ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗ ಕಾವ್ಯ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸುಖಿಗಳಾಗಬೇಕೇ?
ಸುಲಭಮಾರ್ಗವಿದೆ

ಮಾರ್ಗ ಒಂದು:
ಕಡಿಮೆ ತಿಳಿದುಕೊಳ್ಳಿ
ಕಡಿಮೆ ಮಾತನಾಡಿ
ಒಂದು ನಾಲ್ಕೈದು ಜನರನ್ನು
ಗುರುತು ಮಾಡಿಕೊಳ್ಳಿ
ವಾಟ್ಸಾಫು ಫೇಸ್ಬುಕ್ಕು
ಕೂಡಲೇ ಆಫು ಮಾಡಿ
ಚೆನ್ನಾಗಿ ಕೆಲಸಮಾಡಿ
ಚೆನ್ನಾಗಿ ಊಟಮಾಡಿ
ಕಾಲಕ್ಕೆ ಸರಿಯಾಗಿ
ಜಲ–ಮಲ ವಿಸರ್ಜಿಸಿ
ಒಂಬತ್ತು ಗಂಟೆಗೆ
ಲೈಟಾರಿಸಿ ಮಲಗಿಬಿಡಿ

ಮಾರ್ಗ ಎರಡು:
ಟೀವಿ ಪ್ಯಾನೆಲ್ ಗಿಳಿಮರಿಗಳು
ಟೀವಿ ಭವಿಷ್ಯ ಹಿಡುವಳಿದಾರರು
ಟೀವಿಯಲ್ಲೆ ಮಾತ್ರೆ ಕೊಡುವ ಡಾಕ್ಟರು
ಈ ಭುಜಬಲ ಪರಾಕ್ರಮಿಗಳೊಳು
ಸಲಹೆ ಕೇಳಿದರೆ ಕೆಟ್ಟು ಮೂರುದಿನ
ನೆನಪಿಡಿ
ಕವನ ಬರೆಯುವವರು
ಸಮಾಜವಾದಿಗಳು ಹಾಗೂ
ಸ್ವಾಮೀಜಿಗಳು – ಈ ಮೂರು
ಅಲರ್ಜಿಗಳಿಂದ ದೂರವಿರಿ
ಪಕ್ಕಕ್ಕೆ ಬಿಟ್ಟುಕೊಂಡರೆ
ಸೀನು ನಿಲ್ಲುವುದಿಲ್ಲ, ಹುಷಾರು

ಇನ್ನು ಗಂಡಸರೇ ನಿಮಗೆ ವಿಶೇಷ ಸೂಚನೆ;
ಫೋಟೊ ತೆಗೆಯಬಲ್ಲ ಪೀಯೆ ಡ್ರೈವರು
ಗಳನ್ನು ಕೆಲಸಕ್ಕಿಟ್ಟುಕೊಳ್ಳಬೇಡಿ
ಮತ್ತು ಹೆಂಗಸರೇ ನಿಮಗೆ ಖಾಸಾ ಸಲಹೆ:
ಅಮ್ಮ ಗಿಮ್ಮನ ಸೆಂಟ(ಮೆಂಟ)ನ್ನು
ಒಂದು ಹನಿ ಚಿಮುಕಿಸಿಕೊಳ್ಳಿ
ಖಾಲಿಜಾಗಕ್ಕೆಲ್ಲ ರುಬ್ಬಿಕೊಳ್ಳಬೇಡಿ

ಇಲ್ಲಿಗೆ ಮಾರ್ಗ ಕಾವ್ಯ ಸಂಪೂರ್ಣಮಾದುದು;
ದೇಸೀ ವರ್ಜಿಸಿ ಈ ಮಾರ್ಗದೊಳ್ ನಿಷ್ಠೆಯಿಂ
ಸಂಚರಿಪ ಭಕುತರಿಗೆ ನಿರುತ ‘ಭಾಗ್ಯಂ’ಗಳಂ
ಕರುಣಿಪರ್ ಕರ್ನಾಟ ನಾಡದೊರೆಗಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT