ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣ ಮೂಡಿಸಿದ ಸೊರಬ ರಾಜಕಾರಣ!

ತುಟಿ ಬಿಚ್ಚದ ಜಿಲ್ಲಾ ಮುಖಂಡರು, ಮಧು ಬಂಗಾರಪ್ಪ ಅವರತ್ತ ಕಾಂಗ್ರೆಸ್‌ ಚಿತ್ತ
Last Updated 18 ಫೆಬ್ರುವರಿ 2017, 5:15 IST
ಅಕ್ಷರ ಗಾತ್ರ
ಶಿವಮೊಗ್ಗ: ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ ಮುಖಂಡರ ನಡವಳಿಕೆ ವಿರುದ್ಧ ಅಸಮಾಧಾನ ಹೊರ ಹಾಕಿರುವುದು ಜಿಲ್ಲೆಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.
 
ಎರಡು ದಿನಗಳ ಹಿಂದೆ ಸೊರಬದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ ಪಕ್ಷ ತೊರೆದು ಬಿಜೆಪಿ ಸೇರುವಂತೆ ತಮ್ಮ ನಾಯಕ ಕುಮಾರ್‌ ಬಂಗಾರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಕುಮಾರ್‌ ಅವರೂ ಅದುವರೆಗೆ ಮಡವುಗಟ್ಟಿದ್ದ ಪಕ್ಷದ ಮುಖಂಡರ ಮೇಲಿನ ಆಕ್ರೋಶ ಹೊರ ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್‌–ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳಲ್ಲಿ ತಲ್ಲಣ ಮೂಡಿಸಿದೆ.
 
ಸೊರಬ–ಸಾಗರದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ: ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರೆ ಅವರಿಗೆ 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಸೊರಬ ಕ್ಷೇತ್ರದಿಂದ ಟಿಕೆಟ್‌ ನೀಡಲಾಗುತ್ತದೆಯೇ? ಸಾಗರದಲ್ಲಿ ಸ್ಪರ್ಧೆಗೆ ಇಳಿಯುತ್ತಾರೆಯೇ ಎಂಬ ಕುರಿತು ಚರ್ಚೆ ಆರಂಭವಾಗಿದೆ.
 
ಯಡಿಯೂರಪ್ಪ ಅವರ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಹರತಾಳು ಹಾಲಪ್ಪ ಅತ್ಯಾಚಾರ ಆರೋಪದ ನಂತರ ಅಧಿಕಾರ ಕಳೆದುಕೊಂಡಿದ್ದರು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು. ನಂತರ ನಡೆದ ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಹಿಡಿತ ಸಡಿಲವಾಗಿತ್ತು.
 
ಬಂಗಾರಪ್ಪ ಅವರ ಸಾಂಪ್ರದಾಯಿಕ ಮತಗಳೂ ಸಹೋದರರ ನಡುವೆ ಹಂಚಿ ಹೋಗಿದ್ದವು. ಒಂದು ವೇಳೆ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದರೆ, ಅವರಿಗೆ ಸೊರಬ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ ಮತಗಳ ಕ್ರೂಡೀಕರಣದ ಫಲವಾಗಿ ಬಿಜೆಪಿಗೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರವಿದೆ. ಒಂದು ವೇಳೆ ಇದೇ ಲೆಕ್ಕಾಚಾರಕ್ಕೆ ಬಿಜೆಪಿ ಅಂಟಿಕೊಂಡರೆ ಹರತಾಳು ಹಾಲಪ್ಪ ಅವರಿಗೆ ಸಾಗರ ಕ್ಷೇತ್ರ ನೀಡುತ್ತಾರಾ ಎನ್ನುವ ಕುರಿತೂ ಚರ್ಚೆ ನಡೆಯುತ್ತಿದೆ.
 
ಸಾಗರ ಬಿಟ್ಟು ಕೊಡುತ್ತಾರಾ ಬೇಳೂರು?: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣ ಅವರು ಈ ಬಾರಿಯೂ ಬಿಜೆಪಿಯ ಪ್ರಬಲ ಆಕಾಂಕ್ಷಿ. ಒಂದು ವೇಳೆ ಕುಮಾರ್ ಬಂಗಾರಪ್ಪ ಅಥವಾ ಹರತಾಳು ಹಾಲಪ್ಪ ಅವರಿಗೆ ಸಾಗರ ಕ್ಷೇತ್ರದ ಟಿಕೆಟ್‌ ನೀಡಿದರೆ ಬೇಳೂರು ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ. ಹಾಗಾಗಿ, ಬಿಜೆಪಿ ವರಿಷ್ಠರ ನಿರ್ಧಾರದ ಮೇಲೆ ಮುಂದಿನ ಬೆಳವಣಿಗಳು ಸಾಗಲಿವೆ.
 
ಮಧು ಬಂಗಾರಪ್ಪ ಅವರತ್ತ ಕಾಂಗ್ರೆಸ್‌ ಚಿತ್ತ: ಕುಮಾರ್‌ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ ಸೊರಬದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಲಿದೆ. ಹಾಗಾಗಿ, ಆ ಸ್ಥಾನ ತುಂಬಲು ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಕುರಿತು ಲೆಕ್ಕಾಚಾರ ಆರಂಭವಾಗಿವೆ. 
 
ಕಾಗೋಡು ತಿಮ್ಮಪ್ಪ ಬಿಟ್ಟರೆ ಜಿಲ್ಲೆಯಲ್ಲಿ ಈಡಿಗ ಸಮುದಾಯದ ಪ್ರಬಲ ನಾಯಕರಾಗಿ ಕುಮಾರ್ ಇದ್ದರು. ಈಗಾಗಲೇ ಕಾಗೋಡು ಅವರಿಗೆ ವಯಸ್ಸಾಗಿದೆ. ಕುಮಾರ್ ಅವರೂ ಪಕ್ಷ ತೊರೆದರೆ ಜಿಲ್ಲೆಯಲ್ಲಿ ಆ ಸಮುದಾಯದ ಪ್ರಬಲ ನಾಯಕರ ಕೊರತೆ ಎದುರಾಗಲಿದೆ. 
ಆ ಸ್ಥಾನವನ್ನು ಮಧು ತುಂಬಿದರೆ ಮುಂದೆ ಪಕ್ಷದಲ್ಲಿ ಒಳ್ಳೆಯ ಹುದ್ದೆಗಳು ಅವರ ಪಾಲಾಗಲಿವೆ ಎನ್ನುವುದು ಕಾಂಗ್ರೆಸ್‌ನ ಕೆಲವು ಮುಖಂಡರ ವಾದ.
 
ತುಟಿ ಬಿಚ್ಚದ ಜಿಲ್ಲಾ ಕಾಂಗ್ರೆಸ್:ಕುಮಾರ್ ಬಂಗಾರಪ್ಪ ಜಿಲ್ಲಾ ಕಾಂಗ್ರೆಸ್‌ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರೂ, ಯಾವ ಮುಖಂಡರೂ ಕುಮಾರ್‌ ಮನವೊಲಿಸುವ ಪ್ರಯತ್ನ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ಅವರು ‘ಪಕ್ಷ ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕುಮಾರ್ ಅವರ ಆಕ್ರೋಶ ಮತ್ತಷ್ಟು ಹೆಚ್ಚಲು ದಾರಿ ಮಾಡಿಕೊಟ್ಟಿವೆ.
 
ಬಿಜೆಪಿ ಸೇರುವ ಕುರಿತು ಕುಮಾರ್‌ ಬಂಗಾರಪ್ಪ ಇದುವರೆಗೂ ಖಚಿತ ನಿರ್ಧಾರ ಪ್ರಕಟಿಸಲಿಲ್ಲ. ಜಿಲ್ಲೆಯ ಬಿಜೆಪಿ ಮುಖಂಡರು ಪಕ್ಷಕ್ಕೆ ಸ್ವಾಗತಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಸೇರುವ ಸಾಧ್ಯತೆಯನ್ನು ಮಧು ಬಂಗಾರಪ್ಪ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT