ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಮುಗ್ಗಟ್ಟು ನಿರ್ಣಯಕ್ಕೆ ಒತ್ತಾಯ

ಕುಡಿಯುವ ನೀರು ಪೂರೈಕೆಗೆ ಅನುದಾನದ ಕೊರತೆ: ಪಕ್ಷಾತೀತವಾಗಿ ಸದಸ್ಯರ ಆಕ್ರೋಶ
Last Updated 18 ಫೆಬ್ರುವರಿ 2017, 11:13 IST
ಅಕ್ಷರ ಗಾತ್ರ
ಬಾಗಲಕೋಟೆ: ‘ಜನರಿಗೆ ಕುಡಿಯುಲು ನೀರು ಕೊಡಲಾರದಷ್ಟು ಅಸಹಾಯಕ ಆರ್ಥಿಕ ಪರಿಸ್ಥಿತಿ ಜಿಲ್ಲಾ ಪಂಚಾಯ್ತಿ ಆಡಳಿತಕ್ಕೆ ಎದುರಾಗಿದೆ ಎಂದು ನಿರ್ಣಯ ಕೈಗೊಳ್ಳುವಂತೆ’ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಒತ್ತಾಯಿಸಿದ ಘಟನೆ ಶುಕ್ರವಾರ ನಡೆಯಿತು.
 
ಸಭೆಯಲ್ಲಿ ಅನುಸರಣಾ ವರದಿಯ ಮೇಲಿನ ಚರ್ಚೆಯ ವೇಳೆ ಸಾವಳಗಿ ಕ್ಷೇತ್ರದ ಸದಸ್ಯ ಶಿವಾನಂದ ಪಾಟೀಲ ಈ ವಿಚಾರ ಪ್ರಸ್ತಾಪಿಸಿದರು. 
ಸಾವಳಗಿ ಬಳಿಯ ದಾನಪ್ಪ ಎಂಬುವವರ ತೋಟದ ವಸತಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹಿಂದಿನ ಸಭೆಯಲ್ಲಿ ಕೇಳಿದ್ದರೂ ಅದು ಪಾಲನೆಯಾಗಿಲ್ಲ. ಈ ಬಗ್ಗೆ ಕೇಳಿದರೆ ಹಿಂದಿನ ವರ್ಷ ಕೊರೆದ ಕೊಳವೆ ಬಾವಿಗಳ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಾರೆ. ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದರು.
 
ಇದಕ್ಕೆ ದನಿಗೂಡಿಸಿದ ಮುರನಾಳ ಕ್ಷೇತ್ರದ ಸದಸ್ಯ ಹೂವಪ್ಪ ರಾಠೋಡ, ‘ಈಗ ಬೇಸಿಗೆ ಅವಧಿ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜನರ ತಲೆಯಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಇದೆ. ತಾನು ಅಸಹಾಯಕ ಎಂದು ಜಿಲ್ಲಾ ಪಂಚಾಯ್ತಿ ಆಡಳಿತ ನಿರ್ಣಯ ಕೈಗೊಂಡಲ್ಲಿ ಬೀದಿಗಿಳಿದು ಹೋರಾಟ ಮಾಡಲು ನಮಗೂ ಅನುಕೂಲ ವಾಗುತ್ತದೆ’ ಎಂದು ಹೇಳಿದರು. 
 
ಈ ವೇಳೆ ಮಧ್ಯ ಪ್ರವೇಶಿಸಿದ ಐಹೊಳೆ ಕ್ಷೇತ್ರದ ಸದಸ್ಯೆ ಬಾಯಕ್ಕ ಮೇಟಿ, ‘ಸಿದ್ದನಕೊಳ್ಳದಲ್ಲಿ ಕೊಳವೆಬಾವಿ ಕೊರೆಸಿದ್ದರೂ ಅಲ್ಲಿ ಇದುವರೆಗೂ ಪೈಪ್‌ಲೈನ್ ಅಳವಡಿಸಿಲ್ಲ. ಮೊನ್ನೆ ಜಾತ್ರೆಯ ದಿನ ನೀರಿನ ತೊಂದರೆಯಾಗಿ ಜನ ಹಿಡಿಶಾಪ ಹಾಕಿದರು. ನನಗೆ ಕೆಟ್ಟ ಹೆಸರು ಬಂದಿತು. ಭೀಮನಗಡದಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ.  ಹಿಂದಿನ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.ನಾನು ಅಥವಾ ಶಾಸಕರು ಅಲ್ಲಿಗೆ ಹೋದರೆ ಜನ ಕಲ್ಲು ಹೊಡೆಯುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬಾಯಕ್ಕಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಹೂವಪ್ಪ, ತಾಲ್ಲೂಕಿನ ಟಾಸ್ಕ್‌ಫೋರ್ಸ್‌ಗಳಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಅವಕಾಶವಿಲ್ಲ. ಜನ ನಮ್ಮ ಬಳಿ ಹೇಳಿಕೊಂಡರೂ ನಾವೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಟಾಸ್ಕ್‌ಫೋರ್ಸ್‌ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳನ್ನು ಕೇಳಿದರೆ ಅವರು ಶಾಸಕರು, ಸಚಿವರು ಹಾಗೂ ಜಿಲ್ಲಾಧಿಕಾರಿ ಕಡೆ ಬೆರಳು ಮಾಡಿ ಕೈ ತೊಳೆದುಕೊಳ್ಳುತ್ತಾರೆ ಎಂದರು. 
 
‘ನಿರ್ಣಯದ ಮೂಲಕ ಜಿಲ್ಲಾ ಪಂಚಾಯ್ತಿಯ ಅಸಹಾಯಕ ಸ್ಥಿತಿಯನ್ನು ಮಾಧ್ಯಮಗಳ ಮೂಲಕ ಜನರಿಗೆ ಹೇಳಿದರೆ ನಮಗೂ ತೊಂದರೆ ತಪ್ಪುತ್ತದೆ’ ಎಂದರು. ಇದಕ್ಕೆ ಎಲ್ಲಾ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದರು. 
 
ಸಿ.ಎಂ  ಬಳಿಗೆ  ನಿಯೋಗ: ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ‘ನೀವು (ಜಿ.ಪಂ. ಸದಸ್ಯರು) ಹೇಳುವುದರಲ್ಲಿ ಸತ್ಯವಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ. ನೀವೆಲ್ಲಾ ಬಂದರೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಕುಡಿಯುವ ನೀರು ಪೂರೈಕೆಗೆ ಜಿಲ್ಲಾ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡೋಣ’ ಎಂದರು. ‘ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದ್ದರೆ ನಿಮ್ಮ ಶಾಸಕರಿಗೆ ಪತ್ರ ಬರೆಯಿರಿ. ಇಲ್ಲವೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಮೂಲಕ ಆಯಾ ಶಾಸಕರಿಗೆ ಪತ್ರ ಬರೆಸೋಣ’ ಎಂದು ಸಲಹೆ ನೀಡಿದರು.
 
* ಭೀಮನಗಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಿಂದಿನ ಸಭೆಯಲ್ಲಿ ಗಮನ ಸೆಳೆದಿದ್ದರೂ ಅದು ಪರಿಹಾರವಾಗಿಲ್ಲ. ನಾನು ಅಲ್ಲಿಗೆ ಹೋದರೆ ಜನ ಕಲ್ಲು ಹೊಡೆಯುತ್ತಾರೆ
-ಬಾಯಕ್ಕಾ ಮೇಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT