ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಅನಿಶ್ಚಯ ಆಡಳಿತಕ್ಕೆ ಆದ್ಯತೆ ನೀಡಿ

ಸಂಪಾದಕೀಯ
Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ರಾಜ್ಯದಲ್ಲಿದ್ದ ಅನಿಶ್ಚಯ ಸದ್ಯಕ್ಕೆ ಅಂತ್ಯವಾದಂತಾಗಿದೆ.  ಹೊಸ ಮುಖ್ಯಮಂತ್ರಿ ಇಂದು (ಶನಿವಾರ) ಬಹುಮತ ಸಾಬೀತುಪಡಿಸಬೇಕಿದೆ. ಈ ಹಿಂದೆ, ಪರಿಸ್ಥಿತಿಯನ್ನು ವಿಭಿನ್ನವಾಗಿ ನಿಭಾಯಿಸಬಹುದಿತ್ತು ಎಂಬಂಥ ಮಾತುಗಳನ್ನು ರಾಜ್ಯಪಾಲರಿಗೆ ಸಂಬಂಧಿಸಿದಂತೆ ಹೇಳಲಾಗಿತ್ತು.  ಹೀಗಿದ್ದೂ ಈಗ ಶಶಿಕಲಾ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಉದ್ಭವಿಸಿದ ಸಂದರ್ಭವನ್ನು ರಾಜ್ಯಪಾಲರು ವಿವೇಚನೆಯಿಂದ ನಿಭಾಯಿಸಿದ್ದಾರೆ ಎನ್ನಬಹುದು.
 
ಶಾಸಕಾಂಗ ಪಕ್ಷದ ನಾಯಕಿಯಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಆಯ್ಕೆಯಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪನ್ನೀರ್‌ಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದರು. ಅಲ್ಲದೆ, ಎಐಎಡಿಎಂಕೆ ಬಯಸಿದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಪನ್ನೀರ್‌ಸೆಲ್ವಂ ಹೇಳಿಕೆ ನೀಡಿದ್ದರು. ಈಗ ಶಶಿಕಲಾಗೆ ಜೈಲುಶಿಕ್ಷೆಯಾದ ನಂತರ ಎಐಎಡಿಎಂಕೆ ಶಾಸಕರು ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ.
 
ಪನ್ನೀರ್‌ಸೆಲ್ವಂ ಬಣದಲ್ಲಿ ಈ ಬಗ್ಗೆ ಸಹಜವಾಗಿಯೇ ಅತೃಪ್ತಿ ಇದೆ. ಆದರೆ ಸಾಂವಿಧಾನಿಕ ಅಗತ್ಯಗಳಿಗೆ ಅನುಸಾರವಾಗಿ ರಾಜ್ಯಪಾಲರು ಕ್ರಮ ಕೈಗೊಂಡಿದ್ದಾರೆ. ಈಗ ಶಶಿಕಲಾ ಬಣದ ಆಶಯಗಳೊಂದಿಗೆ ಹೆಜ್ಜೆ ಇರಿಸಬೇಕಾದ ಅನಿವಾರ್ಯ ಪಳನಿಸ್ವಾಮಿ ಅವರದು. ಹೀಗಾಗಿ ಈಗ ಎಐಎಡಿಎಂಕೆ ಪಕ್ಷದ  ಒಳಗೇ ಆಂತರಿಕ ಕಚ್ಚಾಟ ಉಲ್ಬಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯನ್ನು ಪ್ರಶ್ನಿಸಿ ಪನ್ನೀರ್‌ಸೆಲ್ವಂ 
ಬಣ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಇದು ಚುನಾವಣಾ ಆಯೋಗದಿಂದ ನಿರ್ಧಾರವಾಗಬೇಕಿದೆ. ಆದರೆ ಸರ್ಕಾರದ ರಚನೆ ಬೇರೆಯದೇ ವಿಚಾರ. ಇಂದು ಪಳನಿಸ್ವಾಮಿ ಅವರು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ತಮಗಿರುವ ವಿಶ್ವಾಸಮತ ಸಾಬೀತು ಮಾಡಬೇಕಿದೆ.
 
ಎಐಎಡಿಎಂಕೆ ಈಗ ಕವಲು ದಾರಿಯಲ್ಲಿದೆ ಎಂಬುದು ಸ್ಪಷ್ಟ. ಪಕ್ಷದೊಳಗಿನ ಪ್ರತಿಸ್ಪರ್ಧಿ ಗುಂಪುಗಳು ಕಿತ್ತಾಟ ಮುಂದುವರಿಸಿದಲ್ಲಿ ಪಕ್ಷ ಒಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದರ ದುರಂತಕ್ಕೆ ಇದು ದ್ಯೋತಕ. ಪಕ್ಷದೊಳಗೆ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವುದರ ಅಗತ್ಯವನ್ನು ನಮ್ಮ ರಾಜಕೀಯ ನಾಯಕರು ಮನಗಾಣದೆ ಇರುವುದರಿಂದ ಸೃಷ್ಟಿಯಾದ ಸಮಸ್ಯೆ ಇದು. ತಮ್ಮೊಳಗೇ ಅಧಿಕಾರ ಕೇಂದ್ರೀಕೃತಗೊಂಡಿರಬೇಕು ಎಂದು ಬಯಸುವಂತಹ ಧೋರಣೆಗಳಿಂದಾಗಿ ಸೃಷ್ಟಿಯಾಗುವ ಈ ಬಗೆಯ ಊಳಿಗಮಾನ್ಯ ನಾಯಕತ್ವ ಪ್ರಜಾತಂತ್ರದ ಆಶಯಗಳಿಗೆ ಅನುಗುಣವಾದುದಲ್ಲ. ಶಶಿಕಲಾ ಅವರು ಜೈಲಿಗೆ ತೆರಳುವ ಮುನ್ನ ತಮ್ಮ ಸೋದರ ಸಂಬಂಧಿ ಟಿ.ಟಿ.ವಿ. ದಿನಕರನ್‌ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿ 2011ರಲ್ಲಿ ಇದೇ ದಿನಕರನ್ ಅವರನ್ನು ಜಯಲಲಿತಾ ಪಕ್ಷದಿಂದ ವಜಾ ಮಾಡಿದ್ದರು. ವಿಪರ್ಯಾಸದ ಸಂಗತಿ ಎಂದರೆ ಇದೇ ದಿನಕರನ್ ಈಗಿನ ಸರ್ಕಾರದ ಆಡಳಿತದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ. ಈ ಮಧ್ಯೆ ಶಶಿಕಲಾ ಹಾಗೂ ಅವರ ಆಪ್ತರನ್ನು ಎಐಎಡಿಎಂಕೆ  ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ ಎಂದು ಪನ್ನೀರ್‌ಸೆಲ್ವಂ ಬಣ ಘೋಷಿಸಿದೆ. ಇಂತಹ ರಾಜಕೀಯ ಕಿತ್ತಾಟಗಳಿಂದಾಗಿ ರಾಜ್ಯದಲ್ಲಿ  ಆಡಳಿತ ವ್ಯವಸ್ಥೆಗೆ  ಧಕ್ಕೆಯಾಗುವುದು ಅನಪೇಕ್ಷಣೀಯ.
 
ತಮಿಳುನಾಡಿಗೆ ಸದ್ಯಕ್ಕೆ ಸ್ಥಿರ ಸರ್ಕಾರ ಬೇಕಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಜಯಲಲಿತಾ ಅವರು ಆಸ್ಪತ್ರೆ ಸೇರಿದಾಗಿನಿಂದಲೂ ರಾಜ್ಯದ ಆಡಳಿತಯಂತ್ರ  ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದು ಅಸಾಧ್ಯವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಜಯಲಲಿತಾ ನಿಧನದ ನಂತರ ಜಲ್ಲಿಕಟ್ಟು ವಿವಾದ, ಸಾಗರದಲ್ಲಿ ತೈಲ ಸೋರಿಕೆ, ನಾಟಕೀಯ ರಾಜಕೀಯ ಬೆಳವಣಿಗೆಗಳು ರಾಜ್ಯದ ಆಡಳಿತವನ್ನು ನಿಷ್ಕ್ರಿಯಗೊಳಿಸಿವೆ.  ಈಗ ಒಡಕಿನ ಹಾದಿಯಲ್ಲಿರುವ  ಪಕ್ಷದೊಳಗಿನ ಹಲವು ಒತ್ತಡಗಳ ನಡುವೆ ತಮಿಳುನಾಡಿನ ನೂತನ ಸರ್ಕಾರ ಹೇಗೆ ಕಾರ್ಯ ನಿರ್ವಹಿಸಬಲ್ಲುದು ಎಂಬುದು ಮುಖ್ಯ. ಅನಿಶ್ಚಯದ ವಾತಾವರಣವಂತೂ ಮುಂದುವರಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT