ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಲಿಗೆ ಹರಿದು ಬಂದ ಭಕ್ತದಂಡು

ಹೂಲಿ ಅಜ್ಜನ ಅಂಗಾರ ಜಗತ್ತಿಗೆಲ್ಲಾ ಬಂಗಾರ, ಅಜ್ಜನವರಿಗೆ ಜಯವಾಗಲಿ’ ಎಂಬ ಘೋಷಣೆ
Last Updated 18 ಫೆಬ್ರುವರಿ 2017, 10:40 IST
ಅಕ್ಷರ ಗಾತ್ರ
ಸವದತ್ತಿ: ಶತಾಯುಷಿ ಸಾಂಬಯ್ಯನವರಮಠದ ಸಂಗಮೇಶ್ವರ ಶಿವಾಚಾರ್ಯರು (107) ಹರಳಕಟ್ಟಿಯ ಶ್ರೀಮಠದಲ್ಲಿ ಶುಕ್ರವಾರ ಲಿಂಗೈಕ್ಯರಾದರು. ಇಡೀ ಹೂಲಿ ಗ್ರಾಮದಲ್ಲಿ ಶ್ರೀಗಳ ಅಗಲಿಕೆಯಿಂದ ದುಃಖತಪ್ತವಾಗಿದ್ದು, ನೀರವ ಮೌನ ಆವರಿಸಿದೆ. 
 
ಶ್ರೀಗಳ ಅಂತ್ಯಕ್ರಿಯೆ ಸಾಯಂಕಾಲ ಶ್ರೀಮಠದ ಆವರಣದಲ್ಲಿ ಶ್ರೀಶೈಲ ಹಾಗೂ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಉಮೇಶ್ವರಸ್ವಾಮೀಜಿ ನೇತೃತ್ವದಲ್ಲಿ ಸಮಸ್ತ ಭಕ್ತರ ಹಾಗೂ ಶಾಸಕ ಆನಂದ ಮಾಮನಿ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ನೆರವೇರಿತು. 
 
ಮುಂಜಾನೆಯಿಂದ ಭಕ್ತರ ದಂಡ ವಿವಿಧ ವಾಹನಗಳ ಮೂಲಕ ಹೂಲಿಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಎಲ್ಲಿ ನೋಡಿದಲ್ಲಿ ‘ಹೂಲಿ ಅಜ್ಜನ ಅಂಗಾರ ಜಗತ್ತಿಗೆಲ್ಲಾ ಬಂಗಾರ’, ‘ಸಂಗಮೇಶ್ವರ ಅಜ್ಜನವರಿಗೆ ಜಯವಾಗಲಿ’ ಎಂದು ಘೋಷಣೆಗಳೊಂದಿಗೆ ಭಜನಾ ಮಂಡಳಿಗಳ ಜತೆಯಲ್ಲಿ ಶ್ರೀಮಠಕ್ಕೆ ಬರುವ ದೃಶ್ಯ ಸಾಮಾನ್ಯವಾಗಿತ್ತು. 
 
ಇಡೀ ಗ್ರಾಮದ ಜನರು ಶ್ರೀಮಠದ ಜತೆ ಅರಿಸಿ ಬರುವ ಭಕ್ತರಿಗೆ ನೀರು, ತಂಪು ಪಾನಿ, ಉಪಾಹಾರದ ವ್ಯವಸ್ಥೆ ಮಾಡಿದ್ದು, ಇಡೀ ನಗರದಲ್ಲಿ ಎಲ್ಲಿ ನೋಡಿದಲ್ಲಿ ರಂಗೋಲಿಯ ಚಿತ್ತಾರಗಳಿಂದ ಅಂಲಕೃತಗೊಂಡಿದ್ದು, ಬಾಳೆ, ತೆಂಗುಗಳಿಂದ ಸಿಂಗರಿಸಲಾಗಿತ್ತು.
 
ಅದೇ ಗ್ರಾಮದ ವಿರುಪಾಕ್ಷಯ್ಯ ಹಾಗೂ ಪಾರಮ್ಮನವರ ಉದರಲ್ಲಿ ಮೂರನೇಯ ಮಗನಾಗಿ 1911 ಏಪ್ರಿಲ್‌ 24 ರಂದು ಜನಿಸಿದ ಸಂಗಮೇಶ್ವರರು, ಪ್ರಾರ್ಥಮಿಕ ಶಿಕ್ಷಣ ಹೂಲಿಯಲ್ಲಿಯೇ ಮುಗಿಸಿ, ಉನ್ನತ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿದರು.
 
ಅಂದಿನ ಬಾಲಲೀಲಾ ಸಂಗಮೇಶ್ವರಸ್ವಾಮೀಜಿ, ಮನದಾಸೆಯಂತೆ ಶ್ರೀಗಳು ಶ್ರೀಮಠದ ಪೀಠಾಧಿಕಾರಿಗಳಾಗಿ 1934 ರಲ್ಲಿ ಸಮಾಜದ ಉದ್ಧಾರದ ಜವಾಬ್ದಾರಿ ಹೊತ್ತರು. ಆದರೆ ಅದೇ ದಿನವೇ ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನು ದಿವ್ಯ ದೃಷ್ಟಿಯಿಂದ ನೋಡಿದಾಗ ಸಂಗಮೆಶ್ವರರ ಬಾಯಲ್ಲಿನ ಎಲ್ಲ ಹಲ್ಲುಗಳು ಉದುರಿದವು. 
 
ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವರು ಅಜ್ಜನವರಾಗಿ ತಮ್ಮ ಅಧ್ಯಾತ್ಮದಿಂದ ಭಕ್ತರಲ್ಲಿ ಭಕ್ತಿ, ಧರ್ಮ, ದೇವರು ಎಂಬ ದಿವ್ಯ ತತ್ವದಡಿಯಲ್ಲಿ ಬದುಕುವಂತೆ ಮಾಡುವುದರ ಜತೆಗೆ ಶಾಖಾ ಮಠಗಳನ್ನು ನಾಡಿನ ಮೂಲೆ ಮೂಲೆಯಲ್ಲಿ ತೆರೆಯುವ ಮೂಲಕ ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತ, ಪವಾಡಗಳ ಮೂಲಕ ಆರಾಧ್ಯದೈವರಾದರು.
 
ಪವಾಡ ಪುರುಷ: ಬಾಲಲೀಲಾ ಸಂಗಮೇಶ್ವರರು ಹಾವನ್ನು ಕೈಯಲ್ಲಿ ಹಿಡಿದು ಅನೇಕ ಪವಾಡಗಳನ್ನು ಮಾಡಿದರೆ, ಅವರ ಕೃಪೆಗೆ ಪಾತ್ರರಾದ ಸಂಗಮೇಶ್ವರಶ್ರೀಗಳು ಬೆನಕೊಪ್ಪದ ಹಿರೇಮಠದಲ್ಲಿ ಕಣ್ಣು ಕಾಣದ ಕುರುಡನಿಗೆ ಕಣ್ಣು ಕಾಣುವಂತೆ ಮಾಡಿದರು. ಧಾರವಾಡದ ಕೊಟೂರ ಎಂಬವರ ಮನೆಯಲ್ಲಿ ಪೂಜೆಗೆ ಕುಳಿತಾಗ ಎಣ್ಣೆ ಇಲ್ಲ ಎಂದಾಗ ನೀರಿನಿಂದ ದೀಪ ಬೆಳಗಿ ಅಚ್ಚರಿ ಮೂಡಿಸಿದರು. ಸತ್ತವನಿಗೆ ಎದ್ದು ಬಾ ಎಂದು ಬದುಕಿಸಿದ ಇವರು, ಭೂತ, ಗಾಳಿಗಳಂತಹ ಅಸುರಶಕ್ತಿಗಳನ್ನು ಮೇಟ್ಟಿನಿಲ್ಲುವ ಮೂಲಕ ಅನೇಕ ಪವಾಡಗಳನ್ನು ಮಾಡಿದ್ದಾರೆ. 
 
ಶಿಕ್ಷಣಪ್ರೇಮಿ:  ಸಂಗಮೇಶ್ವರಸ್ವಾಮೀಜಿ ಅವರು, ಶಿಕ್ಷಣಪ್ರೇಮಿಗಳಾಗಿದ್ದರು, ಬೆಳಗಾವಿಯ ಬಿ.ಎ.ಎಂ.ಎಸ್‌ನಲ್ಲಿ ಉಚಿತ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ, ಧಾರವಾಡದ ಮಂಗಳವಾರ ಪೇಟೆಯಲ್ಲಿ ವೈದಿಕ ಪಾಠಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಮಕ್ಕಳ ಭವಿಷ್ಯ ರೂಪಿಸಿದ ಮಹಾಚೇತನರಾಗಿದ್ದಾರೆ.
 
ಜೋಳಗಿಮಠ: ಹೂಲಿಯ ಸಂಬಯ್ಯನವರಮಠಕ್ಕೆ ಯಾವುದೇ ಆದಾಯವಿಲ್ಲ. ಇದೊಂದು ಪಕ್ಕಾ ಜೋಳಗಿಮಠ, ಭಕ್ತರು ಕೊಡಮಾಡುವ ದಾನದಲ್ಲಿ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ಒದಗಿಸಲಾಗುವದು ಎಂದು ಹರಳಕಟ್ಟಿಯ ಉಮೇಶ್ವರಸ್ವಾಮೀಜಿ ತಿಳಿಸಿದರು.
 
ಸದಾ ತಪ್ಪಸ್ಸು ಮಾಡುತ್ತಿದ್ದ  ಶ್ರೀಗಳು ಭಕ್ತರ ಮಾಲಿನ ಕಲ್ಪವೃಕ್ಷರಾಗಿದ್ದರು. ಅವರ ಲಿಂಗೈಕ್ಯದಿಂದ ಭಕ್ತರಲ್ಲಿ ದುಃಖ ಮಡುಗಟ್ಟಿದೆ. ಶ್ರೀಶೈಲ ಹಾಗೂ ರಂಭಾಪೂರಿ ಜಗದ್ಗುರು, ಶಿರಕೊಳದ ಚಂದ್ರಶೇಖರಶಿವಾಚಾರ್ಯರ, ಉಮೇಶ್ವರಸ್ವಾಮೀಜಿ, ನರಗುಂದ ಸಿದ್ಧಲಿಂಗಸ್ವಾಮೀಜಿ, ವಿರಕ್ತಮಠ ಶ್ರೀಗಳು, ಮಹಾಂತಸ್ವಾಮೀಜಿ (ಸುಳ್ಳ), ಚನ್ನಬಸವಸ್ವಾಮೀಜಿ ಉಗರಖೋಡ, ಶಾಸಕ ಆನಂದ ಮಾಮನಿ, ನರಗುಂದ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಸುಭಾಸ ಕೌಜಲಗಿ, ವಿರುಪಾಕ್ಷ ಮಾಮನಿ, ಜಗದೀಶ ಶಿಂತ್ರಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT