ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಣೆ ಹೆಸರಲ್ಲಿ ಜನರ ಹತ್ಯೆ; ಆರೋಪ

‘ಪಿಎಫ್‌ಐ’ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ಸಾಖಿಬ್‌ ಆರೋಪ
Last Updated 18 ಫೆಬ್ರುವರಿ 2017, 9:05 IST
ಅಕ್ಷರ ಗಾತ್ರ
ಮೈಸೂರು: ದೇಶದಲ್ಲಿ ಗೋರಕ್ಷಣೆ ಮಾಡುವ ನೆಪದಲ್ಲಿ ಜನರನ್ನೇ ಕೊಲ್ಲುವ ಪ್ರಯತ್ನವನ್ನು ಸಂಘ ಪರಿವಾರಗಳು ನಡೆಸಿವೆ ಎಂದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ಸಾಖಿಬ್‌ ಆರೋಪಿಸಿದರು.
 
ಪಿಎಫ್‌ಐ ಜಿಲ್ಲಾ ಘಟಕವು ನಿಮ್ರಾ ಮಸೀದಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಪ್ಯುಲರ್‌ ಫ್ರಂಟ್‌ ದಿನ ಹಾಗೂ ಏಕತಾ ನಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಈ ದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ದಮನ ಮಾಡುವ ಕೆಲಸ ನಡೆಯುತ್ತಿದೆ. ಗೋರಕ್ಷಣೆ ಮಾಡುವ ನೆಪವನ್ನು ಮುಂದೊಡ್ಡಿ ಮುಸ್ಲಿಮರು ಹಾಗೂ ಕ್ರೈಸ್ತರ ಜೀವವನ್ನೇ ಬಲಿಕೊಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆರ್‌ಎಸ್‌ಎಸ್ ನಂತಹ ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೂಯೇತರ ಸಮುದಾಯಗಳನ್ನು ಗುರಿಯಿಟ್ಟು ಕೊಳ್ಳುವುದೇ ಅಲ್ಲದೇ, ದಲಿತರನ್ನೂ ತುಳಿಯುವ ಪ್ರಯತ್ನವನ್ನು ಮಾಡುತ್ತಿವೆ ಎಂದು ಟೀಕಿಸಿದರು.
 
ಗುಜರಾತ್‌ನಲ್ಲಿ ಮುಸ್ಲಿಮರು ಹಾಗೂ ದಲಿತರ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಮನೆಯಲ್ಲಿ ಗೋಮಾಂಸ ಸೇವನೆಯಾಗುತ್ತಿದೆ ಎಂದು ಹೇಳಿ ಕೊಲೆ ನಡೆಸಲಾಗಿದೆ. ಇಂತಹ ಘಟನೆಗಳಿಂದ ದೇಶದಲ್ಲಿ ಅಶಾಂತಿ ಮೂಡುವ ಅಪಾಯ ಹೆಚ್ಚುತ್ತಲೇ ಇದೆ. ದೇಶದ ಸಂವಿಧಾನದ ಎದುರು ಎಲ್ಲ ಪ್ರಜೆಗಳೂ ಸಮಾನರೇ. ಅವರನ್ನು ಧರ್ಮದ ಹೆಸರಿನಲ್ಲಿ ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದು ಹೇಳಿದರು.
 
ಪ್ರಗತಿಪರ ಹಾಗೂ ಜಾತ್ಯತೀತವಾ ಗಿರುವ ಮಾಧ್ಯಮಗಳನ್ನೂ ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ. ದಾಳಿ ನಡೆಸುವ ಪ್ರಯತ್ನಗಳು ನಡೆದಿವೆ. ಪ್ರಜಾಪ್ರಭುತ್ವದ ಕುತ್ತಿಗೆಯನ್ನೇ ಹಿಸುಕುವ ಕೆಲಸ ನಡೆದರೆ, ಒಳ್ಳೆಯ ದಿನ ಹೇಗೆ ಬರಲು ಸಾಧ್ಯ? ಪ್ರಗತಿಪರರು, ಸಂವಿಧಾನವನ್ನು ಗೌರವಿಸುವವರನ್ನು ರಕ್ಷಿಸುವ ಕೆಲಸ ಆದಾಗ ಮಾತ್ರ ದೇಶದಲ್ಲಿ ನೆಮ್ಮದಿ ಮೂಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
 
ಇದಕ್ಕೂ ಮುನ್ನ ರಾಜೀವನಗರದ ಶಬನಮ್‌ ಸಮುದಾಯ ಭವನದಿಂದ ಅಲ್ಬದಲ್ ಮಸೀದಿವರೆಗೆ ಏಕತಾ ಮೆರವಣಿಗೆ ನಡೆಯಿತು.
ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶಚಂದ್ರ ಗುರು, ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್‌ ವಹೀದ್‌ ಸೇಠ್‌, ಚಲನಚಿತ್ರ ನಿರ್ದೇಶಕ ಅಭಿಗೌಡ, ಪಿಎಫ್‌ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕಲೀಮುಲ್ಲ ಸಿದ್ದಿಕಿ, ಎಸ್‌ಡಿಪಿಐ ರಾಜ್ಯ ಘಟಕದ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಣ್ಣ, ಪಿಎಫ್‌ಐ ಮುಖಂಡರಾದ ನಾಸಿರ್‌ ಪಾಷ, ಫರೂಖ್‌ ಉರ್‌ ರೆಹಮಾನ್‌, ಎಂ.ಎಫ್.ಕಲೀಂ ಇತರರು ಭಾಗವ ಹಿಸಿದ್ದರು.
 
50 ಸಾವಿರ ಮಂದಿ ‘ಜೈಲು ಭರೋ’ಗೆ ಸಿದ್ಧ: ಕಲಬುರ್ಗಿಯಲ್ಲಿ ಗುರುವಾರ ನಡೆದ ಪಿಎಫ್‌ಐ ದಿನ ಕಾರ್ಯಕ್ರಮದಲ್ಲಿ ಐವರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಧ್ವಜಾರೋಹಣ ಮಾಡಲು ಅವಕಾಶ ನೀಡಿಲ್ಲ. ಐವರ ಬಂಧನ ದೊಡ್ಡದಲ್ಲ, ನಾವು 50 ಸಾವಿರ ಮಂದಿ ‘ಜೈಲು ಭರೋ’ಗೆ ಸಿದ್ಧರಿದ್ದೇವೆ.
ನಮಗೆಲ್ಲ ಊಟ ಕೊಡಲು ಪೊಲೀಸರು ಸಿದ್ಧರೇ ಎಂದು ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್‌ ವಹೀದ್‌ ಸೇಠ್‌ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT