ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವಿಭಾಗದಲ್ಲೂ ಉತ್ತಮ ಭವಿಷ್ಯವಿದೆ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾನು ಕಳೆದ 3 ವರ್ಷಗಳಿಂದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಇಬ್ಬರದೂ ಒಂದೇ ಜಾತಿ. ಆದರೆ, ನಮ್ಮ ಸಂಬಂಧಿಕರೊಬ್ಬರು ಅವರ ಸಂಬಂಧಿಕರ ಜೊತೆಗೆ ವಿವಾಹ ಸಂಬಂಧ ಬೆಳೆಸಿದ್ದಾರೆ. ಈಗ ಅದು ನಮ್ಮ ಪ್ರೇಮಕ್ಕೆ ಅಡ್ಡ ಬರುತ್ತಿದೆ. ಈಗ ನಾವಿಬ್ಬರು ವರಸೆಯಲ್ಲಿ ಅಣ್ಣ ತಂಗಿ ಆಗುತ್ತಿದ್ದೇವೆ. ಏನು ಮಾಡಬೇಕೆಂದು ತೋಚುತ್ತಿಲ್ಲ? ದಯವಿಟ್ಟು ಸಹಾಯ ಮಾಡಿ.
ರಕ್ತ ಸಂಬಂಧಿಗಳಲ್ಲಿ ಮದುವೆ ಆಗುವುದು ವೈದ್ಯಕೀಯ ದೃಷ್ಟಿಯಿಂದ ಅಷ್ಟು ಉಚಿತವಲ್ಲ. ಹೀಗೆ ಆದರೆ ಅದು ಅವರಿಗೆ ಹುಟ್ಟುವ ಮಕ್ಕಳ ಮೇಲೆ ಹಾಗೂ ಮುಂದಿನ ಪೀಳಿಗೆಯವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಲವಾರು ಉದಾಹರಣೆಗಳಿವೆ. 

ಆದರೆ ನೀವು ‘ವರಸೆಯಲ್ಲಿ ಅಣ್ಣ ತಂಗಿ ಆಗುತ್ತಿದ್ದೇವೆ’ ಎಂದು ಹೇಳಿರುವುದು ಬಿಟ್ಟರೆ ಅದು ಯಾವ ರೀತಿಯದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಒಂದು ವೇಳೆ ಇಬ್ಬರದ್ದೂ ಸಂಪೂರ್ಣವಾಗಿ ವಿಭಿನ್ನ ಕುಟುಂಬವಾಗಿದ್ದು ರಕ್ತ ಸಂಬಂಧಿಗಳು ಅಲ್ಲದಿದ್ದಲ್ಲಿ ಮದುವೆಗೆ ತೊಂದರೆ ಇಲ್ಲ. ನಿಮ್ಮ ಪೋಷಕರು ಮದುವೆಗೆ ಅಡ್ಡಿ ಮಾಡಲು ಇದೂ ಒಂದು ಕಾರಣ ಇದ್ದೀತು. ಸತ್ಯ ತಿಳಿದ ಮೇಲೆ ನಿಮ್ಮ ಪೋಷಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

*
ನಾನು ಪದವಿ ಓದುತ್ತಿದ್ದೇನೆ. ನನಗಿಂತ ಒಂದೆರಡು ವರ್ಷ ಚಿಕ್ಕವಳಾದ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಅವಳು ನನ್ನ ಪ್ರೀತಿಯನ್ನು ನಿರಾಕರಿಸಿದಳು. ಅವಳೀಗ ಬೇರೆ ಹುಡುಗನನ್ನು ಹುಡುಕುತ್ತಿರುವುದಾಗಿ ಹೇಳುತ್ತಿದ್ದಾಳೆ. ನಾನು ತುಂಬಾ ಅವಮಾನ, ಮುಜುಗರಕ್ಕೆ ಒಳಗಾಗಿದ್ದೇನೆ. ಇನ್ನೇನು ಪರೀಕ್ಷೆಗಳು ಶುರುವಾಗುವ ಸಮಯ. ಆದರೆ ಇದರಿಂದಾಗಿ ಓದಿನತ್ತ ಏಕಾಗ್ರತೆ ಬರುತ್ತಿಲ್ಲ. ಏನು ಮಾಡಲಿ?

ಕಾಲೇಜಿಗೆ ಹೋಗುವ ಸಮಯದಲ್ಲಿ ಪ್ರೀತಿಯ ಆಕರ್ಷಣೆ ಸಹಜ. ಅವಳು ನಿರಾಕರಿಸಿದ್ದರಿಂದ ಅವಮಾನ ಆಗಿದೆ ಎಂಬ ಮನೋಭಾವವನ್ನು ಮನಸ್ಸಿನಿಂದ ತೆಗೆದುಬಿಡಿ. ಪದೇಪದೇ ಇದನ್ನೇ ಚಿಂತಿಸುತ್ತಾ ಮನಸು ಹಾಳು ಮಾಡಿಕೊಳ್ಳಬೇಡಿ. ಏಕಾಏಕಿಯಾಗಿ ಇದರಿಂದ ಹೊರಕ್ಕೆ ಬರುವುದು ನಿಮಗೆ ಕಷ್ಟವಾಗಬಹುದು.  ಸಮಯ ಎಲ್ಲವನ್ನೂ ಮರೆಸುತ್ತದೆ. ಈಗ ನಿಮ್ಮ ಭವಿಷ್ಯದ ದೃಷ್ಟಿಯಿಂದ ನಿಮಗೆ ಬೇಕಿರುವುದು ಓದು. ಅದರತ್ತ ಮನಸ್ಸನ್ನು ಕೇಂದ್ರೀಕರಿಸಿ. ಭವಿಷ್ಯದ ಚಿಂತನೆಯತ್ತ ಮನಸ್ಸನ್ನು ಹರಿಸಿ. ಎಲ್ಲವೂ ಒಳ್ಳೆಯದಾಗುತ್ತದೆ.

*
ನನಗೆ ಕಲಾ ವಿಭಾಗದಲ್ಲಿ ಆಸಕ್ತಿ. ಆದರೆ ಅದನ್ನು ಕಲಿತರೆ ಮುಂದೆ ಕೆಲಸ ಸಿಗುವುದಿಲ್ಲ ಎನ್ನುವುದು ಪೋಷಕರ ಮಾತು. ವಾಣಿಜ್ಯ ಅಥವಾ ವಿಜ್ಞಾನ ತೆಗೆದುಕೊಳ್ಳಲು ಅವರು ಬಲವಂತ ಮಾಡುತ್ತಿದ್ದಾರೆ. ನನಗೆ ಅದು ಸ್ವಲ್ಪವೂ ಇಷ್ಟವಿಲ್ಲ. ಅಪ್ಪ–ಅಮ್ಮನಿಗೆ ಹೇಗೆ ಬುದ್ಧಿ ಹೇಳಲಿ?
ಸಂಜಯ, ಕೋರಮಂಗಲ

ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಭವಿಷ್ಯವಿಲ್ಲ ಎಂದು ನಿಮ್ಮ ಪೋಷಕರು ಅಂದುಕೊಂಡಿರುವುದು ತಪ್ಪು. ಅದರಲ್ಲೂ ಉಜ್ವಲ ಭವಿಷ್ಯವಿದೆ. ಮುಂದೆ, ಕಾನೂನು, ಮಲ್ಟಿಮೀಡಿಯಾ, ಸಂಶೋಧನೆ ಇತ್ಯಾದಿ ಅಧ್ಯಯನ ನಡೆಸಲು ಕಲಾ ವಿಭಾಗವೇ ಸಹಕಾರಿ. ಕಲಾ ವಿಭಾಗದಲ್ಲಿಯೇ ಕಲಿತು ಬೃಹತ್‌ ಮಟ್ಟದಲ್ಲಿ ಸಾಧನೆ ಮಾಡಿದವರು ಲಕ್ಷಾಂತರ ಮಂದಿ ಇದ್ದಾರೆ. ಕಲಾ ವಿಭಾಗವನ್ನು ಕೇವಲವಾಗಿ ತೆಗೆದುಕೊಳ್ಳಬಾರದು. ಬದ್ಧತೆಯಿಂದ ಅಧ್ಯಯನ ನಡೆಸುವುದು ಮುಖ್ಯ.

ಪ್ರಶ್ನೆ ಕಳುಹಿಸಿ : ನಮ್ಮ ಇಮೇಲ್‌– metropv@prajavani.co.in ವಾಟ್ಸ್‌ಆ್ಯಪ್: 9513322931

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT