ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸವಿಯ ಅವರೆ ಮೇಳ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಗರದಲ್ಲಿ ನಿಯಮಿತವಾಗಿ ಆಯೋಜನೆಗೊಳ್ಳುವ ಕಡಲೇಕಾಯಿ ಪರಿಷೆ, ಅವರೆ ಮೇಳ, ದೇಸಿ ಮೇಳಗಳು  ನಗರ–ಗ್ರಾಮದ ನಡುವಿನ ಕೊಂಡಿಗಳಂತೆ ಕಾರ್ಯನಿರ್ವಹಿಸುತ್ತಿವೆ.

ಇದೀಗ ಆರ್.ಟಿ.ನಗರದ ದಿಣ್ಣೂರು ಮುಖ್ಯರಸ್ತೆಯ ಪಾನಿಪುರಿ ಗ್ರೌಂಡ್‌ನಲ್ಲಿ ‘ಮಾಗಡಿ ರೈತರ ಅವರೆ ಕಾಳು ಮೇಳ’ ನಡೆಯುತ್ತಿದೆ. 17 ವರ್ಷಗಳಿಂದ ನಗರದಲ್ಲಿ ಅವರೆ ಮೇಳ ಆಯೋಜಿಸುತ್ತಾ ಬಂದಿರುವ ವಾಸವಿ ಕಾಂಡಿಮೆಂಟ್ಸ್‌ ಈ ಮೇಳದ ರೂವಾರಿ.

ಮೇಳದ ಮೆನು ಸಂಪೂರ್ಣವಾಗಿ ಅವರೇಕಾಳುಮಯ. ರಾಗಿ ಮುದ್ದೆ ಅವರೆಕಾಳು ಸಾರು, ಅವರೆ ಕಾಯಿ ಉಪ್ಪಿಟ್ಟು, ಹಿತಕಬೇಳೆ ಎಳ್ಳವರೆ, ಅವರೆಬೇಳೆ ಮಸಾಲೆ ಇಡ್ಲಿ, ಅವರೆಕಾಯಿ ಉಸಲಿ, ಒತ್ತು ಶಾವಿಗೆ ಅವರೆಕಾಳು, ಅವರೆಕಾಳಿನಿಂದ ಮಾಡಿದ ವಿವಿಧ ರೀತಿಯ ದೋಸೆಗಳು, ಪಲಾವ್, ಅವರೆಕಾಳು ವಡೆ, ಬೋಂಡಗಳು ಸೇರಿದಂತೆ ತರಹೆವಾರಿ ಅವರೆಕಾಯಿ ಖಾದ್ಯಗಳು ಆಹಾರ ಪ್ರಿಯರ ಹೊಟ್ಟೆ ತಣಿಸಲು ಸಜ್ಜಾಗಿವೆ.

ಅವರೆಬೇಳೆಯಿಂದ ಮಾಡಿದ ಸಿಹಿತಿಂಡಿಗಳು ಮೇಳದ ಪ್ರಮುಖ ಆಕರ್ಷಣೆ. ಅವರೆಕಾಯಿ ಹಲ್ವಾ, ಮೈಸೂರು ಪಾಕು, ಜಿಲೇಬಿ, ಅವರೆಬೇಳೆ ಬರ್ಫಿ, ಹಿತಕಬೇಳೆ ಸೋನ್‌ಪಪ್ಪಡಿಗಳ ಜೊತೆಗೆ ಕುರುಕುಲುಗಳಾದ ಕಾಂಗ್ರೆಸ್ ಮಿಕ್ಸ್‌ ಹಿತಕಬೇಳೆ, ಪುದೀನ, ಹಿತಕಬೇಳೆ, ನಿಪ್ಪಟ್ಟು, ಖಾರ ಹಿತಕಬೇಳೆಗಳೂ ಮೇಳದಲ್ಲಿ ಲಭ್ಯ.

ಮೇಳದಲ್ಲಿ ಬಳಸುತ್ತಿರುವುದು ಮಾಗಡಿಯ ರೈತರು ಬೆಳೆದ ಅವರೆಕಾಯಿ. ‘ಮಾಗಡಿಯ ಅವರೆ ಉತ್ತಮ ಗುಣಮಟ್ಟದ್ದಾಗಿರುತ್ತದೆ, ರುಚಿಯೂ ಹೆಚ್ಚು ಎನ್ನುತ್ತಾರೆ’ ಮೇಳದ ಆಯೋಜಕರಾದ ವಾಸವಿ ಕಾಂಡಿಮೆಂಟ್ಸ್‌ನ ಗೀತಾ ಶಿವಕುಮಾರ್. 

‘ಮೇಳದಲ್ಲಿ ನುರಿತ ಬಾಣಸಿಗರಷ್ಟೆ ಆಹಾರ ತಯಾರಿಸುತ್ತಾರೆ, ಗುಣಮಟ್ಟ ಹಾಗೂ ಶುಚಿತ್ವವೇ ನಮ್ಮ ಮೊದಲ ಆದ್ಯತೆ, ಆಹಾರ ತಿಂದ ಬಳಿಕ ಗ್ರಾಹಕರಿಗೆ ಸಂತೃಪ್ತಿ ದೊರಕಬೇಕು, ನಮ್ಮನ್ನು  ನಂಬಿ ಬೆಳೆ ನೀಡಿದ ರೈತರೂ ನೆಮ್ಮದಿಯಿಂದರಬೇಕು’ ಎನ್ನುವುದು ಅವರ ಧ್ಯೇಯ ವಾಕ್ಯ.

17 ವರ್ಷದ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಅವರೆ ಮೇಳ ಈಗ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದಕ್ಕೆ ಅವರಿಗೆ ಸಂತೋಷವಿದೆ. ವಿ.ವಿ.ಪುರಂ, ಮಲ್ಲೇಶ್ವರಂ, ನಾಗರಬಾವಿಗಳಲ್ಲಿ ಅವರೆ ಮೇಳ ಆಯೋಜನೆ ಮಾಡಿಯಾಗಿದೆ ಇನ್ನೂ ಹಲವೆಡೆ ಮಾಡುವ ಯೋಜನೆಯಿದೆ ಎಂದು ಅವರು ತಿಳಿಸುತ್ತಾರೆ. ಭಾನುವಾರ (ಫೆ.19) ಕೊನೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT