ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಗೆ ಬರದವರಿಗೇ ಹೆಚ್ಚಿನ ಅಂಕ!

ಕೆಂಪೇಗೌಡ ಕಾನೂನು ಕಾಲೇಜಿನ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ
Last Updated 18 ಫೆಬ್ರುವರಿ 2017, 7:49 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಕೆಂಪೇಗೌಡ ಕಾನೂನು ಕಾಲೇಜಿನಲ್ಲಿ ನಿಯಮಿತವಾಗಿ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗಿಂತಲೂ ಯಾವಾಗಲೋ ಒಮ್ಮೆ ಕಾಲೇಜಿಗೆ ಬರುವವರಿಗೆ ಪ್ರಾಂಶುಪಾಲರು ಹಣ ಪಡೆದು ಹೆಚ್ಚಿನ ಅಂಕ ನೀಡುತ್ತಿದ್ದಾರೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ನಗರ ಹೊರವಲಯದಲ್ಲಿರುವ   ಕಾಲೇಜಿನ ಮುಂದೆ ಶುಕ್ರವಾರ ಕೆಂಪೇಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. 
 
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟ ಸದಸ್ಯ ಸಂಪತ್‌ ಕುಮಾರ್, ‘ಕಾಲೇಜಿನಲ್ಲಿ ಬಾರ್ ಕೌನ್ಸಿಲ್ ನಿಯಮ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ.  ಪ್ರತಿ ವಿದ್ಯಾರ್ಥಿಗೆ ಕಡ್ಡಾಯವಾಗಿ ಶೇ75ರಷ್ಟು ಹಾಜರಾತಿ ಇರಬೇಕು. ಆದರೆ ಇಲ್ಲಿ ಕಾಲೇಜಿಗೆ ಬರುವುದೇ ಇಲ್ಲ. ಅಂತಹವರಿಗೇ ಹೆಚ್ಚಿನ ಅಂಕ ನೀಡಲಾಗುತ್ತಿದೆ. ಇದರಿಂದ ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು. 
 
ಮತ್ತೊಬ್ಬ ಸದಸ್ಯ ಚಂದ್ರು ಮಾತನಾಡಿ, ‘ಪ್ರಾಂಶುಪಾಲರು ತರಗತಿಗೆ ಬರದೇ ಇರುವ ವಿದ್ಯಾರ್ಥಿಗಳ ಬಳಿ ಕಮಿಷನ್‌ ದಂಧೆ ನಡೆಸಿ, ತಮ್ಮ ಕಚೇರಿಯಲ್ಲಿಯೇ ಆಂತರಿಕ ಪರೀಕ್ಷೆಗಳನ್ನು ಬರೆಯುಸುತ್ತಾರೆ. ನಿಯಮಿತವಾಗಿ ಬರುವವರಿಗೆ 40–45 ಅಂಕ ನೀಡಿದರೆ, ಹಣ ನೀಡಿದವರಿಗೆ 60–65 ಅಂಕ ನೀಡುತ್ತಾರೆ. ಫಲಿತಾಂಶ ಏಕೆ ಕಡಿಮೆಯಾಗುತ್ತಿದೆ ಎಂದು ಪ್ರಶ್ನಿಸಿದರೆ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಸಿಬ್ಬಂದಿ ಮೌಲ್ಯಮಾಪನ ನಡೆಸುತ್ತಾರೆ ಎಂದು ಕಾರಣ ಹೇಳಿ ವಿಶ್ವವಿದ್ಯಾಲಯದ ಮೇಲೆ ಗೂಬೆ ಕೂರಿಸುತ್ತಾರೆ’ ಎಂದು ತಿಳಿಸಿದರು. 
 
‘ಶಿಸ್ತು ಸಮಿತಿ ಇಲ್ಲ. ಹೀಗಾಗಿ ಈ ಅವ್ಯವಸ್ಥೆ ಉಂಟಾಗಿದೆ. ಒಳ್ಳೆಯ ಬೋಧಕರಿಗೆ ಸ್ವತಂತ್ರವಾಗಿ ತರಗತಿ ನಡೆಸಲು ಅವಕಾಶ ಸಿಗುತ್ತಿಲ್ಲ. ಆಡಳಿತ ಮಂಡಳಿ ಈವರೆಗೆ ಫಲಿತಾಂಶ ಪ್ರಗತಿ ಪರಿಶೀಲನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ಫಲಿತಾಂಶ ಉತ್ತಮಪಡಿಸಲು ಯಾವುದೇ ಪ್ರಯತ್ನ ನಡೆಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಒಕ್ಕೂಟದ ಸದಸ್ಯೆ ಸೌಮ್ಯಾ ಮಾತನಾಡಿ, ‘ಗ್ರಾಮೀಣ ಬಡಕುಟುಂಬಗಳಿಂದ ಇಲ್ಲಿಗೆ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಇಲ್ಲಿ ಸರಿಯಾಗಿ ಕುಡಿಯುವ ನೀರು ಸಿಗುವುದಿಲ್ಲ. ಪೋಷಕರು ಕೂಲಿನಾಲಿ ಮಾಡಿ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಇಲ್ಲಿ ನೋಡಿದರೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ವ್ಯವಸ್ಥೆಯನ್ನು ಪ್ರಶ್ನಿಸುವವರಿಗೆ ತೊಂದರೆ ಮಾಡಲಾಗುತ್ತದೆ’ ಎಂದು ಅಳಲು ತೋಡಿಕೊಂಡರು. 
ಕಾಲೇಜಿನ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರಾದ ಆನಂದ್, ಅಶ್ವಿನ್‌ಕುಮಾರ್, ಲೋಕೇಶ್, ರಮೇಶ್, ಮಂಜುನಾಥ್ ಭಾಗವಹಿಸಿದ್ದರು. 
 
10ದಿನ ತರಗತಿ ಬಹಿಷ್ಕಾರ: ಪ್ರತಿಭಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿ ಮುಖಂಡರನ್ನು ಕರೆದು ಮಾತನಾಡಿ 10 ದಿನಗಳ ಒಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇಷ್ಟಕ್ಕೆ ತೃಪ್ತರಾಗದ ವಿದ್ಯಾರ್ಥಿಗಳು 10 ದಿನ ತರಗತಿ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡರು.
 
* ವಿದ್ಯಾರ್ಥಿಗಳು ಮಾಡಿದ ಆರೋಪದಲ್ಲಿ ಹುರುಳಿಲ್ಲ. ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇನೆ. ನಾನು ಯಾರ ಬಳಿಯೂ ದುಡ್ಡು ಪಡೆದಿಲ್ಲ. ಅಂತಹ ಅಗತ್ಯವೂ ನನಗಿಲ್ಲ.
-ಬಿ.ಜಿ. ಶೋಭಾ,  ಕೆಂಪೇಗೌಡ ಕಾನೂನು ಕಾಲೇಜಿನ ಪ್ರಾಂಶುಪಾಲೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT