ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ವರ್ಕ್: ನಿಮಗಲ್ಲ, ಮಗುವಿಗೆ!

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಆಧುನಿಕ ಕಾಲದ ಪೋಷಕರ ದಿನಚರಿಯಲ್ಲಿ ಮಗುವಿನ ಹೋಂ ವರ್ಕ್ ಮಾಡಿಸುವಿಕೆ ಒಂದು ಪ್ರಮುಖ ಸಂಗತಿ. ‘ಅಯ್ಯೋ! ಹೋಂ ವರ್ಕ್‌ ಮಾಡ್ಸೋಕೆ ಸಾಕಾಗಿ ಹೋಯ್ತು’; ‘ಇಲ್ಲ ರೀ, ಸಂಜೆ ಬರೋಕೆ ಆಗಲ್ಲ; ನಮ್ಮ ಮಗುವಿಗೆ ಹೋಂ ವರ್ಕ್ ಮಾಡ್ಸಬೇಕು. ಅವನು ನಾನಿಲ್ಲ ಅಂದರೆ ಹೋಂ ವರ್ಕ್  ಮಾಡಲ್ಲ; ಅವನಿಗೆ ಹೇಳಿಕೊಡಲಿಕ್ಕಾದರೂ ನಾನು ಬೇಕು’ –
 
ಈ  ರೀತಿಯ ಮಾತುಗಳನ್ನು ಕೇಳಿಸಿಕೊಂಡೇ ಇರುತ್ತೀರಿ. ಇಂದು ಹೋಂ ವರ್ಕ್ ಎನ್ನುವುದು ಮಗುವಿನ ಕೆಲಸ ಎನ್ನುವುದಕ್ಕಿಂತಲೂ ಅದು ನಿತ್ಯ ಪೋಷಕರು ಮಾಡಲೇಬೇಕಾದ ಅನಿವಾರ್ಯ ಕರ್ತವ್ಯದಂತಾಗಿದೆ. ಹೌದು! ಯಾಕೆ ಹೀಗೆ? ಯಾರು ಕಾರಣರು? ಇದಕ್ಕೆ ಉತ್ತರ:
ಪೋಷಕರಲ್ಲದೇ ಮತ್ಯಾರು ಅಲ್ಲ. ಮಗುವಿನ ಹೋಂ ವರ್ಕ್ ತಲೆನೋವಿಗೆ ಅಯಾ ಪೋಷಕರೇ ಕಾರಣಕರ್ತರು. ಇಂಗ್ಲಿಷ್‌ನ ಒಂದು ಗಾದೆ ಹೀಗಿದೆ: There is no such thing as a bad dog, there are only bad dog-MASTER’ - ‘ಕೆಟ್ಟ ನಾಯಿ ಎಂಬುದು ಇಲ್ಲವೇ ಇಲ್ಲ; ಆದರೆ ಕೆಟ್ಟ ನಾಯಿ–ಯಜಮಾನ ಇದ್ದಾನೆ.’ ಒಂದು ನಾಯಿ ಇಂದು ಹೇಗಿದಿಯೋ ಅದಕ್ಕೆ ಅದರ ಯಜಮಾನನೇ ಕಾರಣ. ನಿಮ್ಮ ಮಗು ನಿಮ್ಮ ಸಹಾಯವಿಲ್ಲದೆ ಹೋಂ ವರ್ಕ್‌ ಮಾಡುತ್ತಿಲ್ಲ ಎಂದರೆ ಅದಕ್ಕೆ ನೀವೇ ಕಾರಣ. 
 
ಹೋಂ ವರ್ಕ್‌ ಅನ್ನು ಮಗು ನಿಮ್ಮ ಸಹಾಯವಿಲ್ಲದೆ, ತನ್ನಷ್ಟಕ್ಕೆ ತಾನೇ ಮಾಡಿಕೊಳ್ಳುವಂತೆ ಮಾಡಲು ಸಾಧ್ಯವಿದೆ. ಕೋಳಿ ಮತ್ತು ಅದರ ಮರಿಗಳನ್ನು ನೀವು ಗಮನಿಸಿದ್ದೀರಿ ಅಲ್ಲವೆ? ತಾಯಿಕೋಳಿ ತಾನು ಆರಂಭದಲ್ಲಿ ಕಾಳುಗಳನ್ನು ತಿನ್ನುವ ಪರಿಯನ್ನು ಮರಿಗಳಿಗೆ ತೋರಿಸಿಕೊಡುತ್ತದೆಯಷ್ಟೆ ಹೊರತು ತಾನೇ ಕುಟುಕು ನೀಡುವುದಿಲ್ಲ. ಮರಿಗಳು ಅವೇ ಪ್ರಯತ್ನಿಸಿ ಪ್ರಯತ್ನಿಸಿ ಕಲಿತುಬಿಡುತ್ತವೆ. ಹೀಗಿರುವಾಗ ಮಕ್ಕಳಿಗೆ ಆ ಸಾಮರ್ಥ್ಯವಿಲ್ಲ ಅಂದುಕೊಂಡಿರೇನು? ಮಗು ಹೋಂ ವರ್ಕ್ ಮಾಡದಿರುವುದಕ್ಕೆ ಕಾರಣಗಳು ಏನಿರಬಹುದು? 
 
ಮಗು ಟೀವಿಯನ್ನು ಇಷ್ಟಪಡುವಂತೆ, ತಿಂಡಿಯನ್ನು ಇಷ್ಟಪಡುವಂತೆ, ಆಟವನ್ನು ಇಷ್ಟಪಡುವಂತೆ ಹೋಂ ವರ್ಕ್‌ ಅನ್ನು ಇಷ್ಟಪಡುವುದಿಲ್ಲ. ಕಾರಣ ಏನು? ನೀವು ನಿಮ್ಮ ಮಗುವಿಗೆ ಬೇರೆ ಯಾವುದಕ್ಕೂ ಅವಕಾಶ ಕೊಡದೇ ‘ಓದು, ಇಲ್ಲವೇ ಬರೆ’ ಎಂಬ ಒತ್ತಡ ಹೇರುವುದು.
 
ಬೆಳಗ್ಗೆಯಿಂದ ಅದೇ ಪುಸ್ತಕಗಳೊಂದಿಗೆ, ಓದು–ಬರಹಗಳೊಂದಿಗೆ ಕಳೆದು ಬಂದ ಮಗುವಿಗೆ ಮನೆಗೆ ಬಂದ  ಅನಂತರ ಅದರಿಂದ ಸ್ವಲ್ಪ ರಿಲ್ಯಾಕ್ಸ್ ಆಗಲು ನೀವು ಸಮಯವನ್ನೇ ಕೊಡುವುದಿಲ್ಲ. ಮಗು ಬಂದ ತಕ್ಷಣ ಒಂದಿಷ್ಟು ‘ಸ್ನಾಕ್ಸ್‌’ ಅನ್ನು ಬಲವಂತವಾಗಿ ತುರುಕಿ, ಮತ್ತೇ ಪುಸ್ತಕಗಳನ್ನು ಮುಂದೆ ಹರಡಿ ಕುಳಿತುಬಿಡುತ್ತೀರಿ. ಬೆಳಗ್ಗೆಯಿಂದ ಪುಸ್ತಕದ ಮುಂದೆಯೇ ಕುಳಿತಿರುವ ಮಗುವಿಗೆ ‘ಹೋಂ ವರ್ಕ್ ’ಎಂದರೆ ಬೇಸರ ಬರದೇ ಇನ್ನೇನಾದೀತು?

ನೀವು ಟೀವಿ ನೋಡುತ್ತಾ, ಮೊಬೈಲ್‌ನಲ್ಲಿ ಯಾರೊಂದಿಗೋ ಹರಟುತ್ತಾ, ಚಾಟ್ ಮಾಡುತ್ತಾ, ಎಡಗೈಯಲ್ಲಿ ಮಗುವನ್ನು ಚಚ್ಚುತ್ತಾ, ಹೋಂ ವರ್ಕ್ ಕಾರ್ಯವನ್ನು ಆರಂಭಿಸುತ್ತೀರಿ. ಇಂತಹ ವಾತಾವರಣದಲ್ಲಿ ಮಗು ಕಲಿಯುವುದಾದರೂ, ಬರೆಯುವುದಾದರೂ ಹೇಗೆ? ಮಗುವಿಗೆ ಇದರಿಂದ ಓದಿನ ಕಡೆ, ಪೋಷಕರ ಕಡೆ ತಿರಸ್ಕಾರ ಮೂಡತೊಡಗುತ್ತದೆ. 
ಪೋಷಕರು ಏನು ಮಾಡಬೇಕು? 
 
ನಿಮ್ಮ ಅಜ್ಞೆಯ ಮರ್ಜಿ ಇಲ್ಲದೇ, ನಿಮ್ಮ ಸಹಾಯವಿಲ್ಲದೆ ನಿಮ್ಮ ಮಗು ಹೋಂ ವರ್ಕ್  ಮಾಡುವುದಕ್ಕೆ ಸಿದ್ಧರಾಗಲು ಹೀಗೆ ಮಾಡಿ ನೋಡಿ: ನಿಮ್ಮ ಪಾಡಿಗೆ ನೀವು ಸುಮ್ಮನಿರುವುದನ್ನು ಕೆಲವು ದಿನಗಳ ಮಟ್ಟಿಗೆ ರೂಢಿಸಿಕೊಳ್ಳಿ. ‘ಏಯ್ ಓದೋ’, ‘ಬರೆಯೋ’ ಎನ್ನುವ ದಿವ್ಯಮಂತ್ರವನ್ನು ಮಗುವಿನ ಮೇಲೆ ಪ್ರೋಕ್ಷಣೆ ಮಾಡದೇ ನಿಮ್ಮ ಪಾಡಿಗೆ ನೀವು ಇದ್ದುಬಿಡಿ. ಆಟ ಆಡಬೇಡ, ಟೀವಿ ನೋಡಬೇಡ, ಅದು ಬೇಡ, ಇದು ಬೇಡ – ಈ ಹಲವು ಬೇಡಗಳನ್ನು ಗಟ್ಟಿ ಮೂಟೆ ಕಟ್ಟಿ ಒಂದಿಷ್ಟು ದಿನ ಮೇಲಿಟ್ಟು ಬಿಡಿ.
 
ಒಂದು ನೆನಪಿರಲಿ – ನೀವು ಮಗುವಿಗೆ ಆಜ್ಞೆ ಮಾಡಿದಷ್ಟೂ ಅವರೊಳಗೆ ಅದನ್ನು ತಿರಸ್ಕರಿಸುವ ಹಟ ಬೆಳೆಯುತ್ತಿರುತ್ತದೆ. ನೀವು ಬಲವಂತವಾಗಿ ಎಳೆದುಕೊಂಡು ಹೋಂ ವರ್ಕ್ ಮಾಡಿಸಿದಾಗ ಮಗು ನಿಮ್ಮ ಬಲವಂತಕ್ಕೆ ಮಾಡುತ್ತದೆಯೋ ಹೊರತು ಒಳ ಇಚ್ಛೆಯಿಂದಲ್ಲ. ಸತತ ಎರಡು ಮೂರು ವರ್ಷಗಳಿಂದ ಹೋಂ ವರ್ಕ್ ಮಾಡಿಸುತ್ತಿರುವ ಪೋಷಕರು ಇವತ್ತಿಗೂ ಅದೇ ಪ್ರಯತ್ನದಲ್ಲಿರುತ್ತಾರೆಯೇ ವಿನಾ ಮಗು ಸ್ವತಂತ್ರವಾಗಿ ಮಾಡುವುದನ್ನು ಕಲಿತಿರುವುದಿಲ್ಲ.
 
ಮಗುವಿಗೆ ಸಂಜೆ ಆಟಕ್ಕೆ ಅವಕಾಶ ಕೊಡಿ. ಟೀವಿ ನೋಡಲು ಒಂದಿಷ್ಟು ಸಮಯ ಕೊಡಿ. ನೀವೇ ಒಂದು ನಿರ್ದಿಷ್ಟ ಸಮಯವನ್ನು ಆಯ್ದುಕೊಂಡು ಟೀವಿಯನ್ನು ಆಫ್ ಮಾಡಿಬಿಡಿ. ಮಗವಿನ ಹೋಂ ವರ್ಕ್ ಮಾಡುವ ಸಮಯವನ್ನು ನಿರ್ಧರಿಸಿಕೊಂಡು, ನೀವು ಸುಮ್ಮನೆ ಯಾವುದಾದರೂ ಒಂದು ಪುಸ್ತಕವನ್ನು ಹಿಡಿದುಕೊಂಡು ಓದಲು ಕುಳಿತುಕೊಳ್ಳಿ.

ಓದಲು ಬರದಿದ್ದರೆ ಓದಿದಂತೆ ನಟಿಸಿ. ಮೊದಲೆರಡು ದಿನ ಮಗು ನಿಮ್ಮ ಕಡೆ ಅಷ್ಟೊಂದು ಗಮನ ಕೊಡಲಾರದು. ನಾಲ್ಕನೇ ದಿನ ತನ್ನ ಬ್ಯಾಗ್‌ನ್ನು ನಿಮ್ಮ ಮುಂದೆ ಇಟ್ಟುಕೊಂಡು ನೀವು ಓದುವುದನ್ನು ಗಮನಿಸಿ ಅದೂ ತನ್ನ ಪುಸ್ತಕವನ್ನು ಹೊರತೆಗೆಯುತ್ತದೆ. ತಾಯಿಕೋಳಿ ಹೀಗೆ ತಾನೇ ತನ್ನ ಮರಿಗೆ ತಿನ್ನುವುದನ್ನು ಕಲಿಸುವುದು.
 
ಮೊದಲ ದಿನ ಮಗು ಕೂಡ ಹೀಗೆ ಪುಸ್ತಕ ತೆಗೆಯುವುದು, ಬ್ಯಾಗ್ ಒಳಗೆ ಇಡುವುದು ಮಾಡುತ್ತದೆ. ಕ್ರಮೇಣ ಕೇವಲ ಒಂದು ವಾರದಲ್ಲಿ ನಿಗದಿತ ಸಮಯಕ್ಕೆ ತನ್ನ ಹೋಂ ವರ್ಕ್‌ನ್ನು ಮಾಡುವುದನ್ನು ನಿಮ್ಮನ್ನು ನೋಡಿ ಕಲಿಯುತ್ತದೆ. ಗೊತ್ತಿಲ್ಲದಿರುವುದನ್ನು ಮಗು ನಿಮ್ಮ ಬಳಿಯೇ ಬಂದು ಕೇಳುತ್ತದೆ. ಕೇಳಿದಕ್ಕಷ್ಟೇ ಉತ್ತರ ನೀಡಿ, ನಿಮ್ಮ ಓದಿನಲ್ಲಿ ಅಥವಾ ಓದುವ ನಟನೆಯಲ್ಲಿ ತೊಡಗಿಕೊಳ್ಳಿ. 
 
ಆ ಸಮಯದಲ್ಲಿ ಮನೆಯಲ್ಲಿ ಶಾಂತ ವಾತಾವರಣವನ್ನು ಕಲ್ಪಿಸಿಕೊಡಿ. ಮಗುವು ತನ್ನ ಓದು–ಬರಹ ಬಿಟ್ಟು ಬೇರೆ ವಿಷಯಕ್ಕೆ ಹೋಗದಂತೆ ಪ್ರಶಾಂತವಾದ ಮತ್ತು ಸೂಕ್ತ ವಾತಾವರಣವನ್ನು ನಿರ್ಮಿಸುವುದು ನಿಮ್ಮ ಜವಾಬ್ದಾರಿ. ಆ ಪ್ರಶಾಂತತೆಯಲ್ಲಿ ತನ್ನ ಕೆಲಸದಲ್ಲಿ ಮಗು ತನ್ನಷ್ಟಕ್ಕೆ ತಾನು ಮುಳುಗಿಹೋಗುತ್ತದೆ, ಧ್ಯಾನಿಯಂತೆ.
 
ಮೊದಲು ಒಂದಿಷ್ಟು ದಿನ ಮಗು ಏನು ಮಾಡದೇ ಕಾಲ ತಳ್ಳಬಹುದು. ಆದರೆ ಅನುಮಾನವೇ ಇಲ್ಲ, ನಿಧಾನಕ್ಕೆ ತನ್ನ ಕಾರ್ಯವನ್ನು ಆರಂಭಿಸುತ್ತದೆ. ಒಮ್ಮೆ ಆರಂಭವಾಯಿತೆಂದರೆ ನಿಮ್ಮ ಕೆಲಸ ಮುಗಿಯಿತು; ನಂತರ ಮಗುವೇ ಬೆಳೆಸಿಕೊಂಡು ಹೋಗುತ್ತದೆ. ಇದು ದಿಢೀರೆಂದು ಸಂಭವಿಸುವ ಮ್ಯಾಜಿಕ್ ಕೂಡ ಅಲ್ಲ. ಇದು ಅನೇಕ ದಿನಗಳನ್ನು ತೆಗೆದುಕೊಳ್ಳಬಹುದು.
 
ಆದರೆ ಇದೊಂದು ಅತ್ಯಂತ ಪ್ರಭಾವಿಯುತವಾದ ಮಾರ್ಗ. ಮಗು ತಾನು ತನ್ನ ಕೆಲಸವನ್ನು ಕಲಿತುಕೊಂಡ ಮೇಲೆ ಮುಂದೆ ಯಾರ ಸಹಾಯವಿಲ್ಲದೇ ಅದನ್ನು ಮಾಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ನೀವು ಅವರಿಗೆ ‘ಓದು’, ‘ಬರೆ’ –  ಎಂದು ಒತ್ತಡ ಹಾಕುವ ಅವಶ್ಯಕತೆ ಇಲ್ಲ. ಅವರಿಗೆ ಅದರ ರುಚಿ ಗೊತ್ತಾಗಿ ತನ್ನಷ್ಟಕ್ಕೆ ತಾನೇ ಕಲಿತುಕೊಳ್ಳುತ್ತದೆ. ಒಮ್ಮೆ ಪ್ರಯತ್ನಸಿ ನೋಡಿ. ಖಂಡಿತ ಒಳ್ಳೆಯ ಫಲಿತಾಂಶ ನಿಮ್ಮದಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT