ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಜೆಟ್‌ ಎಂಜಿನ್‌ ಅಭಿವೃದ್ಧಿ

Last Updated 17 ಫೆಬ್ರುವರಿ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೀಣ್ಯ ಕೈಗಾರಿಕ ಪ್ರದೇಶದಲ್ಲಿರುವ ಪೊಯಿರ್‌ ಜೆಟ್ಸ್ ಕಂಪೆನಿಯು ಚಾಲಕರಹಿತ ಪುಟ್ಟ ವಿಮಾನ ಅಥವಾ ದೂರನಿಯಂತ್ರಿತ ವಿಮಾನಗಳಲ್ಲಿ ಬಳಸಬಹುದಾದ ಚಿಕ್ಕದಾದ ಜೆಟ್‌ ಎಂಜಿನ್‌ ಅಭಿವೃದ್ಧಿಪಡಿಸಿದೆ.

ಎಂಜೆಇ– 20 ಎಂದು ಕರೆಯಲಾಗಿರುವ ಎಂಜಿನ್‌ ಅನ್ನು ಫೆಬ್ರುವರಿ 8ರಂದು ಸಂಸ್ಥೆಯ ಆವರಣದಲ್ಲಿ ಪರೀಕ್ಷಿಸಲಾಗಿದೆ. ಎಂಜಿನ್‌ ಪರೀಕ್ಷೆ ಯಶಸ್ವಿಯಾಗಿದ್ದು, ಇದು ಸುಮಾರು 20 ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್‌ ಬಲರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಈಗಾಗಲೇ ವೈಮಾಂತರಿಕ್ಷ ಸಂಶೋಧನೆಗಳ ರಾಜಧಾನಿ ಎಂದೇ ಪ್ರಖ್ಯಾತವಾಗಿದೆ. ಈ ಹಿರಿಮೆಗೆ ಪೂರಕ ಎನ್ನುವಂತೆ ಖಾಸಗಿ ವಲಯದ ಮೊದಲ ಎಂಜಿನ್‌ ಅಭಿವೃದ್ಧಿಯಾಗಿದೆ.

ಎಂಜಿನ್‌ ಪರೀಕ್ಷೆ ಯಶಸ್ವಿಯಾಗಿದ್ದರೂ ಮುಂದಿನ ದಿನಗಳಲ್ಲಿ ಕಾರ್ಯಕ್ಷಮತೆಯ ಪ್ರಮಾಣಪತ್ರವನ್ನು ಪಡೆಯಬೇಕಿದೆ. ಇದಕ್ಕಾಗಿ ಪ್ರಮಾಣಪತ್ರ ನೀಡುವ ಸೆಮಿಲಾಕ್‌ ಕಂಪೆನಿಯನ್ನು ಸಂಪರ್ಕಿಸಬೇಕಿದೆ ಎಂದು ಶ್ರೀಧರ್‌ ಬಲರಾಂ ತಿಳಿಸಿದರು.

ಎಂಜೆಇ– 20 ವಿಶೇಷತೆ ಏನೆಂದರೆ ಎಂಜಿನ್‌ನ ಎಲ್ಲಾ ಭಾಗಗಳನ್ನು 3ಡಿ ಪ್ರಿಂಟಿಂಗ್‌ ಯಂತ್ರದಿಂದ ತಯಾರಿಸಲಾಗಿದೆ. ಎಂಜಿನ್‌ ಬಳಸುವ ಬಗ್ಗೆ ಮೂರು ಭಾರತೀಯ ಕಂಪೆನಿಗಳು ಮತ್ತು ಐದು ವಿದೇಶಿ ಕಂಪೆನಿಗಳು ಆಸಕ್ತಿ ತೋರಿಸಿವೆ. ಹೀಗಾಗಿ ಬೇರೆ ಬಗೆಯ ಯಂತ್ರಗಳ ಅಭಿವೃದ್ಧಿ ಬಗ್ಗೆ ಉತ್ಸಾಹ ಹೆಚ್ಚಾಗುತ್ತಿದೆ ಎಂದರು.

‘ಚಾಲಕರಹಿತ ಪುಟ್ಟ ವಿಮಾನದಲ್ಲಿ ಬಳಸಬಹುದಾದ 40 ಕೆ.ಜಿ ಭಾರ ಹೊರುವ ಎಂಜಿನ್‌ ಅಭಿವೃದ್ಧಿಯಾಗಿದ್ದು, ಅದನ್ನು ಮಾರ್ಚ್‌ ತಿಂಗಳಲ್ಲಿ ಪರೀಕ್ಷೆಗೆ ಒಡ್ಡುತ್ತೇವೆ. ಇದಾದ ನಂತರ ದೊಡ್ಡದಾದ ಚಾಲಕ ರಹಿತ ವಿಮಾನದಲ್ಲಿ ಬಳಸಬಹುದಾದ ನೂರು ಕೆ.ಜಿ ಭಾರ ಹೊರುವ ಎಂಜೆಇ–100 ಹೆಸರಿನ ಎಂಜಿನ್‌ ಅಭಿವೃದ್ಧಿಪಡಿಸಿದ್ದೇವೆ. ಇದರ ಪರೀಕ್ಷೆಯು ಮಾರ್ಚ್‌ನಲ್ಲೇ ನಡೆಯಲಿದೆ’ ಎಂದು ಹೇಳಿದರು.
ಸಂಸ್ಥೆಯು ಸುಮಾರು 20 ವರ್ಷಗಳಿಂದ ಎಚ್‌ಎಎಲ್‌ನ ಹಲವು ಎಂಜಿನ್‌ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಇದರ ಜೊತೆಯಲ್ಲಿ ನೂತನ ಲೋಹ ಸಂಶೋಧನೆ, ಎಂಜಿನ್‌ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲೂ ಸಾಕಷ್ಟು ಕೆಲಸ ಮಾಡಿದೆ.

ನೂತನ ಲೋಹಅಭಿವೃದ್ಧಿ
ದೊಡ್ಡ ಎಂಜಿನ್‌ಗಳನ್ನು ಚಾಲು ಮಾಡಿದಾಗ ಅತಿ ಹೆಚ್ಚು ಉಷ್ಣ ಉತ್ಪತ್ತಿಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸಾಮಾನ್ಯ ಲೋಹ ಕರಗುತ್ತದೆ. ಹೆಚ್ಚು ಉಷ್ಣವನ್ನು ತಾಳಿಕೊಳ್ಳುವ ವಿಶೇಷ ಲೋಹವನ್ನು ಜೆಟ್‌ ಎಂಜಿನ್‌ನಲ್ಲಿ ಬಳಸಲಾಗುತ್ತದೆ. ಈ ಸಂಸ್ಥೆಯು 12,000 ಡಿಗ್ರಿ ಸೆಂಟಿಗ್ರೇಡ್‌ ಉಷ್ಣ ತಾಳುವ ಲೋಹವನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT