ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಹಾರ, ಸರಳ ಪರಿಹಾರ

ವಾಚಕರ ವಾಣಿ
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಮತ್ತೆ ಬೆಂಕಿ ಬಿದ್ದು ಇನ್ನೊಮ್ಮೆ ಜಾಗತಿಕ ಮಟ್ಟದಲ್ಲಿ ಈ ನಗರದ ಮರ್ಯಾದೆ ಹರಾಜಾಗಿದೆ. ಅಪಾರ ಪ್ರಮಾಣದ ಜಲಕಳೆಗಳು ನೀರೊಳಗೆ ಕೊಳೆತು ಮೀಥೇನ್ ಅನಿಲ ಮಡುಗಟ್ಟಿದ್ದು, ಪ್ಲಾಸ್ಟಿಕ್ ಮತ್ತು ಒಣಕಳೆಯ ತ್ಯಾಜ್ಯಗಳು ಕೆರೆಯಲ್ಲಿ ತುಂಬಿಕೊಂಡಿದ್ದೇ ಬೆಂಕಿ–ಹೊಗೆಗೆ ಕಾರಣವೆಂದು ಹೇಳಲಾಗುತ್ತಿದೆ. ಈ ಮೂರೂ ಸಮಸ್ಯೆಗಳಿಗೆ ಒಂದು ಸರಳ ಉಪಾಯವಿದೆ: ಒಣಗಿದ ಜಲಕಳೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಿಲೊಕ್ಕೆ ₹ 50ರಂತೆ ಖರೀದಿಸುತ್ತೇವೆ ಎಂದು ಕೆರೆಯ ಸುತ್ತ ಹತ್ತಾರು ಕಡೆ ಫಲಕ ಹಾಕಿ, ಖರೀದಿ ವ್ಯವಸ್ಥೆ ಮಾಡಲಿ. ತಾನಾಗಿ ಎಲ್ಲವೂ ಸಂಗ್ರಹವಾಗುತ್ತದೆ. ಅವೆರಡೂ ಅತ್ಯುತ್ತಮ ಇಂಧನವಾಗಿದ್ದು, ಚೆನ್ನಾಗಿ ಒತ್ತಿ ಪ್ಯಾಕ್ ಮಾಡಿದ್ದರೆ ಬಾಯ್ಲರ್ ಮತ್ತು ಫ್ಯಾಕ್ಟರಿಗಳು ಕಮ್ಮಿ ಬೆಲೆಗೆ ಖರೀದಿ ಮಾಡುತ್ತವೆ. ಸುಟ್ಟು ವಿದ್ಯುತ್ತನ್ನೂ ಉತ್ಪಾದಿಸಬಹುದು. ಹೊಗೆ, ವಾಸನೆ ಹೊಮ್ಮದಂಥ ತಂತ್ರಜ್ಞಾನವೂ ನಮ್ಮಲ್ಲಿದೆ. ನಿಗಾ ಇಡಬೇಕಾದ ಕಾನೂನುಗಳೂ ಕಡತಗಳಲ್ಲಿ ಇವೆ.
 
ಮೇಲ್ನೋಟಕ್ಕೆ ₹ 50 ತೀರ ದುಬಾರಿಯಂತೆ ಕಂಡರೂ, ಕಾಯಿಲೆ ಉಲ್ಬಣಿಸಿದಾಗ ದುಬಾರಿ ಔಷಧವೇ ಬೇಕು ತಾನೆ? ಇಷ್ಟಕ್ಕೂ ತ್ಯಾಜ್ಯಗಳೆಲ್ಲ ಸಾಮಾಜಿಕ ಸಂಪತ್ತೇ ಆಗಿದ್ದು ಅವನ್ನು ಸುಟ್ಟು ಇನ್ನಷ್ಟು ವಾಯುತ್ಯಾಜ್ಯ ಸೃಷ್ಟಿಸುವ ಬದಲು, ಬಾಚಿ ಸದ್ಬಳಕೆ ಮಾಡುವುದು ಆರ್ಥಿಕ ಜಾಣತನವೇ ಆಗಿದೆ. ಹೇಗಿದ್ದರೂ ಇಂಥ ನಾಚಿಕೆಗೇಡಿ ದುರಂತ ಸಂಭವಿಸಿದಾಗಲೆಲ್ಲ ಅಧಿಕಾರಿಗಳು ರುಂಡವಿಲ್ಲದ ಕೋಳಿಗಳ ಹಾಗೆ ದುಬಾರಿ ಕಾರುಗಳಲ್ಲಿ ಅತ್ತಿತ್ತ ಧಾವಿಸುತ್ತ ಪೆಟ್ರೋಲು ಡೀಸೆಲ್ಲನ್ನೂ ಯಂತ್ರತಂತ್ರಗಳಿಗೆ ಅಪಾರ ಹಣವನ್ನೂ ಸುಡುತ್ತಿರುತ್ತಾರೆ. ಅದರ ಬದಲು ತುಸು ಜಾಸ್ತಿ ಹಣದಲ್ಲಿ ತ್ಯಾಜ್ಯ ಖರೀದಿಯ ವ್ಯವಸ್ಥೆ ಮಾಡಿದರೆ, ಶ್ರಮಿಕರ ಕೈಗೆ ಹಣವೂ ಬರುತ್ತದೆ; ಸರ್ಕಾರಿ ಯಂತ್ರಗಳಿಗೆ ಕೆಲಸವೂ ಹಗುರವಾಗುತ್ತದೆ. ಟೆಂಡರ್ರೂ ಬೇಡ, ಡ್ರೆಜ್ಜರೂ ಬೇಡ.
 
ಸೋಲೊಪ್ಪಿಕೊಳ್ಳೋಣ. ಮಾಲಿನ್ಯ ನಿಯಂತ್ರಣ ತಜ್ಞರ ದೊಡ್ಡ ಪಡೆಯೇ ಇಲ್ಲಿ ನೆಲೆಗೊಂಡಿದ್ದರೂ ನಗರದ ಖ್ಯಾತಿಗೆ ಪದೇಪದೇ ಮಸಿ ಹತ್ತುವುದನ್ನು ತಪ್ಪಿಸೋಣ. ತಜ್ಞರನ್ನು ಬದಿಗಿಟ್ಟು, ಶ್ರಮಜೀವಿಗಳ ಮೇಲೆ ಭರವಸೆ ಇಡೋಣ.
-ನಾಗೇಶ ಹೆಗಡೆ, ಕೆಂಗೇರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT