ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ನಿರ್ದಿಷ್ಟ ದಾಳಿಗೆ ಡಿಆರ್‌ಡಿಒ ‘ಆಮ್ಲಜನಕ’

Last Updated 17 ಫೆಬ್ರುವರಿ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನದ ಮೂಲಕ ದಾಳಿ ನಡೆಸುವ ಸೈನಿಕರಿಗೆ ನಿರಂತರ ಆಮ್ಲಜನಕ ಪೂರೈಸಬಲ್ಲ ವ್ಯವಸ್ಥೆಯನ್ನು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಶತ್ರು ದೇಶಗಳ ಮೇಲೆ ನಿರ್ದಿಷ್ಟ ದಾಳಿ (ಸರ್ಜಿಕಲ್‌ ಸ್ಟ್ರೈಕ್‌) ನಡೆಸುವಾಗ ಈ ವ್ಯವಸ್ಥೆ ಪ್ರಯೋಜನಕ್ಕೆ ಬರಲಿದೆ.

ವಿಮಾನದಲ್ಲೇ ಆಮ್ಲಜನಕ ತಯಾರಿಸುವ ವ್ಯವಸ್ಥೆಯನ್ನು (ಆನ್‌ಬೋರ್ಡ್‌ ಆಕ್ಸಿಜನ್‌ ಜನರೇಟಿಂಗ್‌ ಸಿಸ್ಟಂ– ಒಬಿಒಜಿಎಸ್‌) ಡಿಆರ್‌ಡಿಒದ  ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸಾಧನಗಳ ಸಂಶೋಧನೆ ನಡೆಸುವ ವಿಭಾಗವು  ಅಭಿವೃದ್ಧಿಪಡಿಸಿದೆ. ಇದನ್ನು ತೇಜಸ್‌  ಯುದ್ಧ ವಿಮಾನದಲ್ಲಿ ಅಳವಡಿಸಲು ಸಿದ್ಧತೆ ನಡೆದಿದೆ.

‘ಒಬಿಒಜಿಎಸ್‌ಗೆ ಪ್ರಮಾಣಪತ್ರ ಪಡೆಯುವ ಸಲುವಾಗಿ ಅಂತಿಮ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಈ ವರ್ಷಾಂತ್ಯದಲ್ಲಿ ತೇಜಸ್‌ ಪಿವಿ–3 ವಿಮಾನಕ್ಕೆ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ’ ಎಂದು ಸಂಸ್ಥೆಯ ವಿಜ್ಞಾನಿ ಇಜಾಸ್‌ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ಡಿಆರ್‌ಡಿಒ ಮಳಿಗೆಯಲ್ಲಿ ಈ ವ್ಯವಸ್ಥೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ತೇಜಸ್‌ ವಿಮಾನದಲ್ಲಿ ಸದ್ಯಕ್ಕೆ ದ್ರವ ಆಮ್ಲಜನಕ ಸಾಧನವನ್ನು ಬಳಸಲಾಗುತ್ತದೆ. ಇದು ಹೆಚ್ಚೆಂದರೆ, ಆರು ತಾಸು ಆಮ್ಲಜನಕವನ್ನು ಪೂರೈಸುತ್ತದೆ. ಆದರೆ, ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಒಬಿಒಜಿಎಸ್‌,  ವಿಮಾನ ಹಾರಾಡುವಾಗ ಗಾಳಿಯಿಂದ ನೈಟ್ರೋಜನ್‌ ಅನ್ನು ಬೇರ್ಪಡಿಸಿ ಶುದ್ಧ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ಹಾಗಾಗಿ ವಿಮಾನ ಹಾರಾಟ ನಡೆಸುವಷ್ಟು ಹೊತ್ತು ಈ ಸಾಧನ ಆಮ್ಲಜನಕವನ್ನು ಸರಬರಾಜು ಮಾಡುತ್ತಿರುತ್ತದೆ. 
‘ಒಬಿಒಜಿಎಸ್‌ ತಂತ್ರಜ್ಞಾನವನ್ನು ಬೇರೆ ರಾಷ್ಟ್ರಗಳೂ ಅಭಿವೃದ್ಧಿಪಡಿಸಿವೆ. ಸದ್ಯಕ್ಕೆ ನಮ್ಮ ವಾಯುಪಡೆಯ ಮಿಗ್‌ 29ಕೆ (ರಷ್ಯಾ ತಂತ್ರಜ್ಞಾನ ಆಧಾರಿತ)   ಯುದ್ಧವಿಮಾನದಲ್ಲಿ ಇದನ್ನು ಬಳಸಲಾಗುತ್ತಿದೆ. ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿ ಉತ್ಪಾದಿಸಿರುವ ಒಬಿಒಜಿಎಸ್‌ ಇದಕ್ಕಿಂತ ನಾಲ್ಕು ಪಟ್ಟು ಅಗ್ಗವಾಗಿದೆ’  ಎನ್ನುತ್ತಾರೆ ಅವರು.

ನಾಲ್ಕನೇ ದೇಶ: ‘ಸ್ವತಂತ್ರವಾಗಿ ಒಬಿಒಜಿಎಸ್‌ ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ ನಾಲ್ಕನೇ ದೇಶ ಭಾರತ. ಸದ್ಯಕ್ಕೆ ಫ್ರಾನ್ಸ್‌, ಅಮೆರಿಕ ಹಾಗೂ ರಷ್ಯಾ ಮಾತ್ರ ಈ ತಂತ್ರಜ್ಞಾನವನ್ನು ಹೊಂದಿವೆ. ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಪೈಲೆಟ್‌ಗಳು ವಿಮಾನ ಹಾರಾಟ ನಡೆಸಲು ಇದು ನೆರವಾಗಬಲ್ಲದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT