ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಲ್ಲಿ ‘ಕಂಬಳಿಹುಳು’ ಮಾರಾಟದ ಸ್ಟಾರ್ಟ್‌ ಅಪ್‌!

ಪೌಷ್ಟಿಕ ಆಹಾರ ಪೂರೈಕೆ ಮಾಡುತ್ತಿರುವ ಸಂಸ್ಥೆ
Last Updated 19 ಫೆಬ್ರುವರಿ 2017, 20:06 IST
ಅಕ್ಷರ ಗಾತ್ರ

ಬರ್ಕಿನಾ ಫಾಸೋ: ಬರಗಾಲ, ಅಪೌಷ್ಟಿಕತೆಯಿಂದ ಬಳಲುತ್ತಿರುವ ನಾಡಿನಲ್ಲಿ ಆಹಾರ ಉತ್ಪಾದಿಸುವ ‘ಸ್ಟಾರ್ಟ್‌ಅಪ್‌’ ಪ್ರಾರಂಭಿಸಿ ಸಮಾಜಮುಖಿ ಸಂಸ್ಥೆ ಎನ್ನುವ ಹೆಗ್ಗಳಿಕೆ ಪಡೆದ ಉದ್ಯಮಿಯ ಕುತೂಹಲಕರ ಸಾಧನೆ ಇದು.

ಕಂಬಳಿಹುಳುಗಳ ಸಂಸ್ಕರಣೆ ನಡೆಸಿ, ಗ್ರಾಂ ಲೆಕ್ಕದಲ್ಲಿ ತೂಕ ಮತ್ತು ಅಚ್ಚು ಕಟ್ಟಾದ ಪಾಕೆಟ್‌ನೊಂದಿಗೆ ಮಾರುಕಟ್ಟೆಗೆ ರವಾನೆ ಮಾಡುವ ‘ಫಾಸೋಪ್ರೋ’ ಆಹಾರ ತಯಾರಿಕಾ ಸಂಸ್ಥೆ.

ಪಶ್ವಿಮ ಆಫ್ರಿಕಾದ ‘ಬರ್ಕಿನಾ ಫಾಸೋ’. ವಿಶ್ವ ಆಹಾರ ಕಾರ್ಯಕ್ರಮದ ಪ್ರಕಾರ ಇಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣ ಶೇ.10.4ರಷ್ಟು. ಜನರನ್ನು ಅಪೌಷ್ಟಿಕತೆಯ ಬಳಲಿಕೆಯಿಂದ ಮುಕ್ತರನ್ನಾಗಿಸಬೇಕು, ಜತೆಗೆ ತನ್ನ ಉದ್ಯಮವನ್ನು ಬೆಳೆಸಿ ಸಂಪಾದನೆಯೂ ಆಗಬೇಕು. ಆಗ ಹೊಳೆದದ್ದೇ ‘ಕಂಬಳಿಹುಳು(caterpillar)’ಗಳ ಆಹಾರ ಪದಾರ್ಥ ಮಾರಾಟ.

ಕಂಬಳಿಹುಳುಗಳು ಶೇ.60ಕ್ಕೂ ಹೆಚ್ಚು ಪ್ರೊಟೀನ್‌ನಿಂದ ಕೂಡಿರುತ್ತವೆ. ಅಧಿಕ ಪ್ರೊಟೀನ್‌ ಹೊಂದಿರುವ ಪೌಷ್ಟಿಕ ಆಹಾರ ಕಂಬಳಿಹುಳು. ಪಶ್ಚಿಮ ಆಫ್ರಿಕಾ ಸೇರಿದಂತೆ ಹಲವು ಭಾಗಗಳಲ್ಲಿ ಇವು ದೇಸೀ ಆಹಾರವೂ ಹೌದು.

‘ಕಹಿಟೊವೊ ಹೀನ್‌’ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿರುವಾಗಲೇ ಈ ಉದ್ಯಮದ ಕನಸು ಕಂಡಿದ್ದರು. ಚಿಕ್ಕಂದಿನಿಂದಲೂ ಕಂಬಳಿಹುಳು ಆಹಾರವನ್ನು ತಿಂದಿದ್ದ ಕಹಿಟೊವೋ, ಅದನ್ನೇ ಉದ್ಯಮವಾಗಿ ಬೆಳೆಸಲು ಯಶಸ್ವಿಯಾಗಿದ್ದಾರೆ.

ಆಫ್ರಿಕಾದ ಶಿಯಾ ಮರದ ಎಲೆಗಳನ್ನು ತಿಂದು ಬದುಕುವ ಅಲ್ಲಿನ ಕಂಬಳಿಹುಳುಗಳನ್ನು ಸಂಗ್ರಹಿಸಿ ಪಾಕೆಟ್‌ ಮಾಡಿ ಮಾರುವ ಪ್ರಯತ್ನವನ್ನು 2012ರಲ್ಲಿ ಕಹಿಟೊವೋ ಪ್ರಾರಂಭಿಸಿದರು.

ಪ್ರಾರಂಭದಲ್ಲಿ ಅರ್ಧ ಕಿಲೋ ತಾಜಾ ಕಂಬಳಿಹುಳುಗಳಿಗೆ ₹325(3000 ಸೆಂಟ್ರಲ್‌ ಆಫ್ರಿಕನ್‌ ಫ್ರಾಂಕ್ಸ್‌) ಬೆಲೆ ನಿಗದಿ ಪಡಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಸ್ಪಂದನೆ ಸಿಗಲಿಲ್ಲ.

ಬಳಿಕ 2016ರಲ್ಲಿ ಹುಳುಗಳನ್ನು ಒಣಗಿಸಿ 85 ಹುಳುಗಳ ಸಣ್ಣ ಪಾಕೆಟ್‌ ಮಾಡಿ ₹70(650 ಫ್ರಾಂಕ್ಸ್‌) ಮಾರುಕಟ್ಟೆಗೆ ತಂದದ್ದು ಯಶಸ್ವಿಯಾಯಿತು. ಈಗಾಗಲೇ 30 ಸಾವಿರ ಯುನಿಟ್‌ ಮಾರಾಟವಾಗಿವೆ.

ಇದರಿಂದಾಗಿ ಅಲ್ಲಿನ ಜನರಿಗೆ ಕಡಿಮೆ ಹಣದಲ್ಲಿ ಪೌಷ್ಟಿಕಾಂಶ ಆಹಾರ ಪಡೆಯುವುದೂ ಸಾಧ್ಯವಾಗಿದೆ. ಕಹಿಟೊವೋ ಮುಂದಿನ ದಿನಗಳಲ್ಲಿ ತಯಾರಿಸಲು ರೂಪಿಸುತ್ತಿರುವ ಯೋಜನೆ; ‘ಕ್ರಿಕೆಟ್‌ ಹುಳುವಿನ ಬಿಸ್ಕೆಟ್‌’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT