಸಿದ ಸಿನಿಮಾ’ ಎಂದು ವಿವರಿಸಿದರು. ಈ ಪಾತ್ರಕ್ಕಾಗಿ ಅವರು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದೆ ಸೆಟ್‌ನಲ್ಲಿ ನಿರ್ದೇಶಕರ ಮಾರ್ಗದರ್ಶನದಂತೆ ನಟಿಸಿದ್ದಾರಂತೆ.

ವಿಶ್ವ ಅವರು ‘ನಾರಾಯಣ್ ಜೊತೆ ಕೆಲಸ ಮಾಡಿದ್ದು ಒಬ್ಬ ಶಿಸ್ತಿನ ಸಿಪಾಯಿ ಜತೆ ಕೆಲಸ ಮಾಡಿದ ಅನುಭವ ನೀಡಿದೆ’ ಎಂದರು. ಇರ್ಪಾನ್‌ ಅವರಿಗೆ ಈ ಸಿನಿಮಾ ವಿಶ್ವವಿದ್ಯಾಲಯದಲ್ಲಿ ಕಲಿತ ಅನುಭವ ಕೊಟ್ಟಿದೆಯಂತೆ.

ಕೋಲಾರದ ಚೆಲುವೆ ರಿತೀಕ್ಷಾ ತಮ್ಮ ನಿಜಜೀವನಕ್ಕೆ ಹತ್ತಿರವಾದಂಥ ಪಾತ್ರದಲ್ಲಿ ನಟಿಸಿದ್ದಾರಂತೆ. ‘ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದಿರುವ ವಿದ್ಯಾರ್ಥಿಯ ಮನಸ್ಥಿತಿಯಲ್ಲಿದ್ದೇನೆ’ ಎಂದು ಅವರು ಹೇಳಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT