ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಧ ಮನಸ್ಸು ಮಲಿನಗೊಳಿಸುವುದೇಕೆ?

ಚರ್ಚೆ
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ದಾರಿ ತಪ್ಪುವ ಹುಡುಗರು ಹಾಗೂ ಹಾದಿ ತಪ್ಪಿಸುವ ಹಿರಿಯರ’ ಬಗ್ಗೆ ‘ಕನ್ನಡಿ’ ಅಂಕಣದಲ್ಲಿ ನಟರಾಜ್‌ ಹುಳಿಯಾರ್ ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ (ಪ್ರ.ವಾ., ಫೆ. 15). ಬಾಳು ರೂಪಿಸಿಕೊಳ್ಳುವ ಬಗೆಯನ್ನು ಕಲಿತು ವಿದ್ಯಾಲಯಗಳಿಂದ ಹೊರಬರಬೇಕಾಗಿದ್ದ ವಿದ್ಯಾರ್ಥಿಗಳಲ್ಲಿ ಹಲವರು ಸಮಾಜ ವಿಭಜಿಸುವ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವ ಈ ಸಂದಿಗ್ಧ ಕಾಲದಲ್ಲಿ, ಇಂತಹ ಅನಾಹುತಕ್ಕೆ ಕಾರಣರಾಗುತ್ತಿರುವ  ಪ್ರತಿವ್ಯಕ್ತಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
 
ದಿನಕರ ದೇಸಾಯಿಯವರ ಹಾಡೊಂದಿದೆ. ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ, ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೋ ಸುಂದರ’ ಎಂದು. ಮೃದು ಹೃದಯದಲ್ಲಿ ಮಧುರ ಕನಸುಗಳನ್ನು ತುಂಬಿಕೊಂಡು ವಿದ್ಯಾಲಯಗಳನ್ನು ಪ್ರವೇಶಿಸುವ ಮುಗ್ಧ ಮನಸ್ಸುಗಳು, ಕಾಲೇಜು ಜೀವನದಲ್ಲಿ ಮಲಿನಗೊಳ್ಳುವಂತಹ ವ್ಯವಸ್ಥೆ ಮಾರ್ಗದರ್ಶಕರ ಮೂಲಕವೇ ರೂಪುಗೊಳ್ಳುತ್ತಿರುವುದು ದುರಂತದ ಸಂಗತಿ. ರಾಜಕೀಯ ಶಕ್ತಿಗಳು ಹಿಂಬಾಗಿಲಿನ ಮೂಲಕ ಪ್ರವೇಶ ಪಡೆದಿರುವುದೇ ಇದಕ್ಕೆ ಕಾರಣ. ನಾಳೆ ನಾಡಿನ ನಾಯಕರಾಗಬೇಕಾಗಿರುವ ಮಕ್ಕಳ ಮನಸ್ಸಿನಲ್ಲಿ ಹಿರಿಯರಾದವರು ತಮ್ಮ ಸ್ವಾರ್ಥ ಸಾಧನೆಗಾಗಿ ವಿಷಬೀಜ ಬಿತ್ತುತ್ತಿರುವುದು ಆತಂಕದ ಸಂಗತಿ. ಓದುವ ಮಕ್ಕಳಿಗೆ ಹೊರ ಜಗತ್ತಿನ ವಿದ್ಯಮಾನಗಳ ಅರಿವಿರಬೇಕು. ಆದರೆ ಅವರಿಗೆ ಬೇಕಾಗಿರುವುದು ರಾಜಕಾರಣಿಗಳ ಪಗಡೆಯಾಟದ ದಾಳಗಳಾಗುವ ಸನ್ನಿವೇಶವಲ್ಲ. ಅವರಲ್ಲಿ ಜಾತೀಯತೆ ಮೀರಿದ ಭ್ರಾತೃತ್ವದ ಮನೋಭಾವವನ್ನು  ಬೆಳೆಸುವ ಜವಾಬ್ದಾರಿ ಹಿರಿಯರಲ್ಲಿ, ಅದರಲ್ಲೂ ಶಿಕ್ಷಕರಲ್ಲಿ ಇರಬೇಕು. ಕಲಿಕೆ ಹಾಗೂ ಚಟುವಟಿಕೆಗಳು ಈ ಆಧಾರಸ್ತಂಭದ ಮೇಲೆ ಮುನ್ನಡೆದರೆ ಮಾತ್ರ ಅವರು ಸಮಾಜದ ಆಸ್ತಿಯಾಗಲು ಸಾಧ್ಯ. ಆದರೆ ಆಗುತ್ತಿರುವುದೇನು? 
 
ಕಳೆದ ತಿಂಗಳು ಶೃಂಗೇರಿಯಲ್ಲಿ ವಿದ್ಯಾರ್ಥಿ ನಾಯಕನೊಬ್ಬ ಪರಿಣಾಮಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ. ಪರಿಸ್ಥಿತಿ ಎದುರಿಸುವ ಧೈರ್ಯವನ್ನು ಹೇಳಿಕೊಡಲಾಗದು ಎಂದಾದರೆ, ವಿದ್ಯಾರ್ಥಿ ಸಂಘಟನೆಗಳ ನೇತಾರರು ಸದಸ್ಯರಿಗೆ ಏನು ಹೇಳಿಕೊಟ್ಟಾರು? ಹಾಗಾದರೆ ಅಂತಹ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಗಳಿಗೆ ಕಾಲೇಜು ಕ್ಯಾಂಪಸ್‌ನಲ್ಲಿ ಅವಕಾಶ ಕೊಡುವ ಅಗತ್ಯವಿದೆಯೇ?
 
ಇನ್ನೊಂದು ಕಾಲೇಜಿನಲ್ಲಿ ಕೇಸರಿ ಶಾಲಿನ ಕುರಿತು ಗದ್ದಲ. ಅಗತ್ಯ, ಆಸೆ, ಆಸಕ್ತಿಯಂತಹ ಕಾರಣಗಳಿದ್ದಲ್ಲಿ ಅವರು ಕೇಸರಿಯಾಗಲೀ ಕೆಂಪಾಗಲೀ ಯಾವುದೇ ಶಾಲು ತೊಡಲಿ, ತೊಂದರೆಯಿಲ್ಲ. ಆದರೆ ಯಾರೋ ಕೆಲವರು ಬುರ್ಖಾ ಧರಿಸಿ ಬರುತ್ತಿರುವುದನ್ನು ವಿರೋಧಿಸಲು ಅಥವಾ ಜಿದ್ದಿಗೆ  ಶಾಲನ್ನು ತೊಡುತ್ತೇವೆ ಅಂದರೆ ಏನರ್ಥ? ಓದುವಂತಹ ಅಮೂಲ್ಯ ವೇಳೆ, ಯೌವನದಂತಹ ಅಮೂಲ್ಯ ಕಾಲ ಇಂತಹ ವಿನಾಶಕಾರಿ ಕೆಲಸಕ್ಕೆ ವ್ಯಯವಾಗಬೇಕೇ? ಅವರಿಗೆ ಮಾರ್ಗದರ್ಶನ ನೀಡುತ್ತಿರುವವರು ಯಾಕೆ ಇದನ್ನೆಲ್ಲ ಯೋಚಿಸುವುದಿಲ್ಲ?  ಬೆಳೆಯುತ್ತಿರುವ ಹುಡುಗರಿಗೆ ಅಂತಹ ಹೋರಾಟಗಳಿಂದ ಇಂದಾಗಲೀ ನಾಳೆಯಾಗಲೀ ಸಿಗುವ ಫಲವೇನು? 
 
ನಾವೆಲ್ಲ ಓದುವಾಗ ನಮ್ಮ ಕಾಲೇಜಿನ ಸಹಪಾಠಿಗಳೆಂದರೆ ಎಲ್ಲರಿಗೂ ಅಭಿಮಾನ ಇರುತ್ತಿತ್ತು. ಯಾವುದೇ ಜಾತಿ, ಪಂಥ, ಇಸಮ್‌ಗಳು ಅಡ್ಡಿ ಬರುತ್ತಿರಲಿಲ್ಲ. ಒಮ್ಮೆ ಒಬ್ಬ ಕಂಡಕ್ಟರ್ ಯಾವುದೋ ಗಲಾಟೆಯ ವೇಳೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಹೊಡೆದರು. ಮಾರನೆಯ ದಿನ ಇಡೀ ಕಾಲೇಜು ಬಸ್ ಡಿಪೋ ಮುಂದೆ ಸೇರಿತ್ತು. ಹೊಡೆದ ಕಂಡಕ್ಟರ್ ಯಾವ ಜಾತಿ, ಪೆಟ್ಟು ತಿಂದ ವಿದ್ಯಾರ್ಥಿ ಯಾವ ಗುಂಪು ಯಾವುದೂ ಲೆಕ್ಕಕ್ಕಿರಲಿಲ್ಲ. 
 
ಒಟ್ಟಿಗೆ ಓದುತ್ತಿರುವವರೆಲ್ಲ ಒಂದೇ ಎನ್ನುವ ಭಾವನೆ ಇದ್ದರೆ, ಯಾರೋ ಹಾಕುವ ಬುರ್ಖಾ ನಮಗೆ ಅನುಕಂಪ ತರಿಸಬಹುದೇ ಹೊರತು ದ್ವೇಷಕ್ಕೆ ಕಾರಣವಾಗುವ ಸಾಧ್ಯತೆಯೇ ಇಲ್ಲ.  ಮುಗ್ಧ ಮನಸ್ಸುಗಳಲ್ಲಿರುವ ಮಾನವೀಯತೆ ಕೊಲ್ಲುತ್ತಿರುವವರು ಈ ಬಗ್ಗೆ ಯೋಚಿಸಬೇಕಾಗಿದೆ.
 
ನಮ್ಮದೇ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿ ಚುನಾವಣೆಯ ಕಾಲದಲ್ಲಿ ಬಿಸಿ ಏರಿದಾಗ ಆಡಳಿತ ಮಂಡಳಿಯು ಕಾಲೇಜಿಗೆ ಪೊಲೀಸರನ್ನು ಕರೆಸುವ ಯೋಚನೆ ಮಾಡಿತ್ತು. ಎದುರಾಎದುರು ನಿಂತು ಎಗರಾಡುತ್ತಿದ್ದ ಎದುರಾಳಿಗಳೆಲ್ಲ ಒಗ್ಗಟ್ಟಾಗಿ ಹೋಗಿ, ‘ಕಾಲೇಜಿಗೆ ಪೊಲೀಸರು ಬರುವುದು ನಮಗೆ ಅವಮಾನದ ವಿಚಾರ. ನಾವು ವಿದ್ಯಾರ್ಥಿಗಳೇ ಹೊರತು ವಿಧ್ವಂಸಕರಲ್ಲ’ ಎಂದು ಆಡಳಿತ ಮಂಡಳಿಗೆ ಮನವಿ ಮಾಡಿ ಪೊಲೀಸರು ಬರುವುದನ್ನು ತಡೆದರು.
 
ಕಾಲೇಜಿಗೆ ಹೊರಗಿನದ್ದಾದ ಅಥವಾ ರಾಜಕೀಯ ಪ್ರೇರಿತ ಸಂಘಟನೆಗಳು ನಮ್ಮಲ್ಲಿ ಇಲ್ಲದಿದ್ದುದರಿಂದ ಇದು ಸಾಧ್ಯವಾಯಿತು. ಈಗ ನೋಡಿದರೆ ಹೊರಗಿನವರ ಕುಚೋದ್ಯದಿಂದ ಒಂದೇ ಕಾಲೇಜಿನ ವಿದ್ಯಾರ್ಥಿ ನಾಯಕರು ಪೊಲೀಸರಲ್ಲಿ ಪರಸ್ಪರ ದೂರು  ದಾಖಲಿಸುತ್ತಿದ್ದಾರೆ. ನಮ್ಮಲ್ಲಿ ಜಾತ್ಯತೀತ ಹಾಗೂ ಮಾನವೀಯ ಮೌಲ್ಯಗಳ ನಡುವೆ ಬೆಳೆದ ನಾಯಕನೊಬ್ಬ ಆಮೇಲೆ ನಮ್ಮೂರಿನ ಶಾಸಕನೂ ಆದ, ಜನಾನುರಾಗಿಯೂ ಆದ. ಪ್ರಬಲ ಅಥವಾ ಬಹುಸಂಖ್ಯಾತ ಜಾತಿಯವರಲ್ಲದಿದ್ದರೂ ಚುನಾವಣೆಗಳನ್ನು ಗೆಲ್ಲಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ. ಅವನ ಅಕಾಲಿಕ ಮರಣದ ನಂತರ ಅವನ ಧರ್ಮಪತ್ನಿಯೇ ಈಗ ಶಾಸಕರಾಗಿದ್ದಾರೆ. ಒಳ್ಳೆಯ ವಾತಾವರಣದಲ್ಲಿ ಬೆಳೆದುಬಂದ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಆಸ್ತಿಯಾಗಬಲ್ಲ ಎನ್ನುವುದಕ್ಕೆ ಇದೊಂದು ದೃಷ್ಟಾಂತವಷ್ಟೆ.
 
ಅಂತಹ ವಾತಾವರಣ ಉಳಿಯಬೇಕೆಂದರೆ ನಾವು ವಿದ್ಯಾಲಯಗಳಲ್ಲಿ ರಾಜಕೀಯ ಪ್ರಾಯೋಜಿತ ವಿದ್ಯಾರ್ಥಿ ಸಂಘಟನೆಗಳನ್ನು ಬಹಿಷ್ಕರಿಸಲೇಬೇಕು. ಪೂರ್ತಿ ಅರಿವನ್ನೂ ಅನುಭವವನ್ನೂ ಸಂಪಾದಿಸುವ ಮೊದಲೇ ವಿದ್ಯಾರ್ಥಿಗಳು ಯಾವುದೇ ಇಸಂ, ಪಂಥಗಳಿಗೆ ದಾಸರಾಗುವುದು ಬೇಡ, ಅದಕ್ಕಾಗಿ ಬಡಿದಾಡುವುದೂ ಬೇಡ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT