ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಶಶಿಕಲಾ ನಟರಾಜನ್‌ ಅವರ ಮನ್ನಾರ್‌ಗುಡಿ ಮಾಫಿಯಾ?!

Last Updated 17 ಫೆಬ್ರುವರಿ 2017, 10:46 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಸಂಪಾದನೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್‌ ಅವರ ಹೆಸರು ಪದೇ ಪದೇ ‘ಮನ್ನಾರ್‌ಗುಡಿ ಮಾಫಿಯಾ’ ಅಥವಾ ‘ಮನ್ನಾರ್‌ಗುಡಿ ಗ್ಯಾಂಗ್‌’ ಹೆಸರಿನಲ್ಲಿ  ತಳಕು ಹಾಕಿಕೊಂಡು ಬರುತ್ತಿದೆ!

ಈ ಮನ್ನಾರ್‌ಗುಡಿ ಮಾಫಿಯಾ ಕುರಿತಂತೆ ವಿಶ್ಲೇಷಣಾತ್ಮಕ ಮಾಹಿತಿ ಇಲ್ಲಿದೆ.

ಏನಿದು ಮನ್ನಾರ್‌ಗುಡಿ ಮಾಫಿಯಾ?
ಶಶಿಕಲಾ ನಟರಾಜನ್‌ ಅವರಿಗೆ ಆಪ್ತರಾಗಿರುವವರು ಸ್ಥಳೀಯ ಪ್ರಭಾವಿಗಳು, ಸಂಬಂಧಿಕರು, ಗೆಳೆಯರು, ಹಿತೈಷಿಗಳು, ರಾಜಕೀಯ ಸ್ನೇಹಿತರು,   ಭೂಮಾಫಿಯಾದವರು ಮತ್ತು ನಿಷ್ಠರನ್ನು ಮನ್ನಾರ್‌ಗುಡಿ ಮಾಫಿಯಾ ಅಥವಾ ಮನ್ನಾರ್‌ಗುಡಿ ಗ್ಯಾಂಗ್ ಎಂದು ಕರೆಯಲಾಗುತ್ತದೆ.  ಈ ಮಾಫಿಯಾವನ್ನು ಶಶಿಕಲಾ ನಟರಾಜನ್‌ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಎರಡು ವಿಧಾನಸಭಾ ಚುನಾವಣೆಗಳಿಂದಲೂ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಈ ಮನ್ನಾರ್‌ಗುಡಿ ಮಾಫಿಯಾ ನಿಯಂತ್ರಿಸುತ್ತಿತ್ತು ಎಂದು ಹೇಳಲಾಗುತ್ತಿದೆ.

ಮನ್ನಾರ್‌ಗ್ಯಾಂಗ್‌ ರೂವಾರಿಗಳು
ಶಶಿಕಲಾ ನಟರಾಜನ್‌ ಅವರ ಸಂಬಂಧಿಗಳಾದ ದಿನಕರನ್‌, ದಿವಾಹರನ್‌, ಸುಧಾಕರನ್‌, ಬಾಸ್ಕರನ್‌ , ಇಳವರಸಿ ಅವರುಗಳು  ಮನ್ನಾರ್‌ಗ್ಯಾಂಗ್‌ ನ ಪ್ರಮುಖರು.

ಹೆಸರು ಬಂದಿದ್ದು ಹೇಗೆ?
ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಬೃಹತ್‌ ಮತ್ತು ಮಧ್ಯಮ ಗಾತ್ರದ ಎಲ್ಲ ಟೆಂಡರ್‌ಗಳು  ಮತ್ತು ಯೋಜನೆಗಳು ಶಶಿಕಲಾ ಸಂಬಂಧಿಕರು ಮತ್ತು  ಹಿತೈಷಿಗಳ ಪಾಲಾಗುತ್ತಿದ್ದವು. ಇದನ್ನು ಗಮನಿಸಿದ್ದ  ಬಿಜೆಪಿ ನಾಯಕ ಸುಬ್ರಮಣ್ಯಸ್ವಾಮಿ ಅವರು ಜಯಲಲಿತಾ ಅವರನ್ನು ಶಶಿಕಲಾ ನೇತೃತ್ವದ ಮನ್ನಾರ್‌ಗುಡಿ ಮಾಫಿಯಾ ನಿಯಂತ್ರಿಸುತ್ತಿದೆ ಎಂದು ಹೇಳಿದ್ದರು. ಆಗಿನಿಂದಲೂ ಮಾಧ್ಯಮಗಳು  ಶಶಿಕಲಾ ಅವರಿಗೆ ಮನ್ನಾರ್‌ಗುಡಿ ಗ್ಯಾಂಗ್‌ ಅಥವಾ ಮನ್ನಾರ್‌ಗುಡಿ ಮಾಫಿಯಾ ಎಂಬ ಪದಗಳನ್ನು ಬಳಸುತ್ತಿವೆ.

ಪೋಯಸ್‌ ಗಾರ್ಡನ್‌ನಲ್ಲೂ ಮನ್ನಾರ್‌ಗುಡಿ ಗ್ಯಾಂಗ್‌?
ಜಯಲಲಿತಾ ಅವರು ವಾಸವಾಗಿದ್ದ ಪೋಯಸ್‌ ಗಾರ್ಡನ್‌ನಲ್ಲೂ  ಮನ್ನಾರ್‌ಗ್ಯಾಂಗ್‌ಗೆ ಸೇರಿದ 40ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಎಲ್ಲವೂ ಶಶಿಕಲಾ ಅವರ ಅಣತಿಯಂತೆಯೇ ನಡೆಯುತ್ತಿತ್ತು! ಜಯಲಲಿತಾ ಅಪೋಲೊ ಆಸ್ಪತ್ರೆ ಸೇರಿದ ಮೇಲೂ ಜಯಲಲಿತಾ ಅವರನ್ನು ಮನ್ನಾರ್‌ಗುಡಿ ಗ್ಯಾಂಗ್‌ ನೋಡಿಕೊಳ್ಳುತ್ತಿತ್ತು.

ಮನ್ನಾರ್‌ಗುಡಿಗೆ ಶಶಿಕಲಾ ನಂಟು...
ಶಶಿಕಲಾ ನಟರಾಜನ್‌ ಕುಟುಂಬದವರು ಮೂಲತಹ ತಾಂಜಾವೂರು ಸಮೀಪದ ತಿರುತಿರೈಪೊಂಡಿ ಎಂಬ ಹಳ್ಳಿಯವರು. ಶಶಿಕಲಾ ಪೋಷಕರು 60ರ ದಶಕದಲ್ಲಿ ತಿರುತಿರೈಪೊಂಡಿಯಿಂದ ಸಣ್ಣಪಟ್ಟಣವಾಗಿದ್ದ ಮನ್ನಾರ್‌ಗುಡಿಗೆ ವಲಸೆ ಬರುತ್ತಾರೆ.

ಶಶಿಕಲಾ ಅವರು ಮನ್ನಾರ್‌ಗುಡಿಯಲ್ಲಿ ಮದುವೆ ಮತ್ತು ರಾಜಕೀಯ ಸಮಾರಂಭಗಳ ವಿಡಿಯೊ ಚಿತ್ರಿಕರಣ ಮಾಡುವ ಅಂಗಡಿಯನ್ನು ನಡೆಸುತ್ತಿರುತ್ತಾರೆ.  1975ರಲ್ಲಿ ಶಶಿಕಲಾಗೆ ಜಯಲಲಿತಾ ಅವರ ಪರಿಚಯವಾಗುತ್ತದೆ. ನಂತರದ ದಿನಗಳಲ್ಲಿ ಇಬ್ಬರು ಆಪ್ತರಾಗುತ್ತಾರೆ. ಜಯಲಲಿತಾ ಅವರು  ಶಶಿಕಲಾಗೆ ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡುತ್ತಾರೆ.

ಇತ್ತ ಮನ್ನಾರ್‌ಗುಡಿಯಲ್ಲಿ ಶಶಿಕಲಾ ನಟರಾಜನ್‌ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಾರೆ.  ಶಶಿಕಲಾ   ನೆರವಿನಿಂದ ಸಂಬಂಧಿಕರು, ಆಪ್ತರು, ಹಿತೈಷಿಗಳು ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಾರೆ.  ಈಗಲೂ ದಕ್ಷಿಣ ತಮಿಳುನಾಡಿನ ಸಂಪೂರ್ಣ ಹಿಡಿತ ಶಶಿಕಲಾ ಅವರ ಕೈಯಲ್ಲಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷದ ಟಿಕೆಟ್‌ಗಳನ್ನು ಹಂಚಿಕೆ ಮಾಡಿದ್ದು ಶಶಿಕಲಾ ಎಂಬುದು ಗುಟ್ಟಾಗಿ ಉಳಿದಿಲ್ಲ. ಸುಮಾರು 50 ಸಾವಿರಾ ಕೋಟಿ ರೂಪಾಯಿಗಳನ್ನು ಆಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎಂಬ ಮಾತುಗಳು   ತಮಿಳುನಾಡಿನಲ್ಲಿ  ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT