ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದವರಲ್ಲಿ ಋತುಯಾತನೆ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಾಲ್ಯಾವಸ್ಥೆಯಲ್ಲಿ ಕುಣಿದು ಕುಪ್ಪಳಿಸಿ, ಉತ್ಸಾಹದ ಚಿಲುಮೆಯಂತಿದ್ದ ಬಾಲೆಯು ಪ್ರೌಢಾವಸ್ಥೆಗೆ ಕಾಲಿಡುವಾಗ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಅನ್ನ ಮತ್ತು ನೀರನ್ನೂ ಸರಿಯಾಗಿ ತೆಗೆದುಕೊಳ್ಳದೇ ನೋವಿನಿಂದ ಮುದುರಿ ಮಲಗುವುದು, ಶಾಲೆ–ಪರೀಕ್ಷೆಗಳಿಗೆ ಚಕ್ಕರ್ ಹಾಕುವಂತಹ ಸಂದರ್ಭಗಳು ಒದಗಿಬಂದು ಪಾಲಕರು-ಪೋಷಕರು ಆತಂಕಕ್ಕೊಳಗಾಗುವ ಸನ್ನಿವೇಶಗಳಿಗೆ ಕೊರತೆಯೇನಿಲ್ಲ.

  ಹದಿಹರೆಯದವರ ಋತುಯಾತನೆಯಿಂದ ಹಲವು ಹೆಣ್ಣುಮಕ್ಕಳ ಶೈಕ್ಷಣಿಕ, ಸಾಮಾಜಿಕ, ಕ್ರೀಡಾಚಟುವಟಿಕೆಗಳಿಗೆ ಗಮನಾರ್ಹ ತೊಂದರೆಯುಂಟಾಗುತ್ತಿದೆ. ಆದ್ದರಿಂದ ಈ ಬಗ್ಗೆ ಪಾಲಕರಿಗೂ ಶಿಕ್ಷಕರಿಗೂ ಸ್ವತಃ ಹದಿವಯಸ್ಸಿನ ಹೆಣ್ಣುಮಕ್ಕಳಿಗೂ ಅರಿವಿರಲೇಬೇಕು. ಏನಿದು ಹದಿಹರೆಯದವರ ಋತುಯಾತನೆ? (ಡಿಸ್ಮೆನೋರಿಯಾ - ನೋವಿನ ಮುಟ್ಟು) ಇದೊಂದು ಹದಿವಯಸ್ಸಿನ ತರುಣಿಯರಲ್ಲಿ ಆಗುವ ಅತಿಸಾಮಾನ್ಯ ತೊಂದರೆ. ಶೇ.65–80ರಷ್ಟು ಜನರಲ್ಲಿ ಬೇರೆ ಬೇರೆ ತೀವ್ರತೆಯುಳ್ಳ ನೋವು, ಕಿರಿಕಿರಿ, ಒಂದಲ್ಲ ಒಂದು ರೀತಿಯ ಅಸಹಜತೆಯನ್ನು ಅನುಭವಿಸುತ್ತಾರೆ.

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಋತುಯಾತನೆ’ ಅಥವಾ ‘ಡಿಸ್ಮೆನೋರಿಯಾ’ ಎನ್ನುತ್ತಾರೆ. ಆದರೆ ಸುಮಾರು ಶೇ.15ರಷ್ಟು ಜನರು ಮಾತ್ರ ವೈದ್ಯಕೀಯ ನೆರವನ್ನು ಬಯಸುತ್ತಾರೆ. ಈ ಋತುಯಾತನೆಯಲ್ಲಿ ಪ್ರಾಥಮಿಕ ಋತುಯಾತನೆ, ಎಂದರೆ ಗರ್ಭಕೋಶವು ಸಹಜಸ್ಥಿತಿಯಲ್ಲಿದ್ದು ಯಾವುದೇ ಕಾಯಿಲೆಗಳಿಲ್ಲದೇ ಬರುವ ನೋವು. ಇದು ಹರೆಯದವರಲ್ಲಿ ಅತಿಸಾಮಾನ್ಯ (16–20 ವರ್ಷದವರಲ್ಲಿ).

ದ್ವಿತೀಯ ಸ್ತರದ ಋತುಯಾತನೆ, ಎಂದರೆ ನಿರ್ದಿಷ್ಟ ಕಾರಣಗಳಿಂದ ಅಂದರೆ ಗರ್ಭಕೋಶದ ಸೋಂಕು, ಎಂಡೋಮೆಟ್ರಿಯೋಸಿಸ್ ಇತ್ಯಾದಿಗಳಿಂದ ಬರುವಂಥದ್ದು. ಇದು ಹದಿವಯಸ್ಸಿನವರಲ್ಲಿ ಬಹಳ ಅಪರೂಪವಾದರೂ ಇತ್ತೀಚೆಗೆ ಹದಿವಯಸ್ಸಿನಲ್ಲೇ ಲೈಂಗಿಕತೆ ಹೆಚ್ಚಾಗಿರುವುದರಿಂದ ದ್ವಿತೀಯ ಋತುಯಾತನೆಯೂ ಕಂಡುಬರಬಹುದು.

ಪ್ರಾಥಮಿಕ ಋತುಯಾತನೆ (ನೋವಿನ ಮುಟ್ಟು) - ಸ್ಪಾಸ್ಮೋಡಿಕ್ ಡಿಸ್ಮೆನೋರಿಯಾ
ಇದು ಹೆಚ್ಚಾಗಿ ಋತುಚಕ್ರ ಪ್ರಾರಂಭವಾಗಿ ಒಂದೆರಡು ವರ್ಷಗಳಲ್ಲಿ, ಹೈಪೋಥಲಾಮಸ್-ಪಿಟ್ಯೂಟರಿ-ಅಂಡಾಶಯದ ಅಕ್ಷವು ಪಕ್ವವಾದ ಮೇಲೆ ಅಂಡೋತ್ಪತ್ತಿಸಹಿತ ಋತುಚಕ್ರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಂತರ 20–22 ವರ್ಷದೊಳಗೆ ಕಡಿಮೆಯಾಗುತ್ತ ಬರುತ್ತದೆ.

ಹೆರಿಗೆಯಾದ ಅನಂತರವಂತೂ ಇದು ಬಹಳ ಅಪರೂಪ. ಹೆಚ್ಚು ಶ್ರೀಮಂತ ವರ್ಗ ಹಾಗೂ ಮಧ್ಯಮ ವರ್ಗದವರಲ್ಲಿ ಕಡಿಮೆ ದೈಹಿಕ ಶ್ರಮ ವಹಿಸುವ ಒಟ್ಟಾರೆ ಕಡಿಮೆ ಕಷ್ಟಸಹಿಷ್ಣುತೆಯುಳ್ಳವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.  ಮಾನಸಿಕ ಆತಂಕ ಇದ್ದವರಲ್ಲಿಯೂ, ಉದಾಹರಣೆಗಾಗಿ ಪರೀಕ್ಷಾ ಆತಂಕ, ಔದ್ಯೋಗಿಕ ಒತ್ತಡ ಇರುವವರಲ್ಲಿ ಹೆಚ್ಚಾಗಿ ಕಂಡುಬರಬಹುದು.

ಗುಣಲಕ್ಷಣಗಳೇನು?
ಇದು ಒಬ್ಬೊಬ್ಬರಿಗೆ ಒಂದೊಂದು ತರಹದ ತೀವ್ರತೆಯಲ್ಲಿ ಕಂಡು ಬರುವುದು. ಕೆಲವರಲ್ಲಿ ಕಿಬ್ಬೊಟ್ಟೆಯಲ್ಲಿ ಹಗುರಾದ ನೋವು ಮುಟ್ಟು ಶುರುವಾಗುವುದಕ್ಕೆ ಮೊದಲೇ ಆರಂಭವಾಗಬಹುದು; ಇಲ್ಲವೇ ಋತುಸ್ರಾವದ ಜೊತೆಗೆ ಆರಂಭವಾಗುವುದು. ಕೆಲವರಿಗೆ ಸೊಂಟದ ನೋವು, ತೊಡೆ, ಮೊಣಕಾಲಿನವರೆಗೆ ವ್ಯಾಪಿಸಬಹುದು. ಶೇ.95ರಷ್ಟು ಜನರಲ್ಲಿ ಇಂತಹ ಮಂದಗತಿಯ ನೋವಿದ್ದು ದಿನನಿತ್ಯದ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ.

ಇನ್ನು ಸುಮಾರು ಶೇ.5ರಷ್ಟು ಜನರಲ್ಲಿ ತೀವ್ರತರನಾದ ನೋವಿನ ಮುಟ್ಟು ಕಾಣಿಸಿಕೊಳ್ಳಬಹುದು. ಕಿಬ್ಬೊಟ್ಟೆಯಲ್ಲಿ ಹಿಸುಕಿದಂತಹ ನೋವು; ಈ ನೋವು ಅತಿಯಾಗಿ ಪ್ರಜ್ಞಾಹೀನಸ್ಥಿತಿಗೂ ತಲುಪಬಹುದು. ಕೆಲವರಲ್ಲಿ ವಾಂತಿ, ತಲೆಸುತ್ತು ಕಾಣಿಸಿಕೊಳ್ಳಬಹುದು. ಕೆಲವರಿಗೆ ಕಣ್ಣುಬಿಡಲಾಗದೇ ಇರಬಹುದು.

ಕೆಲವರಲ್ಲಿ ಪದೇ ಪದೇ ಮೂತ್ರವಿಸರ್ಜನೆ ಮಾಡಬಹುದು. ಇನ್ನು ಕೆಲವರಲ್ಲಿ ಗುದದ್ವಾರ, ದೊಡ್ಡಕರುಳು ಹಿಂಡಿದ ಹಾಗೆ ಆಗಿ ಬೇಧಿಯಾಗಬಹುದು. ಇವೆಲ್ಲ ಲಕ್ಷಣಗಳೂ ಒಟ್ಟಿಗೇ ಇರಬಹುದು ಅಥವಾ ಯಾವುದಾದರೊಂದು ಲಕ್ಷಣಗಳು ಇದ್ದು 10–12 ಗಂಟೆಗಳ ಕಾಲ ಕಂಡುಬಂದು ನಂತರ ಕಡಿಮೆಯಾಗಬಹುದು.

ಕೆಲವರಲ್ಲಿ  ಈ ತೊಂದರೆಗಳು ಎರಡು–ಮೂರು ದಿನಗಳು ಮುಂದುವರಿಯುತ್ತವೆ. ಇಂತಹ ತೀವ್ರನೋವಿಗೆ ಕಾರಣ – ಗರ್ಭಕೋಶದ ಒಳಾವರಣದಲ್ಲಿ ಉತ್ಪತ್ತಿಯಾಗುವ ಪ್ರೋಸ್ಟಗ್ಲಾಂಡಿನ್ ಹಾಗೂ ಇನ್ನಿತರ ಸ್ಥಳೀಯ ರಸದೂತಗಳ ಪ್ರಭಾವದಿಂದ ಗರ್ಭಕೋಶದ ಸ್ನಾಯುಗಳ ಎಳೆಗಳು ತೀವ್ರವಾಗಿ ಸಂಕುಚಿಸಿದಾಗ ಇಡೀ ಗರ್ಭಕೋಶ ಬಿಗಿದುಕೊಂಡು, ಗರ್ಭಕೋಶದ ಒತ್ತಡ ಹೆಚ್ಚಾಗಿ ರಕ್ತನಾಳಗಳು ತಾತ್ಕಾಲಿಕವಾಗಿ ಅದುಮಲ್ಪಟ್ಟು, ಗರ್ಭಕೋಶಕ್ಕೆ ರಕ್ತಸರಬರಾಜು ಒಂದೆರಡು ಕ್ಷಣ ನಿಂತುಬಿಡುತ್ತದೆ. ಇದರಿಂದ ಕಿವುಚಿದಂತಹ ನೋವುಂಟಾಗಿ, ಮುಖವೆಲ್ಲಾ ಬೆವೆತು, ಬಿಳಿಚಿಕೊಳ್ಳುತ್ತದೆ.

ಹೀಗೆ ಗರ್ಭಕೋಶದ ಸ್ನಾಯುಗಳಿಗೆ ರಕ್ತಸರಬರಾಜು ಕಡಿಮೆಯಾಗುವುದೇ ನೋವಿನ ಮುಖ್ಯ ಕಾರಣ. ಮುಟ್ಟಿನ ಮೊದಲ ದಿನಗಳಲ್ಲಿ ಈ ನೋವು ಹೆಚ್ಚಿದ್ದು, ನಂತರದ ದಿನಗಳಲ್ಲಿ ಲೋಳೆಪದರ ಕಳಚಿ ಬಿದ್ದ ಹಾಗೆ ನೋವಿನ ತೀವ್ರತೆಯೂ ಕಡಿಮೆಯಾಗುತ್ತಬರುತ್ತದೆ. ಅಂಡೋತ್ಪತ್ತಿಯ ನಂತರ ಉತ್ಪತ್ತಿಯಾಗುವ ಪ್ರೊಜಿಸ್ಟಿರಾನ್ ಹಾರ್ಮೋನು ಕೂಡ ಗರ್ಭಕೋಶವನ್ನು ಸಂಕುಚಿಸುವಂತೆ ಮಾಡಿ, ನೋವಿಗೆ ಕಾರಣವಾಗುತ್ತದೆ.

ಇನ್ನು ಕೆಲವರಲ್ಲಿ ಗರ್ಭಕೋಶದ ರಚನೆಯಲ್ಲೇ ವ್ಯತ್ಯಾಸವಿದ್ದು, ಉದಾಹರಣೆಗೆ ಗರ್ಭಕೋಶದ ಮಧ್ಯೆ ಒಳಗಡೆ ತಡೆಗೋಡೆಯಿದ್ದು (ಸೆಪ್ಟಂ) ಗರ್ಭಕೋಶ ಇಬ್ಬಾಗವಾಗಿರುವುದು, ಸಹಜವಾಗಿರುವುದಕ್ಕಿಂತಲೂ ಹೆಚ್ಚಾಗಿ ಬಾಗಿರುವುದು (ರಿಟ್ರೋವರ್ಟೆಡ್), ಮುಂತಾದವು ಕೂಡ ನೋವಿಗೆ ಕಾರಣವಾಗಬಹುದು.

ಜೊತೆಗೆ ಗರ್ಭಕೋಶ ಮೇಲ್ಭಾಗ ಕುಗ್ಗುವಾಗ ಗರ್ಭದ್ವಾರ ಅಗಲವಾಗಿ ರಕ್ತಸ್ರಾವ ಹೊರಹೋಗುವಾಗ ಅಡಚಣೆಯಿಂದಾಗಿ ನೋವುಂಟಾಗುತ್ತದೆ. (ಹೆರಿಗೆಯ ನಂತರ ಗರ್ಭದ್ವಾರ ಅಗಲವಾಗಿ ನೋವು ಕಡಿಮೆಯಾಗುತ್ತದೆ ಎಂಬ ವಿವರಣೆಗೆ ಇದು ಪುಷ್ಟಿ ನೀಡುತ್ತದೆ) ಈ ಋತುಯಾತನೆಯನ್ನು ಪತ್ತೆಹಚ್ಚಲು ವಿಶೇಷ ಪರೀಕ್ಷೆಗಳೇನೂ ಇಲ್ಲ. ಸರಿಯಾದ ಚರಿತ್ರೆ ತೆಗೆದುಕೊಳ್ಳುವುದು ಅತಿ ಮುಖ್ಯ.

ಚಿಕಿತ್ಸೆ ಏನು?
ನೋವಿನ ಉಪಶಮನ ಮಾಡುವುದೇ ಚಿಕಿತ್ಸೆಯೇ ಮುಖ್ಯ ಉದ್ದೇಶ. ಮೊದಲನೆಯದಾಗಿ: ಮುಟ್ಟಿನ ಪ್ರಕ್ರಿಯೆ ಹೇಗೆ ಸಹಜವೋ ಹಾಗೇ ಸ್ವಲ್ಪ ಮಟ್ಟಿನ ನೋವು ಕೂಡ ಪ್ರಕೃತಿ ಸಹಜವೆಂದು ಭಾವಿಸಿ ಸ್ವಲ್ಪ ನೋವಿಗೆಲ್ಲ ಅತಿಯಾದ ಮಹತ್ವ ಕೊಡದೇ ಇರುವುದು ಒಳ್ಳೆಯದು. ಆದರೆ ನೋವಿನ ತೀವ್ರತೆ ಅತಿಯಾಗಿ ದಿನನಿತ್ಯ ಚಟುವಟಿಕೆಗಳಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳುವುದು ಅತಿಮುಖ್ಯ.

ಸಣ್ಣಪ್ರಮಾಣದ ಕಿಬ್ಬೊಟ್ಟೆ ನೋವಿಗೆ ಬಿಸಿನೀರಿನ ಶಾಖ (ಹಾಟ್ ಬ್ಯಾಗ್ ಅಥವಾ ಬಿಸಿಬಟ್ಟೆಯ) ತೆಗೆದುಕೊಳ್ಳುವುದರಿಂದ ನೋವು ಕಡಿಮೆಯಾಗುವುದು.
ನೋವುನಿವಾರಕ ಮಾತ್ರೆಗಳಾದ ಆಸ್ಪಿರಿನ್, ಇಬುಪ್ರೊಫೆನ್, ಪ್ಯಾರಾಸಿಟಮಾಲ್, ಮೆಫನೆಮಿಕ್‌ಆಸಿಡ್, ನೆಪ್ರಾಕ್ಸೆನ್ ಇವುಗಳಲ್ಲಿ ಯಾವುದಾದರೊಂದು ಮಾತ್ರೆಯನ್ನು ವೈದ್ಯರ ಸಲಹೆಯ ಮೇರೆಗೆ ಮುಟ್ಟಿನ ನೋವಿನ ಸಮಯದಲ್ಲಿ ಮಾತ್ರ ಸೇವಿಸುವುದು.

ಮುಟ್ಟಿನ ಸಮಯದಲ್ಲಿ ಕೆಫೀನ್, ಆಲ್ಕೋಹಾಲ್, ಚಾಕೋಲೇಟ್ ಪದಾರ್ಥಗಳು, ಕೆಂಪುಮಾಂಸ, ಅತಿಯಾದ ಡೈರಿ ಉತ್ಪನ್ನಗಳು, ಉಪ್ಪಿನಾಂಶ ಹೆಚ್ಚಿರುವ ಆಹಾರ. ಜಂಕ್‌ಫುಡ್‌ಗಳು, ಅತಿಯಾದ ಕರಿದ-ಹುರಿದ ಆಹಾರಗಳನ್ನು ಕಡಿಮೆ ಸೇವಿಸಬೇಕು. ನಿಂಬೆ, ದಾಲ್ಚಿನ್ನಿ, ಶುಂಠಿ ಇತ್ಯಾದಿಗಳನ್ನು ಮಿತವಾಗಿ ಸೇವಿಸುವುದು ನೋವು ನಿವಾರಕವಾಗಿ ಕೆಲಸಮಾಡುತ್ತದೆ.

ಮಲಬದ್ಧತೆಯಾಗದ ಹಾಗೇ ನಾರಿನಾಂಶಗಳುಳ್ಳ ಹಸಿರುಸೊಪ್ಪು, ತರಕಾರಿಗಳನ್ನು ಹೆಚ್ಚಿಗೆ ಸೇವಿಸಬೇಕು. ಕನಿಷ್ಠ  3–4 ಲೀಟರ್ ನೀರು ಮತ್ತು ಇನ್ನಿತರ ದ್ರವ ಆಹಾರಗಳನ್ನು ಕುಡಿಯಬೇಕು. ಪೌಷ್ಟಿಕ ಆಹಾರಸೇವನೆಯೊಂದಿಗೆ ನಿಯಮಿತ ದೈಹಿಕ ಚಟುವಟಿಕೆಯೂ ಎಂಡೋರ್ಫಿನ್‌ಗಳನ್ನು ಬಿಡುಗಡೆಗೊಳಿಸಿ ನೋವು ನಿವಾರಣೆಗೆ ಸಹಾಯವಾಗುತ್ತದೆ.

ತಡೆಗಟ್ಟಲು ಸಾಧ್ಯವೇ?
ಹಲವಾರು ಅಧ್ಯಯನಗಳಿಂದ ನಿಯಮಿತ ಯೋಗಾಭ್ಯಾಸದಿಂದ ಶೇ.88–90ರಷ್ಟು ನೋವು ಸಂಪೂರ್ಣ ನಿವಾರಣೆಯಾಗುವುದು. ಶೇ.10–12ರಷ್ಟು ಜನರಲ್ಲಿ ನೋವಿನ ತೀವ್ರತೆ ಕಡಿಮೆಯಾಗುವುದು ಕಂಡುಬಂದಿದೆ.

ಯಾವ ಯೋಗಾಸನಗಳು ಸಹಾಯ?
ಬದ್ಧಕೋಣಾಸನ, ಜಾನುಶಿರ್ಷಾಸನ, ವಜ್ರಾಸನ, ಧನುರಾಸನ, ಸೇತುಬಂಧ ಸರ್ವಾಂಗಾಸನ, ಉಷ್ಟ್ರಾಸನ, ಅಧೋಮುಖ ಶ್ವಾನಾಸನ, ಉತ್ಥಿತಪಾರ್ಶ್ವಕೋಣಾಸನ, ಮತ್ಸ್ಯಾಸನ, ಅರ್ಧಮತ್ಸ್ಯೇಂದ್ರಾಸನ, ಅರ್ಧಚಂದ್ರಾಸನ, ವಿಪರೀತಕರಣಿ, ಪದ್ಮಾಸನ, ಮರೀಚಾಸನ, ಪಾಶಾಸನ, ಸುಪ್ತಬದ್ಧಕೋಣಾಸನ, ಸುಪ್ತಪಾದಾಂಗುಷ್ಟಾಸನ, ಸುಪ್ತವೀರಾಸನ, ಪಶ್ಚಿಮೋತ್ಥಾಸನ, ಹಾಲಾಸನ ಮುಂತಾದವು ಗರ್ಭಕೋಶ ಹಾಗೂ ಅಸ್ಥಿಕುಹರದ ಭಾಗಕ್ಕೆ (ಪೆಲ್ವಿಸ್) ರಕ್ತಸರಬರಾಜನ್ನು ಹೆಚ್ಚಿಸಿ, ಸ್ನಾಯುಗಳನ್ನು ಸಡಿಲಿಸಿ ನೋವಿನ ತೀವ್ರತೆಯನ್ನು ಕಡಿಮೆಮಾಡುತ್ತದೆ.

ನಿಯಮಿತವಾಗಿ ಸೂರ್ಯನಮಸ್ಕಾರ ಮಾಡುವುದು ಸಹಾಯಕ. ಪ್ರಾಣಾಯಾಮಗಳ ಅಭ್ಯಾಸವನ್ನು ನಿಯಮಿತವಾಗಿ ಮಾಡುವುದು, ವಿಶ್ರಾಂತಿ ಅಭ್ಯಾಸಗಳು (ರಿಲಾಕ್ಸಿಂಗ್ ಟೆಕ್ನಿಕ್) ಕೂಡ ಋತುಯಾತನೆಯನ್ನು ಎದುರಿಸಲು ಪ್ರಯೋಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT