ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ತೆರೆ

ಯಲಹಂಕ ವಾಯುನೆಲೆಗೆ ಹರಿದು ಬಂದ ಜನಸಾಗರ * ಕಿಷ್ಕಿಂಧೆಯಂತಾಗಿದ್ದ ವಾಯುನೆಲೆ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆದ ಏರೊ ಇಂಡಿಯಾ 2017ರ ವೈಮಾನಿಕ ಪ್ರದರ್ಶನ ಶನಿವಾರ ಮುಕ್ತಾಯ ಕಂಡಿತು.
ಲೋಹದ ಹಕ್ಕಿಗಳ ಕಸರತ್ತಿನ ಪ್ರದರ್ಶನ ನೋಡಲು ಜನರು ಉತ್ಸುಕರಾಗಿದ್ದರು. ಬೆಳಿಗ್ಗೆ 8ರಿಂದಲೇ ವಾಯುನೆಲೆಯತ್ತ ಬರತೊಡಗಿದರು. ನೋಡು ನೋಡುತ್ತಿದ್ದಂತೆ ವಾಯುನೆಲೆಯಲ್ಲಿ ಜನಸಾಗರವೇ ಸೇರಿತ್ತು. ಯುದ್ಧ ವಿಮಾನಗಳ ಹಾರಾಟವನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದರು.

ಇತ್ತ ಯುದ್ಧಕ್ಕೆ ಸನ್ನದ್ಧರಾದವರಂತೆ ಕಂಡು ಬಂದ ಯೋಧರು, ಪ್ರದರ್ಶನ ನೀಡಲು ಅಣಿಯಾದರು. ವಿಶಿಷ್ಟ ಕಸರತ್ತಿನ ಮೂಲಕ ಜನರನ್ನು ಖುಷಿ ಪಡಿಸಿದರು.
ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಶರವೇಗದಲ್ಲಿ ಆಕಾಶಕ್ಕೆ ಜಿಗಿದು ಅತ್ತಿಂದಿತ್ತ ಹಾರುವ ಮೂಲಕ ಗಮನ ಸೆಳೆಯಿತು. ಶರವೇಗದಲ್ಲಿ ಹೋಗುವುದಷ್ಟೇ ಅಲ್ಲದೆ, ನಿಧಾನವಾಗಿ ಹಾರುವ ಮೂಲಕ ವೈರಿಗಳ ಮೇಲೆ ನಿಗಾ ಇಡಬಲ್ಲೆ ಎಂಬುದನ್ನು ತೇಜಸ್‌ ನಿರೂಪಿಸಿತು. ಸುಖೋಯ್‌, ಮಿಗ್‌ ಯುದ್ಧ ವಿಮಾನಗಳು ಸಹ ವಿಶಿಷ್ಟ ಪ್ರದರ್ಶನ ನೀಡಿದವು.

ಸೂರ್ಯಕಿರಣ ಹಾಗೂ ಸಾರಂಗ ತಂಡಗಳು ತನ್ನ ವಿಶಿಷ್ಟ ಕಸರತ್ತಿನ ಮೂಲಕ ಜನರ ಮನಗೆದ್ದವು. ವಿಂಟೇಜ್‌ ವಿಮಾನಗಳು ಆಕಾಶದಲ್ಲಿ ತಿರಂಗ ಮೂಡಿಸಿ ಜನರಲ್ಲಿ ದೇಶಭಕ್ತಿಯ ರಂಗು ಹೆಚ್ಚುವಂತೆ ಮಾಡಿದವು.

ಬೆಳಿಗ್ಗೆ ಪ್ರದರ್ಶನ ವೀಕ್ಷಿಸಿದವರ ಪೈಕಿ ಬಹಳಷ್ಟು ಮಂದಿ ವಾಪಸ್‌ ಮನೆಗಳಿಗೆ ಹೋಗಲಿಲ್ಲ. ಊಟ ಮಾಡಿಕೊಂಡು ಮತ್ತೆ ವಿಮಾನಗಳ ಹಾರಾಟವನ್ನು ನೋಡಲು ಜಮಾಯಿಸಿದ್ದರು. ಅಲ್ಲದೆ, ಮಧ್ಯಾಹ್ನದ ಪ್ರದರ್ಶನ ವೀಕ್ಷಿಸಲು ಮತ್ತಷ್ಟು ಜನರು ಬರತೊಡಗಿದರು. ಇದರಿಂದ ವಾಯುನೆಲೆಯಲ್ಲಿ ಜನಸಂದಣಿ ಹೆಚ್ಚಾಗಿ ಕಿಷ್ಕಿಂಧೆಯಂತಾಗಿತ್ತು.

ಜನಸಾಗರವಾದ ರಸ್ತೆ: ಪಾಸ್‌ ಹಾಗೂ ಟಿಕೆಟ್‌ ಪಡೆದವರು ವಾಯುನೆಲೆಯೊಳಗೆ ಬಂದು ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರೆ, ಟಿಕೆಟ್‌ ಪಡೆಯದವರು ವಿಮಾನ ನಿಲ್ದಾಣ ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತು ವಿಮಾನಗಳ ಹಾರಾಟವನ್ನು ಕಣ್ತುಂಬಿಕೊಂಡರು.

ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ ಅದರ ಮೇಲೆ ಹತ್ತಿ ಆಕಾಶದ ಕಡೆಗೆ ದೃಷ್ಟಿ ನೆಟ್ಟಿದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೆ ಪ್ರದರ್ಶನ ವೀಕ್ಷಿಸಿದರು.

ಸಂಚಾರ ದಟ್ಟಣೆ ಕಿರಿಕಿರಿ: ಕೊನೆಯ ದಿನದ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಸಮರೋಪಾದಿಯಲ್ಲಿ ಜನರು ಯಲಹಂಕ ವಾಯುನೆಲೆಯತ್ತ ಧಾವಿಸಿದರು. ಇದರಿಂದ ಹೆಬ್ಬಾಳ ಸೇತುವೆಯಿಂದ ಚಿಕ್ಕಜಾಲ ಪೊಲೀಸ್‌ ಠಾಣೆಯವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಜೆ 5 ಗಂಟೆಗೆ ವೈಮಾನಿಕ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆ ಜನರು ಮನೆಗೆ ತೆರಳಲು ಮುಂದಾಗಿದರು. ಇದರಿಂದ ಯಲಹಂಕ ವಾಯುನೆಲೆಯಿಂದ ಕೋಗಿಲು ಕ್ರಾಸ್‌ವರೆಗೆ ವಾಹನಗಳ ಸಾಲು ಕಂಡು ಬಂತು. ಮಿತಿಮೀರಿದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಮನೆಗಳಿಗೆ ತೆರಳಲು ಹರಸಾಹಸ ಪಡುವಂತಾಗಿತ್ತು.

ಪಾಸ್‌ ಪಡೆದವರ ಪಡಿಪಾಟಲು:  ಪಾಸ್‌ ಪಡೆದವರು ವೈಮಾನಿಕ ಪ್ರದರ್ಶನ ವೀಕ್ಷಿಸಲು ವಾಯುನೆಲೆಗೆ ಬಂದಾಗ ಆಶ್ಚರ್ಯ ಕಾದಿತ್ತು. ಪಾಸ್‌ಗಳನ್ನು ಸ್ಕ್ಯಾನ್‌ ಮಾಡುವ ಉಪಕರಣಗಳು ಕೈಕೊಟ್ಟಿದ್ದರಿಂದ ಜನರು ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದರು. ‘ದುಡ್ಡು ಕೊಟ್ಟು ಪಾಸ್‌ ಪಡೆದಿದ್ದೇವೆ. ಈಗ ಸ್ಕ್ಯಾನ್‌ ಆಗಲಿಲ್ಲ ಎಂಬ ನೆಪ ಹೇಳಿ ಪ್ರವೇಶ ನಿರಾಕರಿಸುವುದು ಸರಿಯಲ್ಲ. ಒಳಗೆ ಬಿಡಬೇಕು’ ಎಂದು ಪಟ್ಟುಹಿಡಿದರು. ಸ್ಕ್ಯಾನಿಂಗ್‌ ಯಂತ್ರಗಳನ್ನು ರಿಪೇರಿ ಮಾಡಿದ ಬಳಿಕ ಪಾಸ್‌ ಇದ್ದವರನ್ನು ಒಳಗೆ ಬಿಡಲಾಯಿತು.

ನೀಲಗಿರಿ ತೋಪಿಗೆ ಬೆಂಕಿ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯರಸ್ತೆಯ ಪಕ್ಕದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ನೀಲಗಿರಿ ತೋಪಿನಲ್ಲಿ ಬೆಂಕಿ ಬಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಕೊನೆಯ ದಿನದ ವೈಮಾನಿಕ ಪ್ರದರ್ಶನ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಇದೇ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಜನರಲ್ಲಿ ಆತಂಕ  ಮನೆ ಮಾಡಿತ್ತು.

ಹದ್ದುಗಳ ವಿಶಿಷ್ಟ ಕಸರತ್ತು
₹600 ಕೊಟ್ಟು ಪಾಸ್‌ ಪಡೆದವರಿಗೆ ಪೆವಿಲಿಯನ್‌ ಕಡೆಯ ಸಾಮಾನ್ಯ ಗ್ಯಾಲರಿಯಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ ಭಾಗದಲ್ಲಿ ನಾಲ್ಕು ವಿಂಟೇಜ್‌ ವಿಮಾನಗಳು ವೃತ್ತಾಕಾರ, ಹೃದಯಾಕಾರ ಸೇರಿದಂತೆ ವಿವಿಧ ವಿನ್ಯಾಸದಲ್ಲಿ ಪ್ರದರ್ಶನ ನೀಡುತ್ತಿದ್ದವು.

ಈ ವೇಳೆ ಮೂರು ಹದ್ದುಗಳು ವಿಮಾನಗಳಿಗೆ ಸರಿಸಮನಾಗಿ ಪ್ರದರ್ಶನ ನೀಡಲು ಅಣಿಯಾದವು. ಆಕಾಶದಿಂದ ಕೆಳಗೆ ಜಿಗಿಯುವುದು, ಮತ್ತೆ ಮೇಲೇರುವುದು, ವಿರುದ್ಧ ದಿಕ್ಕಿನಿಂದ ಬಂದು ಒಂದೆಡೆ ಸೇರುವುದು, ಮತ್ತೆ ಅಲ್ಲಿಂದ ಬೇರೆಡೆ ಹಾರುತ್ತಿದ್ದವು. ಅಲ್ಲಿ ನೆರೆದವರ ದೃಷ್ಟಿ ಹದ್ದುಗಳ ಕಡೆಗೆ ನೆಟ್ಟಿತು. ‘ಓಹ್‌, ಅಲ್ಲಿ ನೋಡಿ... ಹದ್ದುಗಳ ಪ್ರದರ್ಶನ’ ಎಂದು ಉದ್ಗಾರ ತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT