ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾಕ್ಕೆ ರೈತರ ಒತ್ತಾಯ

ಹಾಸನ: ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ರೈತಸಂಘ ಆಕ್ರೋಶ
Last Updated 18 ಫೆಬ್ರುವರಿ 2017, 8:50 IST
ಅಕ್ಷರ ಗಾತ್ರ
ಹಾಸನ: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
 
ರೈತ ಸಂಘ, ಸೆಂಟರ್‌ ಆಫ್‌ ಇಂಡಿಯನ್ ಟ್ರೇಡ್‌ ಯೂನಿಯನ್ಸ್ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
 
ರಾಜ್ಯದಲ್ಲಿ ಸತತ 3 ವರ್ಷಗಳಿಂದ ಮಳೆ ಕೊರತೆಯಿಂದ ಬರ ಆವರಿಸಿದೆ.  ಅಪಾರ ಪ್ರಮಾಣದ ಬೆಳಗಳು ನಷ್ಟವಾಗಿದೆ. ಕೂಡಲೇ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆ ನಷ್ಟ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ವಿ.ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು. 
 
ಸಿಐಟಿಯು ಜಿಲ್ಲಾಅಧ್ಯಕ್ಷ ಧರ್ಮೇಶ್‌ ಮಾತನಾಡಿ,  ಮಳೆ ಇಲ್ಲದೆ ಜಲಾಶಯಗಳು, ಕೆರೆ ಕಟ್ಟೆ, ಹಳ್ಳಗಳ ಒಡಲು ಬರಿದಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಸಂಪೂರ್ಣ ಕುಸಿದಿದೆ. ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆಯೊಡೆದಿಲ್ಲ. ನೀರಾವರಿ ಪ್ರದೇಶದಲ್ಲೂ ಇಳುವರಿ ಕುಂಠಿತವಾಗಿದೆ. ಬಿತ್ತನೆ ಮಾಡಿದ್ದ ಪೈರು ಬಾರದ ಹಿನ್ನಲೆಯಲ್ಲಿ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
 
ರೈತರು, ಕೂಲಿ ಕಾರ್ಮಿಕರು, ಕಸುಬುದಾರರು ಹಾಗೂ ಸಹಕಾರ ಸಂಘ, ಬ್ಯಾಂಕ್‌, ಪರಿಶಿಷ್ಟ ಜಾತಿ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಇಲಾಖೆಗಳ ಸಾಲ ಮನ್ನಾ ಮಾಡಬೇಕು. ಎಕರೆಗೆ ಕನಿಷ್ಠ ₹ 50 ಸಾವಿರ ಬೆಳೆ ಪರಿಹಾರ ನೀಡಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಪರಿಹಾರವೆಂದು ಕುಟುಂಬಕ್ಕೆ ತಲಾ ₹ 25 ಸಾವಿರ ನೀಡಬೇಕು. ನಗದು ವರ್ಗಾವಣೆ ಮತ್ತು ಕೂಪನ್ ಪದ್ಧತಿ ಕೈಬಿಡಬೇಕು.  
 
ಆಧಾರ್‌ ಕಾರ್ಡ್‌  ಕಡ್ಡಾಯ ಬೇಡ, ರಾತ್ರಿ  ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ವಿತರಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮೇವು ಬ್ಯಾಂಕ್‌ ತೆರೆಯಬೇಕು ಮತ್ತು ಗ್ರಾಮ, ಪಟ್ಟಣ, ನಗರಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
 
ಮುಂದಿನ ಬಿತ್ತನೆಗೆ ಅನುಕೂಲವಾಗುವಂತೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಉಚಿತವಾಗಿ ವಿತರಿಸಬೇಕು. ಜಿಲ್ಲೆಯ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಬೇಕು.  ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 
 
ರಾಜ್ಯ ಪ್ರಾಂತ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತ್‌ಕುಮಾರ್‌, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಲ್.ರಾಘವೇಂದ್ರ, ಡಿಎಚ್‌ಎಸ್‌ ಸಂಚಾಲಕ ಎಂ.ಜೆ.ಪೃಥ್ವಿ ಇದ್ದರು. 
 
* ಉದ್ಯೋಗ ಖಾತ್ರಿ ಯೋಜನೆ ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಿ, ದಿನಕ್ಕೆ ಕನಿಷ್ಠ ₹ 600 ಕೂಲಿ ನಿಗದಿಪಡಿಸಬೇಕು
ಎಚ್‌.ಆರ್.ನವೀನ್‌ಕುಮಾರ್‌, ರಾಜ್ಯ ಪ್ರಾಂತ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT